- ಬೇಲೂರು ರಥೋತ್ಸವದ ವೇಳೆ ಕುರಾನ್ ಪಠಣ ವಿರೋಧಿಸಿ ಪ್ರತಿಭಟನೆ
- ಘೋಷಣೆ ಕೂಗಿದ ಮುಸ್ಲಿಂ ಯುವಕನನ್ನು ವಶಕ್ಕೆ ಪಡೆದ ಪೊಲೀಸರು
ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡಬಾರದು ಎಂದು ಆಗ್ರಹಿಸಿ ಹಿಂದುತ್ವವಾದಿ ಕೋಮು ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಮುಸ್ಲಿಂ ಯುವಕನೊಬ್ಬ ‘ಕುರಾನ್ ಜಿಂದಾಬಾದ್’ ಎಂದು ಘೋಷಣೆ ಕೋಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.
ಹಾಸನ ಜಿಲ್ಲೆ ಬೇಲೂರಿನಲ್ಲಿ ಚನ್ನಕೇಶವಸ್ವಾಮಿ ರಥೋತ್ಸವ ಏಪ್ರಿಲ್ 4ರಂದು ನಡೆಯಲಿದೆ. ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡುವುದು ವಾಡಿಕೆಯಾಗಿದೆ. ಆದರೆ, ಈ ಬಾರಿಯ ರಥೋತ್ಸವದಲ್ಲಿ ಕುರಾನ್ ಪಠಣ ಮಾಡಬಾರದೆಂದು ನಾನಾ ಹಿಂದುತ್ವವಾದಿ ಕೋಮು ಸಂಘಟನೆಗಳು ಬೇಲೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿವೆ.
ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಿಂದ ಚನ್ನಕೇಶವಸ್ವಾಮಿ ದೇವಾಲಯದ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಹಿಂದುತ್ವವಾದಿ ಕೋಮು ಕಾರ್ಯಕರ್ತರು ಘೋಷಣೆ ಕೂಗುತ್ತಾ ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಮುಸ್ಲಿಂ ಯುವಕನೊಬ್ಬ ‘ಕುರಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾನೆ.
ಇದರಿಂದ ಉದ್ರಿಕ್ತಗೊಂಡ ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಮುಸ್ಲಿಂ ಯುವಕನನ್ನು ಅಟ್ಟಾಡಿಸಿ ಹಲ್ಲೆ ನಡೆಸಲು ಮುಗಿ ಬಿದ್ದಿದ್ದಾರೆ. ತಕ್ಷಣವೆ ಎಚ್ಚೆತ್ತ ಪೊಲೀಸರು ಅನಾಹುತ ತಡೆದು, ಮುಸ್ಲಿಂ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಿಂದ ಕರೆದೊಯ್ದಿದ್ದಾರೆ.

ಇತ್ತೀಚೆಗೆ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಎನ್ ರಮೇಶ್ ಬರೆದಿದ್ದ ‘ಬೇಲೂರಿನ ಶ್ರೀಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ’ ಎನ್ನುವ ಪುಸ್ತಕವನ್ನು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಬಿಡುಗಡೆ ಮಾಡಿದ್ದರು. ಈ ಪುಸ್ತಕದಲ್ಲಿ ‘1932ರಲ್ಲಿ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡುವ ಸಂಪ್ರದಾಯವನ್ನು ದೇವಾಲಯದ ಮಾರ್ಗಸೂಚಿಗಳಲ್ಲಿ ಸೇರಿಸುವ ಮೂಲಕ ಪರಂಪರೆಗೆ ಅಪಚಾರ ಎಸಗಲಾಗಿದೆ’ ಎಂದು ವಿಡಂಬನೆ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಅಲೆಮಾರಿ ಸಮುದಾಯಗಳ ಮೀಸಲಾತಿ ಪ್ರಮಾಣ ಶೇ.2ರಷ್ಟು...
ಬಳಿಕ ‘ಬೇಲೂರಿನ ಶ್ರೀಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ’ ಎಂಬ ಪುಸ್ತಕ ಮತ್ತು ಕೆಲವು ದಾಖಲೆಗಳನ್ನು ಮುಂದಿಟ್ಟು ರಥೋತ್ಸವದ ವೇಳೆ ಕುರಾನ್ ಪಠಣ ನಿಲ್ಲಬೇಕು ಎಂದು ಹಿಂದು ಸಂಘಟನೆಗಳ ಮುಖಂಡ ಇತ್ತೀಚೆಗೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು.
ಕಳೆದ ವರ್ಷ ಬೇಲೂರು ಜಾತ್ರೆ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ವಿವಾದ ಸೃಷ್ಟಿಸಲಾಗಿತ್ತು. ಈ ವರ್ಷ ಕುರಾನ್ ಪಠಣ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿದೆ. ಶಾಂತಿಯ ನೆಲೆಯಾಗಿದ್ದ ಬೇಲೂರಿನಲ್ಲಿ ಈಗ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಹಿಂದುತ್ವವಾದಿಗಳು ಎಬ್ಬಿಸಿರುವ ವಿವಾದವು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲಿರುವ ಬೇಲೂರು ಚನ್ನಕೇಶವಸ್ವಾಮಿ ದೇವಾಲಯಕ್ಕೆ ಕಪ್ಪುಚುಕ್ಕಿ ಆಗುವ ಸಾಧ್ಯತೆ ಇದೆ.