- ‘ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸರ್ಕಾರಕ್ಕೆ ಆದೇಶ’
- ‘ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಹೋಗಿ ಮನವರಿಕೆ ಮಾಡಲಿ’
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಿಡಬ್ಲ್ಯೂಎಂಎ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಮಾಡಿರುವ ಆದೇಶ ಪಾಲನೆ ಮಾಡಲು ಸಾಧ್ಯವಿಲ್ಲದ ಒಂದು ಆಜ್ಞೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೆ ಆದೇಶ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಹೋಗಿ ನೀರನ್ನು ಬಿಡಲು ಸಾಧ್ಯವಿಲ್ಲದ ಕಾರಣವನ್ನು ಮನವರಿಕೆ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
“ಈ ಆಜ್ಞೆ ಬರುವ ಮುಂಚೆ ನೀರು ಬಿಡಲು ಪ್ರಾರಂಭ ಮಾಡಿರುವ ರಾಜ್ಯ ಸರ್ಕಾರ ತನ್ನ ಕೈಯನ್ನು ತಾನೇ ಕಟ್ಟಿಸಿಕೊಂಡಿದೆ. ಕೂಡಲೇ ನೀರು ನಿಲ್ಲಿಸಿ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಜನತೆಗೆ ನ್ಯಾಯ ಒದಗಿಸಲು ಕಾನೂನಾತ್ಮಕ ಹೋರಾಟ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಸೆ. 12ರ ಆದೇಶ ಪುನರ್ ಉಚ್ಚರಣೆ
ನವದೆಹಲಿಯ ಸಿಡಬ್ಲ್ಯೂಎಂಎ ಕಚೇರಿಯಲ್ಲಿ ಸೋಮವಾರ ನಡೆದ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಕರ್ನಾಟಕ್ಕೆ ಐದು ಸಾವಿರ ಕ್ಯೂಸೆಕ್ ನೀರು ಹರಿಸಲು ಮತ್ತೆ ಆದೇಶ ಹೊರಡಿಸಲಾಗಿದೆ.
ಸೆಪ್ಟೆಂಬರ್ 12ರ ಆದೇಶದಂತೆ 15 ದಿನ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕ್ಕೆ ಸೂಚಿಸಲಾಗಿದ್ದು, ಕಾವೇರಿ ನೀರು ನಿಯಂತ್ರಣ ಮಂಡಳಿ ಸಮಿತಿಯ ಆದೇಶ ಪಾಲನೆ ಮಾಡಲೇಬೇಕು ಎಂದು ಸಭೆಯಲ್ಲಿ ಖಡಕ್ ಆಗಿ ಸೂಚನೆ ನೀಡಲಾಗಿದೆ.
ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ಈ ಹಿಂದೆ ನೀಡಿದ್ದ ಇದೇ ಆದೇಶವನ್ನು ಈಗ ಮತ್ತೊಮ್ಮೆ ಪುನರ್ ಉಚ್ಚರಿಸಿದೆ. ಇದರಿಂದ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಾದುನೋಡಬೇಕು.