ಕೋಲಾರ ವಿಧಾನಸಭಾ ಕ್ಷೇತ್ರ

ಕೋಲಾರ ವಿಧಾನಸಭಾ ಕ್ಷೇತ್ರ

ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಕಾಣದ ಮುಸ್ಲಿಂ ಪ್ರಾತಿನಿಧ್ಯ

ಕೋಲಾರ ಮುಸ್ಲಿಂ ಬಾಹುಳ್ಯದ ಕ್ಷೇತ್ರ. ಕೋಲಾರ ನಗರ ಸೇರಿದಂತೆ ಈ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ 60000 ದಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರ ನಂತರ ಇಲ್ಲಿ ಮುಸ್ಲಿಮರದ್ದೇ ಎರಡನೇ ದೊಡ್ಡ ಸಂಖ್ಯೆ. ಆದರೆ, ಒಂದು ರಾಜಕೀಯ ಶಕ್ತಿಯಾಗಿ ಮುಸ್ಲಿಮರು ಇಲ್ಲಿ ಬೆಳೆಯಲೇ ಇಲ್ಲ. ಅಥವಾ ಅವರನ್ನು ಬೆಳೆಯಲು ಇತರರು ಬಿಡಲಿಲ್ಲ. ಇಲ್ಲಿ ಮುಸ್ಲಿಮರು ಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದ್ದರೂ ದಲಿತರು ಮತ್ತು ಒಕ್ಕಲಿಗರು ನಿರ್ಣಾಯಕ ಮತದಾರರಾಗಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 15 ಬಾರಿ ಚುನಾವಣೆಗಳು ನಡೆದಿದ್ದು, ಅವುಗಳ ಪೈಕಿ ಕೇವಲ ಮೂರು ಬಾರಿ ಮಾತ್ರ ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.           

 

ಕೋಲಾರ ಚಿನ್ನದ ನಾಡು; ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗೆ ಹೊಂದಿಕೊಂಡ ಜಿಲ್ಲೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿಯವರು, ಸಂವಿಧಾನ ರಚನಾ ಸಮಿತಿ ಸದಸ್ಯರಾಗಿದ್ದ ಟಿ.ಚನ್ನಯ್ಯನವರು, ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ ಗುಂಡಪ್ಪ, ಮೈಸೂರು ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ, ಶಿಕ್ಷಣ ತಜ್ಞರಾದ ಡಾ.ಎಚ್ ನರಸಿಂಹಯ್ಯ, ದಲಿತ ಚಿಂತಕ ಕೋಟಗಾನಹಳ್ಳಿ ರಾಮಯ್ಯ, ವಿಜ್ಞಾನಿಗಳಾದ ಸಿ ಎನ್ ಆರ್ ರಾವ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಗೋಪಾಲಗೌಡರು ಹೀಗೆ ಹಲವಾರು ಸಾಧಕರನ್ನು ನಾಡಿಗೆ ಪರಿಚಯಿಸಿದ್ದು ಅವಿಭಜಿತ ಕೋಲಾರ ಜಿಲ್ಲೆ.

ಕೋಲಾರ ಗಂಗರ ರಾಜಧಾನಿಯಾಗಿತ್ತು. ಇದನ್ನು ಕುವಲಾಲಪುರ ಅಂತಲೂ ಕರೆಯುತಿದ್ದರು. ಗಂಗರು ಕಟ್ಟಿಸಿದ ಹಲವಾರು ಸ್ಥಳಗಳು, ದೇವಾಲಯಗಳು ಕೋಲಾರದಲ್ಲಿವೆ. ಅದರಲ್ಲಿ ಕೋಲಾರಮ್ಮನ ದೇವಾಲಯವು ಪ್ರಸಿದ್ಧಿ ಪಡೆದಿದೆ. ಮೈಸೂರು ಹುಲಿ ಎಂದು ಪ್ರಸಿದ್ಧಿ ಪಡೆದ ಟಿಪ್ಪು ಸುಲ್ತಾನ್‌ ಅವರ ತಂದೆ ಹೈದರ್‌ ಅಲಿ ಜನಿಸಿದ್ದು ಕೂಡ ಇದೇ ಜಿಲ್ಲೆಯಲ್ಲಿ ಎನ್ನುವುದು ಇತಿಹಾಸದಲ್ಲಿ ನೋಡುತ್ತೇವೆ. ಅಂತರಗಂಗೆ ಬೆಟ್ಟದ ಶಿವಗಂಗೆಯಲ್ಲಿ ನೆಲಸಂಸ್ಕೃತಿಗಳ ರಂಗಚಟುವಟಿಕೆಗಳ ‘ಆದಿಮ ಸಂಸ್ಥೆ’ ಇದೆ. ದಲಿತ ಚಳವಳಿ ಮತ್ತು ಅಹಿಂದ ಚಳವಳಿಗೆ ಭದ್ರ ಬುನಾದಿ ಹಾಕಿ ಹೋರಾಟದ ಚಳುವಳಿಗಳು ಹುಟ್ಟಿಕೊಂಡಿದ್ದು ಇಲ್ಲಿಂದಲೇ ಎನ್ನುವುದನ್ನು ಮರೆಯುವಂತಿಲ್ಲ. ಇನ್ನು ಮಿಲ್ಕ್ ಅಂಡ್ ಸಿಲ್ಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಹೂವು, ಹಣ್ಣು ತರಕಾರಿ ಬೆಳೆದು ಬೆಂಗಳೂರಿನ ಹೊಟ್ಟೆ ತುಂಬಿಸುವ ಈ ಜಿಲ್ಲೆಯು ರಾಜ್ಯದಲ್ಲಿ ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಪಡೆದಿದೆ.

ಕೋಲಾರ ವಿಧಾನಸಬಾ ಕ್ಷೇತ್ರ

ಕೋಲಾರ ವಿಧಾನಸಭಾ ಕ್ಷೇತ್ರದ ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ನಡೆಯಿತು. ಆಗ     ಕೆ ಪಟ್ಟಾಭಿರಾಮನ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 5,793 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ಎಮ್ ಹುಸೇನಸಾಬ್‌ ಅವರನ್ನು 2835 ಮತಗಳ ಅಂತರದಿಂದ  ಸೋಲಿಸಿ ಮೊದಲ ಶಾಸಕರಾಗಿ ಆಯ್ಕೆಯಾದರು. 

1957ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಾ.ಅಬ್ದುಲ್ ರಶೀದ್‌ರವರು ಸ್ವತಂತ್ರ ಅಭ್ಯರ್ಥಿ  ಪಿ ವೆಂಕಟಗಿರಿಯಪ್ಪನವರನ್ನು 2,714 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾದರು. ನಂತರದ 1962 ಮತ್ತು 1967ರ ಸತತ ಎರಡು ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಪಿ ವೆಂಕಟಗಿರಿಯಪ್ಪನವರು ಕಾಂಗ್ರೆಸ್‌ನ                      ಡಾ. ಅಬ್ದುಲ್ ರಶೀದ್‌ರವರನ್ನು ಸೋಲಿಸಿ ಎರಡು ಬಾರಿ ವಿಧಾನಸಭೆ ಪ್ರವೇಶಿಸಿದರು.

1972ರ ಚುನಾವಣೆಯಲ್ಲಿ ಡಿ.ವೆಂಕಟರಾಮಯ್ಯನವರು ಕಾಂಗ್ರೆಸ್ ಟಿಕೆಟ್‌ ಪಡೆದು ಸ್ಪರ್ಧಿಸಿ ಪಿ ವೆಂಕಟಗಿರಿಯಪ್ಪ ಅವರನ್ನು 1,492 ಮತಗಳ ಅಂತರದಿಂದ ಸೋಲಿಸಿದರು. ಇದುವರೆಗೆ ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ ವೆಂಕಟಗಿರಿಯಪ್ಪನವರು 1978ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಇಂದಿರಾ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಎಂ ಅಬ್ದುಲ್‌ ಲತೀಫ್‌ ಅವರ ವಿರುದ್ಧ ಸ್ಪರ್ಧಿಸಿ 394 ಮತಗಳ ಅಂತರದಿಂದ ಸೋಲುಂಡರು. ನಂತರದಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.  

ಆನಂತರ 1983ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿದ ಕೆ ಆರ್ ಶ್ರೀನಿವಾಸಯ್ಯನವರು ಕಾಂಗ್ರೆಸ್‌ನ ನಸೀರ್‌ ಅಹಮದ್‌ ಅವರನ್ನು 19,755 ಮತಗಳ ಅಂತದಿಂದ ಸೋಲಿಸಿ ಶಾಸಕರಾದರು. 1985ರಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅಬ್ದುಲ್‌ ರಹೀಮ್‌ ಅವರನ್ನು ಸೋಲಿಸಿ ಎರಡನೆಯ ಬಾರಿಗೆ ಶಾಸಕರಾಗಿ ಅಯ್ಕೆಯಾದರು. ಸತತ ಎರಡು ಬಾರಿ ಮುಸ್ಲಿಮರಿಗೆ ಟಿಕೆಟ್‌ ನೀಡಿ ಸೋಲುಂಡ ಕಾಂಗ್ರೆಸ್ ಪಕ್ಷ ಈ ಬಾರಿ ಅಂದರೆ, 1989ರ ಚುನಾವಣೆಯಲ್ಲಿಯೂ ಸಹ, ಮತ್ತೆ ಮುಸ್ಲಿಂ ಅಭ್ಯರ್ಥಿ ಕೆ ಎ ನಿಸ್ಸಾರ್‌ ಅಹಮ್ಮದ್‌ ಅವರಿಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿತು. ಆಗ ಜನತಾ ದಳದಿಂದ ಸ್ಪರ್ಧಿಸಿದ್ದ ಕೆ ಆರ್ ಶ್ರೀನಿವಾಸಯ್ಯನವರನ್ನು 6,064 ಮತಗಳ ಅಂತರದಿಂದ ಸೋಲಿಸಿ ಕೆ ಎ ನಿಸಾರ್‌ ಅಹಮ್ಮದ್‌ ಅವರು ಶಾಸಕರಾದರು. ಅವರು ಕೋಲಾರ ಕ್ಷೇತ್ರದಿಂದ ಮುಸ್ಲಿಂ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಮೂರನೇ ಮತ್ತು ಕೊನೆಯ ವ್ಯಕ್ತಿಯಾದರು.

1994ರಷ್ಟೊತ್ತಿಗೆ ಜನತಾ ದಳವು ದೇವೇಗೌಡರ ನೇತೃತ್ವ ಪಡೆದುಕೊಂಡಿತ್ತು. ಆಗ ಜನತಾ ದಳದಿಂದ ಕೆ.ಶ್ರೀನಿವಾಸಗೌಡ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್ನ ಕೆ ಎ ನಿಸಾರ್‌ ಅಹಮ್ಮದ್‌ ಅವರನ್ನು 12,822 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು. 1999ರಲ್ಲಿ ಕೆ.ಶ್ರೀನಿವಾಸಗೌಡ ಜೆಡಿಯು ಪಕ್ಷ ಸೇರ್ಪಡೆಯಾಗಿ ಅದೇ ಪಕ್ಷದಿಂದ ಕಣಕ್ಕಿಳಿದು ಕಾಂಗ್ರೆಸ್‌ನ ನಸೀರ್‌ ಅಹಮದ್‌ ಅವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಮತ್ತೆ 2004ಲ್ಲಿ ಕೆ ಶ್ರೀನಿವಾಸಗೌಡ ಜೆಡಿಯು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು. 

ಅದೇ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯ ಆನಂದ ಎಂ.ಎಸ್.‌ ಅವರನ್ನು ಸೋಲಿಸಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಮೂರನೆಯ ಬಾರಿ ವಿಧಾನಸಭೆ ಪ್ರವೇಶಿಸಿದರು. ಶ್ರೀನಿವಾಸಗೌಡರು ಮೂರು ಬಾರಿ ಮೂರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಆಯ್ಕೆಯಾಗಿರುವುದು ವಿಶೇಷ.

2008ರ ಚುನಾವಣೆಯೊತ್ತಿಗೆ ವರ್ತೂರು ಪ್ರಕಾಶ ಅವರು ಕ್ಷೇತ್ರದಲ್ಲಿ ಪ್ರವೇಶ ಪಡೆದಿದ್ದರು. ಆಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 66,446 ಮತಗಳನ್ನು ಪಡೆದು ಕಾಂಗ್ರೆಸ್‌ನ     ಕೆ ಶ್ರೀನಿವಾಸಗೌಡ ಅವರನ್ನು 21,029 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ನಂತರ ಜವಳಿ ಸಚಿವರಾದರು. 2013ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 62,957 ಮತಗಳನ್ನು ಪಡೆದು ಆಗ ತಾನೆ ಜೆಡಿಎಸ್‌ ಸೇರಿದ್ದ ಕೆ.ಶ್ರೀನಿವಾಸಗೌಡ ಅವರನ್ನು 12,591 ಮತಗಳ ಅಂತರದಿಂದ ಸೋಲಿಸಿ ಎರಡನೆಯ ಬಾರಿಗೆ ಶಾಸಕರಾಗಿ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿ ನಂತರ ಕಾಂಗ್ರೆಸ್ ಸೇರಿದರು. ಅನಂತರ ಅಲ್ಲಿಂದಲೂ ಹೊರಬಂದು “ನಮ್ಮ ಕಾಂಗ್ರೆಸ್“ ಎಂಬ ಪಕ್ಷವನ್ನು ಸ್ಥಾಪಿಸಿದರು. ಈಗ ಅದನ್ನು ಬಿಟ್ಟು ಬಿಜೆಪಿ ಪಕ್ಷ ಸೇರಿದ್ದಾರೆ.

2018ರ ಚುನವಣೆಯೊತ್ತಿಗೆ ಕ್ಷೇತ್ರ ಸಾಕಷ್ಟು ಬದಲಾವಣೆಗಳೊಂದಿಗೆ ಚರ್ಚೆಯಲ್ಲಿತ್ತು. ಹೌದು 2015ರಲ್ಲಿ ಜನಪ್ರಿಯ ಜಿಲ್ಲಾಧಿಕಾರಿಯಾಗಿದ್ದ ಡಿ ಕೆ ರವಿಯವರ ಆತ್ಮಹತ್ಯೆಯಾಗಿತ್ತು. ಆಗ ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸುಳ್ಳು ಸುದ್ದಿ ಎಬ್ಬಿಸಿತು. ಇದು ಕ್ಷೇತ್ರದ ಮೇಲೆ ಪ್ರಭಾವ ಬೀರಿತು. ಆಗ ಡಿ ಕೆ ರವಿ ಅವರ ತಾಯಿ ಗೌರಮ್ಮ ಆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 2,085 ಮತಗಳನ್ನು ಪಡೆದರು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ ಶ್ರೀನಿವಾಸಗೌಡರು 81,487 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಯಾದ ಸೈಯದ್ ಜಮೀರ್ ಪಾಶ ಅವರು 35,537 ಮತಗಳನ್ನು ಪಡೆದು 42,950 ಮತಗಳ ಅಂತರದಿಂದ ಸೋತು ಎರಡನೆಯ ಸ್ಥಾನದಲ್ಲಿ ಉಳಿದರು. ಇನ್ನು ಇತ್ತ ವರ್ತೂರು ಪ್ರಕಾಶ್ ಕೇವಲ 35,544 ಮತಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು. 

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಮತಗಳನ್ನು ನೋಡೋದಾದರೆ ದಲಿತ ಸಮುದಾಯದ ಮತಗಳೇ ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರು 70,000 ಇದ್ದು ಮುಸ್ಲಿಂ ಮತದಾರರು ಎರಡನೇ ಸ್ಥಾನದಲ್ಲಿದ್ದು 60,000 ದಷ್ಟಿದ್ದಾರೆ. ಒಕ್ಕಲಿಗರು 40,000 ದಷ್ಟಿವೆ. ಇನ್ನು ಕುರುಬರು 24,000, ಬಲಿಜಗರು 10,000 ಇದ್ದರೆ ಇನ್ನುಳಿದ ಕ್ಷತ್ರಿಯರು, ಮರಾಠರು, ಕುಂಬಾರರು ಎಲ್ಲ ಮತದಾರರು ಸೇರಿ 10,000 ದಷ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ಮುಸ್ಲಿಮರು ಎರಡನೆಯ ಸ್ಥಾನದಲ್ಲಿದ್ದರೂ ನಿರ್ಣಾಯಕ ಮತದಾರರು ಮಾತ್ರ ದಲಿತರು ಮತ್ತು ಒಕ್ಕಲಿಗರಾಗಿದ್ದಾರೆ.

 

Facebook
Twitter
LinkedIn
WhatsApp
Telegram

Leave a Reply

Your email address will not be published. Required fields are marked *