ಸೂಕ್ತವಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡದ ಕಾರಣ ಮನೆಯ ಮುಂಭಾಗದಲ್ಲಿ ಹೊಲಸು ನೀರು ಸಂಗ್ರಹವಾಗುತ್ತಿದ್ದು, ಓಣಿಯ ನಿವಾಸಿಗಳು ರೋಗದ ಭೀತಿಯಲ್ಲಿ ವಾಸಿಸುತ್ತಿದ್ದೇವೆ ಎಂದು ಬೀದರ್ ಜಿಲ್ಲೆಯ ಗ್ರಾಮಸ್ಥರು ದೂರಿದರು.
ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದ ದಲಿತ ಓಣಿಯಲ್ಲಿ ಕಳೆದ 8ರಿಂದ 10 ವರ್ಷಗಳಿಂದ ರಸ್ತೆ ಕಿತ್ತು ಹೋಗಿದ್ದರೂ ಸುಧಾರಣೆ ಕಂಡಿಲ್ಲ. ಇನ್ನು ಚರಂಡಿ ವ್ಯವಸ್ಥೆ ಅಂತೂ ಇಲ್ಲವೇ ಇಲ್ಲ. ಶುದ್ಧ ಕುಡಿಯುವ ನೀರಿನ ಪೈಪ್ ಇದೇ ಹೊಲಸು ನೀರಿನಲ್ಲಿದೆ. ಇದರಿಂದ ಕಾಲೋನಿಯ ಸುಮಾರು 40ಕ್ಕೂ ಹೆಚ್ಚಿನ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ” ಎಂದು ಸ್ಥಳೀಯ ನಿವಾಸಿ ಗೌತಮ ಸಿಂಧೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗ್ರಾಮ ಪಂಚಾಯತ್ ಕೇಂದ್ರವಾದ ದಾಡಗಿ ಗ್ರಾಮದ ಇತರೆ ಓಣಿಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಪರಿಶಿಷ್ಟ ಜಾತಿ ಓಣಿಯಲ್ಲಿ ಸೌಕರ್ಯ ಒದಗಿಸಲು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರಿಗೆ ಕಳೆದ ಹಲವು ವರ್ಷಗಳಿಂದ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಇದೀಗ ಮಳೆಗಾಲ ಆರಂಭವಾದ ಕಾರಣ ಮನೆಮುಂದೆ ಸಂಗ್ರಹವಾದ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ” ಎಂದು ಈ ದಿನ.ಕಾಮ್ ಗೆ ಮಾತನಾಡಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಸಂಘದಲ್ಲಿ ಸಾಲ ಮನ್ನಾಗೆ ಆಗ್ರಹಿಸಿ ಬಹಿರಂಗ ಪತ್ರ
ಈಗಾಗಲೇ ಜಿಲ್ಲೆಯ ಕೆಲವೆಡೆ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗಿದ್ದ ಘಟನೆಗಳು ಜರುಗಿವೆ. ಹೀಗಾಗಿ ಕೂಡಲೇ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ” ಎಂದು ಓಣಿಯ ನಿವಾಸಿಗಳು ಎಚ್ಚರಿಸಿದರು.
ಈ ವೇಳೆ ರಾಜಕುಮಾರ್ ಕಾಂಬಳೆ, ಮಾರುತಿ ಧಾವಲೆ, ಸಾಧಿಕ್ ಮಿಯ್ಯಾ, ಶಿವರಾಜ್ ಕಾಂಬಳೆ ಇದ್ದರು.