“ಈದಿನ.ಕಾಮ್‌ ಮೆಗಾ ಸರ್ವೆ” ಚುನಾವಣಾ ಪೂರ್ವ ಸಮೀಕ್ಷೆಯ ಪೂರ್ಣ ವಿವರ

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಒಲವು ಯಾವ ಕಡೆ ಇದೆ ಎಂಬುದನ್ನು ಅರಿಯುವ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಿದ ತಕ್ಷಣ ಈ ಕ್ಷೇತ್ರದ ಅತ್ಯಂತ ಹಿರಿಯ ತಜ್ಞರ ಜೊತೆ ಚರ್ಚಿಸಿದೆವು. ಇಂತಹ ಸಮೀಕ್ಷೆ ನಡೆಸುವ ವಿಧಾನವೇ ಒಂದು ವಿಜ್ಞಾನವಾಗಿ ಬೆಳೆದಿದ್ದು, ಅದೂ ಸಹಾ ನಮ್ಮ ಓದುಗರಿಗೆ ತಲುಪಲಿ ಎಂದು ನಾವು ಭಾವಿಸುತ್ತೇವೆ. ಈದಿನ.ಕಾಮ್‌ ವಿಭಿನ್ನ ಮಾದರಿಯ ಡಿಜಿಟಲ್‌ ಮಾದ್ಯಮವಾದ್ದರಿಂದ ತನ್ನದೇ ಆದ ಸಾವಿರಾರು ಸಿಟಿಜನ್‌ ಜರ್ನಲಿಸ್ಟ್‌ (Media Volunteer) ಗಳನ್ನು ಕರ್ನಾಟಕದಾದ್ಯಂತ ಹೊಂದಿದ್ದು ಈ ಸಮೀಕ್ಚೆಯನ್ನು ಕೈಗೊಳ್ಳಲು ಸಾದ್ಯವಾಯಿತು. ಈ ಸಮೀಕ್ಷೆಯಲ್ಲಿ ಒಟ್ಟು 41,186 ಜನರನ್ನು ಮಾತನಾಡಿಸಲಾಗಿದ್ದು ಈ ಎಲ್ಲರನ್ನೂ Random ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಹಾಗಾಗಿ ಕರ್ನಾಟಕದ ಅತಿ ದೊಡ್ಡ ಮತ್ತ್ ವಿಶ್ವಾಸಾರ್ಹ ಸಮೀಕ್ಷೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ,  ಸಮೀಕ್ಷೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳುವುದರ ಮೂಲಕ ಮತದಾರರ ಒಲವು ಯಾವ ಪ್ರಮಾಣದಲ್ಲಿ ಯಾವ ಪಕ್ಷಗಳ ಕಡೆಗಿದೆ ಎಂಬುದನ್ನು ಈ ಕೆಳಗಿನ ಈದಿನ.ಕಾಮ್‌ ನ ಮೆಗಾ ಸರ್ವೆಯ ಮೂಲಕ ತಿಳಿಯಬಹುದು

ಯಾವುದೇ ಸಮೀಕ್ಷೆಯು ಆಯಾ ಭಾಗದಲ್ಲಿನ ಸಮುದಾಯಗಳ ಪ್ರಮಾಣವನ್ನು ಹೊಂದಿಕೆಯಾಗುವಂತಿರಬೇಕು ಅದುವೇ ಸಮೀಕ್ಷೆಯ ಮೊದಲ ಮಾನದಂಡ.  ಕರ್ನಾಟಕದ ಜಾತಿ ಸಮುದಾಯಗಳ ಪ್ರಮಾಣವು ಬಹುತೇಕ ಕರ್ನಾಟಕದ ಅವರವರ ಜನಸಂಖ್ಯೆಗೆ ಸಮೀಪದಲ್ಲೇ ಇದೆ. ಸಮೀಕ್ಷೆಯಲ್ಲಿ ಶೇ. 17ರಷ್ಟು ಪರಿಶಿಷ್ಟ ಜಾತಿ (ಬಲಗೈ, ಎಡಗೈ ಮತ್ತು ಇತರೆಯನ್ನು ಒಳಗೊಂಡು), ಶೇ. 8ರಷ್ಟು ಪರಿಶಿಷ್ಟ ಪಂಗಡ, ಶೇ.11ರಷ್ಟು ಮುಸ್ಲಿಮರು, ಶೇ.17ರಷ್ಟು ಲಿಂಗಾಯಿತರು, ಶೇ.11ರಷ್ಟು ಒಕ್ಕಲಿಗರು, ಶೇ.10ರಷ್ಟು ಕುರುಬ ಸಮುದಾಯಕ್ಕೆ ಸೇರಿದವರಿಂದ ಅಭಿಪ್ರಾಯ ಪಡೆಯಲಾಗಿದೆ.

ಸಾಮಾನ್ಯವಾಗಿ ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಬೆಲೆ ಏರಿಕೆಯು ಒಂದು ಪ್ರಧಾನ ಸಮಸ್ಯೆಯಾಗಿ ತಮ್ಮನ್ನು ಕಾಡುತ್ತಿದೆಯೆಂದು ಮತದಾರರು ಹೇಳುತ್ತಾರೆ. ಈದಿನ ಸಮೀಕ್ಷೆಯಲ್ಲೂ ‘ನಿಮ್ಮನ್ನು ಕಾಡುವ ಪ್ರಧಾನ ಸಂಗತಿಯೇನು’ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟು, ಹಲವು ಆಯ್ಕೆಗಳನ್ನು ನೀಡಲಾಗಿತ್ತು. ಇಲ್ಲಿಯೂ ಹೆಚ್ಚಿನವರು ಬೆಲೆ ಏರಿಕೆಯನ್ನು, ಅದಕ್ಕಿಂತ ಸ್ವಲ್ಪ ಕಡಿಮೆ ಜನರು ಭ್ರಷ್ಟಾಚಾರವನ್ನು ತಮ್ಮನ್ನು ಕಾಡುತ್ತಿರುವ ಸಂಗತಿಯೆಂದು ಹೇಳಿದರು. ಇನ್ನೂ ಕಡಿಮೆ ಪ್ರಮಾಣದ ಮತದಾರರು ಹಲವು ಸಮಸ್ಯೆಗಳನ್ನು ಗುರುತಿಸಿದರು. ಪ್ರತಿಯೊಬ್ಬರೂ ತಮ್ಮನ್ನು ಕಾಡುತ್ತಿರುವ ಎರಡು ಪ್ರಮುಖ ಸಮಸ್ಯೆಗಳನ್ನು ಗುರುತಿಸಬೇಕೆಂದು ಕೇಳಿದ್ದರಿಂದ, ಮೊದಲ ಆಯ್ಕೆಯ ನಂತರ ಇನ್ನೊಂದು ಬಾರಿ ಅದೇ ಪಟ್ಟಿಯನ್ನು ಓದಿ, ಎರಡನೇ ಸಮಸ್ಯೆಯನ್ನು ಗುರುತಿಸಬೇಕೆಂದು ಕೇಳಲಾಯಿತು. ಆಶ್ಚರ್ಯವೆಂದರೆ, ಬೆಲೆ ಏರಿಕೆ ಅಥವಾ ಇನ್ನಿತರ ಸಮಸ್ಯೆಗಳನ್ನು ತಮ್ಮ ಮೊದಲ ಸಮಸ್ಯೆಯನ್ನಾಗಿ ಗುರುತಿಸಿದ್ದವರಲ್ಲಿ ಹೆಚ್ಚಿನವರು ಭ್ರಷ್ಟಾಚಾರವೇ ದೊಡ್ಡ ಸಮಸ್ಯೆ ಎಂದರು. ಮೊದಲ ಮತ್ತು ಎರಡನೆಯ ಆಯ್ಕೆಗಳೆರಡನ್ನೂ ಸೇರಿಸಿದರೆ ಕರ್ನಾಟಕದಲ್ಲಿ ಈ ಸಾರಿಯ ಚುನಾವಣೆಯ ಹೊತ್ತಿನಲ್ಲಿ ಭ್ರಷ್ಟಾಚಾರವು ಬಹುತೇಕ ಜನರನ್ನು ಕಾಡುತ್ತಿರುವ ಪ್ರಮುಖ ಅಂಶವಾಗಿದೆ.

ಭ್ರಷ್ಟಾಚಾರವು ಎಲ್ಲ ಪಕ್ಷಗಳ ಮತದಾರರನ್ನೂ ಕಾಡುವ ಸಂಗತಿಯಾಗಿದೆ. ಅಂತಿಮವಾಗಿ ಯಾರಿಗೆ ಮತ ಹಾಕುತ್ತೇವೆಂದು ಹೇಳಿದ್ದಾರೆ ಎಂಬುದನ್ನು ಆಧರಿಸಿ, ವಿವಿಧ ಪಕ್ಷಗಳ ಬೆಂಬಲಿಗರ ಅನಿಸಿಕೆಗಳೇನಾಗಿವೆ ಎಂಬುದನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಎಲ್ಲಾ ಪಕ್ಷಗಳ ಬೆಂಬಲಿಗರಿಗೂ ಇದು ದೊಡ್ಡ ಸಂಗತಿಯೇ ಆಗಿದೆ. ಆದರೆ ಕಾಂಗ್ರೆಸ್‌ಗೆ ಮತ ಹಾಕುವವರು ಹೆಚ್ಚಿನ ಪ್ರಮಾಣದಲ್ಲೂ, ಬಿಜೆಪಿಗೆ ಮತ ಹಾಕುವವರು ಕಡಿಮೆ ಪ್ರಮಾಣದಲ್ಲೂ ಭ್ರಷ್ಟಾಚಾರವೇ ದೊಡ್ಡ ಸಮಸ್ಯೆ ಎಂದಿದ್ದಾರೆ ಎಂಬುದನ್ನು ಗಮನಿಸಬಹುದು.

ಬೆಲೆ ಏರಿಕೆಯೂ ಪ್ರಮುಖ ಅಂಶವಾಗಿ ಉಳಿದುಕೊಂಡಿದೆ. ಸಾಮಾನ್ಯವಾಗಿ ಬೆಲೆ ಏರಿಕೆಯೆಂದಾಗ ಅದು ಹಣದುಬ್ಬರ ಮತ್ತು ಬಡತನದ ಜೊತೆಗೆ ಸಂಬಂಧ ಹೊಂದಿರುತ್ತದೆ. ಹಾಗಾಗಿ ಅದು ಬಡವರನ್ನೇ ಹೆಚ್ಚು ಬಾಧಿಸುತ್ತದೆ. ಬಹುತೇಕ ಸಮೀಕ್ಷೆಗಳಲ್ಲಿ ಬೆಲೆ ಏರಿಕೆಯನ್ನೇ ಪ್ರಧಾನವಾದ ಸಮಸ್ಯೆಯೆಂದು ಮತದಾರರು ಹೇಳುವುದು ವಾಡಿಕೆ. ಅದನ್ನು ಇಲ್ಲಿಯೂ ನೋಡಬಹುದು.

ಮಹಿಳೆಯರು ಪುರುಷರಿಗಿಂತ ಬೆಲೆ ಏರಿಕೆಯ ಕುರಿತು ಹೆಚ್ಚು ಆತಂಕ ಹೊಂದಿದ್ದಾರೆ. ಇದೂ ಸಹಾ ಸಾಮಾನ್ಯವಾಗಿ ಎಲ್ಲಾ ಸಮೀಕ್ಷೆಗಳಲ್ಲೂ ಕಂಡುಬರುವ ಅಂಶವಾಗಿದೆ. ಆದರೆ ಇಲ್ಲಿ ಇವೆರಡರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಶೇ.50 ಮಹಿಳೆಯರು ಮತ್ತು ಶೇ.45ರಷ್ಟು ಪುರುಷರು ತಮ್ಮ ಮೊದಲ ಆಯ್ಕೆಯಲ್ಲಿ ಬೆಲೆ ಏರಿಕೆಯನ್ನು ಪ್ರಧಾನ ಸಮಸ್ಯೆಯಾಗಿ ಗುರುತಿಸಿದ್ದಾರೆ.

ನಿರುದ್ಯೋಗವು ದೇಶದ ಇತರ ಭಾಗಗಳಲ್ಲಿರುವ ಪ್ರಮಾಣದಲ್ಲಿ ಕರ್ನಾಟಕದಲ್ಲಿಲ್ಲ. ಆದರೂ ಅದು ಮೊದಲ ಮೂರು ಅಂಶಗಳಲ್ಲಿ ಒಂದಾಗಿದೆ. ಅಶಿಕ್ಷಿತರಿಗೆ ಹೋಲಿಸಿದರೆ, ಹೆಚ್ಚು ಶಿಕ್ಷಣ ಪಡೆದವರು ನಿರುದ್ಯೋಗದ ಕುರಿತು ಹೆಚ್ಚು ಕಾಳಜಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಶಿಕ್ಷಣದ ಮಟ್ಟ ಹೆಚ್ಚಾಗುತ್ತಾ ಹೋದ ಹಾಗೆ ನಿರುದ್ಯೋಗದ ಆತಂಕವೂ ಹೆಚ್ಚಾಗುತ್ತಾ ಹೋಗಿರುವುದನ್ನು ಇಲ್ಲಿ ಗಮನಿಸಬಹುದು.

ನಿರುದ್ಯೋಗವನ್ನು ಸಾಕಷ್ಟು ಜನರು ಒಂದು ಸಮಸ್ಯೆಯನ್ನಾಗಿ ಗುರುತಿಸಿದ್ದರೂ, ಅವರಲ್ಲಿ ಯುವಜನರು ನಿರುದ್ಯೋಗವು ಒಂದು ಸಮಸ್ಯೆಯೆಂದು ಹೆಚ್ಚಾಗಿ ಹೇಳಿದ್ದಾರೆ. ವಯಸ್ಸು ಹೆಚ್ಚಾಗುತ್ತಾ, ನಿರುದ್ಯೋಗವನ್ನು ಒಂದು ಸಮಸ್ಯೆಯೆಂದು ಹೇಳಿದವರ ಪ್ರಮಾಣವೂ ಕಡಿಮೆಯಾಗುತ್ತಾ ಹೋಗಿರುವುದನ್ನು ಗಮನಿಸಬಹುದು.

ಮಹಿಳೆಯರ ಸುರಕ್ಷತೆ ಕುರಿತ ವಿಚಾರವು ಸಾಮಾನ್ಯವಾಗಿ ರಾಜಕೀಯ ಚರ್ಚೆಗಳಲ್ಲಿ ಹೆಚ್ಚು ಕಾಣುವುದಿಲ್ಲ. ಆದರೆ ಈ ಸಮೀಕ್ಷೆಯಲ್ಲಿ ಒಂದಷ್ಟು ಜನರು ಅದನ್ನು ಪ್ರಮುಖ ಸಂಗತಿಯನ್ನಾಗಿ ಭಾವಿಸಿದ್ದಾರೆ. ಸಹಜವಾಗಿ ಮಹಿಳೆಯರು ಈ ಕುರಿತು ಹೆಚ್ಚು ಆತಂಕ ಹೊಂದಿದ್ದಾರೆ. ಯುವತಿಯರು ಈ ಕುರಿತು ಮಿಕ್ಕವರಿಗಿಂತ ಹೆಚ್ಚು ಆತಂಕ ಹೊಂದಿರುವುದು ಕಂಡು ಬರುತ್ತದೆ. 18ರಿಂದ 25ರ ವಯೋಮಾನದ ಯುವತಿಯರು 46ಕ್ಕೂ ಹೆಚ್ಚು ವಯಸ್ಸಿನ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಮಹಿಳಾ ಸುರಕ್ಷತೆಯ ಕುರಿತು ಆತಂಕಿತರಾಗಿದ್ದಾರೆ.

ಕುಡಿಯುವ ನೀರು ಮತ್ತು ವಿದ್ಯುತ್‌ ಸಮಸ್ಯೆ ಪ್ರಧಾನವಾಗಿ ಗ್ರಾಮೀಣ ಭಾಗ ಹಾಗೂ ಬಡವರನ್ನು ಬಾಧಿಸಿದೆ. ಆದರೆ ಇದು ರಾಜ್ಯಾದ್ಯಂತ ಒಂದೇ ತೆರನಾಗಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಗಳ ಗ್ರಾಮೀಣ ಭಾಗದ ಜನರು ಮಾತ್ರ ಇದನ್ನು ಹೆಚ್ಚಾಗಿ ಗುರುತಿಸಿದ್ದಾರೆ. ಉಳಿದ ಭಾಗಗಳು ಇದನ್ನು ಹೆಚ್ಚು ಹೇಳಿಲ್ಲ.

ಅಪರಾಧ, ಹಿಂಸೆ ಮತ್ತು ದೌರ್ಜನ್ಯಗಳ ಕುರಿತು ಧಾರ್ಮಿಕ ಅಲ್ಪಸಂಖ್ಯಾತರು ಹೆಚ್ಚು ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದ್ವೇಶದ ರಾಜಕಾರಣಕ್ಕೆ ಪುಷ್ಠಿ ನೀಡುತ್ತಿದೆ. ಸಾಮಾನ್ಯವಾಗಿ ಈ ಹಿಂದಿನ ಸಮೀಕ್ಷೆಗಳಲ್ಲಿ ದಲಿತ  ಸಮುದಾಯವು ಹೆಚ್ಚು ಆತಂಕಕ್ಕೀಡಾಗುತ್ತಿತ್ತು.

 ಆಡಳಿತ ಪಕ್ಷದ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರ ವಿರುದ್ಧದ ಅಲೆಗಿಂತ ಹೆಚ್ಚಿದೆ. ಆದರೆ, ಆಪರೇಷನ್‌ ಕಮಲ ನಡೆದ ಕ್ಷೇತ್ರಗಳಲ್ಲಿ ಅಲ್ಲಿನ ಮತದಾರರಿಗೆ ಉಳಿದ ಕ್ಷೇತ್ರಗಳಿಗಿಂತ ಹೆಚ್ಚು ಸಿಟ್ಟು ತಮ್ಮ ಶಾಸಕರ ಬಗ್ಗೆ ಇಲ್ಲ.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ಈ ಅಂಕಿಗಳು ಸಾಬೀತುಪಡಿಸಿವೆ, ವಿಶೇಷವಾಗಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಅಧಿಕಾರ ನಡೆಸಲು ವಿರೋಧಿಸಿದ್ದಾರೆ, ವಿಶೇಷವಾಗಿ ಲಿಂಗಾಯತ ಸಮುದಾಯ ಬೊಮ್ಮಾಯಿ ಸರ್ಕಾರದ ವಿರುದ್ದವಿದೆ.

ಈಗಿನ ಬಿಜೆಪಿಯ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಅವಕಾಶ ಕೊಡಬೇಕೇ? ಹಾಲಿ ಸರ್ಕಾರ ಮುಂದುವರೆಯಬೇಕೇ ಎಂಬ ಪ್ರಶ್ನೆಯನ್ನು ಜನರ ಬಳಿ ಕೇಳಿದಾಗ ಶೇ 67ರಷ್ಟು ಜನರು ಈ ಸರ್ಕಾರ ಮುಂದುವರೆಯಬಾರದು ಎಂದು ಹೇಳಿದ್ದಾರೆ ಇದು ಹಾಲಿ ಸರ್ಕಾರದ ವಿರುದ್ದ ಜನರ ಆಕ್ರೋಶಗೊಂಡಿದ್ದಾರೆ ಅಥವಾ ಈ ಸರ್ಕಾರದ ಆಡಳಿತ ಅವರಿಗೆ ಇಷ್ಟವಾಗಲಿಲ್ಲ ಎಂಬುದನ್ನು ಸೂಚಿಸುತ್ತದೆ. 

ಆಡಳಿತ ಪಕ್ಷದ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರ ವಿರುದ್ಧದ ಅಲೆಗಿಂತ ಹೆಚ್ಚಿದೆ. ಆದರೆ, ಆಪರೇಷನ್‌ ಕಮಲ ನಡೆದ ಕ್ಷೇತ್ರಗಳಲ್ಲಿ ಅಲ್ಲಿನ ಮತದಾರರಿಗೆ ಉಳಿದ ಕ್ಷೇತ್ರಗಳಿಗಿಂತ ಹೆಚ್ಚು ಸಿಟ್ಟು ತಮ್ಮ ಶಾಸಕರ ಬಗ್ಗೆ ಇಲ್ಲ.

ಇಡೀ ರಾಜ್ಯದಲ್ಲಿ ಶಾಸಕರ ಪರವಾಗಿ ರಾಜ್ಯದಲ್ಲಿ ದೊಡ್ಡ ಒಲವೇನೂ ವ್ಯಕ್ತವಾಗಿಲ್ಲ. ಮೂರನೇ ಒಂದು ಭಾಗದಷ್ಟು ಜನರು ಮಾತ್ರ ತಮ್ಮ ಶಾಸಕರಿಗೆ ಇನ್ನೊಂದು ಅವಕಾಶ ಕೊಡುವುದರ ಬಗ್ಗೆ ಒಲವುಳ್ಳವರಾಗಿದ್ದರು. ಇದು ಇನ್ನೊಂದು ಅವಕಾಶ ಕೊಡಬಾರದು ಎಂದು ಹೇಳಿದವರಿಗಿಂತ ಸ್ವಲ್ಪ ಕಡಿಮೆ. ಇನ್ನುಳಿದವರು (ಹೆಚ್ಚು ಕಡಿಮೆ ಮೂರನೇ ಒಂದು ಭಾಗ) ಈ ಕುರಿತು ಏನನ್ನೂ ಹೇಳಲು ಇಚ್ಛಿಸಲಿಲ್ಲ.

ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆದಿದ್ದೀರಾ ಎಂಬ ಪ್ರಶ್ನೆಗೆ 35% ಜನರು ಯಾವುದೇ ಯೋಜನೆ ತಮಗೆ ತಲುಪಿಲ್ಲ ಎಂದಿದ್ದಾರೆ. ಪಿಎಂ ಕಿಸಾನ್‌ ಯೋಜನೆ, ಆಯುಷ್ಮಾನ್‌ ಭಾರತ್‌ ಮತ್ತು ಉಜ್ವಲ ಗ್ಯಾಸ್‌ ಯೋಜನೆಗಳಿಂದ ಲಾಭ ಪಡೆದವರು (ಪ್ರತಿಕ್ರಿಯೆ ನೀಡಿದವರಲ್ಲಿ) ಕ್ರಮವಾಗಿ 21%, 21% ಮತ್ತು 23% ಮಾತ್ರ.

ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಪ್ರಸಿದ್ದ ಎಂದು ಘೋಷಿಸಿಕೊಂಡಿದ್ದ  ಯೋಜನೆಗಳ ಬಗ್ಗೆ ಜನರ ಬಳಿ ಕೇಳಿದಾಗ ನಿರ್ಧಿಷ್ಟ ಸಮುದಾಯಗಳು ಆ ಯೋಜನೆಗಳ ಕುರಿತ ಸಂತೃಷ್ಟರಾಗಿಲ್ಲ ಎಂಬುದು ತಿಳಿಯುತ್ತದೆ.

ರಾಜ್ಯದ ಬಿಜೆಪಿ ಸರ್ಕಾರದ ಯೋಜನೆಗಳನ್ನು ಹೆಸರಿಸಲು ಕೇಳಿದಾಗ ಕೇವಲ ಶೇ 0.01ರಷ್ಟು ಜನರು ಮಾತ್ರ ಹೆಸರಿಸಿದ್ದಾರೆ. ಆಶ್ಚರ್ಯವೆಂದರೆ ರಾಜ್ಯ ಬಿಜೆಪಿ ಸರ್ಕಾರದ ಯೋಜನೆಗಳನ್ನು ಹೆಸರಿಸಲು ಕೇಳಿದಾಗ ಕೇಂದ್ರ ಸರ್ಕಾರದ ಯೋಜನೆಗಳನ್ನು ಮತ್ತು ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿನ ಯೋಜನೆಗಳನ್ನು ಹೆಸರಿಸಿದ್ದಾರೆ.

ಮತದಾರರಿಗೆ ನಾಲ್ಕು ದೊಡ್ಡ ‘ಗ್ಯಾರಂಟಿ’ಗಳನ್ನು (ಭರವಸೆ) ನೀಡುವ ಮೂಲಕ ಕಾಂಗ್ರೆಸ್ ಈ ನಿರ್ವಾತದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಸಮೀಕ್ಷೆಯು ಈ ನಾಲ್ಕರ ಪೈಕಿ ಎರಡು ಗ್ಯಾರಂಟಿಗಳಿಗೆ ಮತದಾರರ ಪ್ರತಿಕ್ರಿಯೆಯೇನು ಎಂಬುದನ್ನು ಪರಿಶೀಲಿಸಿತು. ಇಲ್ಲಿ ಕಾಂಗ್ರೆಸ್‌ನ ಎರಡು ಸಮಸ್ಯೆಗಳು ಸಮೀಕ್ಷೆಯಲ್ಲಿ ಗಮನಕ್ಕೆ ಬಂದವು.

ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರಿಗೆ, ವಿಶೇಷವಾಗಿ ಯಾರನ್ನು ಉದ್ದೇಶಿಸಿ ಈ ಘೋಷಣೆಗಳನ್ನು ಮಾಡಲಾಗಿದೆಯೋ ಆ ಸಮುದಾಯಗಳ ಮತದಾರರಲ್ಲಿ ಗಣನೀಯ ಪ್ರಮಾಣದ ಜನರಿಗೆ ಈ ಘೋಷಣೆಗಳ ಬಗ್ಗೆ ಮಾಹಿತಿಯೇ ಇಲ್ಲ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಲೆ ಇದ್ದಂತೆ ಕಂಡುಬರುತ್ತಿದ್ದು, ಮತ ಪ್ರಮಾಣದಲ್ಲಿ ಅದರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಗಿಂತ ಎರಡಂಕಿಯ ಮೇಲುಗೈ ಅನ್ನು ಸಾಧಿಸಲಿದೆ. ಶೇ.43 ಮತಪ್ರಮಾಣದಿಂದ ಕಾಂಗ್ರೆಸ್‌ ಕಳೆದ ಮೂರು ದಶಕಗಳ ತನ್ನ ಚುನಾವಣಾ ಸಾಧನೆಗಿಂತ ಹೆಚ್ಚಿನದಾದ್ದನ್ನು ಸಾಧಿಸಲಿರುವುದು ಈ ಸಾರಿಯ ವಿಶೇಷ. ಇದಕ್ಕಿಂತ ಹಿಂದೆ ಕಾಂಗ್ರೆಸ್‌ ಶೇ.43ಅನ್ನು ಮುಟ್ಟಿದ್ದದ್ದು 1989ರಲ್ಲಿ.

ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ಸೀಟುಗಳನ್ನು ಕೊಡುತ್ತಿದ್ದ ಉತ್ತರ ಕರ್ನಾಟಕದಲ್ಲಿ ಈ ಬಾರಿ ಕಳಪೆ ಸಾಧನೆ ಮಾಡಲಿದೆ ಎಂಬುದು ಕಂಡುಬರುತ್ತಿದೆ. ಉತ್ತರ ಕರ್ನಾಟಕ ಭಾಗದ ಬಡತನ, ಲಿಂಗಾಯತ ಸಮುದಾಯದ ಕಡೆಗಣನೆ ಮುಂತಾದ ಅಂಶಗಳು ಈ ಮತ ವಿಭಜನೆಗೆ ಕಾರಣ. ಹಾಗೂ ಅದರ ಲಾಭವನ್ನು ಕಾಂಗ್ರೆಸ್‌ ಪಡೆಯಲಿದೆ.

2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈದಿನ.ಕಾಮ್‌ ನಡೆಸಿದ ಸಮೀಕ್ಷೆಯ ಅಂತಿಮ ಹಂತದಲ್ಲಿ ಇಂದು ಯಾವ ಪಕ್ಷಕ್ಕೆ ಎಷ್ಟು ಸೀಟುಗಳು ಲಭ್ಯವಾಗಬಹುದು ಎಂಬ ವಿವರಗಳನ್ನು ಬಿಡುಗಡೆ ಮಾಡಲಾಯಿತು. ಅದರಂತೆ ಕಾಂಗ್ರೆಸ್‌ ಪಕ್ಷವು 132ರಿಂದ 140 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎನ್ನುವುದು ತಿಳಿದುಬಂದಿದೆ. 

Facebook
WhatsApp
Twitter
Telegram
LinkedIn