- ಆಡಿಷನ್‌ಗೆ ಕರೆ ನೀಡಿದ ʼ45ʼ ಚಿತ್ರತಂಡ
- ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ
ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ʼ45ʼ ಚಿತ್ರದ ‘ಪ್ರೀ ಪ್ರೊಡಕ್ಷನ್’ ಕೆಲಸಗಳು ಭರದಿಂದ ಸಾಗಿವೆ. ಸದ್ಯ ನಾಯಕಿಯ ಹುಡುಕಾಟದಲ್ಲಿರುವ ಚಿತ್ರತಂಡ ಆಸಕ್ತರಿಗೆ ಆಡಿಷನ್‌ನಲ್ಲಿ ಭಾಗವಹಿಸುವಂತೆ ಕರೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ʼ45ʼ ಚಿತ್ರತಂಡ ಆಡಿಷನ್‌ಗೆ ಕರೆ ನೀಡಿರುವ ಪೋಸ್ಟರ್ ವೈರಲ್ ಆಗಿದೆ. ವಿಶೇಷ ಪೋಸ್ಟರ್‌ನಲ್ಲಿ ನಾಯಕಿಗಾಗಿ ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿದ್ದು, ಕನ್ನಡ ಭಾಷೆಯನ್ನು ಚೆನ್ನಾಗಿ ಬಲ್ಲ, 18 ರಿಂದ 28 ವಯೋಮಿತಿಯೊಳಗಿನ ಯುವತಿಯರು ಆಡಿಷನ್‌ನಲ್ಲಿ ಭಾಗಿಯಾಗಬಹುದು. ಸಹಜ ಭಾವಚಿತ್ರಗಳು ಮತ್ತು ನಟನೆಯ ಸರಳ ವಿಡಿಯೋಗಳನ್ನು ಪೋಸ್ಟರ್‌ನ ಕೊನೆಯಲ್ಲಿ ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ.
ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದ ಅರ್ಜುನ್ ಜನ್ಯ, ʼ45ʼ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಶಿವರಾಜ್ ಕುಮಾರ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ʼಒಂದು ಮೊಟ್ಟೆಯ ಕಥೆʼ ಖ್ಯಾತಿಯ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ.
ಸದ್ಯ ಶಿವರಾಜ್ ಕುಮಾರ್ ʼಘೋಸ್ಟ್ʼ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ʼ45ʼ ಚಿತ್ರದ ಶೂಟಿಂಗ್ ಪ್ರಾರಂಭಗೊಳ್ಳಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳುತ್ತಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಅವರೇ ಸಂಗೀತ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.