ಯಮಕನಮರಡಿ ವಿಧಾನಸಭಾ ಕ್ಷೇತ್ರ

ಯಮಕನಮರಡಿ ವಿಧಾನಸಭಾ ಕ್ಷೇತ್ರ

ಬಿಜೆಪಿ ಪ್ರಾಬಲ್ಯದ ಪ್ರದೇಶದಲ್ಲಿ ಅಹಿಂದ ನಾಯಕನ ಜಯದ ಓಟ

ಯಮಕನಮರಡಿ ಬಿಜೆಪಿ ಒಮ್ಮೆಯು ಖಾತೆ ತೆರೆಯದ ವಿಧಾನಸಬಾ ಕ್ಷೇತ್ರವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೂ ಯಮಕನಮರಡಿಯಲ್ಲಿ ಜಾರಕಿಹೊಳಿ ಮತ್ತು ಕಾಂಗ್ರೆಸ್‌ನ ಹಿಡಿತವಿದೆ. ಹುಕ್ಕೇರಿಯ ಕತ್ತಿ ಕುಟುಂಬ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿದರೂ ಸತೀಶ್ ಜಾರಕಿಜೊಳಿ ವಿರುದ್ಧ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ಅಹಿಂದ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಈ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.

 

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಮಕನಮರಡಿ ಕ್ಷೇತ್ರವು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿದೆ. ಇದು ಹುಕ್ಕೇರಿಯಿಂದ 16 ಕಿಮೀ ಮತ್ತು ಬೆಳಗಾವಿ ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿದೆ. ಈ ಕ್ಷೇತ್ರದಲ್ಲಿ ಕೃಷಿ ಪ್ರಧಾನ ಕಸುಬಾಗಿದ್ದು, ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ. ಹುಕ್ಕೇರಿ ತಾಲೂಕು ಸೇರಿದಂತೆ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿವೆ. ಉಳಿದಂತೆ ಈ ಭಾಗದಲ್ಲಿ ಹತ್ತಿ, ಹೆಸರು, ಕಡಲೆ, ಶೇಂಗಾ, ಈರುಳ್ಳಿ ಸೇರಿದಂತೆ ಹಲವಾರು ವಾಣಿಜ್ಯ ಬೆಳೆಗಳನ್ನು ರೈತರು ಬೆಳೆಯುತ್ತಾರೆ. 

ಈ ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದರೆ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ಯಮಕನಮರಡಿ ವಿಶಿಷ್ಟ ಸ್ಥಾನ ಪಡೆದಿದೆ. ಮೊದಲು ಸಾಮಾನ್ಯ ಕ್ಷೇತ್ರವಾಗಿದ್ದು, 2008ರಲ್ಲಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿ ರೂಪುಗೊಂಡಿತು. ಮೀಸಲು ಕ್ಷೇತ್ರವಾದ ನಂತರ ಕಾಂಗ್ರೆಸ್‌ನಿಂದ ಎಎಸ್‌ಟಿ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ.

ಯಮಕನಮರಡಿಯಲ್ಲಿ ಇದುವರೆಗೆ ಒಟ್ಟು 15 ವಿಧಾನಸಭಾ ಚುನಾವಣೆಗಳು ನಡೆದಿವೆ. 1962ರಲ್ಲಿ ನಡೆದ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನ ಚಂಪಾಬಾಯಿ ಪಿರಾಜಿ ಭೋಗಲೇ ಆರ್‌ಇಪಿ ಬಿ ಶಂಕರಾನಾಂದ್ ವಿರುದ್ಧ ಜಯಗಳಿಸಿದ್ದರು. 1967ರಲ್ಲಿ ಕಾಂಗ್ರೆಸ್‌ನ ಎಸ್ ಡಿ ಕೋತವಾಲೆ ಜಯ ಗಳಿಸಿದರೆ, 1972ರಲ್ಲಿ ಕಾಂಗ್ರೆಸ್ನ ಲಾಳಗೌಡ ಬಾಳಗೌಡ ಪಾಟೀಲ ಶಾಸಕರಾಗಿ ಆಯ್ಕೆಯಾಗಿದ್ದರು. 1978ರಲ್ಲಿ ಕ್ಷೇತ್ರಕ್ಕೆ ಪಾಟೀಲ್ ಮಲ್ಹಾರಗೌಡ ಶಂಕರಗೌಡ ಅವರ ಪ್ರವೇಶವಾಯಿತು. ಅವರು 1978, 1983, 1985, 1989ರ ಚುನಾವಣೆಗಳಲ್ಲಿ ಸತತ ನಾಲ್ಕು ಬಾರಿ ಗೆದ್ದು ದಾಖಲೆ ನಿರ್ಮಿಸಿದರು. 

1994ರಿಂದ ಅಪ್ಪಯ್ಯಗೌಡ ಬಸಗೌಡ ಪಾಟೀಲರ ಆಳ್ವಿಕೆ ಆರಂಭವಾಯಿತು. 1994 ಹಾಗೂ 1999, 2004ರ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಅಪ್ಪಯ್ಯ ಗೌಡ ಬಸನಗೌಡ ಪಾಟೀಲ್ ಹ್ಯಾಟ್ರಿಕ್ ಸಾಧಿಸಿದರು. 

2008ರಲ್ಲಿ ಯಮಕನಮರಡಿ ಎಸ್ ಟಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಕ್ಷೇತ್ರದ ರಾಜಕಾರಣ ಪ್ರವೇಶಿಸಿದರು. 2008ರಿಂದ ಆರಂಭವಾಗಿ 2013, 2018ರ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಸತೀಶ್ ಜಾರಕಿಹೊಳಿ ಹ್ಯಾಟ್ರಿಕ್ ಸಾಧಿಸಿದರು. 

ಮೂರು ಚುನಾವಣೆಗಳ ಚಿತ್ರಣ

2008ರಲ್ಲಿ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ನ ಲಾಳಗೌಡ ಬಾಳಗೌಡ ಪಾಟೀಲರ ವಿರುದ್ಧ 16781 ಮತಗಳ ಅಂತರದಿಂದ ಜಯ ಸಾಧಿಸಿದ್ದರು. 2013ರಲ್ಲಿ ಸತೀಶ್ ಜಾರಕಿಹೊಳಿ ಬಿಜೆಪಿಯ ಅಸ್ತಗಿ ಮಾರುತಿ ಮಲ್ಲಪ್ಪ ಅವರ ವಿರುದ್ಧ 24350 ಮತಗಳ ಭಾರಿ ಅಂತರದಿಂದ ಗೆದ್ದರು. 

2018ರ ಚುನಾವಣೆಯಲ್ಲಿ ಜಾರಕಿಜೊಳಿ ಕುಟುಂಬದ ಪ್ರತಿಷ್ಠೆಯನ್ನು ಶತಾಯುಗತಾಯ ಕುಗ್ಗಿಸಲೇಬೇಕೆಂದು ಕತ್ತಿ ಸಹೋದರಾರ ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಹೋರಾಡಿದ್ದರು. ಯಮಕನಮರಡಿ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದರು. ಭಾರಿ ಪೈಪೋಟಿ ಎದುರಾದರೂ ಬಿಜೆಪಿಯ ಮಾರುತಿ ಅಷ್ಟಗಿ ಅವರು 2850 ಮತಗಳ ಕಡಿಮೆ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಈ ಕ್ಷೇತ್ರದ ಹೆಬ್ಬಾಳ, ಪಾಶ್ಚಾಪುರ ಮತ್ತು ದಡ್ಡಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಹಾಗೆಯೇ ಹುದಲಿ, ಕಾಕತಿ ಮತ್ತು ಕಡೋಲಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಬಲಿಷ್ಠವಾಗಿದೆ. 

ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಎಚ್ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದರು. 2018 ರಿಂದ 2019 ರವರೆಗೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಅರಣ್ಯ ಪರಿಸರ ಹಾಗೂ ಪರಿಸರ ಸಚಿವರಾಗಿದ್ದರು. 

ಜಾತಿವಾರು ಪ್ರಾಬಲ್ಯ

ಚುನಾವಣಾ ಆಯೋಗದ ಮಾಹಿತಿಯಂತೆ ಯಮನಕರಡಿ ಕ್ಷೇತ್ರದಲ್ಲಿ 95,154 ಪುರುಷರು ಹಾಗೂ 95,185 ಮಹಿಳೆಯರು ಸೇರಿ ಒಟ್ಟು 1,90,339 ಮತದಾರರಿದ್ದಾರೆ. ಜಾತಿವಾರು ಗಣನೆಗೆ ತೆಗೆದುಕೊಂಡರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 70 ಸಾವಿರ, ಲಿಂಗಾಯಿತರು 20 ಸಾವಿರ, ಮುಸ್ಲಿಂ 15 ಸಾವಿರ, ಬ್ರಾಹ್ಮಣ 5 ಸಾವಿರ, ಜೈನ್ 10 ಸಾವಿರ, ನೇಕಾರ 6 ಸಾವಿರ, ಇತರೆ ಸಮುದಾಯ 6 ಸಾವಿರದಷ್ಟಿದ್ದಾರೆ.

Facebook
Twitter
LinkedIn
WhatsApp
Telegram

Leave a Reply

Your email address will not be published. Required fields are marked *