ಸೇಡಂ ವಿಧಾನಸಭಾ ಕ್ಷೇತ್ರ

ಸೇಡಂ ವಿಧಾನಸಭಾ ಕ್ಷೇತ್ರ

ಹಲವು ಪಕ್ಷಗಳಿಗೆ ವಿಜಯ ಮಾಲೆ; ಲಿಂಗಾಯತರ ಭದ್ರ ನೆಲೆ

ಸೇಡಂ ಒಂದೇ ಪಕ್ಷದ ಪ್ರಾಬಲ್ಯಕ್ಕೆ ಮಣಿಯದ ವಿಧಾನಸಭಾ ಕ್ಷೇತ್ರ. ಈವರೆಗೆ ಒಟ್ಟು 16 ವಿಧಾನಸಭಾ ಚುನಾವಣೆಗಳು ನಡೆದಿವೆ. ನಾಲ್ಕು ಬಾರಿ ಹಸು-ಕರು ಚಿಹ್ನೆಯ ಕಾಂಗ್ರೆಸ್‌ (ಆರ್), ಐದು ಬಾರಿ ಕೈ ಚಿಹ್ನೆಯ ಕಾಂಗ್ರೆಸ್, ಮೂರು ಬಾರಿ ಪಕ್ಷೇತರರು ಹಾಗೂ ತಲಾ ಒಂದು ಬಾರಿ ಜನತಾ ದಳ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜಾತಿಗಳ ಮೂಲಕ ನೋಡುವುದಾದರೆ, ಲಿಂಗಾಯತ ರೆಡ್ಡಿಗಳು ಅತಿ ಹೆಚ್ಚು ಬಾರಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ. 

 

1978ರ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆ ಬಳಿಕ ಒಬ್ಬೇ ಒಬ್ಬ ಲಿಂಗಾಯತೇತರ ಅಭ್ಯರ್ಥಿಗಳಿಗೆ ಮಣೆ ಹಾಕದ ವಿಧಾನಸಭಾ ಕ್ಷೇತ್ರ ಗುಲ್ಬರ್ಗಾ ಲೋಕಸಭಾ ವ್ಯಾಪ್ತಿಗೆ ಬರುವ ಸೇಡಂ. 1978ರ ಬಳಿಕ ಈ ಕ್ಷೇತ್ರದ ಮತದಾರ ಲಿಂಗಾಯತ ಅಭ್ಯರ್ಥಿಗಳನ್ನೇ ಶಾಸಕರನ್ನಾಗಿ ವಿಧಾನಸಭೆಗೆ ಕಳಿಸಿಕೊಟ್ಟಿದ್ದಾರೆ.  ಸೇಡಂ 1951ರಲ್ಲಿ ಹೈದರಾಬಾದ್ ರಾಜ್ಯದ ತಾಂಡೂರ್ ಸೀರಮ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿತ್ತು. ಆಗ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರನೇಸ್ಚರಿ ಜೆ ಕೆ ಅವರು ಸಮಾಜವಾದಿ ಸಿದ್ದರಾಮಪ್ಪ ಅವರ ವಿರುದ್ಧ 10486 ಮತಗಳ ಅಂತರದಿಂದ ಜಯ ಗಳಿಸಿದ್ದರು.

 

ಸೇಡಂ ಮತಕ್ಷೇತ್ರವಾಗಿ ರಚನೆಯಾದ 1957ರ ಚುನಾವಣೆಯಲ್ಲಿ ದ್ವಿಸದಸ್ಯ ಸ್ಥಾನಗಳನ್ನು ಹೊಂದಿತ್ತು. ಸ್ವತಂತ್ರ ಅಭ್ಯರ್ಥಿ ಜಮದಂಡ ಪಾಪಯ್ಯ ಸರ್ವೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಲ್ಲಪ್ಪ ಲಿಂಗಪ್ಪ ಅವರು ಇಬ್ಬರು ಶಾಸಕರಾಗಿದ್ದರು. 1962ರಲ್ಲಿ ದ್ವಿಸದಸ್ಯತ್ವ ರದ್ದಾಗಿ 1978ರವರೆಗೆ ಎಸ್‌ಸಿ ಮೀಸಲು ಕ್ಷೇತ್ರವಾಗಿತ್ತು. ಈ ಅವಧಿಯಲ್ಲಿ; 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮದಂಡ ಸರ್ವೇಶ್ ಅವರು ಸ್ವತಂತ್ರ ಅಭ್ಯರ್ಥಿ ದೇವೇಂದ್ರ ಕುಮಾರ್ ಎದುರು 3,031 ಮತಗಳಿಂದ ಗೆಲುವು ದಾಖಲಿಸಿದ್ದರು. 

Sedam Assembly election 2023

1967ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಮದಂಡ ಸರ್ವೇಶ ಅವರು ಕಾಂಗ್ರೆಸ್‌ನ ಜಿ ತಿಪ್ಪಣ್ಣ ಎದುರು 1230 ಮತಗಳ ಅಂತರದಿಂದ ಜಯ ಗಳಿಸಿದ್ದರು. 1972ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜಮದಂಡ ಸರ್ವೇಶ ಅವರ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಅದೂ ಕೇವಲ 969 ಮತಗಳ ಅಂತರದಿಂದ ಅವರು ಗೆದ್ದಿದ್ದರು.

1978ರ ಚುನಾವಣೆ ಹೊತ್ತಿಗೆ ರಾಜ್ಯ ವಿಧಾನಸಭಾ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಲಾಯಿತು. ಸೇಡಂ ಮತಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವಾಗಿ ಬದಲಾಯಿಸಲಾಯಿತು. 1978ರ ಚುನಾವಣೆ ಹೊರತುಪಡಿಸಿ ಈವರೆಗೆ ಲಿಂಗಾಯತ ರಡ್ಡಿ ಸಮುದಾಯದ ಅಭ್ಯರ್ಥಿಗಳೇ ಗೆಲುವು ದಾಖಲಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ.

1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೇರ್ ಖಾನ್ ಅವರು ಜನತಾ ಪಾರ್ಟಿಯ ಬಸವಂತ್ ರೆಡ್ಡಿ ವಿರುದ್ಧ 3636 ಮತಗಳಿಂದ ಗೆಲುವು ಸಾಧಿಸಿದ್ದರು. 1983ರಲ್ಲಿ ಸೇಡಂ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ನಾಗರೆಡ್ಡಿ ಪಾಟೀಲ್ ಅವರು ಕಾಂಗ್ರೆಸ್‌ನ ಶೇರ್ ಖಾನ್‌ ಹುಸೇನ್ ಖಾನ್ ವಿರುದ್ಧ ಕೇವಲ 2043 ಮತಗಳ ಅಂತರದಿಂದ ಗೆದ್ದಿದ್ದರು.

1985ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಚಂದ್ರಶೇಖರ ರೆಡ್ಡಿ ಮದ್ನಾ ಅವರ ವಿರುದ್ಧ ಸೋಲುವ ಮೂಲಕ ಶೇರ್ ಖಾನ್‌ ಅವರು ಸತತ ಎರಡನೇ ಬಾರಿಗೆ ಪರಾಭವಗೊಂಡರು. 1994ರಲ್ಲಿ ಜನತಾ ಪಾರ್ಟಿಯ ಚಂದ್ರಶೇಖರ್ ರೆಡ್ಡಿ ದೇಶಮುಖ್ ಮದ್ನಾ ಅವರು ಗೆದ್ದಿದ್ದರೆ 1999ರಲ್ಲಿ ಕಾಂಗ್ರೆಸ್‌ನ ಬಸವನಾಥರೆಡ್ಡಿ ಮೋತಕಪಲ್ಲಿ ಅವರ ಜಯ ಗಳಿಸಿದ್ದರು.

ಹ್ಯಾಟ್ರಿಕ್ ಗೆಲುವು ದಾಖಲಿಸಿದ ಶರಣಪ್ರಕಾಶ ಪಾಟೀಲ್

ಕಾಂಗ್ರೆಸ್‌ನ ಡಾ. ಶರಣಪ್ರಕಾಶ ಪಾಟೀಲ್ ಅವರು 2004, 2008 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಈ ಮೂರು ಬಾರಿಯೂ ಬಿಜೆಪಿಯ ರಾಜಕುಮಾರ ಪಾಟೀಲ್ ತೇಲ್ಕೂರು ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2004ರ ಚುನಾವಣೆಯಲ್ಲಿ ಕೇವಲ 4532 ಮತಗಳ ಅಂತರದಿಂದ ರಾಜಕುಮಾರ ಪಾಟೀಲ್‌ರನ್ನು ಮಣಿಸಿದ್ದ ಶರಣಪ್ರಕಾಶ ಪಾಟೀಲ್ ಅವರು 2008ರಲ್ಲಿ 5924 ಮತಗಳಿಂದ ಗೆದ್ದಿದ್ದರು. ಆ ಬಳಿಕ 2013ರ ಚುನಾವಣೆಯಲ್ಲಿ ಶರಣಪ್ರಕಾಶ ಪಾಟೀಲ್ ಅವರು ಬರೋಬ್ಬರಿ 11895 ಮತಗಳ ಅಂತರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಮೂರು ಬಾರಿ ಸೋತು ನಾಲ್ಕನೇ ಸಲ ಅರಳಿದ ಕಮಲ

ಸೇಡಂ ಮತಕ್ಷೇತ್ರವನ್ನು ಶರಣಪ್ರಕಾಶ ಪಾಟೀಲ್ ಅವರು ಕೈ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದರು. ಅವರ ಎದುರು 2004, 2008 ಹಾಗೂ 2013ರ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಸೋಲನುಭವಿಸಿದ್ದ ರಾಜಕುಮಾರ ಪಾಟೀಲ್ ಅವರು ಸೋಲಿನ ಅನುಕಂಪದ ಮೇಲೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ಆ ಮೂಲಕ ವಿಧಾನಸಭೆಗೆ ಪದಾರ್ಪಣೆ ಮಾಡಿದ್ದರು. ಆದರೆ, ಗೆಲುವಿನ ಅಂತರ ಮಾತ್ರ 7200 ಮತಗಳಿದ್ದವು.

ಜಾತಿ ಲೆಕ್ಕಚಾರ

ಸೇಡಂ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. 1,08,006 ಪುರುಷ ಮತ್ತು 1,10,692 ಮಹಿಳಾ ಮತದಾರರು ಇದ್ದಾರೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಇಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಯಾರೂ ಯೋಚಿಸದೇ ಇರುವುದು ವಿಪರ್ಯಾಸ. ಈ ಮತಕ್ಷೇತ್ರದಲ್ಲಿ ಲಿಂಗಾಯತ ರೆಡ್ಡಿ ಪ್ರಬಲ ಕ್ಷೇತ್ರವಾಗಿದೆ. ನಂತರ ಕಬ್ಬಲಿಗ ಮತದಾರರು ಹೆಚ್ಚಿದ್ದು, ಈಡಿಗ ಸಮುದಾಯದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

Facebook
Twitter
LinkedIn
WhatsApp
Telegram

Leave a Reply

Your email address will not be published. Required fields are marked *