ನನ್ನ ಅಜ್ಜಂದಿರ ಕತೆ ಹೋಲುವ ʼಕಾಟೇರʼ ರೋಮಾಂಚನಗೊಳಿಸಿ, ಕಣ್ಣೀರು ಜಿನುಗಿಸಿತು

Date:

70ರ ದಶಕದ ಇದೇ ಕಥೆ ನನ್ನ ಅಜ್ಜಂದಿರಿಗೆ ಹೋಲುತ್ತದೆ. ಇದಕ್ಕೆ ಕಾರಣ 90ರ ದಶಕದಲ್ಲಿ ನನ್ನ ಅಜ್ಜ, ಅಪ್ಪ ಭೂಮಿಯ ಒಡೆಯರಾಗಿದ್ದು. ನನ್ನ ಅಜ್ಜನಿಗೆ ಭೂಮಿಯ ಒಡೆತನ ಸಿಕ್ಕಾಗ ನಾನಿನ್ನು ಹುಟ್ಟಿರಲಿಲ್ಲ. 3-4 ವರ್ಷದ ನಂತರ ಹುಟ್ಟಿದ್ದೆನಾದ್ದರಿಂದ ಭೂಮಿ ಒಡೆತನದ ಮೊದಲಿನ ಅವರ ಸಂಭ್ರಮವನ್ನು ನಾನು ನೋಡಲಾಗಲಿಲ್ಲ. ಸ್ವಲ್ಪ ಬೆಳದಂತೆ ಅಜ್ಜ ಅಪ್ಪರ ಭೂಮಿ ಒಡೆತನದ ಉಲ್ಲಾಸವನ್ನು ಕಂಡಿದ್ದೆ. ಅದರ ಹಿನ್ನೆಲೆಯಲ್ಲಿ ‘ಕಾಟೇರ’ ಚಿತ್ರ ನೋಡಿದಾಗ ಸಹಜವಾಗಿಯೇ ರೋಮಾಂಚಿತನಾದೆ, ಕಣ್ಣೀರು ಜಿಗುಗಿತು…

ಕಳೆದ ಆರೇಳು ವರ್ಷಗಳಲ್ಲಿ ನಾನು ಸಿನಿಮಾಗಳನ್ನು ನೋಡಿದ ಸಂಖ್ಯೆ ಮೂರರಿಂದ ನಾಲ್ಕು ಇರಬಹುದು. ಮೂರು ವರ್ಷದ ನಂತರ ‘ಕಾಟೇರ’ ಚಿತ್ರವನ್ನು ನೋಡಲೇಬೇಕೆಂದು ತೀರ್ಮಾನಿಸಿ ಅಂತೂ ನೋಡಿಯೇ ಬಿಟ್ಟೆ. ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರವನ್ನು ನಮ್ಮಂತವರು ನೋಡಲು ಯೋಗ್ಯವೇ ಎಂಬ ಪೂರ್ವಗ್ರಹ ಇದಕ್ಕೆ ಕಾರಣವಾಗಿತ್ತು. ಈ ಹಿಂದೆ ದರ್ಶನ್ ನಟನೆಯ ‘ಸಂಗೊಳ್ಳಿ ರಾಯಣ್ಣ’ನನ್ನು ನೆನಪಿಸಿಕೊಂಡಿದ್ದು, ‘ಕಾಟೇರ’ ಕುರಿತು ಜಾಲತಾಣ ಸ್ನೇಹಿತರ ಬರಹಗಳನ್ನು ನೋಡಿದ್ದು ಚಿತ್ರ ವೀಕ್ಷಿಸುವಂತಾಯಿತು. ನಾನಿಲ್ಲಿ ಚಿತ್ರದ ವಿಮರ್ಶ ಬರೆಯಲು ಹೋಗುತ್ತಿಲ್ಲ.

ಚಿತ್ರದ ಮಧ್ಯ ಭಾಗದಲ್ಲಿ 1975ರ ಸುಮಾರಿನ ಬ್ಲಾಕ್ ಅಂಡ್ ವೈಟ್ ʼಕನ್ನಡಪ್ರಭʼ ಪೇಪರ್‌ನಲ್ಲಿ ಬಂದ ಒಂದು ಸುದ್ದಿಯನ್ನು ಅನಕ್ಷರಸ್ಥ ನಾಯಕನಿಗೆ ನಾಯಕಿ ಓದಿ ಹೇಳುವ ದೃಶ್ಯ ಅದ್ಭುತ. ʼಉಳುವವನೇ ಭೂಮಿಯ ಒಡೆಯʼ ಎಂದು ಹೇಳುತ್ತಿದ್ದಂತೆ ನಾನು ರೋಮಾಂಚನಗೊಂಡು ಸೀಟಿನಿಂದ ಎದ್ದುನಿಂತೆ. ಕ್ಷಣಮಾತ್ರದಲ್ಲಿ ಕಣ್ಣೀರ ಹನಿ ಜಿನುಗಿತು. ನನ್ನ ಜೀವಮಾನದ ಚಿತ್ರ ವೀಕ್ಷಣೆಯಲ್ಲಿ ಈ ರೀತಿ ಆಗಿದ್ದಿಲ್ಲ. 70ರ ದಶಕದ ಹಿಂದೆ ನನ್ನ ಮುತ್ತಜ್ಜ ಸಣ್ಣ ಭೀಮಣ್ಣ, ಅಜ್ಜ ಅಡಿವಣ್ಣ, ಅಪ್ಪ ಧರ್ಮಣ್ಣರ ಕತೆಯೇ ಇದಾಗಿರುವುದು ಇದಕ್ಕೆ ಕಾರಣ. ಎಲ್ಲರಿಗೂ ಈ ರೀತಿ ಆಗಬೇಕೆಂದಿಲ್ಲ, ಆಗಬೇಕು ಎಂದು ನಾನು ಬಯಸುವುದಿಲ್ಲ.

ತಮಿಳಿನ ‘ಜೈ ಭೀಮ್’ ಚಿತ್ರ 90ರ ದಶಕದ್ದು. 70ರ ದಶಕದ ಇದೇ ಕಥೆ ನನ್ನ ಅಜ್ಜಂದಿರಿಗೆ ಹೋಲುತ್ತದೆ. ಇದಕ್ಕೆ ಕಾರಣ 90ರ ದಶಕದಲ್ಲಿ ನನ್ನ ಅಜ್ಜ, ಅಪ್ಪ ಭೂಮಿಯ ಒಡೆಯರಾಗಿದ್ದು. ನನ್ನ ಅಜ್ಜನಿಗೆ ಭೂಮಿಯ ಒಡೆತನ ಸಿಕ್ಕಾಗ ನಾನಿನ್ನು ಹುಟ್ಟಿರಲಿಲ್ಲ. 3-4 ವರ್ಷದ ನಂತರ ಹುಟ್ಟಿದ್ದೆನಾದ್ದರಿಂದ ಭೂಮಿ ಒಡೆತನದ ಮೊದಲಿನ ಅವರ ಸಂಭ್ರಮವನ್ನು ನಾನು ನೋಡಲಾಗಲಿಲ್ಲ. ಸ್ವಲ್ಪ ಬೆಳದಂತೆ ಅಜ್ಜ ಅಪ್ಪರ ಭೂಮಿ ಒಡೆತನದ ಉಲ್ಲಾಸವನ್ನು ಕಂಡಿದ್ದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

70ರ ದಶಕದಲ್ಲಿ ʼಉಳುವವನೆ ಭೂಮಿಯ ಒಡೆಯʼ ಎಂಬ ಕೂಗೆದ್ದಿತ್ತು, ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದಕ್ಕೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ದೇವರಾಜ ಅರಸು ನೇತೃತ್ವದ ಸರ್ಕಾರ ಕಾಯಿದೆ ರೂಪಿಸಿ ಜಾರಿಗೊಳಿಸಿತು ಎಂದು ನನಗೆ ಇತಿಹಾಸ ಬಲ್ಲವರಿಂದ, ಪತ್ರಿಕೆ ಓದಿನಿಂದ ತಿಳಿದಿದ್ದೆ. ಈಗ ಜಾಲತಾಣದಲ್ಲಿ ಕೆಲವರು ಬಸವಲಿಂಗಪ್ಪನವರು ಈ ಕಾಯ್ದೆ ರೂಪಿಸಿದ್ದು, ಈ ಶ್ರೇಯಸ್ಸು ಅವರಿಗೆ ಸಲ್ಲಬೇಕೆಂದು ಹೇಳುತ್ತಿದ್ದಾರೆ. ಇರಲಿ, ಇದಕ್ಕಾಗಿ ಹೋರಾಡಿದ, ಇಂತಹ ಕಾಯ್ದೆಯನ್ನು ರೂಪಿಸಲು ಜೀವ ಪಣತೊಟ್ಟ ಕಮ್ಯುನಿಸ್ಟರನ್ನು, ಅವರೊಟ್ಟಿಗೆ ಕೈಜೋಡಿಸಿದ ಜನರನ್ನು ಮರೆಯುವುದುಂಟೆ? ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ, ಕಾಗೋಡು ಸತ್ಯಾಗ್ರಹದ ರೂವಾರಿ ಗಣಪತಿಯಪ್ಪ ಹಾಗೂ ಇವರೊಟ್ಟಿಗೆ ಕೈಜೋಡಿಸಿದ ನನ್ನಜ್ಜ, ನನ್ನಪ್ಪನಂತವರನ್ನು ನೆನಪಿಸಿಕೊಳ್ಳಬೇಕಲ್ಲವೇ?

ನಿರ್ದೇಶಕ ತರುಣ್ ಅವರಿಗೆ ಇಂತಹ ಕಥೆ ಕಟ್ಟಲು ಗೇಣಿದಾರಿಕೆ ವಿರುದ್ಧ ಹೋರಾಟ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ ಶಿವಮೊಗ್ಗ ಜಿಲ್ಲೆಯ ಸಮಾಜವಾದಿಗಳ ತವರಿನವರೆ ಆಗಿದ್ದು ಇದಕ್ಕೆ ಕಾರಣ. ಚಿತ್ರದಲ್ಲಿ ಮಾರಿ ಜಾತ್ರೆ ಸಂದರ್ಭ ʼಹೊಲೆಮಾರಿʼ ವಿಷಯ ಬರುತ್ತದೆ. ನಮ್ಮ ಕಡೆ ಇದನ್ನು ಹುಲುಸು /ಉಲುಸು ಎಂದು ಕರೆಯಲಾಗುತ್ತದೆ. ತಾವು ಜೀತದಾಳು ಗೇಣಿದಾರರಾಗಲು ಈ ಹುಲುಸು ಒಂದು ಕಾರಣ ಎಂಬುದು ನನ್ನ ಅಜ್ಜ-ಅಪ್ಪರಿಗೆ ತಿಳಿವಳಿಕೆ ಇರಲಿಲ್ಲ. ಊರಿನ ಗಂಡಸರೆಲ್ಲ ಕೋಣ ಬಲಿಯ ದಿನ ಸಾಯಂಕಾಲದಿಂದಲೇ ಕೈಯಲ್ಲಿ ಆಯುಧ ಹಿಡಿದು, ಅವುಗಳಿಗೆ ಮತ್ತು ತಮಗೆ ಕುಂಕುಮ ಬಳಿದುಕೊಂಡು ರಣಭೀಕರವಾಗಿ ಕೂಗುತ್ತಾ ಊರಿನಲ್ಲಿ ಓಡಾಡುತ್ತಿದ್ದರು. ಈಗಲೂ ಕೂಡ.

ದರ್ಶನ್, ಆರಾಧನಾ
ದರ್ಶನ್, ಆರಾಧನಾ

ಆಗ ಇವರ ಜೊತೆಯೇ ಹುಡುಗರಾದ ನಾವು ಕೋಲುಗಳಿಗೆ ಕುಂಕುಮ ಬಳಿದು ಅವರೊಂದಿಗೆ ಓಡುತ್ತಾ ʼತರಬೇತಿʼ ಪಡೆಯುತ್ತಿದ್ದೆವು. ಕೋಣ ಬಲಿಯಾದ ನಂತರ ಅದರ ರಕ್ತದ ಒಂದು ಹನಿಯನ್ನು ಪರ ಊರಿನವರು ತೆಗೆದುಕೊಂಡು ಹೋದರೆ ಊರಿಗೆ ಕೇಡುಕಾಲ ಎಂಬ ನಂಬಿಕೆ. ಇದಕ್ಕೆ ಊರಿಗೆ ಊರೇ ಸಮ್ಮತಿ ಇತ್ತು. ಬೆರಳೆಣಿಕೆಯ ಬ್ರಾಹ್ಮಣರು ಈ ರೀತಿ ಕೆಳ ಜಾತಿಯವರ ಮೇಲೆ ಹಿಡಿತ ಸಾಧಿಸಿದ್ದರು.

ಕೋಣವನ್ನು ಸರಿಸುಮಾರು ರಾತ್ರಿ ಎರಡರಿಂದ ನಾಲ್ಕರ ಒಳಗೆ ಬಲಿ ಪಡೆಯಲಾಗುತ್ತಿತ್ತು. ಬಲಿ ಪಡೆದ ನಂತರ ಅದರ ಒಂದು ಹನಿ ರಕ್ತ ಇಲ್ಲಿ ಇರದಂತೆ ಸ್ವಚ್ಛಗೊಳಿಸುತ್ತಿದ್ದರು. ಚಿತ್ರದಲ್ಲಿ ತೋರಿಸಿರುವಂತೆ ಪರ ಊರಿನ ʼಕಾಟೇರʼ ಹುಲುಸನ್ನು ಹೊತ್ತೊಯ್ದಂತೆ ನಮ್ಮೂರಿನಿಂದ ಇಲ್ಲಿಯವರೆಗೆ ಯಾರು ಹೊಯ್ಯಲು ಸಾಧ್ಯವಾಗಿಲ್ಲ. ಇದು ಈಗಲೂ ನಮ್ಮೂರಿನಲ್ಲಿ ಮುಂದುವರಿದೆ ಇದೆ. ಅದು ಭೂ ಒಡೆತನದ 40 ವರ್ಷದ ನಂತರವೂ! ಈಗಲೂ ಮೇಲ್ಜಾತಿಯವರು ಬಿತ್ತಿದ ಬೀಜಗಳು ಬೇರೊಂದು ರೀತಿಯಲ್ಲಿ ಫಸಲನ್ನು ಕೊಡುತ್ತಲೇ ಇವೆ. ಅವರ ಉಪಸ್ಥಿತಿ ಇಲ್ಲದೆ.

ಮೊದಲೇ ತಿಳಿಸಿದಂತೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರದವರು. ಅವರ ತಂದೆ ಸುಧೀರ್ ರಂಗಭೂಮಿಯ ಕಲಾವಿದ ಮತ್ತು ಚಿತ್ರರಂಗದಲ್ಲಿ ಖಳನಟನಾಗಿ ಪ್ರಸಿದ್ಧಿ ಪಡೆದವರು. ನಟ ಸುಧೀರ್ ಸಾಗರದಿಂದ ಬಂದು ಸೊರಬದಲ್ಲಿ ಎಂಎಲ್ಎ ಸ್ಥಾನಕ್ಕೆ ಸ್ಪರ್ಧಿಸಿದಾಗ ನಮ್ಮ ಮನೆಗೆ ಬಂದು ಮತಯಾಚಿಸಿ, ಚಹಾ ಕುಡಿದಿದ್ದು ಇನ್ನೂ ಹಸಿ ಹಸಿಯಾಗಿ ನೆನಪಿದೆ. ಅವರು ಕುಳಿತ ಮರದ ಕುರ್ಚಿ ಈಗಲೂ ಇದೆ.

ನಮ್ಮಂತಹ ದಲಿತರ ಮನೆಯಲ್ಲಿ ಚಹಾ ಕುಡಿದಿದ್ದು ಆಗ ನನಗೆ ಪ್ರಶ್ನೆ ಆಗಿರಲಿಲ್ಲ. ಈಗ… ʼಕಾಟೇರʼದ ಮಜ್ಜಿಗೆ ಪ್ರಸಂಗ ಇದನ್ನು ಪ್ರಶ್ನೆಯಾಗಿಸಿದೆ. ಎಸ್‌ಸಿಯ ಒಂದು ಜಾತಿಯವರು ಇನ್ನೊಂದು ಎಸ್‌ಸಿ ಜಾತಿಯವರಿಗೆ ನೀರು ಕುಡಿಯಲು ಲೋಟ ಕೊಡದೆ ಬೊಗಸೆಯಲ್ಲಿ ಹಾಕುತ್ತಿದ್ದ ಕಾಲ. ವಡ್ಡ ಜಾತಿಯ ನಾನು ಮಾದಿಗ ಜಾತಿಯ ಮರಿಯಣ್ಣನಿಗೆ, ಕೆಂಚಕ್ಕನಿಗೆ ಬೊಗಸೆಯಲ್ಲಿ ಅದೆಷ್ಟು ಬಾರಿ ನೀರು ಉಣಿಸಿದ್ದೇನೋ ʼಪಾಪಿ…ʼ ಈಗ ಅದು ಯಾವುದು ಬದಲಾಗಿದೆಯೇ ಎಂದರೆ ಶೇ.50 ರಷ್ಟು ಆಗಿದೆ.

ಮೊದಲೇ ಹೇಳಿಬಿಡುತ್ತೇನೆ ಇದು ನಾನಿರುವ ಪ್ರದೇಶದ ಸುತ್ತಮುತ್ತ ಮರಿಯಣ್ಣ-ಕೆಂಚಕ್ಕರ ಪರಿಸ್ಥಿತಿ. ನಾವು ಮೇಲ್ಜಾತಿಯವರ ಮನೆಗೆ ಹೋದಾಗ ನಮಗಾಗಿದೆ. ಇದು ಈಗ ಬದಲಾಗಿದೆ ಎಂದರೆ ಶೇ.100ರಷ್ಟು ಇಲ್ಲ. ಇದೆಲ್ಲ ಕುಡಿಯುವ ನೀರನ್ನು ಕೊಡೋ ವಿಷಯಕ್ಕೆ ಮಾತ್ರ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್‌ ರಾಜಕಾರಣ

30ರ ಹರೆಯದ ಒಳಗಿನ ಯುವಜನಾಂಗವನ್ನು ಇದ್ಯಾವುದು ಅಷ್ಟು ಯೋಚನೆಗೆ ದೂಡುವುದಿಲ್ಲ. ಇಂತಹ ಚಿತ್ರವನ್ನು ಇವರು ನೋಡುವಂತೆ ಪ್ರೇರೇಪಿಸಿ, ಆ ಕಾಲಘಟ್ಟವನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿದೆ. ಈ ಚಿತ್ರದ ಯಶಸ್ಸು ಒಬ್ಬ ನಾಯಕ ʼಹೊಲೆಮಾರಿʼಯನ್ನು ಹೊತ್ತೊಯ್ಯಲು ಸಾಧ್ಯವೇ? ಕೋಣವನ್ನು ಹಿಡಿದುಕೊಂಡು ಬರುವಾಗ ನಾಯಕ ಕೇಸರಿ ಅಥವಾ ಕೆಂಪು ಪಂಚೆ ತೊಟ್ಟಿದ್ದೇಕೆ? ಚಿತ್ರದಲ್ಲಿ ಹಸಿರು ಶಾಲಿನವರನ್ನು ತೋರಿಸಿದ್ದೇಕೆ, ಅದು ಇರಬೇಕಿತ್ತು ಅದು ಇರಬೇಕಿತ್ತು ಎಂದು ಹೇಳುತ್ತಾ ಕೂತರೆ ಆಗುವುದಿಲ್ಲ.

ಮೊದಲು ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಪ್ರಸ್ತುತ ವಾತಾವರಣವನ್ನು ನೆನಪಿಗೆ ತಂದುಕೊಳ್ಳಬೇಕು. ನಟ, ನಿರ್ದೇಶಕ, ನಿರ್ಮಾಪಕರು ಯಾವ ಹಿನ್ನೆಲೆಯವರು ಎಂಬುದನ್ನು ಯೋಚಿಸಬೇಕು. ಕೋಮುವಾದಿಗಳು ಅಟ್ಟಹಾಸಗೈಯುತ್ತಿರುವ ಕಾಲಘಟ್ಟದಲ್ಲಿ ಇಂತಹವರ ಪ್ರಯತ್ನವನ್ನು ಶ್ಲಾಘಿಸಬೇಕು. ಸಂಕುಚಿತವಾದಿಗಳಾಗಬಾರದು.

ಜನರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿರುವವರು ಮತ್ತಷ್ಟು ಸಂಕುಚಿತವಾದಿಗಳಾಗಿ ಜನರ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸಿ, ಶತ್ರು ಮೇಲುಗೈ ಪಡೆಯುತ್ತಾನೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಜಾಲತಾಣದ ಸ್ನೇಹಿತರು ರಾಜ್ಯದಲ್ಲಿ ಜನರಿಗೆ ಸಲ್ಲಬೇಕಾದ ಅಳಿದುಳಿದ ಭೂಮಿ ಹಂಚಿಕೆ, ಬಡವರಿಗೆ ಸರ್ಕಾರಿ ಜಾಗದಲ್ಲಿ ವಸತಿ ಕಟ್ಟಿಕೊಳ್ಳುವಿಕೆ ಕುರಿತು ಹೋರಾಟ ಮಾಡುತ್ತಿರುವವರ ಜೊತೆ ಕೈಜೋಡಿಸಿ ʼಕಾಟೇರʼನ ಪರಾಧಿಕಾರಿಗಳಾಗಬೇಕು.

ʼಬದಲಾವಣೆ ಜಗದ ನಿಯಮʼ ಎಂದು ದಾರ್ಶನಿಕರು ಒಬ್ಬರು ಹೇಳಿದ್ದಾರೆ. ʼಕಾಟೇರʼನ ಕಾಲದ ಪರಿಸ್ಥಿತಿ ಮತ್ತು ಹೋರಾಟದ ಮಾದರಿ ಬೇರೆ. ಅದೇ ಮಾದರಿಯ ಹೋರಾಟವನ್ನು ಈಗ ಮಾಡಲು ಸಾಧ್ಯವಿಲ್ಲ. ನಾನಾ ಸಮಸ್ಯೆಯಲ್ಲಿ ಸಿಲುಕಿ ನರಳುತ್ತಿರುವ ಜನರಿಗೆ ಈಗ ಶತ್ರು ಅದೃಶ್ಯನಾಗಿದ್ದಾನೆ. ಅವನೇ ನಿನ್ನ ಶತ್ರು ಇವನ ವಿರುದ್ಧ ಹೋರಾಟ ಮಾಡು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅನಕ್ಷರಸ್ಥರಾಗಿದ್ದ ನಮ್ಮ ಪೂರ್ವಿಕರಿಗೆ ಒಂದೆರಡು ವಾಕ್ಯದಲ್ಲಿ ನಿನ್ನ ವೈರಿ ಭೂಮಾಲೀಕ ಅವನ ವಿರುದ್ಧ ನೀವೆಲ್ಲ ಒಗ್ಗಟ್ಟಾಗಿ ಹೋರಾಡಿದರೆ ಜಯಸಿದ್ಧ ಎಂದು ಹೇಳಿದ್ದರೆ ಅರ್ಥವಾಗುತ್ತಿತ್ತು.

ಈಗ ಪರಿಸ್ಥಿತಿ ಬದಲಾಗಿದೆ ಹೋರಾಟಗಾರರಿಗಂತೂ ಇದು ಸವಾಲಿನ ಪ್ರಶ್ನೆಯಾಗಿಯೇ ಉಳಿದಿದೆ. ಕೆಲವು ಸಂಘಟನೆ ಹೋರಾಟಗಾರರು ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಕೊಳ್ಳುವುದೇ ಸರಿ ಎಂದು ವಾದಿಸುತ್ತಾರಾದರೆ, ಇದು ತನಗೆ ತನ್ನ ನಂಬಿದ ಜನರಿಗೆ ಕಿಂಚಿತ್ತು ಒಳ್ಳೆಯದನ್ನೂ ಮಾಡುವುದಿಲ್ಲ. ಕೊನೆಯದಾಗಿ ಹೇಳುತ್ತೇನೆ ನಾನಿಲ್ಲಿ ಚಿತ್ರ ವಿಮರ್ಶೆ ಬರೆಯಲು ಹೋಗಿಲ್ಲ.

– ದೇಶಾದ್ರಿ ಕಣಸೋಗಿ, ತತ್ತೂರು ವಡ್ಡಿಗೇರಿ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ ಅಶೋಕ್‌ಗೆ ನಮ್ಮ ಪಕ್ಷದ ಉಸಾಬರಿ ಯಾಕೆ: ಗೃಹ ಸಚಿವ ಪರಮೇಶ್ವರ್‌ ಪ್ರಶ್ನೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ಅವರಿಗೆ ನಮ್ಮ ಪಕ್ಷದ...

ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ಇನ್ನಿಲ್ಲ

ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಸಂಪಾದಕರಾದ ವಸಂತ ನಾಡಿಗೇರ್ (59) ಅವರು...

ಕರ್ನಾಟಕ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆ: ಸಿಎಂ ಸಿದ್ದರಾಮಯ್ಯ

ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ ಎಂದು...

ಕೊಪ್ಪಳ | ಪತ್ನಿಯನ್ನು ಬರ್ಬರವಾಗಿ ಕೊಂದು ಶವ ಸುಟ್ಟ ಪತಿ!

ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟ ಗಂಡ ತನ್ನ ಪತ್ನಿಯನ್ನೇ ಬರ್ಬರವಾಗಿ...