ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಕೋಟಿ ನಲವತ್ತು ಲಕ್ಷ ಮತಗಳನ್ನು ಪಡೆದಿರುವ ಬಿಜೆಪಿ, ಒಂದೂವರೆ ಕೋಟಿ ಸದಸ್ಯತ್ವ ಅಭಿಯಾನದ ಪುಂಗಿ ಊದುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಅಧ್ಯಕ್ಷರಾದ ರಮೇಶ್ ಬಾಬು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಬಿ.ವೈ ವಿಜಯೇಂದ್ರರವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ಮೇಲೆ ಬಿಜೆಪಿಯಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿರುತ್ತವೆ. ಮೂಲ ಬಿಜೆಪಿಗರು ಮತ್ತು ಯಡಿಯೂರಪ್ಪನವರ ವಿರೋಧಿ ಗುಂಪು ಇಂದಿಗೂ ವಿಜಯೇಂದ್ರರವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೆಂದು, ಆರ್. ಅಶೋಕ್ ಅವರನ್ನು ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರೆಂದು ಒಪ್ಪಲು ತಯಾರಿಲ್ಲ. ವಿಜಯೇಂದ್ರ ಅವರ ವಿರೋಧಿ ಗುಂಪು ತಮ್ಮನ್ನು ತಾವು ಬಿಜೆಪಿ ಪಕ್ಷದಲ್ಲಿ ಜಗನ್ನಾಥ ಭವನದ ಗುಂಪೆಂದು ಗುರುತಿಸಿಕೊಂಡು, ವಿಜಯೇಂದ್ರ ಗುಂಪನ್ನು ಬಾಲಭವನದ ಗುಂಪೆಂದು ಅಪಹಾಸ್ಯ ಮಾಡುತ್ತಿದೆ ಎಂದು ವಿಪಕ್ಷ ನಾಯಕರನ್ನು ರಮೇಶ್ ಬಾಬು ಕುಟುಕಿದರು.
ಪಕ್ಷದಲ್ಲಿನ ಗುಂಪುಗಾರಿಕೆಯನ್ನು ನಿಭಾಯಿಸಲು ವಿಫಲರಾಗಿ ಕೈಚೆಲ್ಲಿರುವ ಅಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಸದಸ್ಯತ್ವ ಅಭಿಯಾನದ ನಾಟಕಕ್ಕೆ ಚಾಲನೆ ನೀಡಿದ್ದಾರೆ. . ಕೇವಲ 3 ದಿನದಲ್ಲಿ ಒಂದು ಕೋಟಿ ಸದಸ್ಯತ್ವ ಮಾಡಿರುವುದಾಗಿ ಡಂಗೂರ ಸಾರುತ್ತಿರುವ ಬಾಲಭವನದ ನಾಯಕ ವಿಜಯೇಂದ್ರರವರು, ಪ್ರಚಾರಕ್ಕಾಗಿ ರಾಜಕೀಯ ನಿವೃತ್ತಿ ಪಡೆದಿರುವ ಹಿರಿಯ ಚೇತನಗಳನ್ನು ಸದಸ್ಯತ್ವದ ಹೆಸರಿನಲ್ಲಿ ಕಾಡುವುದನ್ನು ನಿಲ್ಲಿಸಲಿ ಎಂದು ರಮೇಶ್ ಬಾಬು ಹೇಳಿದ್ದಾರೆ.
ಬಿಜೆಪಿ ಬಾಲಭವನದ ನಾಯಕ ವಿಜಯೇಂದ್ರರವರು ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಾಗದೆ, ಇಂತಹ ಘೋಷಣೆಗಳ ಮೂಲಕ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿಕೊಳ್ಳಲು ಹೆಣಗುತ್ತಿದ್ದಾರೆ. ಹಿರಿಯರಾದ ರಾಮಚಂದ್ರೇಗೌಡರಂತ ನಾಯಕರಿಗೆ ದುಂಬಾಲು ಬಿದ್ದು ಸದಸ್ಯತ್ವ ನವೀಕರಣ ಮಾಡುವಂತಹ ಪರಿಸ್ಥಿತಿ ವಿಜಯೇಂದ್ರರವರಿಗೆ ಬರಬಾರದಿತ್ತು. ಕೇಂದ್ರದ ಮೋದಿ ಸರ್ಕಾರ ದೇಶದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಪೂರೈಸುವಲ್ಲಿ ವಿಫಲಗೊಂಡಿದೆ. ನಮ್ಮ ದೇಶದ ಹಸಿವಿನ ಸೂಚ್ಯಂಕ ಮೋದಿ ನಾಯಕತ್ವದಲ್ಲಿ ದಿನೇ ದಿನೇ ಮೇಲೆಕ್ಕೆ ಏರುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ತಪ್ಪು ನಿರ್ಧಾರಗಳಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಪ್ರಚಾರ ಪಡೆದುದನ್ನು ಹೊರತುಪಡಿಸಿ ಯಾವುದೇ ನಗರ ಪ್ರದೇಶ ನಿಗದಿತ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸಿರುವುದಿಲ್ಲ. ಆದರೆ ಮಕ್ಕಳ ಸಾವಿನ ಹೆಸರಿನಲ್ಲೂ ಪೊರಕೆ ಹಿಡಿದು ಬಿಜೆಪಿ ಸರ್ಕಾರ ಪ್ರಚಾರ ಗಿಟ್ಟಿಸಲು ಹೊರಟಿದೆ ಎಂದು ಕೇಂದ್ರದ ನಾಯಕರನ್ನು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ವಿನೇಶ್ ಫೋಗಟ್ ಪಕ್ಷ ರಾಜಕಾರಣ ಮಾಡಿದರೆ ಆಕೆ ಎತ್ತಿದ ಪ್ರಶ್ನೆಗಳು ಸುಳ್ಳಾಗವು
ಮೂರು ಗುಂಪುಗಳಾಗಿರುವ ಬಿಜೆಪಿ
ಕರ್ನಾಟಕದಲ್ಲಿ ಬಿ.ಎಲ್ ಸಂತೋಷ್ ಅವರ ಮಾರ್ಗದರ್ಶನದಲ್ಲಿ ಬಸವರಾಜ್ ಬೊಮ್ಮಾಯಿ, ವಿ ಸೋಮಣ್ಣ, ಬಸವರಾಜ್ ಪಾಟೀಲ್ ಯತ್ನಾಳ್, ಸದಾನಂದ ಗೌಡ, ಅರವಿಂದ ಬೆಲ್ಲದ್, ಸಿ ಟಿ ರವಿ, ರವಿಕುಮಾರ್, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ ಮುಂತಾದವರು ಜಗನ್ನಾಥ ಭವನದ ತಂಡವಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ, ಆರ್.ಅಶೋಕ್, ಇತ್ತೀಚೆಗೆ ವಿರೋಧ ಪಕ್ಷದ ನಾಯಕರಾಗಿ ಪದೋನ್ನತಿ ಪಡೆದಿರುವ ಛಲವಾದಿ ನಾರಾಯಣಸ್ವಾಮಿ, ಡಾ. ಅಶ್ವಥ್ ನಾರಾಯಣ್, ಡಾ. ಸುಧಾಕರ್, ಪ್ರೀತಮ್ ಗೌಡ, ಮುಂತಾದವರು ಬಾಲಭವನದ ತಂಡವೆಂದು ಜಗನ್ನಾಥ ಭವನದ ತಂಡ ಕರೆಯುತ್ತಿದೆ. ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಅವರು ಇನ್ನೊಂದು ಗುಂಪು ಇವೆರಡೂ ಗುಂಪುಗಳಿಂದ ಅಂತರ ಕಾಯ್ದುಕೊಂಡು ಮೂರನೇ ಗುಂಪಾಗಿ ಸೃಷ್ಟಿಯಾಗಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನು ಪ್ರವೃತ್ತಿ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ಮುಸ್ಲಿಮರ ದಾರಿ ತಪ್ಪಿಸುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಮೇಲೆ ಟೀಕೆ ಮಾಡಿದ್ದಾರೆ. ದೇಶದಲ್ಲಿ ಕೇಂದ್ರದ ಮೋದಿ ಸರ್ಕಾರ ಅಲ್ಪ ಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿರುವುದು ಸತ್ಯವಾಗಿದ್ದು, ಇಲ್ಲಿಯವರೆಗೆ ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದ ಅಭಿವೃದ್ದಿಗಾಗಿ ಜಸ್ಟಿಸ್ ಸಾಚಾರ್ ಸಮಿತಿಯ ವರದಿಯನ್ನು ಜಾರಿಗೊಳಿಸುವ ಕುರಿತು ಚಕಾರು ಎತ್ತುತ್ತಿಲ್ಲ. ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಸುಭದ್ರತೆಯನ್ನು ಕಲ್ಪಿಸಿರುವುದು ಕಾಂಗ್ರೆಸ್ ಪಕ್ಷವಾಗಿದ್ದು, ಬಿಜೆಪಿಯಿಂದ ಅಲ್ಪಸಂಖ್ಯಾತರ ಕುರಿತು ಪಾಠ ಹೇಳಿಸಿಕೊಳ್ಳುವ ಸಂದರ್ಭ ಇರುವುದಿಲ್ಲ. ಬಿಜೆಪಿ ನಾಯಕರನ್ನು ತೃಪ್ತಿಗೊಳಿಸಲು ಸ್ವಾಭಿಮಾನವನ್ನು ಕೈಬಿಟ್ಟು ಚಡ್ಡಿಯನ್ನು ತಲೆಯ ಮೇಲೆ ಹೊತ್ತಿಕೊಂಡು ಪ್ರತಿಭಟನೆ ನಡೆಸಿದ ಛಲವಾದಿ ನಾರಾಯಣಸ್ವಾಮಿ ಅವರು ದಾರಿ ತಪ್ಪದೇ ಇದ್ದರೆ ಸಾಕು ಎಂದು ರಮೇಶ್ ಬಾಬು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.