ಪುನೀತ್ ಕೆರೆಹಳ್ಳಿ ಬಿಡುಗಡೆ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪುನೀತ್ ಕೆರೆಹಳ್ಳಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ಕರ್ನಾಟಕ ಸಲಹಾ ಮಂಡಳಿ ನ್ಯಾಯಾಲಯಕ್ಕೆ ನೀಡಿದ ವರದಿ ಆಶ್ಚರ್ಯಕರವಾಗಿದೆ. ಇದು ಖಂಡನೀಯ,” ಎಂದು ಆರೋಪಿಸಿದ್ದಾರೆ.
“ಹಲವು ಸಮಾಜ ಘಾತುಕ ಕೃತ್ಯ, ಕೊಲೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿ ಸರಕಾರಕ್ಕೆ, ಅಲ್ಪಸಂಖ್ಯಾತರಿಗೆ ಬಹಿರಂಗ ಸವಾಲು ಹಾಕಿದ ಒಬ್ಬ ಆರೋಪಿಯ ರಕ್ಷಣೆಗೆ ಸರಕಾರವೇ ಇಳಿದಿರುವುದು ಅಕ್ಷಮ್ಯ. ಈತನ ಮೇಲೆ ವಿವಿಧ ಠಾಣೆಗಳಲ್ಲಿ ಕೆಲವು ಪ್ರಕರಣಗಳಿವೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಇದ್ರೀಸ್ ಪಾಷಾ ಹತ್ಯೆಯ ಆರೋಪವೂ ಪುನೀತ್ ಕೆರೆಹಳ್ಳಿ ಮೇಲಿದೆ. ಇಷ್ಟಿದ್ದರೂ ಈತನ ಬಿಡುಗಡೆಗೆ ಸರಕಾರದ ಸಲಹಾ ಮಂಡಳಿ ಸಹಕರಿಸಿದೆ. ಇದು ಅನ್ಯಾಯದ ನಡೆ,” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ, ತನ್ನ ಪ್ರಣಾಳಿಕೆಯಲ್ಲಿ ಮತ್ತು ತನ್ನ ಸರಕಾರ ರಚನೆಯ ನಂತರ ದಿನವೂ, ಅಲ್ಪ ಸಂಖ್ಯಾತರ ರಕ್ಷಣೆ, ಕೋಮುವಾದಿಗಳಿಗೆ, ಸಮಾಜದಲ್ಲಿ ದ್ವೇಷ ಹರಡುವಂತಹವರಿಗೆ ಕಠಿಣ ಶಿಕ್ಷೆ ವಿಧಿಸುವ ಭಾಷಣಗಳನ್ನು ಮತ್ತು ಪತ್ರಿಕಾ ಹೇಳಿಕೆಗಳನ್ನ ನೀಡುತ್ತಲೇ ಇವೆ. ಆದರೆ, ಸರಕಾರದ ಈ ನಡೆ, ಅವರ ಮಾತಿಗೆ ತದ್ವಿರುದ್ದವಾಗಿದೆ. ಸರಕಾರದ ಭಾಷಣ, ಪತ್ರಿಕಾ ಹೇಳಿಕೆಗಳು ಕೇವಲ ಕಾಗದಗಳಿಗೆ ಸೀಮಿತವಾಗದೆ ಅನುಷ್ಟಾನಕ್ಕೆ ಬರಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ಘಟಕ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದೆ.