ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ

ಖಮರುಲ್ ಇಸ್ಲಾಂ ಗೆಲುವಿನ ಓಟಕ್ಕೆ ಸಾಕ್ಷಿಯಾದ ಕ್ಷೇತ್ರ

ಕಲಬುರಗಿ ಉತ್ತರ ಎಂದರೆ ಖಮರುಲ್ ಇಸ್ಲಾಂ ಎನ್ನುವಷ್ಟರ ಮಟ್ಟಿಗೆ ಅವರು ಈ ಕ್ಷೇತ್ರದಲ್ಲಿ ವ್ಯಾಪಿಸಿದ್ದರು. ಕಲಬುರಗಿ ಉತ್ತರ ಕ್ಷೇತ್ರ ರಚನೆಯಾಗುವುದುಕ್ಕೆ ಹಿಂದಿನಿಂದಲೂ, ಅಂದರೆ, ಕಲಬುರಗಿ ವಿಧಾನಸಭಾ ಕ್ಷೇತ್ರವಾಗಿದ್ದಾಗಲೂ, ಖಮರುಲ್ ಇಸ್ಲಾಂ ಗೆಲ್ಲುತ್ತಾ ಬಂದಿದ್ದರು. 1978ರಿಂದ 2013ರವರೆಗೆ ಖಮರುಲ್ ಇಸ್ಲಾಂ ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಎಸ್‌ ಎಂ  ಕೃಷ್ಣ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಪತ್ನಿ ಖನೀಜ್ ಫಾತಿಮಾ ಅವರನ್ನು ಕಾಂಗ್ರೆಸ್ ಇದೇ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿತ್ತು.

ಕಾಂಗ್ರೆಸ್‌ನ ಹಿರಿಯ ನಾಯಕ ಖಮರುಲ್ ಇಸ್ಲಾಂ ಅವರ ಗೆಲುವಿನ ಓಟಕ್ಕೆ ಸಾಕ್ಷಿಯಾದ ಕ್ಷೇತ್ರ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ. 2008ರ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಬಳಿಕ ಕಲಬುರಗಿ ಕ್ಷೇತ್ರ ರಚನೆಯಾಯಿತು. ಖಮರುಲ್ ಇಸ್ಲಾಂ ಅವರು ತಮ್ಮ ಗೆಲುವಿನ ನಾಗಾಲೋಟಕ್ಕೆ ಕಲಬುರಗಿ ಉತ್ತರ ಕ್ಷೇತ್ರವನ್ನು ಹದಗೊಳಿಸಿಕೊಂಡರು.

ಕಲಬುರಗಿ ವಿಧಾನಸಭಾ ಕ್ಷೇತ್ರ ಎರಡು ಹೋಳಾಗುವ ಮೊದಲು ಖಮರುಲ್ ಇಸ್ಲಾಂ ನಾಲ್ಕು ಬಾರಿ ಜಯಗಳಿಸಿದ್ದರು. ಅದಾದ ನಂತರವೂ ಉತ್ತರದಿಂದ ಸ್ಪರ್ಧಿಸಿ ಎರಡು ಬಾರಿ ಗೆಲುವಿನ ನಗೆ ಬೀರಿದ್ದರು. ಕ್ಷೇತ್ರದಲ್ಲಿ ಒಟ್ಟಾರೆ 3,00,493 ಮತದಾರರಿದ್ದು, ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. 1,50,653 ಮಹಿಳಾ ಮತದಾರರಿದ್ದರೆ, ಪುರುಷ ಮತದಾರ ಸಂಖ್ಯೆ 1,49,840 ಇದೆ. ಮುಸ್ಲಿಂ ಬಾಹುಳ್ಯದ ಕಲಬುರಗಿ ಉತ್ತರ ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಳ್ಳಲು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ತೀವ್ರ ಪ್ರಯತ್ನ ನಡೆಸಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಖಮರುಲ್ ಇಸ್ಲಾಂ ಅವರ ಪತ್ನಿಯನ್ನು ಸಹ ಈ ಕ್ಷೇತ್ರದ ಮತದಾರರು ವಿಧಾನಸಭೆಗೆ ಆರಿಸಿ ಕಳುಹಿಸಿದ್ದಾರೆ.

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ

ಕ್ಷೇತ್ರದ ಇತಿಹಾಸ

1952ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೊಹಮ್ಮದ್ ಅಲಿ ಮೆಹ್ತಾಬ್ ಅಲಿ ಅವರು ಸಮಾಜವಾದಿ ಪಕ್ಷದ ಸದಾಶಿವಪ್ಪ ಅವರನ್ನು 4995 ಮತಗಳ ಅಂತರದಿಂದ ಸೋಲಿಸುವ ಮೂಲಕ ಕಲಬುರಗಿಯ ಮೊದಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಇದರ ನಂತರದ ಚುನಾವಣೆಯಲ್ಲೂ ಮೊಹಮ್ಮದ್ ಅಲಿ ಮೆಹ್ತಾಬ್ ಅವರು ಗೆಲುವು ದಾಖಲಿಸಿದ್ದರು.

ಮೊಹಮ್ಮದ್ ಮೆಹ್ತಾಬ್ ಅಲಿ ಅವರು 1952, 1957, 1967 ಹಾಗೂ 1972ರಲ್ಲಿ ಕಲಬುರಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ನಡುವೆ 1962ರಲ್ಲಿ ಮೊಹಮ್ಮದ್ ಮೆಹ್ತಾಬ್ ಅಲಿ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 

ಉತ್ತರ ಕ್ಷೇತ್ರ ರಚನೆಗೂ ಮುನ್ನ ಕಾಂಗ್ರೆಸ್ ಪಕ್ಷದ ನಾಯಕ ಖಮರುಲ್ ಇಸ್ಲಾಂ ನಾಲ್ಕು ಬಾರಿ ಜಯಗಳಿಸಿದ್ದರು. ಒಂದು ಬಾರಿ ಸ್ವತಂತ್ರ, ಇನ್ನೊಮ್ಮೆ ಮುಸ್ಲಿಂ ಲೀಗ್, ಮಗದೊಮ್ಮೆ ಐಎನ್ ಲೀಗ್ ಹಾಗೂ ಕೊನೆಯದಾಗಿ ಕಾಂಗ್ರೆಸ್‌ದಿಂದ ಜಯಗಳಿಸಿದ್ದು ಅವರ ಹೆಗ್ಗಳಿಕೆ.

ಖಮರುಲ್ ಇಸ್ಮಾಂ ಅವರು 1978, 1989, 1994, 1999ರಲ್ಲಿ ಗೆಲುವು ಸಾಧಿಸಿದರು. ಅವರು 2004ರ ಚುನಾವಣೆಯಲ್ಲಿ ಬಿಜೆಪಿಯ ಚಂದ್ರಶೇಖರ್ ಪಾಟೀಲ್ ಅವರ ವಿರುದ್ಧ ಕೇವಲ 4,200 ಮತಗಳ ಅಂತರದಿಂದ ಗೆದ್ದಿದ್ದರು.

1983  ಮತ್ತು 1985ರಲ್ಲಿ ಕಾರ್ಮಿಕ ನಾಯಕ ಎಸ್ ಕೆ ಕಾಂತಾ ಅವರು ಜಯಗಳಿಸಿದ್ದರು.  ಶಶೀಲ್ ಜಿ ನಮೋಶಿ ಅವರ ತಂದೆ ಗಂಗಾಧರ ನಮೋಶಿ 1962ರಲ್ಲಿ ಶಾಸಕರಾಗಿದ್ದರು. ಕೈಸರ್‌ ಮಹಮೂದ್ ಮನಿಯಾರ್‌ 1996ರಲ್ಲಿ ಜನತಾ ದಳದಿಂದ ಜಯಗಳಿಸಿದ್ದರು. ಚಂದ್ರಶೇಖರ ಡಿ ಪಾಟೀಲ್ ರೇವೂರ 2004ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದರು. ಒಟ್ಟಾರೆ ಈ ಕ್ಷೇತ್ರ ಕಲಬುರಗಿ ಉತ್ತರ ಹಾಗೂ ದಕ್ಷಿಣದಲ್ಲಿ ಹರಿದು ಹೋಗಿದೆ. 

ಕಲಬುರಗಿ ಉತ್ತರ ಕ್ಷೇತ್ರದ ಬಲಾಬಲ

2008ರಲ್ಲಿ ಕಲಬುರಗಿ ವಿಧಾನಸಭಾ ಕ್ಷೇತ್ರದ ಭಾಗವಾಗಿ ಕಲಬುರಗಿ ಉತ್ತರ ಕ್ಷೇತ್ರ ರಚನೆಯಾಯಿತು. ಬಳಿಕವೂ ಖಮರುಲ್ ಇಸ್ಲಾಂ ಅವರ ಗೆಲುವಿನ ನಾಗಾಲೋಟ ಮುಂದುವರೆಯಿತು. ಇಲ್ಲಿನ ಮತದಾರ ಈ ಮೊದಲು ನಾಲ್ಕು ಬಾರಿ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದರೂ ಸಹ ಉತ್ತರ ಕ್ಷೇತ್ರದ ಮೊದಲ ಚುನಾವಣೆಯಲ್ಲಿಯೇ 54,123 ಮತಗಳನ್ನು ಗಳಿಸಿ ಗೆದ್ದಿದ್ದರು. 

2013ರ ವಿಧಾನಸಭಾ ಚುನಾವಣೆಯಲ್ಲಿ ಖಮರುಲ್ ಇಸ್ಲಾಂ ಅವರು ಕೆಜೆಪಿಯ ನಾಸಿರ್ ಹುಸೇನ್ ಉಸ್ತಾದ್ ಅವರ ವಿರುದ್ಧ 20121 ಮತಗಳಿಂದ ಗೆಲುವು ದಾಖಲಿಸಿದ್ದರು. ಆ ಮೂಲಕ ಆರು ಬಾರಿ ಶಾಸಕರಾಗಿ ಆಯ್ಕೆಯಾದರು. ಖಮರುಲ್ ಇಸ್ಲಾಂ ಅವರು ಎಸ್‌ ಎಂ ಕೃಷ್ಣ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.  2017ರಲ್ಲಿ ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಸ್ಥಾನಕ್ಕೆ ಪತ್ನಿ ಖನೀಜ್ ಫಾತಿಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿತ್ತು. 

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಖನೀಜ್ ಫಾತಿಮಾ ಅವರು 64,311 ಮತಗಳನ್ನು ಪಡೆದು ಬಿಜೆಪಿಯ ಚಂದ್ರಕಾಂತ ಪಾಟೀಲ್ ವಿರುದ್ಧ ಕೇವಲ 5,940 ಮತಗಳ ಅಂತರದಲ್ಲಿ ಗೆದ್ದಿದ್ದರು. ಕಳೆದ ಒಂದೂವರೆ ದಶಕಗಳಿಂದ ಕಲಬುರಗಿ ಉತ್ತರ ಕ್ಷೇತ್ರ  ಖಮರುಲ್ ಇಸ್ಲಾಂ ಕುಟುಂಬದ ಹಿಡಿತದಲ್ಲಿಯೇ ಇದೆ. ಕಲಬುರಗಿ ಮಹಾನಗರ ವಾರ್ಡ್ ನಂ.1ರಿಂದ 30 ವಾರ್ಡ್‌ಗಳು ಕಲಬುರಗಿ ಉತ್ತರ ಕ್ಷೇತ್ರದಡಿ ಬರುತ್ತವೆ. ಇಡೀ ಕ್ಷೇತ್ರ ಕಲಬುರಗಿ ಮಹಾನಗರದಲ್ಲಿದೆ.

Facebook
Twitter
LinkedIn
WhatsApp
Telegram

Leave a Reply

Your email address will not be published. Required fields are marked *