- ಕುಮಾರಸ್ವಾಮಿ ಭೇಟಿ ಬಳಿಕ ರಮೇಶ ಜಾರಕಿಹೊಳಿ ಹೇಳಿಕೆ
- ಕುಮಾರಸ್ವಾಮಿ ಆರೋಗ್ಯ ವಿಚಾರಿಸಲು ಬಂದಿದ್ದೆ: ಸ್ಪಷ್ಟನೆ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ಬಿಜೆಪಿ ನಾಯಕರಿಂದಲೇ ಒಡಮೂಡುತ್ತಿದ್ದು, ಈ ನಡುವೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಸೋಮವಾರ ದಿಢೀರ್ ಆಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಪ್ರಮುಖ ಕಾರಣರಾಗಿದ್ದ ರಮೇಶ ಜಾರಕಿಹೊಳಿ ದಿಢೀರ್ ಆಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಹೆಚ್ಚಿಸಿದೆ.
ಕುಮಾರಸ್ವಾಮಿ ಅವರ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ, “ಇತ್ತೀಚೆಗೆ ಅನಾರೋಗ್ಯದಿಂದ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ನಾನು ರಾಜ್ಯದಲ್ಲಿ ಇರಲಿಲ್ಲ. ಈಗ ಬಂದು ಅವರ ಆರೋಗ್ಯ ವಿಚಾರಿಸಿರುವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೂವರು ಡಿಸಿಎಂ ಹೇಳಿಕೆ ಬಗ್ಗೆ ಸಿಎಂ ಉತ್ತರಿಸುತ್ತಾರೆ: ಡಿಸಿಎಂ ಡಿಕೆ ಶಿವಕುಮಾರ್
ಆ ಬಳಿಕ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ”ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಇಂತಹ ಕೆಟ್ಟ ಸರ್ಕಾರ ಕಿತ್ತೊಗೆಯಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಗತ್ಯವಾಗಿದೆ” ಎಂದರು.
ಮತ್ತೆ ಕಾಂಗ್ರೆಸ್ ಸರ್ಕಾರ ಬಿಳಿಸುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಮಾಧ್ಯಮಗಳ ಮುಂದೆ ಎಲ್ಲ ಹೇಳಿ ಮಾಡಲು ಆಗುವುದಿಲ್ಲ” ಎಂದಷ್ಟೇ ಹೇಳಿ ಕಾರು ಹತ್ತಿ ಹೊರಟರು.