- ಚೈತ್ರಾ ಕುಂದಾಪುರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು
- ಬಿಜೆಪಿ ಸಿದ್ಧಾಂತದ ಪರ ಮಾತನಾಡಿದವರೆಲ್ಲ ಬಿಜೆಪಿಗರಾಗಲ್ಲ
ಚೈತ್ರಾ ಕುಂದಾಪುರ ಅಂತಹ ಜನರು ಎಲ್ಲ ಪಕ್ಷದಲ್ಲೂ ಇರುತ್ತಾರೆ. ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದು ಅವರ ಕೆಲಸ. ಇದು ಮೊದಲನೇ ಘಟನೆ ಅಲ್ಲ. ಮೋಸ ಹೋಗುವವರು ಇರುವವರೆಗೂ ಇಂತವರು ಇದ್ದೇ ಇರುತ್ತಾರೆ. ಈ ಬಗ್ಗೆ ನಮ್ಮ ಪಕ್ಷ ಮೊದಲೇ ತಿಳಿಸಿತ್ತು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಎಲ್ಲೆಲ್ಲೋ ದುಡ್ಡು ಮಾಡಿದವರು, ಹೇಗೆ ರಾಜಕೀಯ ಮಾಡಬೇಕು ಅಂತ ಗೊತ್ತಿಲ್ಲದವರು ಈ ರೀತಿ ಮೋಸ ಹೋಗುತ್ತಾರೆ. ಇಂತಹ ಡಮ್ಮಿ ವ್ಯಕ್ತಿಗಳ ಜೊತೆಗೆ ಮೋಸ ಹೋಗತ್ತಾರೆ” ಎಂದರು.
“ಬಿಜೆಪಿ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿದವರೆಲ್ಲ ಬಿಜೆಪಿಗರಾಗಲ್ಲ. ಚೈತ್ರಾ ಕುಂದಾಪುರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಮ್ಮಲ್ಲಿ ಟಿಕೆಟ್ ಪಡೆಯಲು ನೀತಿ ನಿಯಮಗಳು ಇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ನಿದ್ದೆಯಿಂದ ಎದ್ದಿರುವ ನ್ಯೂಸ್ ಚಾನೆಲ್ ಒಕ್ಕೂಟ ಮರ್ಯಾದೆ ಉಳಿಸಿಕೊಳ್ಳಲಿ
“ಯಾವ ರಾಜಕೀಯ ಪಕ್ಷಗಳು ಇಂತಹ ಟೋಪಿ ಹಾಕುವವರನ್ನು ಬೆಳೆಸುವುದಿಲ್ಲ. ಟಿಕೆಟ್ ಆಕಾಂಕ್ಷಿಗಳ ಅಡ್ವಾಂಟೆಜ್ ತೆಗೆದುಕೊಳ್ಳುವ ಜನ ಇವರು” ಎಂದು ಚೈತ್ರಾ ಕುಂದಾಪುರ ವಿರುದ್ಧ ವಾಗ್ದಾಳಿ ನಡೆಸಿದರು.
ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಲ್ಲದ, “ಜಗದೀಶ್ ಶೆಟ್ಟರ್ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದರೆ ಅವರು ಇನ್ನೂ ನಮ್ಮ ಪಕ್ಷದ ಬಗ್ಗೆಯೇ ಚಿಂತೆ ಮಾಡುತ್ತಿದಾರೆ ಅನ್ನಿಸುತ್ತಿದೆ. ಅವರು ಮನಃಪೂರ್ವಕವಾಗಿ ಇನ್ನೂ ಕಾಂಗ್ರೆಸ್ ಸೇರಿಲ್ಲ ಅನ್ನಿಸುತ್ತೆ” ಎಂದರು.