ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ

ಸಾಮಾನ್ಯ ಮೀಸಲು ಕ್ಷೇತ್ರವಾದರೂ ಇಲ್ಲಿ ದಲಿತರ ಮತಗಳೇ ನಿರ್ಣಾಯಕ

ದಲಿತ, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಮತದಾರರೇ ಬಹುಪಾಲು ಇರುವ ಈ ಕ್ಷೇತ್ರದಲ್ಲಿ 2018ರಲ್ಲಿ ಕೊನೆಗೂ ಬಿಜೆಪಿ ಖಾತೆ ತೆರೆದೇ ಬಿಟ್ಟಿತು. ಅದೂ ಸುಮಾರು ೧೫,೦೦೦ ಮತಗಳ ಅಂತರದಲ್ಲಿ. ಈ ಕ್ಷೇತ್ರದಲ್ಲಿ  ಒಮ್ಮೆ ಗೆದ್ದ ಅಭ್ಯರ್ಥಿಯನ್ನು ಪದೇ ಪದೇ ಗೆಲ್ಲಿಸುವ ಪರಂಪರೆ ಇದೆ. ಮೊದಲ ಚುನಾವಣೆಯಲ್ಲಿ ಗೆದ್ದ ಕೆ.ಎಸ. ನಾಗರತ್ನಮ್ಮ ಅವರು ಏಳು ಬಾರಿ ಆಯ್ಕೆಯಾಗಿದ್ದರು. 1994 ರಲ್ಲಿ ಗೆಲುವಿನ ಯಾತ್ರೆ ಪ್ರಾರಂಭಿಸಿದ ಹೆಚ್.ಎಸ. ಮಹಾದೇವ ಪ್ರಸಾದ್ ಮುಂದಿನ ಐದು ಚುನಾವಣೆಗಳಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಸತತವಾಗಿ ಗೆದ್ದರು. 

 

ರಾಜ್ಯದಲ್ಲಿ ಮುಂಗಾರು ಮಾರುತ ಪ್ರವೇಶಿಸುವ ಪ್ರದೇಶವೆಂದು ಗುರುತಿಸಿಕೊಂಡಿರುವ ಊರು ಗುಂಡ್ಲುಪೇಟೆ. ಚಾಮರಾಜನಗರ ಜಿಲ್ಲೆಯ ಅರೆ ಮಲೆನಾಡು ತಾಲೂಕು ಎಂದೂ ಇದನ್ನು ಕರೆಯಲಾಗುತ್ತದೆ. ಜೊತೆಗೆ ಈ ಕ್ಷೇತ್ರ ರಾಜಕೀಯದಲ್ಲೂ ಅಷ್ಟೇ ವಿಶೇಷತೆಯನ್ನು ಕಂಡಿದೆ. ಜಿಲ್ಲೆಯಂತೆಯೇ ಈ ತಾಲೂಕು ಅಥವಾ ಕ್ಷೇತ್ರದಲ್ಲಿಯೂ ದಲಿತರ ಸಂಖ್ಯೆ ಅಧಿಕ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ದಲಿತರು ಮತ್ತು ಇತರ ಪ್ರಬಲ ಜಾತಿಗರೂ ಪ್ರತಿನಿಧಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇದುವರೆಗೂ 14 ಚುನಾವಣೆಗಳು ಮತ್ತು 1 ಉಪಚುನಾವಣೆಯನ್ನು ಕ್ಷೇತ್ರ ಕಂಡಿದ್ದು, 15 ಬಾರಿ ಶಾಸಕರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದೆ.

ಈ ಕ್ಷೇತ್ರದ ವಿಶೇಷತೆ ಎಂದರೆ, 14 ಬಾರಿ ಚುನಾವಣೆಗಳು ನಡೆದಿದ್ದರೂ, ಈ ಕ್ಷೇತ್ರವನ್ನು ನಾಲ್ಕು  ಮಂದಿ  ಮಾತ್ರ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಅವರಲ್ಲಿ ಇಬ್ಬರು ತಲಾ ಒಮ್ಮೆ ಪ್ರತಿನಿಧಿಸಿದ್ದರೆ, ಇನ್ನೊಬ್ಬರು ಐದು ಬಾರಿ ಪ್ರತಿನಿಧಿಸಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ಮಹಿಳೆಯೊಬ್ಬರು ಏಳು ಬಾರಿ ಗುಂಡ್ಲುಪೇಟೆ ಕ್ಷೇತ್ರವನ್ನು ನಿರಂತವಾಗಿ ಪ್ರತಿನಿಧಿಸಿದ್ದಾರೆ. ಮತ್ತೊಬ್ಬರು ಉಪಚುನಾವಣೆಯಲ್ಲಿ ಗೆದ್ದು ಒಂದು ವರ್ಷದ ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ

ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಿಂದಲೂ ಈ ಕ್ಷೇತ್ರ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡುವ ಕ್ಷೇತ್ರವಾಗಿ ಬಂದಿದೆ. ಪ್ರಥಮ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಗೆಲ್ಲಿಸಿ, ವಿಧಾನಸಭೆಗೆ ಕಳಿಸಿದೆ. 14 ಬಾರಿ ಕ್ಷೇತ್ರವನ್ನು ನಾಲ್ವರಷ್ಟೇ ಪ್ರತಿನಿಧಿಸಿದ್ದಾರೆ. ಈ ಪೈಕಿ, ಕಾಂಗ್ರೆಸ್‌ 7 (+1) ಬಾರಿ, ಸ್ವತಂತ್ರರು 3 ಬಾರಿ ಹಾಗೂ ಜನತಾ ದಳ, ಜನತಾ ದಳ ಯುನೈಟೆಟ್‌, ಜೆಡಿಎಸ್‌ ಮತ್ತು ಬಿಜೆಪಿ ತಲಾ ಒಂದು ಬಾರಿ ಗೆಲುವು ಸಾಧಿಸಿವೆ.

1957ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಾಗ ಕೆ.ಎಸ್‌ ನಾಗರತ್ನಮ್ಮ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. 1962ರಲ್ಲಿಯೂ ಅವರೇ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿ ಮತ್ತೆ ಗೆದ್ದರು. ಬಳಿಕ, 1967ರಲ್ಲಿ ಕಾಂಗ್ರೆಸ್‌ ಸೇರಿದ ಅವರು 1967 ಮತ್ತು 1972ರಲ್ಲಿ ಕಾಂಗ್ರೆಸ್‌ನಿಂದ ಗೆದ್ದರು. ಆದರೆ, 1978ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಎಚ್‌.ಕೆ ಶಿವರುದ್ರಪ್ಪ ವಿರುದ್ಧ ಸೋತರು. ಬಳಿಕ 1983, 1985, 1989ರಲ್ಲಿ ಸತತವಾಗಿ ಮೂರು ಬಾರಿ ಕೆ.ಎಸ್‌ ನಾಗರತ್ನಮ್ಮ ಅವರೇ ಗೆದ್ದು, ಕ್ಷೇತ್ರವನ್ನು ಪ್ರತಿನಿಧಿಸಿದರು. ಒಂದೇ ಕ್ಷೇತ್ರವನ್ನು ಏಳು ಬಾರಿ ಪ್ರತಿನಿಧಿಸಿದ ಕೀರ್ತಿ ಅವರದ್ದು.

ಇಂದಿನ ಕಾಂಗ್ರೆಸ್‌ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಎಚ್‌.ಎಸ್‌ ಮಹದೇವ ಪ್ರಸಾದ್‌ ಅವರು 1994ರಲ್ಲಿ ಜನತಾ ದಳದಿಂದ ಮೊದಲ ಬಾರಿಗೆ ಗೆದ್ದರು. ಬಳಿಕ 1999ರಲ್ಲಿ ಜೆಡಿಯು, 2004ರಲ್ಲಿ ಜೆಡಿಎಸ್‌ನಿಂದ ಗೆದ್ದ ಅವರು 2008ರ ವೇಳೆಗೆ ಕಾಂಗ್ರೆಸ್‌ ಸೇರಿದರು. 2008 ಮತ್ತು 2013ರಲ್ಲಿ ಕಾಂಗ್ರೆಸ್‌ನಿಂದ ಗೆದ್ದರು. ನಾಲ್ಕು ಪಕ್ಷಗಳನ್ನು ಬದಲಿಸಿದ ಮಹದೇವ ಪ್ರಸಾದ್‌ ಐದು ಬಾರಿ ಗುಂಡ್ಲುಪೇಟೆಯನ್ನು ಪ್ರತಿನಿಧಿಸಿದ್ದಾರೆ. 

ಹಲವು ಪಕ್ಷ ಬದಲಿಸಿದ ಎಚ್‌.ಎಸ್‌ ಮಹದೇವ ಪ್ರಸಾದ್ ಅವರು ಕಾಂಗ್ರೆಸ್‌ 2008ರಲ್ಲಿ ಕಾಂಗ್ರೆಸ್‌ ಸೇರಿದ್ದರು. ಅದೇ ಸಮಯದಲ್ಲಿ ರಾಜ್ಯದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೂ ನಡೆಯಿತು. ಅದರೆ, ಗುಂಡ್ಲುಪೇಟೆ ಸಾಮಾನ್ಯ ರಂಗವಾಗಿಯೇ ಉಳಿಯಿತು. 2008ರಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಮಹದೇವ ಪ್ರಸಾದ್ 64,824 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಸಿ.ಎಸ್‌ ನಿರಂಜನ ಕುಮಾರ್ 62,621 ಮತಗಳನ್ನು ಪಡೆದು ಸುಮಾರು 2 ಸಾವಿರ ಮತಗಳ ಅಂತರದಲ್ಲಿ ಸೋಲುಂಡರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಹದೇವ ಪ್ರಸಾದ್ 73,723 ಮತಗಳನ್ನು ಪಡೆದು ಗೆದ್ದರು. ಅವರು ವಿರುದ್ಧ ಮತ್ತೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ನಿರಂಜನ ಕುಮಾರ್ 66,048 ಮತಗಳನ್ನು ಪಡೆದು ಮತ್ತೊಮ್ಮೆ ಪರಾಭವಗೊಂಡರು. ಆ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹದೇವ ಪ್ರಸಾದ್ ಅವರು ಸಚಿವರೂ ಆಗಿದ್ದರು. ಅಧಿಕಾರದಲ್ಲಿದ್ದಾಗಲೇ 2017ರ ಜನವರಿ 3ರಂದು ಅವರು ಮೃತಪಟ್ಟರು.

ಅವರ ಸಾವಿನಿಂದ ತೆರವಾದ ಸ್ಥಾನಕ್ಕೆ 2017ರಲ್ಲಿಯೇ ಉಪಚುನಾವಣೆ ನಡೆದು, ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ನಿರಂಜನ ಕುಮಾರ್ ವಿರುದ್ಧ ಗೆಲುವು ಸಾಧಿಸಿದರು.

ಸತತವಾಗಿ ಮೂರು ಬಾರಿ ಸೋಲುಂಡಿದ್ದ ಬಿಜೆಪಿಯ ನಿರಂಜನ ಕುಮಾರ್‌ 2018ರ ಚುನಾವಣೆಯಲ್ಲಿ94,151 ಮತಗಳನ್ನು ಪಡೆದು ಗೆದ್ದರು. ಅವರು ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ 77,467 ಮತಗಳನ್ನು ಪಡೆದು ಪರಾಭವಗೊಂಡರು. 

ಗುಂಡ್ಲುಪೇಟೆ ಕ್ಷೇತ್ರವು ಮೀಸಲಾತಿಯಲ್ಲಿ ಸಾಮಾನ್ಯ ವರ್ಗದ ಕ್ಷೇತ್ರವಾಗಿದ್ದರೂ, ಇಲ್ಲಿ ದಲಿತರ ಬಲ ಹೆಚ್ಚಾಗಿದೆ. ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕ್ಷೇತ್ರದಲ್ಲಿದೆಯಾದರೂ, ಅವರಾರೇ ಗೆಲ್ಲಬೇಕಾದರೂ ದಲಿತರ ಕೃಪೆ ಇರಲೇಬೇಕು. 

ಕ್ಷೇತ್ರದಲ್ಲಿ ಸುಮಾರು 2,07,429 ಮತದಾರರಿದ್ದಾರೆ. ಅವರಲ್ಲಿ 87 ಸಾವಿರ ದಲಿತರು, 55 ಸಾವಿರ ಪರಿಶಿಷ್ಟ ಪಂಗಡದವರು, 20 ಸಾವಿರ ಮುಸ್ಲಿಮರು ಮತ್ತು ಇತರ ಜಾತಿಗಳ 32 ಸಾವಿರ ಮಂದಿ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.


Facebook
Twitter
LinkedIn
WhatsApp
Telegram