ವರುಣ ವಿಧಾನಸಭಾ ಕ್ಷೇತ್ರ

ವರುಣಾ ವಿಧಾನಸಭಾ ಕ್ಷೇತ್ರ

ರಚನೆಯಾದ ಹೊಸದರಲ್ಲೇ ನಾಡಿಗೆ ಮುಖ್ಯಮಂತ್ರಿಯನ್ನು ಕೊಟ್ಟ ಕ್ಷೇತ್ರ

2006ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆದಾಗ ಅಸ್ತಿತ್ವಕ್ಕೆ ಬಂದ ವರುಣಾ ಕ್ಷೇತ್ರದಲ್ಲಿ ನಡೆದಿರುವ ಒಟ್ಟು ಮೂರು ಚುನಾವಣೆಗಳಲ್ಲಿ ಎರಡು ಬಾರಿ (2008, 2013) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಒಂದು ಬಾರಿ (2018) ಅವರ ಮಗ ಯತೀಂದ್ರ ಸಿದ್ದರಾಮಯ್ಯ ಗೆದ್ದಿದ್ದಾರೆ. ಈ ತನಕ ಸಿದ್ದರಾಮಯ್ಯ ಕುಟುಂಬದ ತೆಕ್ಕೆಯಲ್ಲೇ ಉಳಿದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಆರಂಭದಿಂದಲೂ ಭಾರೀ ಅಂತರದಿಂದ ಸೋಲುತಿದ್ದಾರೆ

 

ವಿಧಾನಸಭಾ ಕ್ಷೇತ್ರವಾಗಿ ರಚನೆಯಾದ ಮೊದಲ ಚುನಾವಣೆಯಲ್ಲಿಯೇ  (2008) ರಾಜ್ಯದ ವಿಪಕ್ಷ ನಾಯಕನನ್ನು ಮತ್ತು ಎರಡನೇ ಚುನಾವಣೆಯಲ್ಲಿ (2013) ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟ ಹೆಗ್ಗಳಿಕೆ ವರುಣಾ ಕ್ಷೇತ್ರದ್ದು. ಈ ಕ್ಷೇತ್ರದಿಂದ ಆಯ್ಕೆಯಾಗಿ ಒಂದು ಅವಧಿಯಲ್ಲಿ ವಿಪಕ್ಷ ನಾಯಕರೂ, ಮತ್ತೊಂದು ಅವಧಿಯಲ್ಲಿ ಮುಖ್ಯಮಂತ್ರಿಯೂ ಆದವರು ಸಿದ್ದರಾಮಯ್ಯ.

ಸಾಂಸ್ಕೃತಿಕ ನಗರಿ ಮೈಸೂರು ನಗರದ ಒಂದಿಷ್ಟು ಭಾಗವನ್ನು ಒಳಗೊಂಡಂತೆ ಮೈಸೂರು ಗ್ರಾಮೀಣ ಪ್ರದೇಶದಲ್ಲಿ ವರಣಾ ಕ್ಷೇತ್ರ ಹರಡಿಕೊಂಡಿದೆ. 2008ರಲ್ಲಿ ನಡೆದ ಕ್ಷೇತ್ರ ಮರುವಿಂಗಡಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ವಿಭಜನೆಗೊಂಡು ವರುಣಾ ಕ್ಷೇತ್ರ ರೂಪುತಳೆಯಿತು. ಈ ಕ್ಷೇತ್ರ ಮೈಸೂರು ಜಿಲ್ಲೆಯಲ್ಲಿಯೇ ಇದ್ದರೂ, ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಒಳಪಟ್ಟಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಯನ್ನು ಒಗ್ಗೂಡಿಸಿ ಮೈಸೂರು ಲೋಕಸಭಾ ಕ್ಷೇತ್ರವನ್ನಾಗಿ ಮಾಡಲಾಗಿದೆ. ಹೀಗಾಗಿ, ಜನಸಂಖ್ಯೆ ಹೊಂದಾಣಿಕೆಯ ದೃಷ್ಟಿಯಿಂದ ಮೈಸೂರು ಜಿಲ್ಲೆಯ ಭಾಗವೇ ಆಗಿರುವ ನಂಜನಗೂಡು ಮತ್ತು ವರಣಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿವೆ.

ವರುಣ ವಿಧಾನಸಭಾ ಕ್ಷೇತ್ರ

ವರುಣಾ ಕ್ಷೇತ್ರ ಕಾಂಗ್ರೆಸ್‌ನ, ಅದರಲ್ಲೂ ಸಿದ್ದರಾಮಯ್ಯ ಕುಟುಂಬದ ಭದ್ರಕೋಟೆಯಾಗಿದೆ. ವರುಣಾ ಕ್ಷೇತ್ರವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ವಲಸೆ ಬಂದು, ವರುಣಾದಲ್ಲಿ ಸ್ಪರ್ಧಿಸಿದ್ದರು.. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ71,908 ಮತ ಪಡೆದು ಗೆಲುವು ಸಾಧಿಸಿದ್ದರು. ಅವರ ಎದುರಾಳಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ನಿವೃತ್ತ ಪೊಲೀಸ್‌ ಅಧಿಕಾರಿ ಎಲ್‌ ರೇವಣ್ಣಸಿದ್ದಯ್ಯ 53,071 ಮತ ಪಡೆದು ಸೋಲುಂಡಿದ್ದರು.

2013ರ ಚುನಾವಣೆ ವೇಳೆಗೆ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ಯಡಿಯೂರಪ್ಪ ಮತ್ತವರ ಸಂಗಡಿಗರು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದ್ದರು. ಆ ಬಾರಿ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಜೆಪಿ ಅಭ್ಯರ್ಥಿ ಕಾಪು ಸಿದ್ದಲಿಂಗಸ್ವಾಮಿ ಕಣದಲ್ಲಿದ್ದರು. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ 84,385 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದರು. ಕಾಪು ಸಿದ್ದಲಿಂಗಸ್ವಾಮಿ 54,744  ಮತ ಪಡೆದರು. 

2018ರ ಚುನಾವಣೆಗೆ ವರುಣಾ ಕ್ಷೇತ್ರದಲ್ಲಿ ತಮ್ಮ ಹಿರಿಯ ಮಗ ರಾಕೇಶ್‌ ಅವರನ್ನು ಕಣಕ್ಕಿಳಿಸಬೇಕೆಂಬ ಹಂಬಲ ಸಿದ್ದರಾಮಯ್ಯರಿಗಿತ್ತು. ಆದರೆ, ರಾಕೇಶ್‌ ಅಕಾಲಿಕವಾಗಿ ಮರಣ ಹೊಂದಿದ ಕಾರಣ, ತಮ್ಮ ಕಿರಿಯ ಮಗ ಡಾ. ಯತೀಂದ್ರ ಅವರನ್ನು ಆ ಕ್ಷೇತ್ರದಲ್ಲಿ ಕಣಕ್ಕಿಳಿಸಿದರು. 

ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ, ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಹೋದರು. ಅವರು ಆ ಬಾರಿ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು.

ವರುಣಾದಲ್ಲಿ ಸ್ಪರ್ಧಿಸಿದ್ದ ಯತೀಂದ್ರ 96,435 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ  ಟಿ ಬಸವರಾಜು ಕೇವಲ 37,819 ಮತ ಪಡೆದು ಹೀನಾಯ ಸೋಲು ಕಂಡರು. ಈ ಕ್ಷೇತ್ರದಲ್ಲಿ ಅದೇ ಚುನಾವಣೆಯಲ್ಲಿ ಬಿ.ಎಸ್‌ಯಡಿಯೂರಪ್ಪ ಪುತ್ರ ವಿಜಯೇಂದ್ರರನ್ನು ಬಿಜೆಪಿ ಅಖಾಡಕ್ಕಿಳಿಸುತ್ತದೆಂದು ಭಾರೀ ಚರ್ಚೆಯಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ವಿಜಯೇಂದ್ರ ವರುಣಾಗೆ ಬೆನ್ನು ತೋರಿದರು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 2,13,812 ಮತದಾರರಿದ್ದು, ಆ ಪೈಕಿ 1,08,249 ಪುರುಷರು ಮತ್ತು 1,05,547 ಮಹಿಳೆಯರು ಇದ್ದಾರೆ.

Facebook
Twitter
LinkedIn
WhatsApp
Telegram