ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ

ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ

ಜೆಡಿಎಸ್ ಗೆದ್ದಾಗೊಮ್ಮೆ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತೆ !

2008 ರಿಂದ ಅಸ್ತಿತ್ವಕ್ಕೆ ಬಂದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಇಲ್ಲಿಯವರೆಗೆ 3 ಚುನಾವಣೆಗಳನ್ನು ಕಂಡಿದೆ. ಮೂರರಲ್ಲಿ ಎರಡು ಸಲ ಜೆಡಿಎಸ್, ಒಂದು ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದೆ. ನೈಸ್ ರಸ್ತೆಯ ಮಾಲೀಕ ಅಶೋಕ್ ಖೇಣಿಯ ವಂಶಸ್ಥರು ಭಾರೀ ದೊಡ್ಡ ಜಮೀನ್ದಾರರು. ಮಕ್ಕಳ ಪಕ್ಷ ಕಟ್ಟಿ ಗೆದ್ದಿದ್ದ ಖೇಣಿ ಈಗ ಕಾಂಗ್ರೆಸ್ ಪಕ್ಷದ ಹುರಿಯಾಳು. ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಮುಸ್ಲಿಂ ಮತಬಲವಿದೆ. ನಂತರದಲ್ಲಿ ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ ಮತಗಳಿವೆ. ಇನ್ನು ಕುರುಬ ಹಾಗೂ ಟೋಕರಿ ಕೋಲಿ ಸಮುದಾಯದ ಮತಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮುಸ್ಲಿಂ ಜನಸಂಖ್ಯೆಯೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಒಮ್ಮೆಯೂ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲದೇ ಇರುವುದು ಯೋಚಿಸಬೇಕಾದ ಸಂಗತಿ.

 

ಬೀದರ ಜಿಲ್ಲೆಯಲ್ಲಿ ಈ ಹಿಂದೆ ತನಕ ಐದು ವಿಧಾನಸಭಾ ಕ್ಷೇತ್ರಗಳಿದ್ದವು. 2008 ರಿಂದ ಬೀದರ ಉತ್ತರ ಹಾಗೂ ಬೀದರ ದಕ್ಷಿಣ ಎಂದು 2 ಪ್ರತ್ಯೇಕ ಕ್ಷೇತ್ರಗಳಾಗಿ ವಿಂಗಡಣೆಯಾದವು. 2008 ರಿಂದ ಅಸ್ತಿತ್ವಕ್ಕೆ ಬಂದ ಬೀದರ್ ದಕ್ಷಿಣ ಹೊಸ ಕ್ಷೇತ್ರದಿಂದಾಗಿ ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಾದವು. ಬೀದರ ಉತ್ತರ ಕ್ಷೇತ್ರ ಈ ಹಿಂದಿನಂತೆ ಬೀದರ ನಗರ ಹಾಗೂ ಗ್ರಾಮೀಣ ಭಾಗದ ಕ್ಷೇತ್ರ ವ್ಯಾಪ್ತಿ ಹೊಂದಿದೆ. ಆದರೆ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ಬೀದರ ನಗರ ಅಲ್ಲದೆ ಬೀದರ ತಾಲೂಕು ಹಾಗೂ ಹೊಸ ತಾಲೂಕು ಚಿಟಗುಪ್ಪಾ ತಾಲೂಕಿನ ಕೆಲವು ಹೋಬಳಿ ಕೇಂದ್ರಗಳನ್ನು ಒಳಗೊಂಡ ಕ್ಷೇತ್ರವಾಗಿದೆ.

2008ರಲ್ಲಿ ಹೊಸ ಕ್ಷೇತ್ರ ರಚನೆಯಾದ ನಂತರ ಈವರೆಗೆ ಮೂರು ಚುನಾವಣೆಗಳು ನಡೆದಿವೆ. 2008, 2013, 2018 ರಲ್ಲಿ ನಡೆದ ಮೂರು ವಿಧಾನಸಭಾ ಚುನಾವಣೆಯಲ್ಲಿ 2008ರ ಮೊದಲ ಚುನಾವಣೆಯಲ್ಲಿ ಜೆಡಿಎಸ್ ದಿಂದ ಬಂಡೆಪ್ಪ ಖಾಶೆಂಪೂರ್ 32,054 ಮತ ಪಡೆದು ಜಯಗಳಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಸಂಜಯ ಖೇಣಿ 30,783 ಮತ ಪಡೆದಿದ್ದರು. 2013 ರಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿದ್ದ ಅಶೋಕ್ ಖೇಣಿ 47,763 ಮತಗಳಿಂದ ಗೆದ್ದಿದ್ದರು. ಮಾಜಿ ಸಚಿವ, ಶಾಸಕ ಬಂಡೆಪ್ಪ ಖಾಶೆಂಪೂರ್ 31,975 ಮತ ಪಡೆದು ಸೋತಿದ್ದರು.

ಕಳೆದ 2018ರಲ್ಲಿ ಮತ್ತೆ ಜೆಡಿಎಸ್‌ ಎರಡನೇ ಬಾರಿಗೆ ಗೆದ್ದಿದೆ. ಜೆಡಿಎಸ್‌ನ ಬಂಡೆಪ್ಪ ಖಾಶೆಂಪೂರ್ 55,107 ಮತ ಪಡೆದು ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಬಿಜೆಪಿಯ ಡಾ. ಶೈಲೇಂದ್ರ ಬೆಲ್ದಾಳೆ 42365 ಮತ ಪಡೆದಿದ್ದರು. ಹೊಸ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ಒಮ್ಮೆಯೂ ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕದೆ ಕ್ಷೇತ್ರದ ಜನರು ಪ್ರಜ್ಞಾವಂತಿಕೆ ಮೆರೆದಿದ್ದಾರೆ. ಜಿಲ್ಲೆಯ ಜೆಡಿಎಸ್‌ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಬೀದರ ದಕ್ಷಿಣ ಕ್ಷೇತ್ರದಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಗೆದ್ದ ಬಂಡೆಪ್ಪ ಖಾಶೆಂಪೂರ್ ಎರಡು ಬಾರಿಯೂ ಸಚಿವರಾಗಿದ್ದರು. 

ಬೀದರ ದಕ್ಷಿಣ ಕ್ಷೇತ್ರದಲ್ಲಿ ಅತೀ ಹೆಚ್ಚು ಮುಸ್ಲಿಂ ಮತಬಲವಿದ್ದರೆ ನಂತರದಲ್ಲಿ ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ ಮತಗಳಿವೆ. ಇನ್ನು ಕುರುಬ ಹಾಗೂ ಟೋಕರಿ ಕೋಲಿ ಸಮುದಾಯದ ಮತಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮುಸ್ಲಿಂ ಜನಸಂಖ್ಯೆಯೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಒಮ್ಮೆಯು ಮುಸ್ಲಿಂ ಅಭ್ಯರ್ಥಿಗಳು ಗೆಲ್ಲದೇ ಇರುವುದು ಯೋಚಿಸಬೇಕಾದ ಸಂಗತಿ.

ಈ ಹಿಂದೆ ಬೀದರ್‌ ದಕ್ಷಿಣ ಕ್ಷೇತ್ರ ರಚನೆಯಾಗದ ಮೊದಲು 2004ರಲ್ಲಿ ಬೀದರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಗೆದ್ದ ಬಂಡೆಪ್ಪ ಖಾಶೆಂಪೂರ 2008 ರಿಂದ ತಮ್ಮ ಮತಕ್ಷೇತ್ರವೂ ಆದ ಬೀದರ ದಕ್ಷಿಣ ಕ್ಷೇತ್ರದಲ್ಲಿ ಪ್ರತಿನಿಧಿಸುತ್ತಾ ಬಂದಿದ್ದಾರೆ. 2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾದ ಬಂಡೆಪ್ಪ ಖಾಶೆಂಪೂರ ನಂತರದಲ್ಲಿ ಜೆಡಿಎಸ್‌ ಸೇರಿ ಸಕ್ರಿಯವಾಗಿದ್ದಾರೆ. 2008 ಹಾಗೂ 2018 ರಲ್ಲಿ 2 ಬಾರಿ ಜೆಡಿಎಸ್‌ ದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಅಷ್ಟೇ ಅಲ್ಲದೆ 2 ಬಾರಿಯೂ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.

2008 ರಲ್ಲಿ ಜೆಡಿಎಸ್‌ ಗೆಲ್ಲಿಸಿದ ಜನತೆ 2013ರಲ್ಲಿ ಅಶೋಕ ಖೇಣಿ ಅವರನ್ನು ಕರ್ನಾಟಕ ಮಕ್ಕಳ ಪಕ್ಷದಿಂದ ಗೆಲ್ಲಿಸಿದ್ದರು.  2018ರಲ್ಲಿ ಕಾಂಗ್ರೆಸ್ ಸೇರಿ ಎರಡನೇ ಅವಧಿಗೆ ಆಯ್ಕೆಯಾಗಲು ಹೊರಟ ಅಶೋಕ್ ಖೇಣಿಗೆ ಮೂರನೇ ಸ್ಥಾನಕ್ಕೆ ತಳ್ಳಿ, ಬಿಜೆಪಿಯಿಂದ ಸ್ಪರ್ಧಿಸಿದ ಡಾ.ಶೈಲೆಂದ್ರ ಬೆಲ್ದಾಳೆ ಎರಡನೇ ಸ್ಥಾನಕ್ಕೇರಿದರು.

ಮುಸ್ಲಿಂ ಹಾಗೂ ಲಿಂಗಾಯತ ಮತಗಳು ಇಲ್ಲಿ ನಿಣರ್ಣಾಯಕವಾದರೂ, ಕುರುಬ ಸಮುದಾಯದ ಬಂಡೆಪ್ಪ ಖಾಶೆಂಪೂರ 2 ಬಾರಿ ಗೆದ್ದು ಬೀಗಿದ್ದಾರೆ. ಲಿಂಗಾಯತ ಸಮುದಾಯ ಅಶೋಕ ಖೇಣಿ ಒಮ್ಮೆ ಗೆದ್ದಿದ್ದಾರೆ. ಮೂರು ಬಾರಿ ಸೋತು ಎರಡನೇ ಸ್ಥಾನದಲ್ಲಿದ್ದವರೂ ಇದೇ ಸಮುದಾಯದವರು. ಒಂದೇ ಪಕ್ಷ ಹಾಗೂ ಒಬ್ಬ ವ್ಯಕ್ತಿಯನ್ನು ಎರಡು ಬಾರಿ ಆಯ್ಕೆ ಮಾಡಿದರೂ ನಿರಂತರವಾಗಿ ಆಯ್ಕೆ ಮಾಡದಿರುವುದು ಈ ಕ್ಷೇತ್ರದ ಮತದಾರರ ರಾಜಕೀಯ ಜಾಣತನ.

ಪ್ರಾದೇಶಿಕ ಪಕ್ಷ ಜೆಡಿಎಸ್‌ ಪಕ್ಷದ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಮೂರು ಬಾರಿಯೂ ರಾಷ್ಟ್ರೀಯ ಪಕ್ಷಗಳಿಗೆ ಗೆಲ್ಲಲು ಸಾಧ್ಯವಾಗಿಲ್ಲ. ಎರಡು ಬಾರಿ ಜೆಡಿಎಸ್‌ ಒಮ್ಮೆ ಪಕ್ಷೇತರ ಅಭ್ಯರ್ಥಿಗಳಿಗೆ ಕ್ಷೇತ್ರದ ಮತದಾರರು ಪ್ರತಿ ಚುನಾವಣೆಯಲ್ಲಿ ಬದಲಾವಣೆ ಬಯಸುತ್ತಾರೆ. 

ಬೀದರ ದಕ್ಷಿಣ ಕ್ಷೇತ್ರದಲ್ಲಿ ಪ್ರಸ್ತುತವಾಗಿ 1,96,623 ಹಾಲಿ ಮತದಾರರು ಇದ್ದಾರೆ. ಈ ಪೈಕಿ 1,01,920 ಪುರುಷರು, 94,700 ಮಹಿಳೆಯರು ಹಾಗೂ  3 ತೃತೀಯ ಲಿಂಗಿಗಳಿದ್ದಾರೆ.

Facebook
Twitter
LinkedIn
WhatsApp
Telegram