ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್, ಜೆಡಿಎಸ್‌ ನಡುವೆ ಬಸವಳಿದಿರುವ ಬಿಜೆಪಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದ ವೈಭವಕ್ಕೂ ದೇವನಹಳ್ಳಿ ಕ್ಷೇತ್ರಕ್ಕೂ ಅರ್ಥಾತ್ ಸಂಬಂಧವಿಲ್ಲ. ಆರಂಭದಲ್ಲಿ ಎರಡು ಪ್ರತಿನಿಧಿಗಳ ಕ್ಷೇತ್ರವಾಗಿದ್ದ ದೇವನಹಳ್ಳಿಯು ಈಗ ಮೀಸಲು ಕ್ಷೇತ್ರವಾಗಿ ಪರಿಶಿಷ್ಟ ಜಾತಿಗೆ ಸೇರಿದ ಪ್ರತಿನಿಧಿಗಳನ್ನು ಪಡೆಯುತ್ತಿದೆ. ಬೆಂಗಳೂರಿಗೇ ಹೊಂದಿಕೊಂಡಿದ್ದರೂ, ಹೆಚ್ಚಿನ ಗಮನ ಸೆಳೆಯದೇ ಎರಡಕ್ಕೂ ಹೆಚ್ಚಿನ ಸಾರಿ ಒಬ್ಬರೇ ಶಾಸಕರಾಗದೇ, ಪ್ರಭಾವಿ ನಾಯಕರನ್ನೂ ಸೃಷ್ಟಿಸದೇ ಹೋಗಿದೆ.

 

ದೇವನಹಳ್ಳಿ ತಾಲ್ಲೂಕು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಿಂದ ದೇಶವಿದೇಶಗಳಲ್ಲಿ ಖ್ಯಾತಿಯಾಗಿದೆ. ಆದರೆ, ದೇವನಹಳ್ಳಿಯ ರಾಜಕಾರಣ ಕ್ಷೇತ್ರದ ಗಡಿಗಳನ್ನು ದಾಟಿ ಹೊರಗಿನ ಜನರ ಗಮನ ಸೆಳೆದದ್ದು ಕಡಿಮೆ. ಈ ಕ್ಷೇತ್ರದ ಒಬ್ಬೇ ಒಬ್ಬ ಶಾಸಕನೂ ಯಾವ ಸರ್ಕಾರದಲ್ಲೂ ಮಂತ್ರಿಯಾಗದೇ ಹೋದದ್ದು ಇದಕ್ಕೆ ಕಾರಣವಿರಬಹುದು. ವಿಮಾನ ನಿಲ್ದಾಣ ಆಗುವವರೆಗೂ ಹೊರಜಗತ್ತಿಗೆ ಒಂದು ರೀತಿಯಲ್ಲಿ ಅಗೋಚರವಾಗಿಯೇ ಇದ್ದ ಇಲ್ಲಿನ ರಾಜಕಾರಣ ಈಗೀಗ ಇಲ್ಲಿ ಹರಿಯುವ ಕೋಟಿ ಕೋಟಿ ರೂಪಾಯಿಗಳ ಕಾರಣಕ್ಕೆ, ಭೂಮಿಗೆ ಬಂಗಾರದ ಬೆಲೆ ಬಂದ ಕಾರಣಕ್ಕೆ ರಾಜ್ಯದಲ್ಲಿ ಗಮನಾರ್ಹವೆನಿಸಿದೆ. 

1957ರಲ್ಲಿ ದೇವನಹಳ್ಳಿ ಮತ್ತು ಹೊಸಕೋಟೆ ಎರಡೂ ಒಂದೇ ಕ್ಷೇತ್ರವಾಗಿದ್ದವು. ಹಾಗಾಗಿ ಹೊಸಕೋಟೆಯ ಶಾಸಕರಾಗಿದ್ದ ಕಾಂಗ್ರೆಸ್‌ನ ಸೂರಂ ರಾಮಯ್ಯ ಮತ್ತು ರುಕ್ಮಿಣಿಯಮ್ಮ ಅವರೇ ಇಲ್ಲಿನ ಶಾಸಕರೂ ಆಗಿದ್ದರು. ಆಗ ದೇವನಹಳ್ಳಿ ಸಾಮಾನ್ಯ ಕ್ಷೇತ್ರವಾಗಿತ್ತು. 1962ರಲ್ಲಿ ಕಾಂಗ್ರೆಸ್ ಪಕ್ಷದ ಆರ್ ಮುನಿಸ್ವಾಮಿ, 1967ರಲ್ಲಿ ಕಾಂಗ್ರೆಸ್ ಪಕ್ಷದ ಡಿ ಎಸ್ ಗೌಡ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಎಂ ಎಸ್ ರಾಮಯ್ಯನವರ ಮಗ ಎಂ ಆರ್ ಜಯರಾಂ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶಾಲಿಗಳಾಗಿದ್ದರು. ಹೀಗೆ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಈ ಕ್ಷೇತ್ರದ ದಿಕ್ಕು 1978ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಬದಲಾಯಿತು. 

ದೇವನಹಳ್ಳಿ ವಿಧಾನಸಭಾ ಕ್ಷೇತ್ರ

1978ರಲ್ಲಿ ದೇವನಹಳ್ಳಿ ಕ್ಷೇತ್ರ ಎಸ್‌ ಸಿ ಮೀಸಲು ಕ್ಷೇತ್ರವಾಗಿ ಮಾರ್ಪಾಡಾಯಿತು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕನ್ನಮಂಗಲದ ನಾರಾಯಣಪ್ಪ ಶಾಸಕರಾಗಿ ಕಾಂಗ್ರೆಸ್ ಗೆಲುವಿನ ಯಾತ್ರೆಗೆ ತಡೆಯೊಡ್ಡಿದರು. 1983ರಲ್ಲಿ ಅಣ್ಣೇಶ್ವರದ ಮರಿಯಪ್ಪ, 1985ರಲ್ಲಿ ಪಾಪನಹಳ್ಳಿಯ ಪಿ ವಿ ಮುನಿಶಾಮಪ್ಪ ಅವರ ಗೆಲುವಿನೊಂದಿಗೆ ಜನತಾ ಪಕ್ಷದ ವಿಜಯ ಯಾತ್ರೆ ಮುಂದುವರೆಯಿತು. 1989ರಲ್ಲಿ ಅದನ್ನು ಬ್ರೇಕ್ ಮಾಡಿದವರು ಕಾಂಗ್ರೆಸ್‌ನ ಮುನಿನರಸಿಂಹಯ್ಯ. ಅವರು ಜನತಾ ದಳದ ಎಂ ಮುನಿಯಪ್ಪ ಅವರನ್ನು ಸೋಲಿಸುವ ಮೂಲಕ ಶಾಸಕರಾಗಿ ಆಯ್ಕೆಯಾದರು. 

1994ರಲ್ಲಿ ಜನತಾ ದಳದ ಜಿ. ಚಂದ್ರಣ್ಣ ಕಾಂಗ್ರೆಸ್‌ನ ಮುನಿನರಸಿಂಹಯ್ಯ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾದರು. 199ರಲ್ಲಿ ಮುನಿನರಸಿಂಹಯ್ಯ ಮತ್ತೆ ಮೇಲುಗೈ ಸಾಧಿಸಿ ಜಿ ಚಂದ್ರಣ್ಣನನ್ನು ಮಣಿಸಿದರು. 2004ರಲ್ಲಿ ಇದು ಮತ್ತೆ ತಿರುಗು ಮರುಗಾಗಿ ಜನತಾ ದಳದ ಜಿ ಚಂದ್ರಣ್ಣ ಕಾಂಗ್ರೆಸ್‌ನ ಮುನಿನರಸಿಂಹಯ್ಯನವರನ್ನು ಪರಾಭವಗೊಳಿಸಿದರು. ಅಲ್ಲಿಗೆ ಮುನಿನರಸಿಂಹಯ್ಯ ಹಾಗೂ ಜಿ ಚಂದ್ರಣ್ಣ ತಲಾ ಎರಡು ಬಾರಿ ಸೋತರೆ, ಎರಡು ಬಾರಿ ಗೆದ್ದು ಶಾಸಕರಾಗಿದ್ದರು.

2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿಯೂ ದೇವನಹಳ್ಳಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿಯೇ ಉಳಿಯಿತು. ಕಾಂಗ್ರೆಸ್‌ 2008ರಲ್ಲಿ ಹೊಸ ಮುಖವಾದ ವೆಂಕಟಸ್ವಾಮಿಯವರನ್ನು ಕಣಕ್ಕಿಳಿಸಿ, ಚುನಾವಣೆಗೆ ಹೋಯಿತು. ವೆಂಕಟಸ್ವಾಮಿ ಅವರು ಜೆಡಿಎಸ್‌ನ ಜಿ ಚಂದ್ರಣ್ಣನನ್ನು ಸೋಲಿಸುವ ಮೂಲಕ ಮೊದಲ ಯತ್ನದಲ್ಲೇ ಯಶಸ್ಸು ಕಂಡರು. ಆದರೆ, 2013ರಲ್ಲಿ ವೆಂಕಟಸ್ವಾಮಿಯವರಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಜೆಡಿಎಸ್‌ನ ಪಿಳ್ಳ ಮುನಿಶಾಮಪ್ಪನ ವಿರುದ್ಧ ಕೇವಲ 1942 ಮತಗಳ ಅಂತರದಲ್ಲಿ ಪರಾಭವಗೊಂಡರು.

ಜೆಡಿಎಸ್‌ ಹಿಂದಿನ ಚುನಾವಣೆಯಲ್ಲಿ ತನ್ನ ಅಭ್ಯರ್ಥಿ ಗೆದ್ದಿದ್ದರೂ 2018ರ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಬದಲಿಸಿತು. ಪಿಳ್ಳ ಮುನಿಶಾಮಪ್ಪನ ಬದಲಿಗೆ ‘ಹೊರಗಿನವರಾದ’ ನಿಸರ್ಗ ನಾರಾಯಣಸ್ವಾಮಿಯವರನ್ನು ಕಣಕ್ಕಿಳಿಸಿತು. ಇಷ್ಟಾದರೂ ನಿಸರ್ಗ ನಾರಾಯಣಸ್ವಾಮಿ ಕಾಂಗ್ರೆಸ್‌ನ ವೆಂಕಟಸ್ವಾಮಿಯವರನ್ನು ಮಣಿಸುವ ಮೂಲಕ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್, ಜೆಡಿಎಸ್ ಎರಡು ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಸತತ ಪ್ರಯತ್ನದ ಹೊರತಾಗಿಯೂ ಇಲ್ಲಿ ಬಿಜೆಪಿ ಬಸವಳಿದಿದೆ.

ದೇವನಹಳ್ಲಿ ಕ್ಷೇತ್ರದಲ್ಲಿ ಎಸ್‌ಸಿ ಎಸ್‌ಟಿ 74662, ಒಕ್ಕಲಿಗ 45,723, ಕುರುಬರು 16,231, ಮುಸ್ಲಿಮರು 8723, ಲಿಂಗಾಯತರು 7233, ವಿಶ್ವಕರ್ಮ ಸಮುದಾಯದ 2621 ಮತದಾರರು ಇದ್ದಾರೆ.  

Facebook
Twitter
LinkedIn
WhatsApp
Telegram