ತುಮಕೂರು ವಿಧಾನಸಭಾ ಕ್ಷೇತ್ರ

ತುಮಕೂರು ವಿಧಾನಸಭಾ ಕ್ಷೇತ್ರ

ಬಿಜೆಪಿ ಭದ್ರಕೋಟೆಯಾದ ಶೈಕ್ಷಣಿಕ ನಗರಿ

ಶೈಕ್ಷಣಿಕ ಹಾಗೂ ಧಾರ್ಮಿಕ ನಗರವೆಂದು ಹೆಸರಾಗಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೊಗಡು ಶಿವಣ್ಣ ಹಿಡಿತ ಸಾಧಿಸಿದ್ದರು. ಅವರು ಬಿಜೆಪಿ ಅಭ್ಯರ್ಥಿಯಾಗಿ 1994ರಿಂದ ನಿರಂತರವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಮಾಡಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಜಿ.ಬಿ. ಜ್ಯೋತಿ ಗಣೇಶ್‌ ಸ್ಪರ್ಧಿಸಿದ್ದ ಪರಿಣಾಮ ವೀರಶೈವ ಮತಗಳು ವಿಭಜನೆಗೊಂಡು ಶಿವಣ್ಣ ಮತ್ತು ಜಿ.ಬಿ.ಜ್ಯೋತಿ ಗಣೇಶ್‌ ಇಬ್ಬರೂ ಸೋಲು ಕಂಡರು. 2018ರ ಚುನಾವಣೆಯಲ್ಲಿ ಜಿ.ಬಿ ಜ್ಯೋತಿ ಗಣೇಶ್‌ ಗೆಲ್ಲುವ ಮೂಲಕ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಯಿತು.

 

ತುಮಕೂರು ಜಿಲ್ಲೆಯು ದಕ್ಷಿಣ ಕರ್ನಾಟಕದ ಪ್ರಮುಖ ಜಿಲ್ಲಾಕೇಂದ್ರವಾಗಿದ್ದು, ಇದನ್ನು ಈ ಹಿಂದೆ ತುಮ್ಮೆಗೂರು ಎಂದು ಕರೆಯುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಿಗುವ ಈ ಊರು ಬೆಂಗಳೂರಿನಿಂದ 70 ಕಿ.ಮಿ. ದೂರದಲ್ಲಿದೆ.

ತುಮಕೂರು ಬೈಪಾಸ್‌ನ ಕ್ಯಾತಸಂದ್ರದ ಬಳಿ ಇರುವ ಮಠವೇ ಸಿದ್ದಗಂಗಾ ಮಠ. ಇದು ವಿಶ್ವವಿಖ್ಯಾತ ಮಠವಾಗಿದ್ದು, ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ.

ತುಮಕೂರು ವಿಧಾನಸಭಾ ಕ್ಷೇತ್ರ

ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು – ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಪ್ರಸಿದ್ಧವಾಗಿದೆ. 

ತುಮಕೂರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಅನೇಕರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಜಿಲ್ಲೆಯ ತುಮಕೂರು ವಿಧಾನಸಭಾ ಕ್ಷೇತ್ರದಿಂದ 1962ರಲ್ಲಿ ಭಾಗೀರಥಮ್ಮ ಶಾಸಕರಾಗಿದ್ದರು. ಇವರಿಗೆ ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಎನ್ನುವ ಹೆಗ್ಗಳಿಕೆ ಇದೆ.

ತುಮಕೂರು ಜಿಲ್ಲೆಯಲ್ಲಿ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಮೇಲೆ 11 ಕ್ಷೇತ್ರಗಳಾದವು. ಬೆಳ್ಳಾವಿ, ಕಳ್ಳಂಬೆಳ್ಳ, ಹುಲಿಯೂರುದುರ್ಗ ಕ್ಷೇತ್ರಗಳು ಮರೆಯಾಗಿ ತಾಲೂಕುವಾರು ಕ್ಷೇತ್ರಗಳಾಗಿದ್ದು ತುಮಕೂರು ಗ್ರಾಮಾಂತರ ಕ್ಷೇತ್ರ ರಚನೆಯಾಯಿತು. ಕೊರಟಗೆರೆ ಮತ್ತು ಪಾವಗಡ ಮೀಸಲು ಕ್ಷೇತ್ರಗಳಾದವು.

ಕ್ಷೇತ್ರದ ಬಲಾಬಲ 

ತುಮಕೂರು ಕ್ಷೇತ್ರದಲ್ಲಿ ಇದುವರೆಗೆ 16 ಚುನಾವಣೆಗಳು ನಡೆದಿದ್ದು, ಇದು ಮೊದಲಿನಿಂದಲೂ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ಮೊದಲ ಚುನಾವಣೆಯಿಂದ ಈವರೆಗೆ 7 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾದರೆ, ಪಿಎಸ್‌ಪಿ ಹಾಗೂ ಜೆಎನ್‌ಪಿ ಅಭ್ಯರ್ಥಿಗಳು ತಲಾ 2 ಸಲ ಗೆಲುವು ಸಾಧಿಸಿದ್ದಾರೆ. ಬಿಜೆಪಿ 5 ಸಲ ಗೆಲುವು ಸಾಧಿಸಿದೆ. 

ತುಮಕೂರು ನಗರ ಕ್ಷೇತ್ರದ ಇತಿಹಾಸ

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ ವಿ ರಾಮರಾವ್ 13,434 ಮತಗಳನ್ನು ಪಡೆದರೆ, ಕೆಎಂಪಿಪಿ ಯಿಂದ ಟಿ ಎನ್‌ ಕೆಂಪಹೊನ್ನಯ್ಯ ಸ್ಪರ್ಧಿಸಿ, 4972 ಮತಗಳನ್ನು ಪಡೆದು, ಕೇವಲ 948 ಮತಗಳಿಂದ ಪರಾಭವಗೊಂಡರು.

1957ರಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಜಿ.ಎನ್.ಪುಟ್ಟಣ್ಣ 14,055 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಎಂ ವಿ ರಾಮರಾವ್ 12,486 ಮತಗಳನ್ನು ಪಡೆದು, ಕೇವಲ 1,569 ಮತಗಳಿಂದ ಪರಾಭವಗೊಂಡರು.

 

1962ರಲ್ಲಿ ಕಾಂಗ್ರೆಸ್‌ನ ಜಿ.ಸಿ.ಭಾಗೀರಥಮ್ಮ15,178 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ ಎಸ್ ಮಲ್ಲಿಕಾರ್ಜುನಯ್ಯ10,919 ಮತಗಳನ್ನು ಪಡೆದು, 4,259 ಮತಗಳಿಂದ ಪರಾಭವಗೊಂಡರು.

1967ರಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಬಿ.ಪಿ.ಗಂಗಾಧರ್ 10,509 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಜಿ.ಸಿ.ಭಾಭಗೀರಥಮ್ಮ 7,936 ಮತಗಳನ್ನು ಪಡೆದು, ಕೇವಲ 2,573 ಮತಗಳಿಂದ ಪರಾಭವಗೊಂಡರು.

1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಅಬ್ದುಲ್ ಸುಭಾನ್ 11,547 ಮತಗಳನ್ನು ಪಡೆದರೆ, ಭಾರತೀಯ ಜನಸಂಘದ ಎಸ್. ಮಲ್ಲಿಕಾರ್ಜುನಯ್ಯ 9,464 ಮತಗಳನ್ನು ಪಡೆದು, 2,083 ಮತಗಳಿಂದ ಪರಾಭವಗೊಂಡರು.

1978ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್.ಎಸ್.ಅಹಮದ್ 32,639 ಮತಗಳನ್ನು ಪಡೆದು ಗೆದ್ದಿದ್ದರು. 

1978ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಜೀರ್ ಅಹಮದ್ 34,199 ಮತಗಳನ್ನು ಪಡೆದರೆ, ಜನತಾ ಪಕ್ಷದ ಮೊಹಮ್ಮದ್ ಗೈಬನ್ ಖಾನ್ 15,436 ಮತಗಳನ್ನು ಪಡೆದು, 18,763 ಮತಗಳಿಂದ ಪರಾಭವಗೊಂಡರು.

1983ರ ಚುನಾವಣೆಯಲ್ಲಿ ಜನತಾ ಪಕ್ಷದ ಲಕ್ಷ್ಮೀನರಸಿಂಹಯ್ಯ 34,689 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಎಸ್. ಶಫಿ ಅಹಮದ್ 24,159 ಮತಗಳನ್ನು ಪಡೆದು, 10,530 ಮತಗಳಿಂದ ಪರಾಭವಗೊಂಡರು.

1985ರ ಚುನಾವಣೆಯಲ್ಲಿ ಜನತಾ ಪಕ್ಷದ ಲಕ್ಷ್ಮೀನರಸಿಂಹಯ್ಯ 40,440 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಅಲಿಯಾ ಬೇಗಂ 26,910 ಪಡೆದು, 13,530 ಮತಗಳಿಂದ ಪರಾಭವಗೊಂಡರು.

1989ರಲ್ಲಿ ಕಾಂಗ್ರೆಸ್‌ನ ಎಸ್.ಶಫಿ ಅಹಮದ್ 44,786 ಮತಗಳನ್ನು ಪಡೆದರೆ, ಜನತಾದಳದ ಲಕ್ಷ್ಮೀ ನರಸಿಂಹಯ್ಯ 39,646 ಮತಗಳನ್ನು ಪಡೆದು, 5,140 ಮತಗಳಿಂದ ಪರಾಭವಗೊಂಡರು.

ಕಾಂಗ್ರೆಸ್ ಹಿಡಿತದಲ್ಲಿದ್ದ  ಕ್ಷೇತ್ರವನ್ನು 1994ರಲ್ಲಿ ಬಿಜೆಪಿಯು ತನ್ನ ವಶಕ್ಕೆ ಪಡೆದುಕೊಂಡಿತು. ಬಿಜೆಪಿ ಯಿಂದ ಸ್ಪರ್ಧಿಸಿದ್ದ ಸೊಗಡು ಶಿವಣ್ಣ 39,101 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಎಸ್. ಶಫಿ ಅಹಮದ್ 29,997 ಮತಗಳನ್ನು ಪಡೆದು, 9,104 ಮತಗಳಿಂದ ಪರಾಭವಗೊಂಡರು.

1999 ರಲ್ಲಿ ಎಸ್.ಶಿವಣ್ಣ ಬಿಜೆಪಿಯಿಂದ ಸ್ಪರ್ಧಿಸಿ, 60,699 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಎಸ್. ಶಫಿ ಅಹಮದ್ 52,111 ಮತಗಳನ್ನು ಪಡೆದು, 8,588 ಮತಗಳಿಂದ ಪರಾಭವಗೊಂಡರು.

2004ರ ಚುನಾವಣೆಯಲ್ಲಿ ಬಿಜೆಪಿ ಎಸ್ ಶಿವಣ್ಣ ಮೂರನೇ ಸಲ ಆಯ್ಕೆಯಾಗಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಎಸ್‌ ಶಿವಣ್ಣ ಈ ಚುನಾವಣೆಯಲ್ಲಿ 59,977 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಶಫಿ ಅಹಮದ್ ಎಸ್ 51,332 ಮತಗಳನ್ನು ಪಡೆದು, 8,645 ಮತಗಳಿಂದ ಪರಾಭವಗೊಂಡರು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಗೊಂಡ ನಂತರ ತುಮಕೂರು ನಗರ ಕ್ಷೇತ್ರವಾಗಿ ರಚನೆಯಾಯಿತು. ತುಮಕೂರು ನಗರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸೊಗಡು ಶಿವಣ್ಣ ಬಿಜೆಪಿ ಯಿಂದ ಸ್ಪರ್ಧಿಸಿ, 39,435 ಮತಗಳನ್ನು ಪಡೆದರೆ, ಕಾಂಗ್ರೆಸ್‌ನಿಂದ ರಫೀಕ್‌ ಅಹಮದ್‌ 37,486 ಮತಗಳನ್ನು ಪಡೆದು, ಕೇವಲ 1,949 ಮತಗಳ ಅಂತರದಿಂದ ಪರಾಭವಗೊಂಡರು.

ಸತತ ನಾಲ್ಕು ಬಾರಿ (2008ರವರೆಗೆ) ಗೆಲುವು ಸಾಧಿಸಿದ್ದ ಎಸ್‌ ಶಿವಣ್ಣ ಅವರಿಗೆ 2013ರ ಚುನಾವಣೆ ಕೈ ಕೊಟ್ಟಿತು. ಕಾಂಗ್ರೆಸ್‌ನ ಡಾ ರಫೀಕ್ ಅಹಮದ್ ಎಸ್. 43,681 ಮತಗಳನ್ನು ಪಡೆದು ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ ಬಿ ಜ್ಯೋತಿ ಗಣೇಶ್ ಅವರನ್ನು 3,608 ಮತಗಳ ಅಂತರದಿಂದ ಸೋಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರು. ಈ ಚುನಾವಣೆಯಲ್ಲಿ ಜ್ಯೋತಿ ಗಣೇಶ್‌ 40,073 ಮತಗಳನ್ನು ಪಡೆದಿದ್ದರು. ಕೆಜೆಪಿಯಿಂದ ಜಿ.ಬಿ. ಜ್ಯೋತಿ ಗಣೇಶ್‌ ಸ್ಪರ್ಧಿಸಿದ ಪರಿಣಾಮ ವೀರಶೈವ ಮತಗಳು ವಿಭಜನೆಗೊಂಡು ಶಿವಣ್ಣ ಮತ್ತು ಜಿ.ಬಿ.ಜ್ಯೋತಿಗಣೇಶ್‌ ಇಬ್ಬರು ಸೋಲು ಕಂಡರು. 

2018ರ ಚುನಾವಣೆಯಲ್ಲಿ ಬಿಜೆಪಿಯ ಜ್ಯೋತಿ ಗಣೇಶ್‌ ಮತ್ತೊಮ್ಮೆ ಕ್ಷೇತ್ರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬಿಜೆಪಿಯ ಜ್ಯೋತಿ ಗಣೇಶ್‌ 60,421 ಮತಗಳನ್ನು ಪಡೆದರೆ, ಜೆಡಿಎಸ್‌ನ ಎನ್‌ ಗೋವಿಂದ ರಾಜು 55,128 ಮತಗಳನ್ನು ಪಡೆಯುವ ಮೂಲಕ 5,293 ಮತಗಳಿಂದ ಪರಾಭವಗೊಂಡರು.

ಜಾತಿ ಬಲ

ಒಕ್ಕಲಿಗರು, ಲಿಂಗಾಯತರು, ದಲಿತರು ಹಾಗೂ ಮುಸ್ಲಿಂ ಮತದಾರರು ಹೆಚ್ಚಾಗಿದ್ದು, ಹಿಂದುಳಿದ ವರ್ಗದ ಗೊಲ್ಲರು, ಕುರುಬರು ಹಾಗೂ ಇತರೆ ಸಮುದಾಯದ ಮತದಾರರು ಕೂಡ ಅಭ್ಯರ್ಥಿಯ ಫಲಿತಾಂಶವನ್ನು ಬದಲಾಯಿಸಬಲ್ಲರು.

 
Facebook
Twitter
LinkedIn
WhatsApp
Telegram

Leave a Reply

Your email address will not be published. Required fields are marked *