- ಬರ ಬರಲು ಕೇಂದ್ರ ಸರ್ಕಾರವೇ ಕಾರಣ ಎನ್ನುವ ಮನಸ್ಥಿತಿಯಲ್ಲಿ ಸಿಎಂ
- ಸರ್ಕಾರದ ಒಂದೇ ಒಂದು ಸಾಧನೆ ಅಂದರೆ ಅದು ವರ್ಗಾವಣೆ ದಂಧೆ: ಕಿಡಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದರೂ ಕೇವಲ 100 ಮೀಟರ್ ರಸ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಲೇವಡಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಜ್ಯದಲ್ಲಿ ತೀವ್ರ ಬರವಿದೆ. ಆದರೆ ಬರ ಬರೋದಕ್ಕೂ ಕೇಂದ್ರ ಸರ್ಕಾರವೇ ಕಾರಣ ಎನ್ನುವ ಮನಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ” ಎಂದು ಕಿಡಿಕಾರಿದ್ದಾರೆ.
“ಶಕ್ತಿ ಯೋಜನೆಗಳಿಗೆ ಖಜಾನೆಯಿಂದ ಒಂದು ರೂಪಾಯಿ ಹಣ ನೀಡಿಲ್ಲ. ಬದಲಾಗಿ ಎಸ್ಸಿ ಎಸ್ಟಿ ಜನರಿಗೆ ಮೀಸಲಾಗಿದ್ದ ಅನುದಾನವನ್ನು ಶಕ್ತಿ ಯೋಜನೆಗೆ ಬಳಸಲಾಗಿದೆ. ರಾಜ್ಯದಲ್ಲಿ ಶಾಸಕರು ನೂರು ದಿನದಲ್ಲಿ ನೂರು ಮೀಟರ್ ರಸ್ತೆ ಮಾಡಲು ಆಗಿಲ್ಲ. ವಿಧಾನಸೌಧಕ್ಕೆ ಮಂತ್ರಿಗಳು ಬರುತ್ತಿಲ್ಲ. ಸರ್ಕಾರದ ಒಂದೇ ಒಂದು ಸಾಧನೆ ಅಂದರೆ ಅದು ವರ್ಗಾವಣೆ ದಂಧೆ” ಎಂದು ವಾಗ್ದಾಳಿ ನಡೆಸಿರು.
“ಸಂಘ ಪರಿವಾರ ಮತ್ತು ಬಿಜೆಪಿಯವರ ಮೇಲೆ ಹುಡುಕಿ ಹುಡುಕಿ ಕೇಸ್ ಹಾಕಲಾಗುತ್ತಿದೆ. ಚೈತ್ರಾ ಕುಂದಾಪುರ ಪ್ರಕರಣ ಬಗ್ಗೆ ಬಿಜೆಪಿಯವರು ಜಾರುವುದು ಇಲ್ಲ, ಹಾರುವುದು ಇಲ್ಲ. ಮೋಸಕ್ಕೆ ಒಳಗಾಗೋರು ಜಾಗೃತರಾಗಬೇಕು. ಹಣ ಕೊಟ್ಟವರು, ತೆಗೆದುಕೊಂಡವರ ಬಗ್ಗೆ ಕ್ರಮವಾಗಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರ್ಚಕರಾಗಿ ದಲಿತರು, ಮಹಿಳೆಯರ ನೇಮಕ ಕ್ರಾಂತಿಕಾರಿ ಹೆಜ್ಜೆಯೇ? ದೇಶ ಬದಲಾಯಿತೇ?
ಪ್ರಧಾನಿ ಮೋದಿ ಅವರು ಸಮಯ ನೀಡುತ್ತಿಲ್ಲ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಸಿಎಂ ಸಮಯ ಕೇಳಿದರೆ ಸಮಯ ಕೊಡದೆ ಇರೋ ಸಾಧ್ಯತೆ ಇಲ್ಲ. ಮೊನ್ನೆಯಷ್ಟೇ ಭೇಟಿ ಮಾಡಿ ಬಂದಿದ್ದಾರೆ. ವಿನಾಕಾರಣ ಅಪಪ್ರಚಾರ ಮಾಡೋದು ಮುಖ್ಯಮಂತ್ರಿಗಳಿಗೆ ಶೋಭೆ ತರಲ್ಲ” ಎಂದು ಹೇಳಿದರು.
“ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಮಾತ್ರ ಬರಪರಿಹಾರ ಕೆಲಸ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕಾಗದ ಬರೆಯೋ ಸರ್ಕಾರ ಅಲ್ಲ ಅಂತ ಜನ ಅಂದುಕೊಂಡಿದ್ದರು. ಆದರೆ ಆ ಭರವಸೆಯನ್ನು ಸಿದ್ದರಾಮಯ್ಯ ಸುಳ್ಳು ಮಾಡಿದ್ದಾರೆ. ಲೋಕಸಭಾ ಚುನಾವಣೆವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರಿಯುವುದು ಕಷ್ಟ” ಎಂದರು.