ತಲಕಾಡಿನಲ್ಲಿ ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ; ಇಲ್ಲದ ಮೂಲ ಸೌಕರ್ಯಗಳು

Date:

ನಿಸರ್ಗಧಾಮ ಪ್ರವಾಸಿ ತಾಣವಾದರೂ ಅದರ ನಿರ್ವಹಣೆ ಮಾತ್ರ ಅರಣ್ಯ ಇಲಾಖೆಯೇ ನೋಡಿಕೊಳ್ಳುತ್ತಿದೆ. ಒಂದು ವರ್ಷಕ್ಕೆ ಸರಿ ಸುಮಾರು ₹20 ರಿಂದ ₹25 ಲಕ್ಷ ಆದಾಯ ಅರಣ್ಯ ಇಲಾಖೆಗೆ ಬರುತ್ತಿದೆ. ಇಷ್ಟು ಆದಾಯ ಬಂದರೂ ಅರಣ್ಯ ಇಲಾಖೆ ಮಾತ್ರ ಇಲ್ಲಿಯವರೆಗೂ ಕಾವೇರಿ ನದಿ ತೀರಕ್ಕೆ ಯಾವುದೇ ಕಾಯಕಲ್ಪ ನೀಡಿಲ್ಲ. ಜತೆಗೆ ತಲಕಾಡಿನಲ್ಲಿ ಪ್ರವಾಸಿಗರಿಂದ ಹಣ ವಸೂಲಿ ಮಾಡುವುದನ್ನೂ ನಿಲ್ಲಿಸಿಲ್ಲ.

ರಾಜ್ಯದ ಹಲವು ಭಾಗಗಳನ್ನಾಳಿದ ರಾಜ ಮನೆತನಗಳಲ್ಲಿ ಒಂದಾದ ಗಂಗರ ಕಾಲದಿಂದಲೂ ತಲಕಾಡು ಗುರುತಿಸಿಕೊಂಡಿದೆ. ಗಂಗರ ಎರಡನೇ ರಾಜಧಾನಿಯೂ ಆಗಿದ್ದ ತಲಕಾಡು, ಹಲವಾರು ಇತಿಹಾಸಗಳನ್ನು ಹಾಗೂ ಪುರಾಣಗಳನ್ನು ಹೊಂದಿದೆ. ಐತಿಹಾಸಿಕ ದೇವಾಲಯಗಳು, ಕಾವೇರಿ ನದಿ, ನದಿ ದಡದ ಮರಳು, ಅರಣ್ಯ ಪ್ರದೇಶ, ತಣ್ಣನೆಯ ವಾತಾವರಣವಿರುವ ತಲಕಾಡಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ರಮಣೀಯ ಕ್ಷಣಗಳನ್ನು ಕಳೆಯುತ್ತಾರೆ.

ತಲಕಾಡಿನಲ್ಲಿ 16ನೇ ಶತಮಾನದಲ್ಲಿ 30ಕ್ಕೂ ಹೆಚ್ಚು ದೇವಸ್ಥಾನಗಳು ನಿರ್ಮಾಣವಾಗಿದ್ದವು. ಅವೆಲ್ಲವೂ ಮರಳಿನಲ್ಲಿ ಮುಚ್ಚಿ ಹೋದವು ಎಂದು ಇತಿಹಾಸ ಹೇಳುತ್ತದೆ. ಇಂತಹ ಇತಿಹಾಸ ಪ್ರಸಿದ್ಧ ಸ್ಥಳಕ್ಕೆ ಪ್ರವಾಸಿಗರು ಭೇಟಿ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿರುವ ತಲಕಾಡು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗಳು ಅಭಿವೃದ್ಧಿ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿವೆ. ಸ್ವತಃ ಈ ದಿನ.ಕಾಮ್ ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ.ತಲಕಾಡು

ಗ್ರಾಮ ಪಂಚಾಯಿತಿಯಿಂದ ಹಣ ವಸೂಲಿ

ತಲಕಾಡಿನ ನಿಸರ್ಗಧಾಮ ಕಾವೇರಿ ನದಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಮೊದಲಿಗೆ ಗ್ರಾಮ ಪಂಚಾಯಿತಿ ನಿಯೋಜಿಸಿರುವ ವ್ಯಕ್ತಿಯೊಬ್ಬರು ವಾಹನಗಳನ್ನು ನಿಲ್ಲಿಸಿ ಗ್ರಾಮದ ಅಭಿವೃದ್ಧಿಯ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಾರೆ. ಬೈಕ್, ಕಾರು, ಜೀಪ್, ಲಾರಿ, ಬಸ್ ಸೇರಿದಂತೆ ಒಂದೊಂದಕ್ಕೆ ಒಂದೊಂದು ರೀತಿಯ ದರ ನಿಗದಿ ಮಾಡಿದ್ದಾರೆ. 10 ರೂಪಾಯಿಯಿಂದ ಆರಂಭವಾಗುವ ಈ ದರ ₹50 ವರೆಗೂ ಇದೆ.

ದುಡ್ಡು ಕೊಟ್ಟು ಮುಂದೆ ಸಾಗಿದರೆ, ನದಿ ಮುಟ್ಟುವವರೆಗೂ ಸುಮಾರು 1.5ಕಿ.ಮೀ ಕಲ್ಲು-ಗುಂಡಿಗಳಿರುವ ಹದಗೆಟ್ಟ ರಸ್ತೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ದಾರಿ ಮಧ್ಯೆ ಜನರಿಗೆ ದಾಹವಾದರೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ನದಿಗೆ ತೆರಳಲು ಸೂಕ್ತವಾದ ಮಾಹಿತಿ ನೀಡಿಲ್ಲ. ಪ್ರೇಕ್ಷಣೀಯ ಸ್ಥಳದ ವಿಶೇಷತೆಯ ಬಗ್ಗೆ ಯಾವುದೇ ಟಿಪ್ಪಣಿ ಇಲ್ಲ.ತಲಕಾಡು

ನದಿಯ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆಗೆ ಹಣ ಪಾವತಿ

ನದಿಯ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಾರೆ. ಆ ಹಣವನ್ನು ನದಿ ದಡದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಮೂಲ ಸೌಕರ್ಯಗಳನ್ನು ಒದಗಿಸಲು ಮತ್ತು ಪಾರ್ಕಿಂಗ್ ಚಾರ್ಜ್‌ಗಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಆದರೆ, ಹಣ ನೀಡಿದ್ದಕ್ಕೆ ಯಾವುದೇ ಪಾವತಿ ರಸೀದಿಯನ್ನು ನೀಡುವುದಿಲ್ಲ. ಮಾತ್ರವಲ್ಲ, ನದಿಯ ಬಳಿ ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಎಲ್ಲೆಂದರಲ್ಲಿ ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ತಲಕಾಡಿನಲ್ಲಿ ತೆಪ್ಪದ ವಿಹಾರವೂ ಇದ್ದು, ತೆಪ್ಪ ನಡೆಸುವವರೂ ಅರಣ್ಯ ಇಲಾಖೆಗೆ ಹಣ ಪಾವತಿ ಮಾಡುತ್ತಿದ್ದಾರೆ.

ಅವ್ಯವಸ್ಥೆಯ ಆಗರ

ಕಾವೇರಿ ನದಿಯೂ ಅಗಲವಾಗಿ ವಿಸ್ತಾರವಾಗಿ ಹರಡಿಕೊಂಡಿದೆ. ಜನರನ್ನು ತನ್ನತ್ತ ಸೆಳೆಯುತ್ತದೆ. ಹಲವಾರು ಮಂದಿ ನೀರಿನಲ್ಲಿ ಇಳಿದು ಗಂಟೆಗಳ ಕಾಲ ಆಟವಾಡುತ್ತಾರೆ. ಆದರೆ, ಇಲ್ಲಿ ಪ್ರವಾಸಿಗರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಅರಣ್ಯ ಇಲಾಖೆ ಜನರಿಂದ ಹಣ ಪಡೆಯುತ್ತಿದ್ದರು. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸದೆ ನಿರ್ಲಕ್ಷ್ಯ ಧೋರಣೆ ತಳೆದಿದೆ.ತಲಕಾಡು

ಮಹಿಳೆಯರು ನೀರಿನಲ್ಲಿ ಆಟವಾಡಿ ಬಂದ ನಂತರ ಅವರಿಗೆ ಬಟ್ಟೆ ಬದಲಾಯಿಸಲು ಯಾವುದೇ ವ್ಯವಸ್ಥೆ ಮಾಡಿಲ್ಲ. ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯಿಲ್ಲ. ನಿಸರ್ಗಧಾಮಕ್ಕೆ ಬರುವ ಜನರ ಸುರಕ್ಷತೆಗೆ ಯಾವುದೇ ಒತ್ತು ನೀಡಿಲ್ಲ. ನದಿ ದಡದಲ್ಲಿ ಆಟವಾಡಲು ಸೂಕ್ತವಾಗಿ ಸ್ಥಳ ನಿಗದಿ ಮಾಡಿಲ್ಲ.

ಅಪಾಯಕಾರಿ ಪ್ರದೇಶಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ಬೋರ್ಡ್‌ಗಳನ್ನು ಹಾಕಿಲ್ಲ. ಬದಲಾಗಿ, ನಾಮಕಾವಾಸ್ತೆಗೆ ಅರಣ್ಯ ಇಲಾಖೆ ನದಿಯ ಮಧ್ಯೆ ಅಲ್ಲೊಂದು ಇಲ್ಲೊಂದು ಕೆಂಪು ಬಾವುಟ ಹಾಕಿ ಕೈ ತೊಳೆದುಕೊಂಡಿದೆ. ಈ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಇಲ್ಲದ ಹಿನ್ನೆಲೆ ಹಲವಾರು ಅನಾಹುತಗಳು ಸಂಭವಿಸಿರುವ ಉದಾಹರಣೆಗಳಿವೆ.

ಕಳೆದ 2 ವರ್ಷಗಳಿಂದ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಶುರು ಮಾಡಿದ್ದಾರೆ. ತಲಕಾಡು ಮತ್ತು ಮಾಲಂಗಿ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ನೀರಿಗೆ ಅಡ್ಡಲಾಗಿ ಮಣ್ಣು ಸುರಿದು, ನೀರನ್ನು ತಡೆದು ಸೇತುವೆಯ ಪಿಲ್ಲರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಪಿಲ್ಲರ್‌ಗಳನ್ನು ನಿಲ್ಲಿಸಿದ ನಂತರ, ಮಣ್ಣನ್ನು ಒಡೆದು ನೀರು ಹರಿಸಲಾಗಿದೆ. ಆದರೆ, ಏಕಾಏಕಿ ನೀರು ಹರಿದ ಕಾರಣ ನದಿಯಲ್ಲಿ ಅಲ್ಲಿಲ್ಲ ಆಳದ ಗುಂಡಿಗಳಾಗಿವೆ. ಇದನ್ನು ಅರಿಯದ ಯುವಕರು ಪಿಲ್ಲರ್ ಬಳಿ ಆಟವಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಡುತ್ತಿದ್ದಾರೆ.ತಲಕಾಡು

ನಿಸರ್ಗಧಾಮ ಪ್ರವಾಸಿ ತಾಣವಾದರೂ ಅದರ ನಿರ್ವಹಣೆ ಮಾತ್ರ ಅರಣ್ಯ ಇಲಾಖೆಯೇ ನೋಡಿಕೊಳ್ಳುತ್ತಿದೆ. ಒಂದು ವರ್ಷಕ್ಕೆ ಸರಿ ಸುಮಾರು ₹20 ರಿಂದ ₹25 ಲಕ್ಷ ಆದಾಯ ಅರಣ್ಯ ಇಲಾಖೆಗೆ ಬರುತ್ತಿದೆ. ಇಷ್ಟು ಆದಾಯ ಬಂದರೂ ಅರಣ್ಯ ಇಲಾಖೆ ಮಾತ್ರ ಇಲ್ಲಿಯವರೆಗೂ ಕಾವೇರಿ ನದಿ ತೀರಕ್ಕೆ ಯಾವುದೇ ಕಾಯಕಲ್ಪ ನೀಡಿಲ್ಲ ಎಂಬುದು ಬೇಸರದ ಸಂಗತಿ.

ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಹೆಸರಿನಲ್ಲಿ ತಲಕಾಡು ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳಿನಿಂದ ಹಣ ವಸೂಲಿ ಮಾಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅರಣ್ಯ ಇಲಾಖೆ ಅಧಿಕಾರರಿಗಳು ತಿಳಿಸುತ್ತಾರೆ.ತಲಕಾಡು

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪಯ್ಯ, “ಕಳೆದ ಆರು ಏಳು ತಿಂಗಳಿನಿಂದ ಪ್ರವಾಸಿಗರಿಂದ ಹಣ ಪಡೆಯುತ್ತಿದ್ದೇವೆ. ₹10 ಯಿಂದ ₹50 ವರೆಗೂ ಹಣ ಪಡೆಯುತ್ತೇವೆ. ಸರ್ಕಾರ ಇಲ್ಲಿವರೆಗೂ ತಲಕಾಡಿನಲ್ಲಿ ರಸ್ತೆ ಹಾಕಿಸಿಲ್ಲ. ಹಾಗಾಗಿ, ಬರುವ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಇದರಿಂದ ಹಣ ಸಂಗ್ರಹಿಸಿ ಕೆಲವು ಅಭಿವೃದ್ಧಿ ಕೆಲಸ ಮಾಡಬೇಕು ಎಂದುಕೊಂಡಿದ್ದೇವೆ. ಬರುವ ಹಣದಲ್ಲಿ ಇಲ್ಲಿವರೆಗೂ ರಸ್ತೆಯಲ್ಲಿ ಜನರಿಗೆ ಧೂಳು ತಾಗಬಾರದು ಎಂದು ನಿತ್ಯ ₹1000 ನೀಡಿ ರಸ್ತೆಗೆ ಟ್ಯಾಂಕರ್ ನೀರು ಹಾಯಿಸುತ್ತೇವೆ” ಎಂದು ತಿಳಿಸಿದರು.

ತಲಕಾಡು ಡಿಆರ್‌ಎಫ್‌ಓ ನಾಗರಾಜ ಈ ದಿನ.ಕಾಮ್ ಜತೆಗೆ ಮಾತನಾಡಿ, “ವಾರದ ಏಳು ದಿನ ಬೆಳಗ್ಗೆ ಎಂಟು ಗಂಟೆಯಿಂದ ಆರು ಗಂಟೆವರೆಗೂ ಜನರಿಂದ ಹಣ ಪಡೆಯುತ್ತವೆ. ಪ್ರತಿ ವರ್ಷ ಟೆಂಡರ್ ಕರೆಯುತ್ತಿದ್ದೆವು. ಆದರೆ, ಈಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಟೆಂಡರ್ ಕರೆದಿಲ್ಲ. ಹಾಗಾಗಿ, ಕಳೆದ ಹದಿನೈದು ದಿನದಿಂದ ಪಾರ್ಕಿಂಗ್‌ಗಾಗಿ ಈ ಹಣವನ್ನು ಪಡೆಯುತ್ತಿದ್ದೇವೆ. ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಣ ಪಡೆಯುತ್ತಿದ್ದೇವೆ. ಈಗಾಗಲೇ, ಶೌಚಾಲಯ ವ್ಯವಸ್ಥೆ ಸೇರಿದಂತೆ ಜನರಿಗೆ ಅನುಕೂಲಕರವಾಗುವ ರೀತಿಯಲ್ಲಿ ಹಲವಾರು ವ್ಯವಸ್ಥೆಗಳನ್ನು ಮಾಡಿದ್ದೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 3 | ಸಂಪಂಗಿ ಕೆರೆಯ ಮೇಲೆ ತಲೆಯೆತ್ತಿ ಮೆರೆಯುತ್ತಿರುವ ಕಂಠೀರವ ಕ್ರೀಡಾಂಗಣ

“ಗ್ರಾಮ ಅರಣ್ಯ ಸಮಿತಿಗೆ ನಾವು ಸಂಗ್ರಹಿಸಿದ ಹಣವನ್ನು ನೀಡುತ್ತೇವೆ. ವಾರಾಂತ್ಯದಲ್ಲಿ ನದಿ ದಂಡೆಗೆ ಹೆಚ್ಚಾಗಿ ಜನ ಬರುತ್ತಾರೆ” ಎಂದರು.

ಪ್ರವಾಸಿಗರು ಏನು ಹೇಳುತ್ತಾರೆ?

“ಈ ರಮಣೀಯವಾದ ನೀಲಿ ನೀರನ್ನು ನೋಡಲು ರಜೆ ಸಿಕ್ಕಾಗಲೆಲ್ಲ ಮಕ್ಕಳೊಂದಿಗೆ ಬರುತ್ತೇವೆ. ನೀರಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಆಟವಾಡುತ್ತೇವೆ. ಅರಣ್ಯ ಇಲಾಖೆಯೇ ಈ ಪ್ರವಾಸಿ ತಾಣವನ್ನು ನೋಡಿಕೊಳ್ಳುತ್ತಿದೆ. ಆದರೆ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ಕೈಗೊಂಡಿಲ್ಲ. ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಾಯಿಸಲು ಸುರಕ್ಷಿತ ಜಾಗವಿಲ್ಲ. ತಿಂಡಿಗಳ ದರವೆಲ್ಲ ಹೆಚ್ಚಾಗಿದೆ” ಎಂದು ಪ್ರವಾಸಿ ಶಾರದಾ ಈ ದಿನ.ಕಾಮ್‌ಗೆ ಹೇಳಿದರು.ತಲಕಾಡು

“ನದಿಗೆ ಬರುವ ದಾರಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಹಾಗೂ ಅರಣ್ಯ ಇಲಾಖೆಯಿಂದ ಎಂದು ಎರಡು ಕಡೆಯಿಂದ ಪ್ರವಾಸಿಗರ ಬಳಿ ಹಣ ಪಡೆಯುತ್ತಾರೆ. ಆದರೆ, ಪ್ರವಾಸಿಗರಿಗೆ ಯಾವುದೇ ಅನುಕೂಲತೆಗಳಿಲ್ಲ” ಎಂದು ಪ್ರವಾಸಿಗ ಶರಣ್ ಈ ದಿನ.ಕಾಮ್‌ಗೆ ತಿಳಿಸಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಆಪರೇಷನ್ ಹಸ್ತದ ಬಗ್ಗೆ ಲಕ್ಷ್ಮಣ್ ಸವದಿ ಮಾರ್ಮಿಕ ಹೇಳಿಕೆ

ಬಹಳಷ್ಟು ಮಂದಿ ಜೆಡಿಎಸ್‌-ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರುಲು ಸಿದ್ದರಾಗಿದ್ದಾರೆ. ಎಲ್ಲದಕ್ಕೂ ಕಾಲ...

ಚಾಮರಾಜನಗರ | ಚೈನ್ನೈ ಮೂಲದ ವೈದ್ಯೆ ಅನುಮಾನಾಸ್ಪದ ಸಾವು

ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಡಾ. ಸಿಂಧುಜಾ (28) ಅನುಮಾನಾಸ್ಪವಾಗಿ...

ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ...

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...