ಪುತ್ತೂರು ವಿಧಾನಸಭಾ ಕ್ಷೇತ್ರ

ಒಕ್ಕಲಿಗರು ಬಹುಸಂಖ್ಯಾತರಾದರೂ ಬಂಟರದ್ದೇ ಪಾರುಪತ್ಯ!
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರೇ ಬಹುಸಂಖ್ಯಾತರು. ನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ಆದರೆ ಇದುವರೆಗೆ ಗೆದ್ದು ಬಂದಿರುವ ಶಾಸಕರಲ್ಲಿ ಗೌಡರಿಗಿಂತ ಬಂಟ ಸಮುದಾಯದವರೇ ಹೆಚ್ಚು. ಕಾಂಗ್ರೆಸ್ -ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಸುಳ್ಯದ ಡಿ ವಿ ಸದಾನಂದ ಗೌಡರು 1994ರಲ್ಲಿ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿದ್ದು ಪುತ್ತೂರು ಕ್ಷೇತ್ರದಿಂದ. ಆ ನಂತರ ಒಂದು ಬಾರಿಯಷ್ಟೇ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಅದೂ ಬಿಜೆಪಿಯಿಂದ ಒಂದು ಬಾರಿ ಶಾಸಕರಾಗಿದ್ದ ಶಕುಂತಲಾ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು.
ಸುಳ್ಯ, ಬೆಳ್ತಂಗಡಿ ತಾಲ್ಲೂಕಿನ ಜೊತೆ ಗಡಿ ಹಂಚಿಕೊಂಡಿರುವ ಪುತ್ತೂರು, ದಕ್ಷಿಣಕನ್ನಡ ಜಿಲ್ಲೆಯ ಎರಡನೇ ವಾಣಿಜ್ಯ ಕೇಂದ್ರ. 1909ರಲ್ಲಿ ಪುತ್ತೂರಿನಲ್ಲಿ ಜಿಲ್ಲೆಯಲ್ಲೆ ಪ್ರಥಮ ಸಹಕಾರ ಸಂಘ ಸ್ಥಾಪನೆಯಾಗಿತ್ತು. ಕೇರಳ ಮತ್ತು ಕರ್ನಾಟಕದ ಜಂಟಿ ಉದ್ಯಮ ಸಂಸ್ಥೆಯಾಗಿ 1986ರಲ್ಲಿ ಸ್ಥಾಪನೆಗೊಂಡ ಕ್ಯಾಂಪ್ಕೊ ಭಾರತದ ಮೂರನೇ ಅತಿದೊಡ್ಡ ಚಾಕೋಲೆಟ್ ಫ್ಯಾಕ್ಟರಿ ಎನಿಸಿದೆ. ಈಗದು ಸರ್ಕಾರದ ಪಾಲುದಾರಿಕೆಯಿಂದ ಮುಕ್ತವಾಗಿ ಸ್ವತಂತ್ರ ಸಂಸ್ಥೆಯಾಗಿದೆ. ಗೋಡಂಬಿ ಸಂಶೋಧನಾ ಕೇಂದ್ರ ಕೂಡಾ ಪುತ್ತೂರಿನಲ್ಲಿದೆ.
ಜಿಲ್ಲೆಯ ಪ್ರಮುಖ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾಗಳ ಸಂಗಮ ಸ್ಥಳವಿದು. ಅಡಿಕೆ, ಕಾಳು ಮೆಣಸು, ಗೇರು, ರಬ್ಬರ್, ತೆಂಗು ಜೊತೆಗೆ ವೀಳ್ಯದೆಲೆ, ಭತ್ತ ಮತ್ತು ತರಕಾರಿ ಬೆಳೆಯುವ ರೈತರು ಇಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳ ಜೊತೆಗೆ ಹೈನುಗಾರಿಕೆಗೂ ಪುತ್ತೂರು ಹೆಸರಾಗಿದೆ. ಜೋಡುಕೆರೆ ಕಂಬಳ, ಯಕ್ಷಗಾನ, ಭೂತಾರಾಧನೆಗಳು ಕ್ಷೇತ್ರದ ಜನರನ್ನು ಸೌಹಾರ್ದತೆಯಿಂದ ಬೆಸೆದಿದ್ದವು. ಈಗ ಕ್ಷೇತ್ರ ಬಲಪಂಥೀಯ ಚಟುವಟಿಕೆಗಳಿಗೆ ಕುಖ್ಯಾತಿ ಗಳಿಸಿದೆ.
ಪುತ್ತೂರು ಕ್ಷೇತ್ರದ ಹಿನ್ನೋಟ: ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯದಲ್ಲಿದ್ದಾಗ ಪುತ್ತೂರು ಮತ್ತು ಸುಳ್ಯ ಸೇರಿಸಿ ದ್ವಿಸದಸ್ಯ ಶಾಸನಸಭಾ ಕ್ಷೇತ್ರ ರಚಿಸಲಾಗಿತ್ತು.

ಹಿನ್ನೋಟ : 1951ರ ಚುನಾವಣೆಯಲ್ಲಿ ವೆಂಕಟರಮಣ ಗೌಡ ಮತ್ತು ಕೆ.ಈಶ್ವರ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಮೈಸೂರು ರಾಜ್ಯ ರಚನೆಯಾದ ಬಳಿಕ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ಮೀಸಲಾಗಿತ್ತು. 1957ರ ಚುನಾವಣೆಯಲ್ಲಿ ಕಾಂಗ್ರೆಸ್ ವೆಂಕಟರಮಣ ಗೌಡ ಸಾಮಾನ್ಯ ಕೋಟಾದಲ್ಲಿ ಚುನಾಯಿತರಾದರೆ, ಸುಬ್ಬಯ್ಯ ನಾಯ್ಕ ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದರು.
1962ರಲ್ಲಿ ಪುತ್ತೂರು ಮತ್ತು ಸುಳ್ಯವನ್ನು ಸ್ವತಂತ್ರ ಅಸೆಂಬ್ಲಿ ಕ್ಷೇತ್ರಗಳಾಗಿ ವಿಂಗಡಿಸಲಾಯಿತು. 1962ರಲ್ಲಿ ವೆಂಕಟರಮಣ ಗೌಡ ಮತ್ತು 1967ರಲ್ಲಿ ಬಿ.ವಿಠ್ಠಲದಾಸ ಶೆಟ್ಟಿ ಕಾಂಗ್ರೆಸ್‌ನಿಂದ ಶಾಸನಸಭೆಯಲ್ಲಿ ಪುತ್ತೂರನ್ನು ಪ್ರತಿನಿಧಿಸಿದ್ದರು. 1972ರಲ್ಲಿ ಎ.ಶಂಕರ ಆಳ್ವ ಶಾಸಕರಾಗಿದ್ದರು. ಆ ಬಾರಿ ಜನಸಂಘದಿಂದ ಸ್ಪರ್ಧಿಸಿದ್ದ ಉರಿಮಜಲು ರಾಮ ಭಟ್ ದೊಡ್ಡ ಅಂತರದಲ್ಲಿ ಪರಾಭವಗೊಂಡಿದ್ದರು.
1978ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯಥಿಯಾಗಿದ್ದ ಜನಸಂಘ ಮೂಲದ ಉರಿಮಜಲು ರಾಮ ಭಟ್ ಕಾಂಗ್ರೆಸ್‌ನ ಎದುರಾಳಿ ಈಶ್ವರ ಭಟ್ರನ್ನು 642 ಮತಗಳ ಅಂತರದಿಂದ ಸೋಲಿಸಿದ್ದರು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ನಂತರದ ಚುನಾವಣೆ ಇದಾದ್ದರಿಂದ ಕಾಂಗ್ರೆಸ್ ವಿರೋಧಿ ಅಲೆ ಇತ್ತು. 1983ರಲ್ಲಿ ಬಿಜೆಪಿಯಿಂದ ಅಖಾಡಕ್ಕಿಳಿದಿದ್ದ ಉರಿಮಜಲು ರಾಮ ಭಟ್ಟರು ಕಾಂಗ್ರೆಸ್‌ನ ಸಂಕಪ್ಪ ರೈ ಅವರನ್ನು ಮಣಿಸಿ ಮತ್ತೆ ಶಾಸಕರಾದರು. ಆದರೆ 1985ರಲ್ಲಿ ಕಾಂಗ್ರೆಸ್ ಬಿಲ್ಲವ ಸಮುದಾಯದ ಯುವ ನಾಯಕ ವಿನಯ್ ಕುಮಾರ್ ಸೊರಕೆ ರಾಮ ಭಟ್ಟರಿಗೆ ಸೋಲಿನ ರುಚಿಯುಣಿಸಿದ್ದರು.
ರಾಮ ಭಟ್ಟರ ವಿರುದ್ಧ ಸೊರಕೆ ಅವರು 20,823 ಮತಗಳ ಅಂತರದಿಂದ ಗೆದ್ದಿದ್ದರು. 1989ರಲ್ಲಿ ಉರಿಮಜಲು ರಾಮ ಭಟ್ಟರಿಗೆ ಅವಕಾಶ ನಿರಾಕರಿಸಿ ಸುಳ್ಯದ ವಕೀಲ ಡಿ ವಿ ಸದಾನಂದ ಗೌಡರನ್ನು ಕಣಕ್ಕಿಳಿಸಿದರು. ಕಾಂಗ್ರೆಸ್ ನ ವಿನಯ್‌ಕುಮಾರ್ ಸೊರಕೆ ಡಿ ವಿ ಎದುರು ಕೇವಲ 1,561 ಮತಗಳಿಂದ ಜಯಗಳಿಸಿದರು.

1994ರಲ್ಲಿ ಡಿವಿ ಮತ್ತು ಸೊರಕೆ ಮತ್ತೆ ಮುಖಾಮುಖಿಯಾದರು. ಡಿ.ವಿ. ಕೇವಲ 404 ಮತಗಳ ಅಂತರದಿಂದ ಗೆದ್ದು ಶಾಸಕರಾದರು. ಆಗ ಸುಳ್ಯದಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದವರು ಡಿ.ವಿ. ಪೇಜಾವರ ಸ್ವಾಮೀಜಿಯ ಕಾರಿಗೆ ಕಲ್ಲು ಹೊಡೆದರು ಎಂದು ಸುಳ್ಯದಲ್ಲಿ ಮುಸ್ಲಿಮರ ವಿರುದ್ಧ ನಡೆಸಿದ ಸಂಘಟಿತ ಕೋಮು ಗಲಭೆಯ ಪ್ರತಿಫಲ ಆ ಬಾರಿಯ ಚುನಾವಣಾ ಫಲಿತಾಂಶವಾಗಿತ್ತು. ಜೊತೆಗೆ ಉತ್ಸಾಹಿ ಕೆಲಸಗಾರ ಶಾಸಕ ಎನಿಸಿದ್ದ ವಿನಯ್‌ಕುಮಾರ್ ಸೊರಕೆ ವಿರುದ್ಧ ಬಂಗಾರಪ್ಪನವರ ಕೆಸಿಪಿಯಿಂದ ಹೇಮನಾಥ ಶೆಟ್ಟಿ ಚುನಾವಣಾ ಕಣಕ್ಕಿಳಿದಿದ್ದರು. ಈ ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭವಾಗಿತ್ತು.
ಸೊರಕೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಎಂಪಿಯಾಗಿ ಅಲ್ಲೆ ನೆಲೆನಿಂತರು. 1999ರಲ್ಲಿ ಡಿ ವಿ ಅವರು ಕಾಂಗ್ರೆಸ್‌ನ ಹೊಸ ಅಭ್ಯರ್ಥಿ ಸುಧಾಕರ ಶೆಟ್ಟಿಯನ್ನು ಸುಲಭವಾಗಿ ಸೋಲಿಸಿ ಎರಡನೆ ಬಾರಿ ಶಾಸಕರಾದರು. 2004ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. ಬಂಟ್ವಾಳದಲ್ಲಿ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿ ವಿಫಲರಾಗಿದ್ದ ಶಕುಂತಲಾ ಶೆಟ್ಟಿ ಪುತ್ತೂರಿನಲ್ಲಿ ಕಣಕ್ಕಿಳಿದಿದ್ದರು.
ಕಾಂಗ್ರೆಸ್‌ನ ಸುಧಾಕರ ಶೆಟ್ಟಿ ಅವರೆದುರು 11,112 ಮತಗಳ ಅಂತರದಿಂದ ಗೆದ್ದು ಶಾಸಕಿಯಾದರು. ಆದರೆ ಶಕುಂತಲಾ ಶೆಟ್ಟಿ ಅವರಿಗೆ 2009ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು. ಮಲ್ಲಿಕಾ ಪ್ರಸಾದ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನ ಬೊಂಡಾಲ ಜಗನ್ನಾಥ ಶೆಟ್ಟಿ ಅವರನ್ನು ಮಲ್ಲಿಕಾ ಕೇವಲ 1425 ಮತಗಳ ಅಂತರದಲ್ಲಿ ಸೋಲಿಸಿದ್ದರು. ಆ ಬಾರಿ ಶಕುಂತಲಾ ಶೆಟ್ಟಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 25,171 ಮತ ಪಡೆದಿದ್ದರು.
ಕಾಂಗ್ರೆಸ್‌ನ ಬೊಂಡಾಲ ಜಗನ್ನಾಥ ಶೆಟ್ಟಿ ಅವರಿಗೆ ಮುಳುವಾಗಿದ್ದು ಶಕುಂತಲಾ ಶೆಟ್ಟಿ ಅವರ ಸ್ಪರ್ಧೆ!
2013ರ ಚುನಾವಣೆಯಲ್ಲಿ ಶಕುಂತಲಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 4,283 ಮತಗಳ ಅಂತರದಿಂದ ಬಿಜೆಪಿಯ ಸಂಜೀವ ಮಠಂದೂರು ಎದುರು ಜಯಗಳಿಸಿದರು. 2018ರಲ್ಲಿ ಅದೇ ಮಠಂದೂರು ಅವರು ಶಕುಂತಲಾ ಶೆಟ್ಟಿ ಅವರನ್ನು 19,477 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ಚುನಾವಣೆಗೆ ಶಕುಂತಲಾ ಶೆಟ್ಟಿ ಮತ್ತು ಮಠಂದೂರು ಇಬ್ಬರೂ ಸ್ಪರ್ಧಿಸುತ್ತಿಲ್ಲ. ಪಕ್ಷೇತರ ಸೇರಿದಂತೆ ಹೊಚ್ಚ ಹೊಸ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜಾತೀವಾರು ಮತದಾರರು
ಒಕ್ಕಲಿಗರು – 44000, ಮುಸ್ಲಿಮರು – 41000, ಬಂಟರು- 28000, ಬಿಲ್ಲವರು- 15000, ಎಸ್‌ಸಿ/ ಎಸ್‌ಟಿ- 40000, ಬ್ರಾಹ್ಮಣ/ಕೊಂಕಣಿ- 15000, ಒಬಿಸಿ – 2000
ಒಟ್ಟು 205000