ಚಿತ್ರದುರ್ಗ ವಿಧಾನಸಭಾಕ್ಷೇತ್ರ

ಚಿತ್ರದುರ್ಗ ವಿಧಾನಸಭಾಕ್ಷೇತ್ರ

ಕೋಟೆ ನಾಡಿನಲ್ಲಿ ಸ್ವಂತ ಪ್ರತಿಷ್ಠೆಯ ರಾಜಕಾರಣ

ಚಿತ್ರದುರ್ಗದ ಜಿ ಎಚ್ ತಿಪ್ಪಾರೆಡ್ಡಿ ಸತತ 30 ವರ್ಷಗಳಿಂದ ಒಂದಿಲ್ಲೊಂದು ರೀತಿ ಅಧಿಕಾರದಲ್ಲಿ ಇದ್ದಾರೆ. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜನತಾ ದಳದ ಏಕಾಂತಯ್ಯನವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾದವರು ತಿಪ್ಪಾರೆಡ್ಡಿ. ನಂತರ 1999ರಲ್ಲಿಯೂ ಪಕ್ಷೇತರರಾಗಿಯೇ ಮತ್ತೆ ಗೆದ್ದು ಶಾಸಕರಾದರು. 2004ರಲ್ಲಿ ಕಾಂಗ್ರೆಸ್ ಸೇರಿದ ತಿಪ್ಪಾರೆಡ್ಡಿ, ಜೆಡಿಎಸ್‌ನ ಎಸ್ ಕೆ ಬಸವರಾಜನ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದರು. 2008ರಲ್ಲಿ ಅದೇ ಬಸವರಾಜನ್ ವಿರುದ್ಧ  ಸೋತುಹೋದರು.  ಸೋತ ನಂತರ ಬಿಜೆಪಿ ಸೇರಿದ ತಿಪ್ಪಾರೆಡ್ಡಿ ಚಿತ್ರದುರ್ಗ ದಾವಣಗೆರೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೂ ಬಿಟ್ಟರು.  ಬಿಜೆಪಿ ಅಭ್ಯರ್ಥಿಯಾಗಿ 2013,  2018ರಲ್ಲಿ  ಶಾಸಕರಾದರು. ಚಿತ್ರದುರ್ಗದ ಮಟ್ಟಿಗೆ ಬಿಜೆಪಿ ಎಂದರೆ ತಿಪ್ಪಾರೆಡ್ಡಿ ಎನ್ನುವಂಥ ಪರಿಸ್ಥಿತಿ ಇದೆ.

ಬಯಲುಸೀಮೆಯ ನಾಡು, ಕೋಟೆ ನಾಡು, ಒಬ್ಬವ್ವನ ನಾಡು, ಮದಕರಿನಾಯಕನ ಬೀಡು ಎಂದೇ ಕರೆಸಿಕೊಳ್ಳುವ ಚಿತ್ರದುರ್ಗಕ್ಕೆ ಕರ್ನಾಟಕ ಇತಿಹಾಸದಲ್ಲಿಯೇ ಮಹತ್ವದ ಸ್ಥಾನಮಾನವಿದೆ. ಮಧ್ಯಕರ್ನಾಟಕದ ಪ್ರಮುಖ ಜಿಲ್ಲೆಯಾದ ಚಿತ್ರದುರ್ಗವು ಐತಿಹಾಸಿಕ ಸ್ಥಳವಾಗಿದ್ದು, ಪುರಾಣದ ಹಿನ್ನೆಲೆಯೂ ಇದೆ. ಚಿತ್ರದುರ್ಗ ಹಿಂದೆ ಕಲ್ಲುಬಂಡೆಗಳಿಂದ ಮತ್ತು ಹುಲ್ಲುಗಾವಲು ಪ್ರದೇಶದಿಂದ ಕೂಡಿದ್ದ ದುರ್ಗಮ ಪ್ರದೇಶವಾಗಿತ್ತು. ಹಾಗಾಗಿ ಈ ಪ್ರದೇಶಕ್ಕೆ ಚಿತ್ರದುರ್ಗ ಎಂಬ ಹೆಸರು ಬಂದಿದೆ ಎನ್ನುವ ಮಾತುಗಳು ಇವೆ.

ಚಿತ್ರದುರ್ಗವನ್ನು ಆಳಿದ ಪ್ರಮುಖ ವಂಶವಾದ ಪಾಳೇಗಾರರು ಚಿತ್ರದುರ್ಗವನ್ನು ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಮಾಡಿದರು. ಇವರ ಕಾಲದಲ್ಲಿ ಕೋಟೆಕೊತ್ತಲಗಳು, ಗುಡಿಗೋಪುರಗಳು, ಮಠಮಾನ್ಯಗಳು ಹುಟ್ಟಿಕೊಂಡವು. ಮದಕರಿನಾಯಕ ಮತ್ತು ಒನಕೆ ಓಬವ್ವ ಚಿತ್ರದುರ್ಗದ ಐತಿಹಾಸಿಕ ವ್ಯಕ್ತಿಗಳು. 

ಚಿತ್ರದುರ್ಗ ವಿಧಾನಸಭಾಕ್ಷೇತ್ರ

ರಾಜಕೀಯ ಇತಿಹಾಸ

ಕೌಟುಂಬಿಕ ರಾಜಕೀಯದ ಹಿನ್ನೆಲೆ, ಹಣಬಲ, ತೋಳ್ಬಲಗಳು ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ. ಇಲ್ಲೇನಿದ್ದರೂ ಅಭ್ಯರ್ಥಿಯ ಸ್ವಂತ ಪ್ರತಿಷ್ಠೆ ಹಾಗೂ ಅಲ್ಪಪ್ರಮಾಣದಲ್ಲಿ ರಾಜಕೀಯ ಪಕ್ಷಗಳ ಅಲೆಗಳು ಕೆಲಸ ಮಾಡಿವೆ. 

ಚಿತ್ರದುರ್ಗ ಕ್ಷೇತ್ರದಲ್ಲಿ 1952ರ ಮೊದಲ ಚುನಾವಣೆಯಲ್ಲಿ ಶಾಸಕರಾದವರು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಮುಲ್ಕಾ ಗೋವಿಂದರೆಡ್ಡಿ. 1957ರಲ್ಲಿ ಕಾಂಗ್ರೆಸ್‌ನ ಶಿವಪ್ಪ ಶಾಸಕರಾದರು. ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಮ್, ನಾಯಕ, ದಲಿತ ಹಾಗೂ ಹಿಂದುಳಿದ ವರ್ಗದ ಮತದಾರರು ಹೆಚ್ಚಾಗಿದೆ. 

1972 ರಲ್ಲಿ ಕಾಂಗ್ರೆಸ್‌ನ ಸಿ ಅರ್ ಮೊಹಮ್ಮದ್ ಸೈಫುದ್ದೀನ್ ಅವರನ್ನು ಮತದಾರರು ಬೆಂಬಲಿಸಿ ಶಾಸಕರನ್ನಾಗಿಸಿದರು. 1978ರಲ್ಲಿ ಹಿರಿಯ ಮತ್ಸದ್ದಿ ವಿ ಮಸಿಯಪ್ಪನವರನ್ನುಆಯ್ಕೆ ಮಾಡಿದ್ದರು. 1983ರಲ್ಲಿ ದೇಶದಲ್ಲಿ ಜನತಾ ಪರಿವಾರದ ಅಲೆಯಲ್ಲಿ ರಾಜ್ಯದ ಹಿರಿಯ ರಾಜಕಾರಣಿ ಬಿ ಎಲ್ ಗೌಡ ಇಲ್ಲಿಂದ ಆಯ್ಕೆಯಾಗಿದ್ದರು. 

1985 ಮತ್ತು 1989ರಲ್ಲಿ ಜನತಾ ಪಕ್ಷ ಮತ್ತು ಜನತಾ ದಳದಿಂದ ಎಚ್ ಏಕಾಂತಯ್ಯನವರು ಆಯ್ಕೆಯಾಗುತ್ತಾರೆ. ಮುಂದೆ ನಡೆಯುವ ಎರಡು ಚುನಾವಣೆಯಲ್ಲಿ ಒಮ್ಮೆ ಜನತಾ ದಳ ಹಾಗೂ ಮತ್ತೊಮ್ಮೆ ಪಕ್ಷೇತರರಾಗಿ ಸ್ಪರ್ಧಿಸಿ, ಜಿ ಹೆಚ್ ತಿಪ್ಪಾರೆಡ್ಡಿಯವರ ಮುಂದೆ ಸೋಲುತ್ತಾರೆ.

1994ರ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದ ಜಿ ಹೆಚ್ ತಿಪ್ಪಾರೆಡ್ಡಿ ಸ್ವತಂತ್ರವಾಗಿ ನಿಂತು ಗೆಲ್ಲುತ್ತಾರೆ. ಅವರು ಸತತ ಮೂರು ಚುನಾವಣೆಯಲ್ಲಿಯೂ ( 1994, 1999, 2004) ಗೆಲ್ಲುತ್ತಾರೆ. 1994, 199ರಲ್ಲಿ ಪಕ್ಷೇತರರಾಗಿದ್ದ ತಿಪ್ಪಾರೆಡ್ಡಿ, 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ಇವರ ನಾಗಾಲೋಟಕ್ಕೆ ಮುರುಘಾಮಠದ ಆಡಳಿತಾಧಿಕಾರಿಯಾಗಿದ್ದ ಎಸ್ ಕೆ ಬಸವರಾಜನ್ ಬ್ರೇಕ್ ಹಾಕಿ, 2008ರ ಚುನಾವಣೆಯಲ್ಲಿ ಬಾರಿ ಅಂತರದಿಂದ ಗೆಲುವು ಸಾಧಿಸುತ್ತಾರೆ. ಸೋತ ನಂತರ ಬಿಜೆಪಿ ಸೇರಿದ ತಿಪ್ಪಾರೆಡ್ಡಿ ಚಿತ್ರದುರ್ಗ ದಾವಣಗೆರೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೂ ಬಿಟ್ಟರು. 

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್  ಪಕ್ಷಕ್ಕೆ ರಾಜಿನಾಮೆ ನೀಡಿದ್ದ ತಿಪ್ಪಾರೆಡ್ಡಿ ಬಿಜೆಪಿಯಿಂದ ಮತ್ತೊಮ್ಮೆ ಆಯ್ಕೆಯಾಗುತ್ತಾರೆ. ಜೆಡಿಎಸ್‌ನ ಎಸ್ ಕೆ ಬಸವರಾಜನ್ ಅವರನ್ನು ಜಿ ಎಚ್ ತಿಪ್ಪಾರೆಡ್ಡಿ 26718 ಮತಗಳ ಅಂತರದಿಂದ ಸೋಲಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಪ್ರಬಲ ಸ್ವರ್ಧೇ ಎದುರಾಗಿತ್ತಾದರೂ, ಜಿ ಹೆಚ್ ತಿಪ್ಪಾರೆಡ್ಡಿ ಗೆಲುವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಜೆಡಿಎಸ್‌ನ ಕೆ ಸಿ ವೀರೇಂದ್ರ ವಿರುದ್ಧ ತಿಪ್ಪಾರೆಡ್ಡಿ 32985 ಮತಗಳ ಅಂತರದಿಂದ ಗೆದ್ದು ಶಾಸಕರಾಗಿದ್ದರು

ಮತದಾರರು

ಚಿತ್ರದುರ್ಗದಲ್ಲಿ 2,55,039 ಮತದಾರರಿದ್ದು, ಇದರಲ್ಲಿ 1,26,246 ಪುರುಷರು, 1,28,767 ಮಹಿಳೆಯರು ಹಾಗೂ 26 ಜನ ಇತರೆ ಲಿಂಗಾಯತರು ಇದ್ದಾರೆ. ಲಿಂಗಾಯತ, ರೆಡ್ಡಿ ಲಿಂಗಾಯತ, ನಾಯಕ, ಮುಸ್ಲಿಂ, ದಲಿತ, ಕುರುಬ, ಗೊಲ್ಲ, ಹಿಂದುಳಿದ, ಮತದಾರರು ನಿರ್ಣಾಯಕವಾಗಿದ್ದಾರೆ.

Facebook
Twitter
LinkedIn
WhatsApp
Telegram