ಹನೂರು ವಿಧಾನಸಭಾ ಕ್ಷೇತ್ರ

ವೀರಪ್ಪನ್ ಭಯದ ನೆರಳಲ್ಲಿ ಚುನಾವಣೆಗಳನ್ನು ಎದುರಿಸುತ್ತಿದ್ದ ಕ್ಷೇತ್ರ
1967 ರಿಂದ ಇಲ್ಲಿಯ ವರೆಗೆ ಇಲ್ಲಿ ರಾಜು ಗೌಡ ಕುಟುಂಬ ಮತ್ತು ಹೆಚ್. ನಾಗಪ್ಪ ಕುಟುಂಬದ ಮಧ್ಯೆಯೇ ರಾಜಕೀಯ ನಡೆಯುವಂತಿದೆ. 2018 ರಲ್ಲಿ ರಾಜು ಗೌಡರ ಮಗ ಆರ್. ನಾಗೇಂದ್ರ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ, ನಾಗಪ್ಪ ಅವರ ಮಗ ಪ್ರೀತಮ್ (ಬಿಜೆಪಿ) ಅವರನ್ನು ಮಣಿಸಿ ಪುನರಾಯ್ಕೆ ಆದರು. ನಾಗಪ್ಪ ಅವರ ಕುಟುಂಬ ಪಕ್ಷ ನಿಷ್ಠೆ ಬದಲಿಸುತ್ತಾ ಬಂದಿದೆ. ಬಿಜೆಪಿಗೆ ಇಲ್ಲಿ ಖಾತೆ ತೆರೆಯಲು ಇನ್ನೂ ಆಗಿಲ್ಲ. ದಲಿತ ಬಾಹುಳ್ಯ ಉಳ್ಳ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರದ್ದೇ ಮೇಲಾಟ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹನೂರು ಕೂಡ ಒಂದು. ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡದೆ, ಮೌನವಾಗಿಯೇ ಶಾಸಕರನ್ನು ಆರಿಸಿ ವಿಧಾನಸಭೆಗೆ ಕಳಿಸುವ ಕ್ಷೇತ್ರವಿದು. ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಸಾಮಾನ್ಯ ವರ್ಗಕ್ಕೆ ಸೇರಿದೆ. ಹೀಗಾಗಿ, ಪ್ರಬಲ ಜಾತಿಗರೇ ಚುನಾವಣೆಯಲ್ಲಿ ಸ್ಪರ್ಧಿಸಿದರೂ, ದಲಿತರನ್ನು ಕಡೆಗಣಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ, ಮತಕ್ಕಾಗಿ ದಲಿತರ ಓಲೈಕೆ ರಾಜಕಾರಣ ಹನೂರಿನಲ್ಲಿ ನಡೆಯುತ್ತಲೇ ಇರುತ್ತದೆ.
ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಹನೂರಿನಲ್ಲಿ ಇತರ ಪಕ್ಷಗಳ ಪ್ರಾಬಲ್ಯ ಕಡಿಮೆ. ಇದುವರೆಗಿನ ಚುನಾವಣಾ ರಾಜಕಾರಣದಲ್ಲಿ ಈ ಪಕ್ಷದಲ್ಲಿ ಕಡಿಮೆ ಅಂತರದಲ್ಲಿ ಸೋತವರ ಉದಾಹರಣೆಗಳೇ ಇಲ್ಲ. ಜೆಡಿಎಸ್ ಪ್ರಬಲ ಪೈಪೋಟಿ ನೀಡಿದರೂ ಗೆಲುವು-ಸೋಲಿನ ಅಂತರ ಕೊಂಚ ಹೆಚ್ಚಾಗಿಯೇ ಇರುತ್ತದೆ. ಈ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೂ ಖಾತೆ ತೆರೆಯಲಾಗಿಲ್ಲ. ಕ್ಷೇತ್ರವನ್ನು ವಶಕ್ಕೆ ಪಡೆಯಲು ಜೆಡಿಎಸ್ ಹವಣಿಸುತ್ತಿದೆಯಾದರೂ, ಕಾಂಗ್ರೆಸ್ ಬೇರು ಗಟ್ಟಿಯಾಗಿ ನೆಲೆಯೂರಿದೆ.
ಚುನಾವಣೆಯನ್ನು ಕಂಡ ಮೊದಲ ದಿನದಿಂದಲೂ ಹನೂರು ಕ್ಷೇತ್ರ ಯಾರು ಬೇಕಾದರೂ ಸ್ಪರ್ಧಿಸುವ ಸಾಮಾನ್ಯ ಕ್ಷೇತ್ರವಾಗಿದೆ. 1967ರಲ್ಲಿ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿತ್ತು. ಅಂದಿನಿಂದ ಇಂದಿನವರೆಗೆ 12 ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರಲ್ಲಿ ಕಾಂಗ್ರೆಸ್ ಶಾಸಕರು 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ, ಜನತಾದಳ, ಜೆಡಿಎಸ್ ಹಾಗೂ ಸ್ವತಂತ್ರ ಶಾಸಕರು ತಲಾ ಒಮ್ಮೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

1967ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನ ಎಚ್ ನಾಗಪ್ಪ, 1972ರಲ್ಲಿ ಆರ್ ರಾಚೇಗೌಡ ಗೆಲುವು ಸಾಧಿಸಿದ್ದರು. 1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ನ ಜಿ ರಾಜುಗೌಡ ಗೆದ್ದಿದ್ದರು. ಮತ್ತೆ 1983ರ ಚುನಾವಣೆಯಲ್ಲಿ ಕಾಂಗ್ರೆಸ್ನ ಕೆ.ಪಿ ಶಿವಮೂರ್ತಿ ಗೆದ್ದಿದ್ದರು. 1985ರಲ್ಲಿ ಕಾಂಗ್ರೆಸ್ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಜಿ ರಾಜುಗೌಡ ಮತ್ತೆ ಗೆಲುವು ಸಾಧಿಸಿದ್ದರು. ಬಳಿಕ ನಡೆದ 1989ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮರಳಿದ ರಾಜುಗೌಡ ಮತ್ತೊಮ್ಮೆ ಆಯ್ಕೆಯಾಗಿದರು. 1994ರ ಚುನಾವಣೆಯಲ್ಲಿ ಜನತಾ ದಳದ ಎಚ್ ನಾಗಪ್ಪ ಗೆದ್ದರೆ, 1999ರ ಚುನಾವಣೆಯಲ್ಲಿ ಕಾಂಗ್ರೆಸ್ನ ಜಿ ರಾಜುಗೌಡ ಮಗದೊಮ್ಮೆ ಗೆದ್ದಿದ್ದರು.
ಹನೂರು ನಾಗಪ್ಪ ರಾಜ್ಯದ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿದ್ದರು. ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ ನಡೆಸುತ್ತಿದ್ದ ಕಾಡಿನ ವ್ಯಾಪ್ತಿಯಲ್ಲೇ ಹನೂರು ಕ್ಷೇತ್ರವಿತ್ತು. ವೀರಪ್ಪನ್ ಆತಂಕದಲ್ಲೇ ಇಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಕ್ಷೇತ್ರದ ಮಾಜಿ ಶಾಸಕರಾಗಿದ್ದ ಹನೂರು ನಾಗಪ್ಪ ಅವರನ್ನು ಕಾಮಗೆರೆಯ ಅವರ ಮನೆಯಿಂದ 2002ರ ಆಗಸ್ಟ್ ನಲ್ಲಿ ವೀರಪ್ಪನ್ ಅಪಹರಿಸಿದ್ದ. ವೀರಪ್ಪನ್ ವಶದಲ್ಲಿದ್ದಾಗಲೇ ನಾಗಪ್ಪ ಡಿಸೆಂಬರ್ 2002ರಲ್ಲಿ ಚಂಗಡಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು. ಇಡೀ ರಾಜ್ಯವನ್ನು ಈ ಘಟನೆ ಬೆಚ್ಚಿಬೀಳಿಸಿತ್ತು.
2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ತನ್ನ ಖಾತೆ ತೆರೆಯಿತು, ಅದೇ ಆ ಪಕ್ಷದ ಕೊನೆಯ ಅವಧಿಯೂ ಆಯಿತು. ಅಂದಿನ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ನಾಗಪ್ಪ ಅವರ ಪತ್ನಿ ಪರಿಮಳ ನಾಗಪ್ಪ ಗೆಲುವು ಸಾಧಿಸಿದ್ದರು. ಅದಾಗ ಬಳಿಕ 2008ರಿಂದ ಇಲ್ಲಿಯವರೆಗೆ ಕಾಂಗ್ರೆಸ್ನ ಆರ್ ನರೇಂದ್ರ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಮಾಜಿ ಶಾಸಕರಾಗಿದ್ದ ರಾಜುಗೌಡ ಅವರ ಮಗ. ಜೊತೆಗೆ ಪ್ರಬಲ ಒಕ್ಕಲಿಗ ಜಾತಿಗೆ ಸೇರಿದವರು.
2008ರ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಎಸ್ಪಿ ಸೇರಿದ್ದ ಪರಿಮಳ ನಾಗಪ್ಪ ವಿರುದ್ಧ ಆರ್ ನಾಗೇಂದ್ರ ಅವರು ಸುಮಾರು 23 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಜೆಡಿಎಸ್ಗೆ ಬಂದು ಸ್ಪರ್ಧೆ ಮಾಡಿದ್ದ ಪರಿಮಳ ನಾಗಪ್ಪ ಅವರನ್ನು ಸುಮಾರು 11 ಸಾವಿರ ಮತಗಳ ಅಂತರದಲ್ಲಿ ಆರ್ ನರೇಂದ್ರ ಸೋಲಿಸಿದರು.

2018ರ ಚುನಾವಣೆಯಲ್ಲಿ ಆರ್ ಆರ್ ನರೇಂದ್ರ ಅವರೇ ಗೆದ್ದರೂ, ಜೆಡಿಎಸ್ ಅನ್ನು ಹಿಂದಿಕ್ಕಿ ಬಿಜೆಪಿ ಎರಡನೇ ಸ್ಥಾನ ಪಡೆದುಕೊಂಡಿತು. ಆರ್ ನರೇಂದ್ರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಗಪ್ಪ ಅವರ ಪುತ್ರ ಡಾ. ಪ್ರೀತಮ್ ನಾಗಪ್ಪ ಸುಮಾರು ನಾಲ್ಕು ಸಾವಿರ ಮತಗಳ ಅಂತರದಿಂದ ಸೋಲುಂಡರು.
ಚಾಮರಾಜನಗರ ಜಿಲ್ಲೆಯಲ್ಲಿ ದಲಿತರ ಪ್ರಾಬಲ್ಯ ಹೆಚ್ಚು. ಜಿಲ್ಲೆಯ ಭಾಗವಾಗಿರುವ ಹನೂರಿನಲ್ಲೂ ದಲಿತರ ಸಂಖ್ಯೆ ಅಧಿಕವಾಗಿದೆ. ಇಲ್ಲಿನ ಚುನಾವಣೆಯಲ್ಲಿ ಯಾರು ಗೆಲ್ಲಬೇಕೆಂಬುದನ್ನು ದಲಿತರ ಮತಗಳೇ ನಿರ್ಧರಿಸುತ್ತವೆ. ಆದರೂ, ಸಾಮಾನ್ಯ ಕ್ಷೇತ್ರವಾಗಿರುವ ಈ ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿಗಳು ಸ್ಪರ್ಧಿಸಿರುವುದು ತುಂಬಾ ವಿರಳ. ಪ್ರಬಲ ಜಾತಿಗಳ ಅಭ್ಯರ್ಥಿಗಳೇ ದಲಿತರ ಮತ ಪಡೆದು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಸುಮಾರು 2,09,683 ಮತದಾರರಿದ್ದಾರೆ. ಅವರಲ್ಲಿ 90 ಸಾವಿರ ದಲಿತರು, 51 ಸಾವಿರ ಪರಿಶಿಷ್ಟ ಪಂಗಡದವರು, 18 ಸಾವಿರ ಮುಸ್ಲಿಮರು ಮತ್ತು ಇತರ ಜಾತಿಗಳ 35 ಸಾವಿರ ಮಂದಿ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.