ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿದ ಪ್ರಕಾಶ್ ರಾಜ್
ದೇಶಕ್ಕಾಗಿ ಧ್ವನಿ ಎತ್ತಬೇಕಿರುವ ಸಂದರ್ಭವಿದು ಎಂದ ನಟ
ಮೋದಿ ಉಪನಾಮದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಆಡಳಿತಾರೂಢ ಬಿಜೆಪಿಯ ಈ ನಡೆಗೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವ ಆದೇಶ ಪ್ರತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, “ಈ ರೀತಿ ಕೀಳುಮಟ್ಟದ, ಪ್ರಗತಿಗೆ ಮಾರಕವಾಗುಂತಹ ರಾಜನೀತಿ ಮಾಡಲು ನಾಚಿಕೆಯಾಗಬೇಕು. ಇದು ದೇಶಕ್ಕಾಗಿ ನಾವೆಲ್ಲರೂ ಧ್ವನಿ ಎತ್ತ ಬೇಕಿರುವ ಸಂದರ್ಭ. ಇಂತಹ ಹೊತ್ತಿನಲ್ಲಿ ನಾವು ಸುಮ್ಮನೆ ಕೂತರೆ, ಇವತ್ತಿನ ನಮ್ಮ ಮೌನಕ್ಕೆ ನಾಳೆ ದಿನ ನಾವೇ ದುಬಾರಿ ಬೆಲೆ ತೆರಬೇಕಾಗುತ್ತದೆ” ಎಂದು ಜನ ಸಾಮಾನ್ಯರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.
2019ರ ಏಪ್ರಿಲ್ 19ರಂದು ರಾಹುಲ್ ಗಾಂಧಿ ಅವರು ಕರ್ನಾಟಕದ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳುತ್ತಾ, “ಎಲ್ಲಾ ಕಳ್ಳರು, ಅಂದರೆ; ಅದು ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿ ಇವರೆಲ್ಲರೂ ಮೋದಿ ಎಂಬ ಉಪನಾಮನ್ನೇಕೆ ಹೊಂದಿದ್ದಾರೆ” ಎಂದು ವ್ಯಂಗ್ಯವಾಡಿದ್ದರು.
ಈ ಹೇಳಿಕೆಯನ್ನು ವಿರೋಧಿಸಿ ಗುಜರಾತ್‌ನ ಬಿಜೆಪಿ ಮಾಜಿ ಸಚಿವ ಪೂರ್ಣೇಶ್ ಮೋದಿ ಐಪಿಸಿ ಸೆಕ್ಷನ್ 499 ಮತ್ತು 500 ಅಡಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ, ಬಳಿಕ ಜಾಮೀನು ಮಂಜೂರು ಮಾಡಿತ್ತು. ಇದಾದ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.