ಸಂಡೂರು ವಿಧಾನಸಭಾ ಕ್ಷೇತ್ರ

ಸಂಡೂರು ವಿಧಾನಸಭಾ ಕ್ಷೇತ್ರ

ಸಚಿವರ ಕಚೇರಿಯ ನೌಕರನನ್ನೇ ಸಚಿವನನ್ನಾಗಿಸಿದ ಕ್ಷೆತ್ರ

ಸಚಿವರೊಬ್ಬರ ಕಚೇರಿಯ ನೌಕರನನ್ನೇ ಸಚಿವನನ್ನಾಗಿಸಿದ್ದು ಸಂಡೂರು ವಿಧಾನಸಭಾ ಕ್ಷೇತ್ರದ ವಿಶೇಷ. ರಾಜವಂಶಸ್ಥ ಘೋರ್ಪಡೆಯವರ ಕಚೇರಿಯಲ್ಲಿ ಕೆಲಸಕ್ಕಿದ್ದ ಸಂತೋಷ್‌ ಲಾಡ್‌, ಚುನಾವಣೆಯಲ್ಲಿ ತಮ್ಮ ಧಣಿಯನ್ನು ಸೋಲಿಸಿ ಶಾಸಕರಾದರು. ಅದಕ್ಕಿಂತಲೂ ವಿಶೇಷ ಅಂದರೆ, ಲಾಡ್‌ ಕಚೇರಿಯಲ್ಲಿ ನೌಕರರಾಗಿದ್ದ ತುಕಾರಾಂ ನಂತರ ಈ ಕ್ಷೇತ್ರದ ಶಾಸಕರಾದರು. ರಾಜಮನೆತನ, ಕಬ್ಬಿಣದ ಗಣಿ ಕಾರಣದಿಂದ ಹೆಸರಾಗಿದ್ದ ಪ್ರದೇಶ ಸಂಡೂರು. ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಘೋರ್ಪಡೆ, ಸಂತೋಷ್‌ ಲಾಡ್‌ ಹಾಗೂ ತುಕಾರಾಂ ವಿವಿಧ ಸರ್ಕಾರಗಳಲ್ಲಿ ಸಚಿವರುಗಳಾಗಿದ್ದರು ಎನ್ನುವುದು ಗಮನಾರ್ಹ. 

 

ಸಚಿವರೊಬ್ಬರ ಕಚೇರಿಯ ನೌಕರನನ್ನೇ ಸಚಿವನನ್ನಾಗಿಸಿದ್ದು ಸಂಡೂರು ವಿಧಾನಸಭಾ ಕ್ಷೇತ್ರದ ವಿಶೇಷ. ರಾಜವಂಶಸ್ಥ ಘೋರ್ಪಡೆಯವರ ಕಚೇರಿಯಲ್ಲಿ ಕೆಲಸಕ್ಕಿದ್ದ ಸಂತೋಷ್‌ ಲಾಡ್‌ ರಾಜರನ್ನು ಸೋಲಿಸಿ ಶಾಸಕರಾದರು. ಅದಕ್ಕಿಂತಲೂ ವಿಶೇಷ ಅಂದರೆ, ಲಾಡ್‌ ಕಚೇರಿಯಲ್ಲಿ ನೌಕರರಾಗಿದ್ದ ತುಕಾರಾಂ ಇಲ್ಲಿನ ಶಾಸಕರಾಗಿದ್ದು. 2008ರ ಬಳಿಕ ಇದು ಎಸ್‌ಟಿ ಮೀಸಲು ಕ್ಷೇತ್ರ. ರಾಜಮನೆತನ, ಕಬ್ಬಿಣದ ಗಣಿ ಕಾರಣದಿಂದ ಹೆಸರಾಗಿದ್ದ ಪ್ರದೇಶ ಸಂಡೂರು. ಈ ಕ್ಷೇತ್ರದಿಂದ ಆಯ್ಕೆಯಾಗಿದ ಘೋರ್ಪಡೆ, ಸಂತೋಷ್‌ ಲಾಡ್‌ ಹಾಗೂ ತುಕಾರಾಂ ಸಚಿವರುಗಳಾಗಿದ್ದರು ಎನ್ನುವುದು ಗಮನಾರ್ಹ. 

ಕ್ಷೇತ್ರ ಪರಿಚಯ 

ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರ ಸಂಡೂರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗುವವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಇದು, ಬಳಿಕ ಎಸ್‌ಟಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಮ್ಯಾಂಗನೀಸ್‌ ಹಾಗೂ ಕಬ್ಬಿಣದ ಅದಿರಿನ ನಿಕ್ಷೇಪಗಳ ಕಾರಣದಿಂದಲೂ ಇದು ಹೆಸರುವಾಸಿಯಾಗಿದೆ.  ಭಾರತ ಒಕ್ಕೂಟ ಸೇರುವ ಮೊದಲು ಸಂಡೂರು ಮರಾಠ ದೊರೆ ಘೋರ್ಪಡೆ ವಂಶಸ್ಥರ ಆ‍ಳ್ವಿಕೆಗೆ ಒಳಪಟ್ಟಿತ್ತು. 1713 ರಲ್ಲಿ ಶ್ರೀಮಂತ ಸಿಡಾಲ್ಜಿ ಘೋರ್ಪಡೆ ಸಂಡೂರ್ ರಾಜಪ್ರಭುತ್ವವನ್ನು ಸ್ಥಾಪಿಸಿದರು. ಶ್ರೀಮಂತ್ ಸಿಡಾಲ್ಜಿ ಮರಾಠದ ಕುಲೀನರಾಗಿದ್ದರು.

ಸಂಡೂರು ವಿಧಾನಸಭಾ ಕ್ಷೇತ್ರ

1776 ರಿಂದ 1790 ರ ಅವಧಿಯಲ್ಲಿ, ಸಂಡೂರು ಪ್ರದೇಶವನ್ನು ಮೈಸೂರು ಸಾಮ್ರಾಜ್ಯದೊಳಗೆ ಸೇರಿಸಲಾಯಿತು. ಅಕ್ಟೋಬರ್ 1817 ರಿಂದ ಜುಲೈ 1818 ರವರೆಗೆ, ಸಂಡೂರ್ ಪೇಶ್ವೆಗಳ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಕರ್ನಾಟಕದ ಬಳ್ಳಾರಿ ಜಿಲ್ಲೆ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಾಗ, ಸಂಡೂರಿನ ಅರಸರು ಮದ್ರಾಸ್ ಪ್ರೆಸಿಡೆನ್ಸಿಯ ನಿಯಂತ್ರಣಕ್ಕೆ ಬಂದರು. ಜುಲೈ 1, 1818ರಂದು ಸಂಡೂರುನ್ನು ಔಪಚಾರಿಕವಾಗಿ ಬ್ರಿಟಿಷ್ ಪ್ರೊಟೆಕ್ಟರೇಟ್ ಎಂದು ಘೋಷಿಸಲಾಯಿತು. 

1947ರಲ್ಲಿ ದೇಶದ ಭಾಗವಾದ ಇದನ್ನು1949 ರಲ್ಲಿ ಇಲ್ಲಿನ ದೊರೆ ಈ ರಾಜಪ್ರಭುತ್ವದ ರಾಜ್ಯವನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಿದನು. ನಂತರ, ಸಂಡೂರು ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬಳ್ಳಾರಿ ಜಿಲ್ಲೆಯ ಭಾಗವಾಯಿತು. ಬಳ್ಳಾರಿ ಜಿಲ್ಲೆ 1953ರಲ್ಲಿ ಮೈಸೂರು ರಾಜ್ಯದ ಭಾಗವಾಯಿತು..

1973ರಲ್ಲಿ ‘ಸಂಡೂರಿನ ರೈತರ ಹೋರಾಟ‘ ಜಿಲ್ಲೆಯನ್ನು ರಾಜ್ಯ ತಿರುಗಿನೋಡುವಂತೆ ಮಾಡಿತು. ಸರ್ಕಾರದೊಂದಿಗೆ ತಮ್ಮ ಜಮೀನಿಗಾಗಿ ಹೋರಾಟ ನಡೆಸಿದ ರೈತರು, ‘ಜಾರ್ಜ್ ಫರ್ನಾಂಡೀಸ್ ನೇತೃತ್ವದಲ್ಲಿ ತಮ್ಮ 13 ಸಾವಿರ ಎಕರೆ ಭೂಮಿಯನ್ನು ವಾಪಾಸ್‌ ಪಡೆದುಕೊಂಡಿದ್ದರು. 

ರಾಜಕೀಯ ಇತಿಹಾಸ  

1952 ಕಮ್ಯುನಿಸ್ಟ್‌ ಪಾರ್ಟಿಯ ವಿ ನಂದಗೋಪಾಲ ಇಲ್ಲಿನ ಮೊದಲ ಶಾಸಕರಾದರು. ಕಾಂಗ್ರೆಸ್‌ನ ಎಮ್‌ ಆರ್‌ ಕೃಷ್ಣಾಸ್ವಾಮಿ ರೆಡ್ಡಿ ಅವರನ್ನು ಅವರು ಪರಾಭವಗೊಳಿಸಿದ್ದರು. 1957 ರಲ್ಲಿ ಕಾಂಗ್ರೆಸ್‌ನ ಎಚ್.ರಾಯನಗೌಡ 13955 ಮತಗಳನ್ನು ಪಡೆದು ಸ್ವತಂತ್ರ ಅಭ್ಯರ್ಥಿ ಕೆ ಆರ್ ಷಡಕ್ಷರಿ ಗೌಡ ವಿರುದ್ದ ಗೆಲುವು ಕಂಡಿದ್ದರು.

1962ರಲ್ಲಿ ಕಾಂಗ್ರೆಸ್‌ನ ಎಂ ವೈ  ಘೋರ್ಪಡೆ  ಸ್ವತಂತ್ರ ಅಭ್ಯರ್ಥಿ ಹನುಮಂತಪ್ಪ ಎದುರು ಜಯ ಸಾಧಿಸಿದ್ದರು. 1967ರಲ್ಲಿ ಈ ಕ್ಷೇತ್ರದಿಂದ ಎಂ ವೈ  ಘೋರ್ಪಡೆ ಅವಿರೋಧ ಆಯ್ಕೆ ಕಂಡಿದ್ದರು. ಈ ಬಾರಿಯೂ ಅವರು ಕಾಂಗ್ರೆಸ್‌ನ ಹುರಿಯಾಳಾಗಿದ್ದರು. 1972 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ವೈ ಘೋರ್ಪಡೆ ಈ ಸ್ಥಾನದಿಂದ ಗೆದ್ದು ಶಾಸಕರಾದರು. ಅವರು ಒಟ್ಟು 26030 ಮತಗಳನ್ನು ಪಡೆದಿದ್ದರು. ಸಂಸ್ಥಾ ಕಾಂಗ್ರೆಸ್‌ನ ತಿಮ್ಮಪ್ಪ ಘೋರ್ಪಡೆಯವರಿಂದ ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲಿ ತಿಮ್ಮಪ್ಪ 16608 ಮತಗಳನ್ನು ಪಡೆದು  9422 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. 

1978ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ರುದ್ರಪ್ಪ ತಮ್ಮ ಎದುರಾಳಿ ಜನತಾ ಪಕ್ಷದ ವೈ ತಿಮ್ಮಪ್ಪ ಅವರನ್ನು 15888 ಮತಗಳಿಂದ ಸೋಲಿಸಿ ಶಾಸಕರಾದರು. 1983 ರಲ್ಲಿ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಹೀರೋಜಿ ವಿ ಎಸ್ ಲಾಡ್ 30496 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು.  ಇವರೆದುರು ಸೋತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಅರವಿಂದ ಮಲೆಬೆನ್ನೂರು 17404 ಮತ ಪಡೆದು 13092 ಮತ ಪಡೆದಿದ್ದರು. 

1985ರಲ್ಲಿ ಜನತಾ ಪಕ್ಷ ಕ್ಷೇತ್ರವನ್ನು ತನ್ನ ವಶ ಮಾಡಿಕೊಂಡಿತು. ಈ ಚುನಾವಣೆಯಲ್ಲಿ ಕಮ್ಯುನಿಸ್ಟ್  ಚಳವಳಿಯ ನೇತಾರರಾಗಿದ್ದ ಉಪ್ಪಾರ ಜನಾಂಗದ ಯು ಭೂಪತಿ ಸ್ಪರ್ಧಿಸಿ ಗೆದ್ದು ಈ ಕ್ಷೇತ್ರದ ಶಾಸಕರಾದರು. ಅವರು 26748 ಮತಗಳನ್ನು ಪಡೆದರೆ, ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ ಎಸ್ ವೀರಭದ್ರಪ್ಪ 16628 ಮತಗಳನ್ನು ಪಡೆದಿದ್ದರು. ಇವರ ಗೆಲುವಿನ ಅಂತರ 10120 ಮತಗಳದ್ದಾಗಿತ್ತು.

1989 ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ ವೈ ಘೋಪಾಡೆ ಇಲ್ಲಿಂದ ಗೆದ್ದು ಶಾಸಕರಾದರು. ಈ ಚುನಾವಣೆಯಲ್ಲಿ ಅವರು  42475 ಮತಗಳನ್ನು ಪಡೆದಿದ್ದರು.  ಜನತಾ ದಳದ ಅಭ್ಯರ್ಥಿ ಅಯ್ಯಾಳಿ ತಿಮ್ಮಪ್ಪ ಒಟ್ಟು 27605 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. 1994 ರಲ್ಲಿ ಮೂರು ಚುನಾವಣೆಗಳ ಬಳಿಕ ಎಂ ವೈ ಘೋರ್ಪಡೆ ಈ ಕ್ಷೇತ್ರದ ಶಾಸಕರಾದರು. ಇವರು ತಮ್ಮೆದುರಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಧಾಕರ ಹಿರೇಮಠ ಅವರನ್ನು 24379 ಮತಗಳಿಂದ ಸೋಲಿಸಿದ್ದರು.

1999 ರಲ್ಲೂ ಘೋರ್ಪಡೆಯವರ ಗೆಲುವಿನ ಓಟ ಮುಂದುವರೆದಿತ್ತು. ಈ ಚುನಾವಣೆಯಲ್ಲಿ ಘೋರ್ಪಡೆ 47681 ಮತ ಪಡೆದು ಮೊದಲಿಗರಾದರೆ,  ಸಂಯುಕ್ತ ಜನತಾ ದಳ  ಅಭ್ಯರ್ಥಿ ಹೀರೋಜಿ ಲಾಡ್ ಒಟ್ಟು 38688 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಇವರಿಬ್ಬರ ನಡುವಿನ ಗೆಲುವಿನ ಅಂತರ 8993 ಮತಗಳದ್ದಾಗಿತ್ತು. 

ಪ್ರಜಾಪ್ರಭುತ್ವದಲ್ಲಿಯೂ ‘ಮಂತ್ರಿ’ಯಾದ ಎಂ ವೈ ಘೋರ್ಪಡೆ 

ಮುರಾರಿರಾವ್ ಯಶವಂತರಾವ್ ಘೋರ್ಪಡೆ ಕಾಂಗ್ರೆಸ್‌ನ ಮುತ್ಸದ್ದಿ ರಾಜಕಾರಣಿ ಹಾಗೂ ಹಿಂದಿನ ಸಂಡೂರು ಸಂಸ್ಥಾನದ ರಾಜನ ಪುತ್ರ.1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರು ಒಟ್ಟು ಏಳು ಬಾರಿ ಶಾಸಕರು ಹಾಗೂ ಒಂದು ಬಾರಿ ಸಂಸದರಾಗಿದ್ದರು.(1986ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆ)

ರಾಜ್ಯ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರರಾದವರಲ್ಲಿ ಎಸ್. ನಿಜಲಿಂಗಪ್ಪ ಅವರೊಂದಿಗೆ ಘೋರ್ಪಡೆ ಅವರೂ ಒಬ್ಬರು. 1967ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಇವರು ಸಂಡೂರು ಶಾಸಕರಾಗಿ ಪ್ರತಿಸ್ಫರ್ಧಿಗಳಿಲ್ಲದೆ ಆಯ್ಕೆಯಾದುದು ವಿಶೇಷ.

1972ರಿಂದ 77ರವರೆಗೆ ದೇವರಾಜ್ ಅರಸ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ, 1990ರಿಂದ 94ರವರೆಗೆ ವೀರೇಂದ್ರ ಪಾಟೀಲ್, ಎಸ್ ಬಂಗಾರಪ್ಪ ಹಾಗೂ ವೀರಪ್ಪ ಮೊಯಿಲಿ ಸಂಪುಟದಲ್ಲಿ ಸಚಿವರಾಗಿ ಹಾಗೂ 1999ರಿಂದ 2004ರವರೆಗೆ ಎಸ್ ಎಂ ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಂಡೂರ್ ಮ್ಯಾಂಗನೀಸ್ ಮತ್ತು ಐರನ್ ಓರ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರು. ಕಪ್ಪು-ಬಿಳುಪು ವನ್ಯಜೀವಿ ಛಾಯಾಗ್ರಹಣದಿಂದಲೂ ಘೋರ್ಪಡೆ ಪ್ರಸಿದ್ಧರಾಗಿದ್ದವರು.

ರಾಜನ ಸೇವಕನೇ ಶಾಸಕ! 

2004ರಲ್ಲಿ ಸಂಡೂರು ಜೆಡಿಎಸ್‌ ಪಾಲಾಯಿತು. ಇಲ್ಲಿಂದ ಕಣಕ್ಕಿಳಿದಿದ್ದ ಸಂತೋಷ್ ಎಸ್ ಲಾಡ್ 65,600 ಮತಗಳನ್ನು ಪಡೆದು ಕಾಂಗ್ರೆಸ್‌ ದಿಗ್ಗಜರೆನಿಸಿಕೊಂಡಿದ್ದ ರಾಜಮನೆತನದ ವೆಂಕಟರಾವ್ ಘೋರ್ಪಡೆಯವರಿಗೆ ಸೋಲುಣಿಸಿದ್ದರು. ಈ ಹಣಾಹಣಿಯಲ್ಲಿ 30,056 ಮತ ಪಡೆದಿದ್ದ ಘೋರ್ಪಡೆ 35,544 ವೋಟುಗಳಿಂದ ಸೋತಿದ್ದರು. ಈ ಚುನಾವಣೆ  ಸಂಡೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಘೋರ್ಪಡೆಯವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಲಾಡ್‌ ತಮ್ಮ ಧಣಿಯ ವಿರುದ್ದವೇ ಗೆದ್ದು ಹೊಸ ಸಾಧನೆ ಮಾಡಿದ್ದರು. ಈ ಸಾಧನೆಗೈದಾಗ ಸಂತೋಷ್‌ ಲಾಡ್‌ ಅವರಿಗೆ ಕೇವಲ 29 ವರ್ಷ ವಯಸ್ಸು. 

ಮೂರು ಚುನಾವಣೆಗಳ ಬಲಾಬಲ

2008 ರಲ್ಲಿ ಸಂಡೂರು ಕಾಂಗ್ರೆಸ್‌ ಪಾಲಾಯಿತು. ಕೈ ಅಭ್ಯರ್ಥಿಯಾಗಿದ್ದ ಇ ತುಕಾರಾಂ ಈ ಸ್ಥಾನದಿಂದ ಗೆದ್ದು ಶಾಸಕರಾದರು. 49535 ಮತಗಳನ್ನು ಪಡೆದಿದ್ದ ತುಕಾರಾಂ ತಮ್ಮ ಎದುರಾಳಿ ಭಾರತೀಯ ಜನತಾ ಪಕ್ಷದ ಟಿ ನಾಗರಾಜ್ ಎದುರು 20719 ಮತಗಳ ಗೆಲುವು ಪಡೆದಿದ್ದರು. ಬಿಜೆಪಿಯ ನಾಗರಾಜ್ 28816 ಮತಗಳನ್ನು‌ ಗಳಿಸಿದ್ದರು. 

2013ರಲ್ಲೂ ತುಕಾರಾಂ ಇಲ್ಲಿನ ಶಾಸಕರಾದರು ಈ ಚುನಾವಣೆಯಲ್ಲಿ ಅವರು ಜೆಡಿಎಸ್‌ನ ಧನಂಜಯ ಆರ್ ಎದುರು  34631 ಮತಗಳಿಂದ ಗೆದಿದ್ದರು. 2018 ರಲ್ಲಿ ತುಕಾರಾಂ ಗೆಲುವಿನ ಹ್ಯಾಟ್ರಿಕ್‌ ದಾಖಲಿಸಿದರು. ಈ ಹಣಾಹಣಿಯಲ್ಲಿ ಅವರು 78106 ಮತಗಳನ್ನು ಪಡೆದರೆ, ಅವರ ಎದುರಾಳಿ ಬಿಜೆಪಿಯ ರಾಘವೇಂದ್ರ 64096 ಮತಗಳನ್ನಷ್ಟೇ ಗಳಿಸುವಲ್ಲಿ ಶಕ್ತರಾಗಿದ್ದರು. ಇವರರಿಬ್ಬರ ಗೆಲುವಿನ ಅಂತ 14010 ಮತಗಳದ್ದಾಗಿತ್ತು. 

ಜಾತಿವಾರು ಲೆಕ್ಕಾಚಾರ 

ಪರಿಶಿಷ್ಟ ಪಂಗಡದ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಇವರೇ ಬಹುಸಂಖ್ಯಾತರು. ಇವರ ಬಳಿಕ ದಲಿತ ಸಮುದಾಯ, ಮುಸಲ್ಮಾನ, ಈಡಿಗ, ಕುರುಬ ಸಮುದಾಯಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 

Facebook
Twitter
LinkedIn
WhatsApp
Telegram