ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ 

 
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ

ಗುತ್ತಿಗೆದಾರ, ಸಿನಿಮಾ ನಿರ್ಮಾಪಕನನ್ನು ಸಚಿವರನ್ನಾಗಿಸಿದ ಕ್ಷೇತ್ರ

ರಾಜರಾಜೇಶ್ವರಿ ನಗರ ಚುನಾವಣಾ ಅಕ್ರಮಗಳಿಗೆ ಹೆಸರಾದ ಕ್ಷೇತ್ರ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಇದು ಅತಿ ಹೆಚ್ಚು ವಂಚನೆ, ಅವ್ಯವಹಾರ ಪ್ರಕರಣಗಳು ದಾಖಲಾಗುವ ಪ್ರದೇಶವಾಗಿದೆ. 2018ರಲ್ಲಿ ಈ ಕ್ಷೇತ್ರದಲ್ಲಿ ಸಾವಿರಾರು ಅಸಲಿ ಮತದಾರರ ಗುರತಿನ ಚೀಟಿಗಳು ಸಿಕ್ಕಿದ್ದವು. ಅವುಗಳ ಹಿಂದೆ ಬಿಜೆಪಿ ಕೈವಾಡವಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಅದಾದ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರೇ ಗೆದ್ದಿದ್ದರು. 

ರಾಜರಾಜೇಶ್ವರಿ ನಗರ ಬೆಂಗಳೂರಿನ ಪ್ರಸಿದ್ಧ ಬಡಾವಣೆ. ಆರ್‌ ಆರ್‌ ನಗರ ಎಂದೇ ಕರೆಸಿಕೊಳ್ಳುವ ಇದು ಒಂದು ವಿಧಾನಸಭಾ ಕ್ಷೇತ್ರವೂ ಹೌದು. ಈ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.  ಕನ್ನಡದ ಅನೇಕ ಸಾಹಿತಿಗಳು, ಲೇಖಕರು, ಚಿತ್ರನಟರ ನಿವಾಸಗಳನ್ನು ಒಳಗೊಂಡಿರುವ ಈ ಕ್ಷೇತ್ರ ಬೆಂಗಳೂರು ಮಧ್ಯಮ ವರ್ಗದ ಜನರ ನೆಚ್ಚಿನ ಬಡಾವಣೆ.  

 ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿ ನಗರ, 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೊಸ ಕ್ಷೇತ್ರವಾಯಿತು. 2008ರಲ್ಲಿ ರಚನೆಗೊಂಡ ಈ ಕ್ಷೇತ್ರ  ಒಂದು ಉಪ ಚುನಾವಣೆ, ಸೇರಿದಂತೆ ಮೂರು ಸಾರ್ವತ್ರಿಕ ಚುನಾವಣೆಗಳನ್ನು ಕಂಡಿದೆ.  ನಗರದ ವ್ಯಾಪ್ತಿಯೊಳಗಿರುವ ಕಾರಣ ಈ ಕ್ಷೇತ್ರದಲ್ಲಿ ಬಿಬಿಎಂಪಿಯ ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ ಪಿ ಪಾರ್ಕ್, ಯಶವಂತಪುರ, ಎಚ್‌ ಎಂ ಟಿ, ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ ಹೆಸರಿನ 9 ವಾರ್ಡ್‌ಗಳಿವೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ

ರಾಜಕೀಯ ಇತಿಹಾಸ

ಮೈಸೂರ ರಾಜ್ಯದ ಆಡಳಿತ ಅವಧಿಯಲ್ಲಿನ ಚುನಾಯಿತ ಪ್ರತಿನಿಧಿ ವ್ಯವಸ್ಥೆ ಜಾರಿಯಾಗಿದ್ದ 1962ರ ಕಾಲದಲ್ಲಿ ಉತ್ತರಹಳ್ಳಿ ಕ್ಷೇತ್ರದ ಮೊದಲ ಶಾಸಕರಾಗಿ ಸ್ವತಂತ್ರ ಅಭ್ಯರ್ಥಿ ಜೆ ಶ್ರೀನಿವಾಸ ರೆಡ್ಡಿ, ಆಯ್ಕೆಯಾಗಿದ್ದರು.  

1967ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ವೈ ರಾಮಕೃಷ್ಣ, 1972ರಲ್ಲಿ ದಲಿತ ನಾಯಕ, ʼಬೂಸಾ ಚಳುವಳಿʼ ರೂವಾರಿ ಕಾಂಗ್ರೆಸ್ ಬಿ ಬಸವಲಿಂಗಪ್ಪ, ಗೆಲುವು ಕಂಡಿದ್ದರು. ಮೈಸೂರು ರಾಜ್ಯ ಒಕ್ಕೂಟ ವ್ಯವಸ್ಥೆ ಸೇರಿದ ಬಳಿಕ ರಚನೆಯಾದ ಕರ್ನಾಟಕ ರಾಜ್ಯದಲ್ಲಿಯೂ ಉತ್ತರಹಳ್ಳಿ ಕ್ಷೇತ್ರವಾಗಿಯೇ ಮುಂದುವರೆದ ಈ ವಿಧಾನಸಭಾ ಸ್ಪರ್ಧಾಕಣ 1978ರ ಚುನಾವಣೆಗೆ ಸಾಕ್ಷಿಯಾಯಿತು.

ಚುನಾವಣೆಯಲ್ಲಿ ಜನತಾ ಪಕ್ಷದ ಎಂ ವಿ ರಾಜಶೇಖರನ್ ಇಲ್ಲಿನ ಶಾಸಕರಾದರು.1983 ಹಾಗೂ 1985ರಲ್ಲಿ ಜನತಾ ಪಕ್ಷದ ಎಂ ಶ್ರೀನಿವಾಸ್, 1989ರಲ್ಲಿ ಕಾಂಗ್ರೆಸ್‌ನ ಎಸ್ ರಮೇಶ್, 1994ರಲ್ಲಿ ಬಿಜೆಪಿ ಎಂ ಶ್ರೀನಿವಾಸ್ ಹಾಗೂ 1998ರ ಉಪಚುನಾವಣೆ ಹಾಗೂ 1999 ಹಾಗೂ 2004ರ ಚುನಾವಣೆಗಳಲ್ಲಿ ಆರ್ ಅಶೋಕ ಈ ಕ್ಷೇತ್ರದ ಶಾಸಕರಾಗಿದ್ದರು. 2008ರಲ್ಲಾದ ಕ್ಷೇತ್ರ ಪುನರ್‌ ವಿಂಗಡನೆ ಬಳಿಕ ರಾಜರಾಜೇಶ್ವರಿ ನಗರ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು.

ಮೂರು ಚುನಾವಣೆಗಳ ಹಣಾಹಣಿ

2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಶ್ರೀನಿವಾಸ್ 60,187 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್‌ನ ಪಿ ಎನ್ ಕೃಷ್ಣಮೂರ್ತಿ 40,595 ಮತಗಳನ್ನು ಪಡೆದು ಎರಡನೇ ಸ್ಥಾನ  ಪಡೆದರೆ ಜೆಡಿಎಸ್‌ನ ಹನುಮಂತರಾಯಪ್ಪ 36,785 ಮತ ಪಡೆದು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು. ಈ ಹಣಾಹಣಿಯಲ್ಲಿ ಶ್ರೀನಿವಾಸ್‌ 19592 ಮತಗಳ ಗೆಲುವು ದಾಖಲಿಸಿದ್ದರು.

ನಿರ್ಮಾಪಕ, ಸಿವಿಲ್‌ ಕಂಟ್ರಾಕ್ಟರ್‌ ಆಗಿರುವ ಮುನಿರತ್ನ ಈ ಕ್ಷೇತ್ರ ಪ್ರವೇಶಿಸಿದ್ದು, 2013ರಲ್ಲಿ. ಬಿಬಿಎಂಪಿಯಲ್ಲಿ ಮೊದಲು ಗುತ್ತಿಗೆದಾರರಾಗಿದ್ದ, ನಂತರ ಕಾರ್ಪೋರೇಟರ್‌ ಆಗಿದ್ದ ಮುನಿರತ್ನ, ಬಳಿಕ ಕಾಂಗ್ರೆಸ್‌ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಇವರೆದುರು ಸ್ಪರ್ದಿಸಿದ್ದ ಜೆಡಿಎಸ್‌ನ ತಿಮ್ಮನಂಜಯ್ಯ 52,251 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಆಗ ಹಾಲಿ ಶಾಸಕರಾಗಿದ್ದ ಬಿಜೆಪಿಯ ಎಂ ಶ್ರೀನಿವಾಸ್ 50,726 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಈ ಚುನಾವಣೆಯಲ್ಲಿ ಮೊದಲ ಹಾಗೂ ಎರಡನೇ ‍‍ಸ್ಥಾನದ ಗೆಲುವಿನ ಅಂತರ 18,813 ಮತಗಳದ್ದಾಗಿತ್ತು.

ನಂತರ 2018ರ ಚುನಾವಣೆಯಲ್ಲೂ ಕೈ ಅಭ್ಯರ್ಥಿಯಾದ ಮುನಿರತ್ನ ಗೆಲುವು ಪಡೆದರು. ಪೈಪೋಟಿಯಲ್ಲಿ ಮುನಿರತ್ನ 1,08,065 ಮತಗಳನ್ನು ಪಡೆದರೆ, ಬಿಜೆಪಿಯ ಮುನಿರಾಜುಗೌಡ 82,573 ಮತ ಪಡೆದು ಎರಡನೆಯವರಾದರು. ಜೆಡಿಎಸ್‌ನ ರಾಮಚಂದ್ರ 60,360 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಚುನಾವಣೆಯಲ್ಲಿ ಮುನಿರತ್ನ 25,492 ಮತಗಳ ಗೆಲುವು ದಾಖಲಿಸಿದ್ದರು. ನಂತರ ಮುನಿರತ್ನ ರಾಜಕೀಯ ಮೇಲಾಟಕ್ಕೆ ಸಿಲುಕಿ ಆಪರೇಷನ್‌ ಕಮಲಕ್ಕೊಳಗಾಗಿ ಬಿಜೆಪಿ ಸೇರಿ ಕ್ಷೇತ್ರ ಉಪಚುನಾವಣೆ ಕಾಣುವಂತೆ ಮಾಡಿದರು. 

ಹೈಕೋರ್ಟ್‌ನಲ್ಲಿ ಈ ಪ್ರಕರಣಕ್ಕೆ ತಡೆಯಾಜ್ಞೆ ಇದ್ದಿದ್ದರಿಂದ ಈ ಕ್ಷೇತ್ರದ ಉಪಚುನಾವಣೆ 2020ರ ನವೆಂಬರ್‌ನಲ್ಲಿ ನಡೆಯಿತು. ಈ ಚುನಾವಣೆಯಲ್ಲಿ ದಕ್ಷ ಅಧಿಕಾರಿಯಾಗಿದ್ದ ದಿವಂಗತ ಡಿ ಕೆ ರವಿ, ಪತ್ನಿ ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇವರೆದುರು ಸ್ಪರ್ಧಿಸಿದ್ದರು. ಈ ಅದೃಷ್ಟ ಪರೀಕ್ಷೆಯಲ್ಲಿ 58 ಸಾವಿರ ಮತಗಳ ಅಂತರದ ಜಯಕಂಡು ಬಿಜೆಪಿ ಶಾಸಕರಾಗಿ ಆಯ್ಕೆಯಾಗಿ ಬಳಿಕ ಮುನಿರತ್ನ ಸಚಿವರಾದರು. 

ಜಾತಿವಾರು ಲೆಕ್ಕಾಚಾರ  

ಒಟ್ಟು 4,78,300 ಮತದಾರರನ್ನು ಹೊಂದಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಮತ ಪ್ರಮಾಣ ಹೆಚ್ಚಿದೆ. ಒಕ್ಕಲಿಗರು 1,25,000, 49,000 ಲಿಂಗಾಯತರು, 32,000 ಬ್ರಾಹ್ಮಣರು , 82,000 ಎಸ್‌ಸಿ-ಎಸ್‌ಟಿ, 15,000 ಮುಸ್ಲಿಂ, 6,000 ಕುರುಬ, 5,000 ದೇವಾಂಗ, 45,000 ತಮಿಳು, 43,000 ತೆಲುಗು ಭಾಷಿಕ ಮತದಾರರು ಅಭ್ಯರ್ಥಿಗಳ ಗೆಲುವಿನ ನಿರ್ಧಾರ ಮಾಡುತ್ತಾರೆ. 

Facebook
Twitter
LinkedIn
WhatsApp
Telegram

Leave a Reply

Your email address will not be published. Required fields are marked *