ಭದ್ರಾ ಅಣೆಕಟ್ಟೆಯಿಂದ 100 ದಿನಗಳ ಕಾಲ ಸತತ ನೀರು ಹರಿಸುವಂತೆ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಸರ್ಕಾರವನ್ನು ಒತ್ತಾಯಿಸಿದಾರೆ.
ಭದ್ರಾ ಅಣೆಕಟ್ಟೆಯಿಂದ ಬಲ ಮತ್ತು ಎಡ ದಂಡೆ ನಾಲೆಗೆ ಸತತವಾಗಿ 100 ದಿನ ನೀರು ಹರಿಸಬೇಕೆಂದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಕೇಳಿಕೊಂಡಿದ್ದಾರೆ.
ದಾವಣಗೆರೆಯ ತಮ್ಮ ನಿವಾಸದಲ್ಲಿ ರೈತರ ಅಹವಾಲು ಸ್ವೀಕರಿಸಿ ಅವರು ಸರ್ಕಾರಕ್ಕೆ ಈ ಬೇಡಿಕೆ ಸಲ್ಲಿಸಿದರು. ಹರಿಹರ ಶಾಸಕ ಬಿ.ಪಿ. ಹರೀಶ, ಮಾಜಿ ಶಾಸಕ ಎಸ್. ರಾಮಪ್ಪ ಹಾಗೂ ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನೂರಾರು ರೈತರ ಸಚಿವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಹ ಆಗಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೂಡಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ದೂರವಾಣಿ ಕರೆ ಮಾಡಿ, ಯಾವುದೇ ಕಾರಣಕ್ಕೂ ಭದ್ರಾ ಡ್ಯಾಂನಿಂದ ನೀರು ನಿಲ್ಲಿಸಬಾರದು ಎಂದು ಕೇಳಿಕೊಂಡರು.
ಶೇ.70ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶ ದಾವಣಗೆರೆ ಜಿಲ್ಲೆಯೊಂದರಲ್ಲೇ ಇದೆ. ನೂರುದಿನ ನೀರು ಹರಿಯುತ್ತದೆ ಎಂಬ ಕಾರಣಕ್ಕೆ ಜಿಲ್ಲೆಯ ರೈತರು ಭತ್ತ ನಾಟಿ ಮಾಡಿದ್ದಾರೆ. ಆದರೆ, ಏಪ್ರೀಲ್ 16ರಿಂದ ಪ್ರತಿ ಹತ್ತು ದಿನಕ್ಕೊಂದು ಬಾರಿಯ ಸರದಿಯಲ್ಲಿ ನೀರು ಹರಿಸಲಾಗುತ್ತಿದೆ. ಹೀಗೆ ಮಧ್ಯಂತರ ನೀರು ನಿಲುಗಡೆ ಮಾಡಿದರೆ ರೈತರು ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಭದ್ರಾ ಕಾಡಾ ಸಮಿತಿ ನಿರ್ಧಾರ ಏಕಪಕ್ಷೀಯವಾಗಿದ್ದು, ಇದರಿಂದ ದಾವಣಗೆರೆ ಸೇರಿದಂತೆ ಭದ್ರಾ ಎಡ ಮತ್ತು ಬಲದಂಡೆ ನಾಲೆಗಳ ರೈತರಿಗೆ ಸಂಕಷ್ಟ ಬಂದೊದಗಲಿದೆ ಎಂದು ಸಚಿವರು ಈ ವಿಷಯವನ್ನು ಡಿಸಿಎಂ ಗಮನಕ್ಕೆ ತಂದರು.
ಸಚಿವರ ಮನವಿಗೆ ಸ್ಪಂದಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಯಾವುದೇ ಕಾರಣಕ್ಕೂ ನಾಲೆಯಲ್ಲಿ ನೀರು ನಿಲ್ಲಿಸುವುದಿಲ್ಲ. ಈ ಬಗ್ಗೆ ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಾಡಾ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ,” ನೀರಿನ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಮಧ್ಯಂತರ ನೀರು ನಿಲುಗಡೆಗೆ ಕ್ರಮ ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ನೀರು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ,” ಎಂದಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಧು ಬಂಗಾರಪ್ಪನವರಿಗೆ, “ಹರಿಸಬೇಕಿರುವ 2,650 ಕ್ಯೂಸೆಕ್ ನೀರಿನಲ್ಲಿ 500 ಕ್ಯೂಸೆಕ್ ನೀರು ಕಡಿಮೆ ಮಾಡಿ. ಆದರೆ, ನೀರು ನಿಲ್ಲಿಸಬೇಡಿ. ಡಿಸಿಎಂ ಜೊತೆಗೂ ಚರ್ಚಿಸಿದ್ದೇನೆ,” ಎಂದು ಮಾಹಿತಿ ನೀಡಿದ್ದಾರೆ.