- ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ
- ಬೆಳೆಹಾನಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ ಬೆಲ್ದಾಳೆ
ಆಲಿಕಲ್ಲು ಮಳೆಯಿಂದ ಬೀದರ್ ತಾಲೂಕಿನ ಸುಲ್ತಾನಪುರ, ಮಲ್ಕಾಪುರ ಗ್ರಾಮಗಳಲ್ಲಿ ಭಾರೀ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯಿಂದ ಹಾನಿಗೊಳಗಾದ ಗ್ರಾಮಗಳ ಜಮೀನುಗಳಿಗೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಜೋಳ, ಈರುಳ್ಳಿ, ಕಡಲೆ, ಕಲ್ಲಂಗಡಿ, ಹೂ ಕೋಸು ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿದ್ದು, ನಷ್ಟ ಅನುಭವಿಸಿರುವುದಾಗಿ ರೈತರು ಅಧಿಕಾರಿಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತ ರೈತರ ಹೊಲಗಳ ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಬೆಲ್ದಾಳೆ ಸೂಚಿಸಿದ್ದಾರೆ.
“ಬೆಳೆಹಾನಿ ಕುರಿತಂತೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಅವರು ಭರವಸೆ ನೀಡಿದ್ದಾರೆ.
ಅಧಿಕಾರಿಗಳ ಭೇಟಿ ವೇಳೆ, ಚನ್ನಪ್ಪ ಗೌರಶೆಟ್ಟಿ, ಬಸವರಾಜ ಹಿಲಾಲಪುರ, ಶಿವು ಸುಲ್ತಾನಪುರೆ, ಸಂಗಯ್ಯ ಸ್ವಾಮಿ, ಬಸವರಾಜ ಹೆಡ್ಡಿ, ಅನಿಲ್ ಮೇಲ್ದೊಡ್ಡಿ ಸೇರಿದಂತೆ ಅಧಿಕಾರಿಗಳು ಇದ್ದರು.