ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ 10 ದಿನಗಳಿಂದ 13 ಜಿಂಕೆಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಜಿಂಕೆಗಳ ಪರಸ್ಪರ ಕಾದಾಟ ಮತ್ತು ಜಂತುಹುಳುಗಳ ಬಾಧೆಯಿಂದ ಕೆಲವು ಜಿಂಕೆಗಳು ಮೃತಪಟ್ಟಿವೆ. ಆದರೂ, ಇನ್ನೂ ಕೆಲವು ಜಿಂಕೆಗಳ ಸಾವಿಎ ಕಾರಣವೇನು ಎಂಬುದು ತಿಳಿದುಬಂದಿದೆ. ಮೃತಪಟ್ಟ ಕೆಲವು ಜಿಂಕೆಗಳ ಹೊಟ್ಟೆಯ ಭಾಗದಲ್ಲಿ ಊತ ಕಾಣಿಸಿಕೊಂಡಿತ್ತು ಎಂದು ಉದ್ಯಾನವನದ ಮೂಲಗಳು ತಿಳಿಸಿವೆ.
ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯ ಉದ್ಯಾನದಲ್ಲಿದ್ದ 37 ಜಿಂಕೆಗಳನ್ನು ಸೂಕ್ತ ರಕ್ಷಣೆಯ ಕೊರತೆಯಿಂದಾಗಿ ಬನ್ನೇರುಘಟ್ಟ ಉದ್ಯಾನವನಕ್ಕೆ ಆಗಸ್ಟ್ 17ರಂದು ಹಸ್ತಾಂತರಿಸಲಾಗಿತ್ತು. ಆ ಜಿಂಕೆಗಳನ್ನು 10 ದಿನ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆ ಸಮಯದಲ್ಲೇ 9 ಜಿಂಕೆಗಳು ಸಾವನ್ನಪ್ಪಿದ್ದವು. ಸೋಮವಾರ ನಾಲ್ಕು ಜಿಂಕೆಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
“ಜಿಂಕೆಗಳು ಅತ್ಯಂತ ಸೂಕ್ಷ್ಮ ಪ್ರಾಣಿಗಳು. ಅವುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಿದಾಗ, ಹೊಸ ಜಾಗಕ್ಕೆ ಹೊಂದಿಕೊಳ್ಳುವುದು ಕಷ್ಟ” ಎಂದು ಉದ್ಯಾನವನ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿರುವುದಾಗಿ ‘ಪಿವಿ’ ವರದಿ ಮಾಡಿದೆ.
“ಕ್ವಾರಂಟೈನ್ ಜಾಗದಲ್ಲಿ ಗಂಡು ಜಿಂಕೆಗಳೇ ಹೆಚ್ಚಾಗಿದ್ದವು. ಇದು ಜಿಂಕೆಗಳ ಮಿಲನದ ಸಮಯವಾದ್ದರಿಂದ ಹೆಣ್ಣು ಜಿಂಕೆಗಾಗಿ ಪರಸ್ಪರ ಕಾದಾಟದಿಂದಾಗಿ ಹೆಚ್ಚಿನ ಗಂಡು ಜಿಂಕೆಗಳು ಮೃತಪಟ್ಟಿವೆ.ಕೆಲವು ಜಿಂಕೆಗಳು ಜಂತುಹುಳು ಬಾಧೆಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಉದ್ಯಾನವನದಲ್ಲಿದ್ದ ಏಳು ಚಿರತೆ ಮರಿಗಳು ರಕ್ತಭೇದಿಯಿಂದ ಸಾವನ್ನಪ್ಪಿದ್ದವು. ಇದೀಗ, ಜಿಂಕೆಗಳ ಸರಣಿ ಸಾವು ಎದುರಾಗಿದೆ.