- ಸರ್ಕಾರಿ ಶಾಲೆಗಳು ಉಳಿಯಬೇಕು ಎಂದ ಧನಂಜಯ
- ಹಳ್ಳಿಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಂಡ ಸ್ಟಾರ್ ನಟ
ಬುಧವಾರದಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು, ಬೇಸಿಗೆ ರಜೆ ಮುಗಿಸಿರುವ ವಿದ್ಯಾರ್ಥಿಗಳು ಮತ್ತೆ ಶಾಲೆಯುತ್ತ ಮುಖ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೊದಲನೇ ದಿನ ಸರ್ಕಾರಿ ಶಾಲೆಗೆ ಬಂದ ಮಕ್ಕಳನ್ನು ಸ್ಥಳೀಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಸ್ಯಾಂಡಲ್‌ವುಡ್‌ನ ಖ್ಯಾತ ನಟ ಡಾಲಿ ಧನಂಜಯ ಪ್ರೀತಿಪೂರ್ವಕವಾಗಿ ಸ್ವಾಗತಿಸಿದ್ದಾರೆ.
ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯುವ ವಿನೂತನ ಪ್ರಯತ್ನದ ಭಾಗವಾಗಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚೆಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಸ್ವಾಗತ ಸಮಾರಂಭ ಏರ್ಪಡಿಸಿದ್ದರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಧನಂಜಯ ಗ್ರಾಮಸ್ಥರು ಮತ್ತು ಶಿಕ್ಷಕ ಬಳಗದ ಜೊತೆಗೂಡಿ ಮಕ್ಕಳಿಗೆ ಗುಲಾಬಿ ಹೂವು ನೀಡುವ ಮೂಲಕ ಪ್ರೀತಿಯಿಂದ ಬರಮಾಡಿಕೊಂಡರು.

ಕಾರ್ಯಕ್ರಮದ ಬಳಿಕ ಚೆಲುವರಸನಕೊಪ್ಪಲಿನ ಮಾದರಿ ಶಾಲೆ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ವಿನೂತನ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧನಂಜಯ, “ಎಲ್ಲರಿಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುವಷ್ಟು ಸೌಕರ್ಯಗಳು ಇರುವುದಿಲ್ಲ. ನಾವು ಸರ್ಕಾರಿ ಶಾಲೆಗಳನ್ನು ಕೂಡ ಉಳಿಸಿಕೊಳ್ಳಬೇಕು. ಖಾಸಗಿಯ ದುಬಾರಿ ಶಿಕ್ಷಣವನ್ನು ಪಡೆಯಲಾಗದ ಮಕ್ಕಳಿಗೆ ಸರ್ಕಾರಿ ಶಾಲೆಗಳ ಅಗತ್ಯವಿದೆ. ಯಾವುದೇ ಊರಿನ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ, ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ಮುಚ್ಚಬಾರದು. ನನ್ನ ಅನುಭವದ ಪ್ರಕಾರ ಹಳ್ಳಿಗಳಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದೇ ಶಿಕ್ಷಕರ ಕೆಲಸ ಎಂಬಂತಾಗಿರುತ್ತದೆ. ಎಷ್ಟು ದೊಡ್ಡ ಶಾಲೆಯಲ್ಲಿ ಓದುತ್ತೀವಿ ಎಂಬುದಕ್ಕಿಂತ ಎಲ್ಲಿ, ಎಷ್ಟು ಚೆನ್ನಾಗಿ ಓದುತ್ತೀವಿ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಹೀಗಾಗಿ ಶಾಲೆಗೆ ಮಕ್ಕಳನ್ನು ಸ್ವಾಗತಿಸುವ ಈ ಪ್ರಯತ್ನ ಸ್ಪೂರ್ತಿದಾಯಕವಾದದ್ದು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೆಚ್ಚುತ್ತಿರುವ ದ್ವೇಷ ಮತ್ತು ಹಿಂದಿ ಚಿತ್ರರಂಗದ ʼಜಾಣ ಮೌನʼ
ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಪತ್ರಕರ್ತರಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದ ಧನಂಜಯ, “ನಾನು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೇಳುವುದಾದರೆ, ಕಡಿಮೆ ಆದಾಯದಲ್ಲಿ ಬದುಕುತ್ತಿರುವವರ ಹಸಿವು ನೀಗಿಸೋಕೆ ಸರ್ಕಾರ ಅಕ್ಕಿ ಕೊಟ್ಟರೆ ನನಗದು ತಪ್ಪು ಎನ್ನಿಸಲ್ಲ. 10 ಕೆ.ಜಿ ಅಕ್ಕಿ ಕೊಡುವುದರಿಂದ ಜನ ಸೋಮಾರಿಗಳಾಗುತ್ತಾರೆ ಅನ್ನೋದು ತಪ್ಪು. ಉಚಿತವಾಗಿ ಬಡವನ ಕೈಸೇರುವ ಅಕ್ಕಿ ಹಸಿವನ್ನು ನೀಗಿಸುತ್ತೆ. ಅದರ ಹೊರತಾಗಿ ಮನುಷ್ಯ ಬೇರೆ ಅಗತ್ಯಗಳಿಗಾಗಿಯೂ ದುಡಿಯುತ್ತಾನಲ್ಲವೇ? ಅದು ಹೇಗೆ ಸೋಮಾರಿ ಆಗುತ್ತಾನೆ ಎನ್ನುತ್ತೀರಿ? ಆ ವಾದವೇ ತಪ್ಪು. ಈಗ ನಿಮಗೇ ನಾನು 10 ಕೆ.ಜಿ ಅಕ್ಕಿ ಕೊಟ್ಟರೆ ನೀವು ಅಡುಗೆ ಮಾಡಿ, ಊಟ ಮಾಡಿಕೊಂಡು ಸುಮ್ಮನೆ ಮನೆಯಲ್ಲಿ ಕೂರುತ್ತೀರಾ? ಇಲ್ಲ ತಾನೇ? ಹಾಗೆ ಇಲ್ಲದೆ ಇರೋರಿಗೆ ಸಹಾಯ ಮಾಡುವುದರಲ್ಲಿ ನನಗೆ ಯಾವುದೇ ತಪ್ಪು ಕಾಣಲ್ಲ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.