ಬದುಕಿನ ನಾನಾ ಮಗ್ಗಲುಗಳ ಪರಿಚಯಿಸುವ ʼಹರಿವ ನದಿಗೆ ಮೈಯೆಲ್ಲಾ ಕಾಲುʼ

Date:

ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು | ನಿರ್ದೇಶನ: ಬಾಬು ಈಶ್ವರ ಪ್ರಸಾದ್‌ | ತಾರಾಗಣ: ಶೃಂಗ ಬಿ.ವಿ, ಮೇನಕಾ ನಿಯೋಶಿಯಾ, ಎಂ.ಎನ್‌ ಸ್ವಾಮಿ, ಚಂದನ್‌ ಗೌಡ, ಸುಗತ ಶ್ರೀನಿವಾಸ್‌ರಾಜು | ಭಾಷೆ: ಕನ್ನಡ | ನಿರ್ಮಾಪಕರು: ಬಾಬು ಈಶ್ವರ ಪ್ರಸಾದ್‌ |

ಚಿತ್ರಕಲಾಕಾರರ ಸೃಜನಶೀಲತೆಯೊಂದಿಗೆ ಸಿನಿಮಾ ಭಾಷೆಯ ಸೃಜನಶೀಲತೆ ಮತ್ತು ಸಂವೇದನಾಶೀಲತೆಗಳನ್ನು ಬೆಸೆದು ಸಿನಿಮಾ ಮಾಡುವ ಬಾಬು ಈಶ್ವರ ಪ್ರಸಾದ್ ಅವರ ಎರಡನೆಯ ಚಿತ್ರ ʼಹರಿವ ನದಿಗೆ ಮೈಯೆಲ್ಲಾ ಕಾಲುʼ. ಅವರ ಮೊದಲ ಚಿತ್ರ ʼಗಾಳಿ ಬೀಜʼ.

ʼಹರಿವ ನದಿಗೆ ಮೈಯೆಲ್ಲಾ ಕಾಲುʼ, ಈ ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಮನುಷ್ಯ ಜೀವನದ ವಿವಿಧ ಮಗ್ಗಲುಗಳನ್ನು ಅಲ್ಲಮ ಪ್ರಭುವಿನ ಅನುಭಾವದ ಭಿತ್ತಿಯಲ್ಲಿ ಚಿತ್ರಿಸುವ ಚಿಂತನಾಪ್ರಧಾನ ಸಿನಿಮಾಕೃತಿ. ಎಲ್ಲಿಂದಲೋ ಬರುತ್ತಿರುವ, ಎಲ್ಲಿಗೋ ಹೋಗಲು ಧಾವಂತದಿಂದ ಹೆಜ್ಜೆ ಹಾಕುತ್ತಿರುವ ಜನರ ಕಾಲುಗಳ ಚಿತ್ರಿಕೆಗಳೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ನೋಡು ನೋಡುತ್ತಲೇ ಬರಿಗಾಲುಗಳಿಂದ ಹಿಡಿದು ವಿವಿಧ ಬಣ್ಣ ಮತ್ತು ನಾನಾ ವಿನ್ಯಾಸಗಳ ಪಾದರಕ್ಷೆಗಳನ್ನು ಧರಿಸಿ ಚಲಿಸುವ ಸ್ತ್ರೀ-ಪುರುಷ ಕಾಲುಗಳು ಕ್ಷಣ-ಅರೆಕ್ಷಣಗಳಲ್ಲಿ ವಿವಿಧ ಕಸುಬು, ಆದಾಯ, ಸಾಮಾಜಿಕ ಹಿನ್ನೆಲೆ, ಆರ್ಥಿಕ ಮಟ್ಟ, ದೈಹಿಕ ಶಕ್ತಿ ಮತ್ತು ಪಾದಸೌಂದರ್ಯಗಳನ್ನು ಬಿಂಬಿಸಿ ಬಿಡುತ್ತವೆ. ಹರಿಯುವ ನದಿಯಂತೆ ಚಲಿಸುತ್ತಲೇ ಇರುವ ಈ ಜನರ ಪೂರ್ಣರೂಪಗಳು ಗೋಚರವಾಗುತ್ತಾ ಹೋದಂತೆ, ನಡೆಯುತ್ತಾ ಸಾಗುವ ಜನಸಾಮಾನ್ಯರ ನಡುವಿನಿಂದ ಚಿತ್ರದ ಮೂರು ಮುಖ್ಯ ಪಾತ್ರಗಳು ನಿರ್ದಿಷ್ಟ ಚಹರೆಗಳ ವ್ಯಕ್ತಿಗಳಾಗಿ ಫೋಕಸ್ ಪಡೆದು ನಮ್ಮ ಗಮನಕ್ಕೆ ಬರುತ್ತಾರೆ. ಈ ಪಾತ್ರಗಳು ಏಕಕಾಲಕ್ಕೆ ವ್ಯಕ್ತಿಗಳೂ ಹೌದು, ಜನ ಸಾಮಾನ್ಯರ ಮಾದರಿಗಳೂ ಹೌದು ಎಂಬುದನ್ನು ಇಲ್ಲಿ ಗಮನಿಸಬಹುದು.

ಈ ಮೂವರಲ್ಲಿ ಮೊದಲ ವ್ಯಕ್ತಿ ಪತ್ರಿಕೆಯೊಂದರಲ್ಲಿ ಫೋಟೋಗ್ರಾಫರ್ ಆಗಿ ಕೆಲಸಮಾಡುವ ಕುಮಾರ್. ಎರಡನೆಯವ ಜೈಲಿನಲ್ಲಿ ಬಂಧಿಯಾಗಿ ಬಿಡುಗಡೆಗಾಗಿ ತವಕಿಸುತ್ತಿರುವ ಅಮರೇಶ. ಮೂರನೆಯ ವ್ಯಕ್ತಿ ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ನೀಲಾ. ಬಿಡಿ ಬಿಡಿಯಾಗಿ ಈ ಮೂವರು ವ್ಯಕ್ತಿಗಳ ಏಕತಾನತೆಯ, ಬರಡು ಬದುಕಿನ ದೈನಂದಿನ ವಿವರಗಳು, ಅವರ ಓಡಾಟ, ಕನಸು, ನಿರೀಕ್ಷೆ ಮತ್ತು ಅವರವರದೇ ಆದ ಸೀಮಿತ ಸಂಬಂಧಗಳ ಹೆಣಿಗೆಯು ವರ್ತಮಾನ ಬದುಕಿನ ವಿಷಮತೆಗಳ ಹಿನ್ನೆಲೆಯಲ್ಲಿ ಒಂದು ಚಿತ್ರವಾಗಿ ರೂಪುಗೊಂಡಿದೆ.

ವರ್ಗಸಮಾಜದಲ್ಲಿ ಜೀವನ ನಿರ್ವಹಣೆಗಾಗಿ ಮಾಡುವ ಜನರ ಉದ್ಯೋಗಗಳು ಅವರ ಸೃಜನಶೀಲತೆ ಮತ್ತು ಸ್ವಾತಂತ್ರ್ಯಗಳನ್ನು ಮುರುಟಿ ಅವರ ಅಸ್ತಿತ್ವವನ್ನೇ ಅರ್ಥಹೀನವಾಗಿ ಮಾಡಿದೆಯೆಂಬ ನೋಟ, ಕುಮಾರನ ಸಪ್ಪೆ ಮುಖದಲ್ಲಿ ಕಾಣುತ್ತದೆ. ಯಾರೊಂದಿಗೂ ಮುಕ್ತವಾಗಿ ಮಾತನಾಡಲಾಗದ ವಿಷಣ್ಣತೆ ಆತನನ್ನು ಆವರಿಸಿದೆ. ಅಭಿವ್ಯಕ್ತಿಸಲು ಸೂಕ್ತ ಅವಕಾಶ ಸಿಗದ ಅವನ ಸೃಜನಶೀಲತೆ ಮತ್ತು ಕನಸುಗಳಿಗೆ ಹೊದಿಸಿದ ಮುಸುಕಿನಂತೆ ಅವನ ವಿರಳ ಮಾತು, ನೋಟಗಳು ಕಾಣುತ್ತವೆ. ಛಾಯಾಗ್ರಾಹಕನಾಗಿ ತನಗೆ ಎದುರಾಗುವ ಎಲ್ಲವನ್ನೂ ಫೋಟೋ ಸಾಧ್ಯತೆಗಳನ್ನಾಗಿ ನೋಡುವ ವೃತ್ತಿಪರತೆಯೂ ಅವನ ನಡವಳಿಕೆಯ ಭಾಗವಾಗಿರುವಂತೆ ತೋರುತ್ತದೆ.

ಚಿತ್ರದ ಎರಡನೆಯ ಮುಖ್ಯಪಾತ್ರವಾದ ಅಮರೇಶ ಯಾವುದೋ ಅಪರಾಧಕ್ಕಾಗಿ ಜೀವಾವಧಿ ಅಥವಾ ಸುದೀರ್ಘ ಜೈಲು ಶಿಕ್ಷೆಗೆ ಗುರಿಯಾಗಿ ಜೈಲಿನ ಸೆಲ್ ಒಂದರಲ್ಲಿ ಒಂಟಿಯಾಗಿ ಜೀವಿಸುವ ವಿಷಣ್ಣ ಸಾಧು ಮನುಷ್ಯ. ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾಗಲು ಜೈಲು ಅಧಿಕಾರಿಯ ಶಿಫಾರಸು ಪಡೆದರೂ, ಯಾವುದೋ ಕಾರಣಕ್ಕಾಗಿ ಅನುಮತಿ ಸಿಗದೆ ಬಂಧಿಯಾಗೇ ಜೀವ ಸವೆಸುತ್ತಿರುವ ನತದೃಷ್ಟ. ಚಿತ್ರದ ಉಳಿದ ಎರಡು ಪಾತ್ರಗಳಿಗಿಂತ ತನ್ನ ಹಿಂದಿನ ಜೀವನದ ವಿವರಗಳನ್ನು ಒಮ್ಮೆಯೂ ನೆನಪಿಸಿಕೊಳ್ಳದ, ಯಾವ ಬಂಧುವಾಗಲಿ, ಪರಿಚಿತರಾಗಲಿ ಅವನ ಸಂದರ್ಶನಕ್ಕಾಗಿ ಬಾರದ, ಜೈಲು ಸೇರಲು ಕಾರಣವಾಗಿರಬಹುದಾದ ಯಾವ ಘಟನೆಯನ್ನಾಗಲಿ, ವ್ಯಕ್ತಿಗಳನ್ನಾಗಲಿ ನೆನಪಿಸಿಕೊಳ್ಳದ, ನರ್ಸರಿಯಲ್ಲಿ ಅವನನ್ನು ಸದಾ ಗಮನಿಸುವ ಸಹ ಕೈದಿಯ ಗಮನವನ್ನು ತನ್ನ ಕೃತ್ಯಗಳಿಂದ ಆಗಾಗ ಸೆಳೆಯುವ ರಹಸ್ಯಮಯತೆ, ಕಣ್ಣನೋಟ ಮತ್ತು ಮುಖದಲ್ಲಿ ಬಿಂಬಿಸುವ ಭಾವನೆಗಳಿಂದಾಗಿ ಪ್ರೇಕ್ಷಕರಲ್ಲಿ ಮೂಕವೇದನೆಯನ್ನು ಹುಟ್ಟಿಸುತ್ತಾನೆ.

ಮೂರನೆಯ ಮುಖ್ಯ ಪಾತ್ರವಾದ ನೀಲಾ ಯಾವುದೋ ಕೌಟುಂಬಿಕ ವಿಷಮತೆಯ ಕಾರಣದಿಂದಾಗಿ ಮನೆಯಿಂದ ದೂರವಾಗಿ ಬಂಧುಗಳ ಪಾಲಿಗೆ ಸತ್ತಂತೆ ಇದ್ದರೂ, ದೂರದ ಊರಿನಲ್ಲಿ ತನ್ನ ಕಾಲ ಮೇಲೆ ತಾನು ನಿಂತ ಬಡ ಯುವತಿ. ತನ್ನಂತೆಯೇ ರಸ್ತೆಯಲ್ಲಿ ನಡೆಯುತ್ತಾ ಸಾಗುವ ಜನರ ಪಾದರಕ್ಷೆಗಳನ್ನು ಗಮನಿಸುತ್ತಾ ಕೆಲಸದ ಸ್ಥಳವನ್ನು ಸೇರುತ್ತಾಳೆ. ಸಿನಿಮಾದಲ್ಲಿನ ಎಲ್ಲವೂ ಫೋಟೋಗ್ರಾಫರನ ಕಣ್ಣುಗಳ ಮೂಲಕವೇ ಪ್ರೇಕ್ಷಕರಿಗೆ ದಕ್ಕುವಂತೆ, ಈ ಚಿತ್ರದಲ್ಲಿ ಕಾಣಸಿಗುವ ಎಲ್ಲರ ವ್ಯಕ್ತಿತ್ವಗಳೂ ಈ ಹುಡುಗಿಯ ಕಣ್ಣಿಗೆ ಬೀಳುವ ಅವರ ಕಾಲುಗಳ ಮತ್ತು ಪಾದಗಳ ಮೂಲಕ, ಅವರು ಧರಿಸಿದ ಅಥವಾ ಧರಿಸದ ನಾನಾ ವಿನ್ಯಾಸಗಳ, ಸವೆದ ಹಳೆಯ ಅಥವಾ ಅವಳು ಅಂಗಡಿಯಲ್ಲಿದ್ದಾಗ ಮಾರುವ ಹೊಸ ಚಪ್ಪಲಿ-ಶೂಗಳ ಮೂಲಕ ಪ್ರೇಕ್ಷಕರ ಗಮನಕ್ಕೆ ಬರುತ್ತವೆ.

ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಗ್ಯಾರಂಟಿ ಯೋಜನೆಗಳ ಬಗ್ಗೆ ಸಿನಿ ತಾರೆಯರ ಮಾತು

ಕುಮಾರ್, ಅಮರೇಶ ಮತ್ತು ನೀಲಾ ರಾತ್ರಿ ಹೊತ್ತು ಹಳೆಯ ನೆನಪುಗಳು ಕಾಡುತ್ತಾ ನಿದ್ರೆ ಬಾರದಿದ್ದಾಗ ಅಥವಾ ಒಂಟಿತನ ಕಾಡಿದಾಗ ಅವರವರ ಬಾಲ್ಯದ, ಹಿಂದಿನ ಜೀವನದ ನೆನಪುಗಳನ್ನು ಕೆದಕಿ ನೋಡುವ ಚಿತ್ರಿಕೆಗಳು ಈ ಚಿತ್ರದಲ್ಲಿ ರಚಿತವಾಗಿವೆ.

12ನೇ ಶತಮಾನದ ಅನುಭಾವಿಯಾದ ಅಲ್ಲಮಪ್ರಭು ಹೇಳುವ ʼಹರಿವ ನದಿಗೆ ಮೈಯೆಲ್ಲಾ ಕಾಲುʼ ಜೀವಂತ ನದಿಗೆ ಮಾತ್ರ ಅನ್ವಯವಾಗುತ್ತದೆಯೇ? ಅದನ್ನು 21ನೇ ಶತಮಾನದ ಈ ಕಾಲಘಟ್ಟದಲ್ಲಿ ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿ ಬಳಸಿಕೊಳ್ಳುವ ಬಾಬು, ತಮ್ಮ ಚಿತ್ರದಲ್ಲಿ ನಡೆಯುತ್ತಲೇ ಇರುವ ಫೋಟೋಗ್ರಾಫರ್ ಕುಮಾರ್, ಅಮರೇಶ, ನೀಲಾ, ಸೂಫೀಸಂತ ಫಕೀರರ ಹಾಗೆಯೇ ಬರಿಗಾಲಲ್ಲಿ ವಿವಿಧ ಬಗೆಯ ಪಾದರಕ್ಷೆಗಳನ್ನು ಧರಿಸಿದ, ಹೆಸರಿಲ್ಲದ, ಜಾತಿ ಗೊತ್ತಿಲ್ಲದ, ನೋಡಿದರೆ ಬಡವರು, ಕಾರ್ಮಿಕರೆಂದು ತೋರುವ ಸಾಮಾನ್ಯ ಜನರ ಚಲನೆ ಮತ್ತು ವಿನ್ಯಾಸಗಳ ಬಗ್ಗೆ ಮಾತ್ರ ಹೇಳುತ್ತಿದ್ದಾರೆಯೇ?

ಪುರುಷ ಸೂಕ್ತದ ಪುರುಷನ ಪಾದಗಳಿಂದ ಬಂದವರೆಂದು ಹೇಳುವ ಜನರಿಗೂ, ಚಪ್ಪಲಿ ಧರಿಸಿ ಅಥವಾ ಧರಿಸದೆ ಬರಿಗಾಲಿನಲ್ಲಿ ನಡೆಯುವ ಜನರಿಗೂ ಏನಾದರೂ ಸಂಬಂಧವಿದೆಯೇ? ನೀಲಾ ಶೂ ಅಂಗಡಿಯಲ್ಲೇ ಏಕೆ ಕೆಲಸ ಮಾಡುತ್ತಾಳೆ? ಪ್ರಯತ್ನಿಸಿದ್ದರೆ ಚಿನ್ನದ ಅಂಗಡಿಯಲ್ಲಿ ಕೆಲಸ ಸಿಗುತ್ತಿರಲಿಲ್ಲವೆ? ಕುಮಾರ್ ಬಗ್ಗೆ ಸಹಾನುಭೂತಿ ಇರುವ ಪತ್ರಿಕಾ ಸಂಪಾದಕರು, ಕೈದಿಗಳ ಪರಿವರ್ತನೆಗಾಗಿ ಜೈಲಿನ ಬಂಧಿಗಳಿಂದ ನಾಟಕ ಆಡಿಸುವಷ್ಟು ಸುಸಂಸ್ಕೃತರಾದ ಜೈಲಿನ ಅಧಿಕಾರಿ ಈ ಇಬ್ಬರೂ ಚಿತ್ರದಲ್ಲಿನ ಉಳಿದ ಪಾತ್ರಗಳಂತೆ ನಡೆಯದೆ ಕುಳಿತಲ್ಲೇ ವ್ಯವಹರಿಸುವುದು ಕೇವಲ ಆಕಸ್ಮಿಕವೇ?

ಚಿತ್ರದ ನಿರ್ದೇಶಕರು ತಮ್ಮ ಈ ಚಿತ್ರವನ್ನು ಕನ್ನಡದಲ್ಲಿ ಏಕೆ ನಿರ್ಮಿಸಿದ್ದಾರೆ? ಇಂಥ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಎದ್ದರೆ ಅವು ಅಪ್ರಸ್ತುತವಾಗದೆ ಚಿತ್ರದ ಅರ್ಥವಂತಿಕೆಯನ್ನು ಹೆಚ್ಚಿಸುತ್ತವೆ ಎಂದು ನಾನು ನಂಬುತ್ತೇನೆ. ಏಕೆಂದರೆ ಬಾಬು ಈಶ್ವರ ಪ್ರಸಾದ್ ತಾವು ನಿರ್ಮಿಸಿರುವ ಚಿತ್ರವನ್ನು ಅರ್ಥೈಸಿಕೊಳ್ಳುವ ಹೊಣೆಯನ್ನು ಹೆಚ್ಚಾಗಿ ಪ್ರೇಕ್ಷಕರ ಹೆಗಲಿಗೇ ಹೊರಿಸಿದ್ದಾರೆ. ಇದಕ್ಕೆ ಸಿನೆಮಾ ತಯಾರಕರಾಗಿ, ನಿರ್ದೇಶಕರಾಗಿ ಪ್ರೇಕ್ಷಕರ ಸಂವೇದನೆಯ ಮೇಲೆ ಅವರು ಇರಿಸಿರುವ ನಂಬಿಕೆ ಮತ್ತು ಭರವಸೆಗಳೇ ಕಾರಣ ಎಂದು ನನಗೆ ತೋರುತ್ತದೆ.

(ʼಹರಿವ ನದಿಗೆ ಮೈಯೆಲ್ಲಾ ಕಾಲುʼ ಚಿತ್ರ 2023ನೇ ಸಾಲಿನ ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು, ಇದೇ ಜೂನ್‌ 11ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ʼಭಾರತ್‌‌ ಮಾಲ್‌ʼನಲ್ಲಿರುವ ಭಾರತ್‌ ಸಿನಿಮಾಸ್‌ನಲ್ಲಿ ಪ್ರದರ್ಶನ ಕಾಣಲಿದೆ.)

ಪ್ರೊ. ವಿ. ಎನ್. ಲಕ್ಷ್ಮೀನಾರಾಯಣ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದು ಮೀಲಾದುನ್ನಬಿ: ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್

ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಪ್ರವಾದಿಗಳು ಕೇವಲ ಬೋಧನೆ ಮಾಡಿದ್ದು ಮಾತ್ರವಲ್ಲದೇ, ಪ್ರಾಯೋಗಿಕವಾಗಿ...

‘ಎನ್ಇಪಿ ಅಧಿಕೃತವಾಗಿ ರದ್ದಾಗಿದೆಯೇ?’ ಬಗೆಹರಿಯದ ಬಿಕ್ಕಟ್ಟುಗಳು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು 'ನಾವು ಎನ್‌ಇಪಿ 2020ಯನ್ನು ತಿರಸ್ಕರಿಸಿದ್ದೇವೆ....

ಮೊಗವೀರ – ಮುಸ್ಲೀಮರ ಸೌಹಾರ್ದ ಕದಡುವ ಹಿಂದಿನ ಆರ್ಥಿಕ ರಾಜಕಾರಣ !

ಸಂಘಪರಿವಾರಕ್ಕೆ ಮೊಗವೀರರ ಜಾತ್ಯಾತೀತತೆ ಮತ್ತು ಅದಕ್ಕಾಗಿನ ಅವರ ಬದ್ಧತೆಯ ಬಗ್ಗೆ ನೆನಪಿರಬೇಕು....

ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ

ಪ್ರೇಮ, ಪತ್ತೇದಾರಿ, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿದ, ತನ್ನ ಆಂಗಿಕ ಅಭಿನಯದಿಂದ ಅಪಾರ...