ಮುಂಗಾರು ವಿಳಂಬ: ರಾಜ್ಯದ 11 ಜಲಾಶಯಗಳು ಖಾಲಿ!

Date:

  • ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಆತಂಕ
  • ತಮಿಳುನಾಡಿನ ಜೊತೆ ಜಲಸಂಘರ್ಷ ಸೃಷ್ಟಿಯ ಭೀತಿ

ಮುಂಗಾರು ಮಳೆ ವಿಳಂಬವಾಗಿರುವುದರಿಂದ ರಾಜ್ಯದ 11 ಜಲಾಶಯಗಳು ಬರಿದಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಜತೆಗೆ ಜಲಸಂಘರ್ಷ ಆರಂಭವಾಗುವ ಆತಂಕ ಎದುರಾಗಿದೆ.

ತುಂಗಭದ್ರಾ, ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟ 10 ವರ್ಷದಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೆ, ಆಲಮಟ್ಟಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 7 ವರ್ಷ ಹಾಗೂ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್‌)ದ ನೀರಿನ ಮಟ್ಟ 5 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಕೆಆರ್‌ಎಸ್‌ನಲ್ಲಿ ಕೇವಲ 3 ಟಿಎಂಸಿಯಷ್ಟು ನೀರು ಬಳಕೆಗೆ ಲಭ್ಯವಿದೆ. ಇದರ ಜೊತೆಗೆ ಜೂನ್‌ ಕೋಟಾದಡಿ ತಮಿಳುನಾಡಿಗೆ 21 ಟಿಎಂಸಿ ನೀರು ಹರಿಸಬೇಕಿದೆ. ಮಳೆ ಮತ್ತಷ್ಟು ವಿಳಂಬವಾದರೆ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವುದರ ಜತೆಗೆ ತಮಿಳುನಾಡಿನ ಜೊತೆ ಜಲಸಂಘರ್ಷವೂ ಸೃಷ್ಟಿಯಾಗುವ ಭೀತಿ ಎದುರಾಗಿದೆ.

ಕಬಿನಿ, ಹಾರಂಗಿ, ಬಸವಸಾಗರ, ಘಟಪ್ರಭಾ, ಮಲಪ್ರಭಾ, ವಾಣಿವಿಲಾಸ ಸಾಗರಗಳಲ್ಲಿಯೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ.

ಹಾರಂಗಿ ಜಲಾಶಯ : ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿಯೂ ನೀರಿನ ಮಟ್ಟ 2,819 (ಗರಿಷ್ಠ 2859) ಅಡಿಗಳಿಗೆ ಕುಸಿದಿದೆ. 6 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 5 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ.

ಕಬಿನಿ ಜಾಶಯ : ಮೈಸೂರು ಜಿಲ್ಲೆಯಲ್ಲಿರುವ ಕಬಿನಿ ಜಲಾಶಯದ ಗರಿಷ್ಟ ಮಟ್ಟ 2284 ಅಡಿಗಳಷ್ಟಿದ್ದು, ಪ್ರಸ್ತುತ ನೀರಿನ ಮಟ್ಟ 2250 ಅಡಿಗಳಿಗೆ ಕುಸಿದಿದೆ. 19 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 4 ಟಿಎಂಸಿಯಷ್ಟು ನೀರಿದೆ.

ಕೆಆರ್‌ಎಸ್‌ ಜಲಾಶಯ : ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 81 (ಗರಿಷ್ಠ 124) ಅಡಿಗಳಿಗೆ ಕುಸಿದಿದ್ದು, ಇದು ಕಳೆದ 5 ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟದ್ದಾಗಿದೆ. 49 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 11 ಟಿಎಂಸಿ ನೀರಿದ್ದು, ಆ ಪೈಕಿ 3 ಟಿಎಂಸಿಯಷ್ಟು ನೀರು ಮಾತ್ರ ಬಳಕೆಗೆ ಸಿಗಲಿದೆ. ‌

ಹೇಮಾವತಿ ಜಲಾಶಯ : ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 37.10 ಟಿಎಂಸಿಯಷ್ಟಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ 18.757 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಪ್ರಸ್ತುತ 10.732 ಟಿಎಂಸಿ ನೀರು ಮಾತ್ರವೇ ಬಳಕೆಗೆ ಲಭ್ಯವಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 8 ಟಿಎಂಸಿ ನೀರು ಕೊರತೆಯಾಗಿದೆ. ಕಳೆದ ವರ್ಷ ಈ ಹೊತ್ತಿಗೆ 497 ಕ್ಯುಸೆಕ್‌ ಇದ್ದ ಒಳಹರಿವು ಈ ಬಾರಿ ಕೇವಲ 60 ಕ್ಯುಸೆಕ್‌ ಇದೆ. ಹೊರ ಹರಿವು 400 ಕ್ಯುಸೆಕ್‌ ಇದೆ.

ವಾಣಿವಿಲಾಸ ಜಲಾಶಯ : ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 124 (ಗರಿಷ್ಠ 130) ಅಡಿಗಳಿಗೆ ಕುಸಿದಿದೆ. 30 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 19 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.

ಲಿಂಗನಮಕ್ಕಿ ಜಲಾಶಯ : ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ಗರಿಷ್ಟ ನೀರಿನ ಮಟ್ಟ 1818 ಅಡಿಗಳಷ್ಟಿದ್ದು, 1748 ಅಡಿಗೆ ಕುಸಿದಿದೆ. 151 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 16 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ. ಇದು 10 ವರ್ಷಗಳಲ್ಲೇ ಕನಿಷ್ಠ ಮಟ್ಟದ್ದಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ 1756 ಅಡಿಗಳಷ್ಟು ನೀರಿದ್ದು, 24 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು.

ಸುಪಾ ಜಲಾಶಯ : ಉತ್ತರ ಕನ್ನಡ ಜಿಲ್ಲೆಯ ಸುಪಾ ಜಲಾಶಯದಲ್ಲಿ ನೀರಿನ ಮಟ್ಟ ಕಳೆದ ಬಾರಿಗಿಂತ ಅಧಿಕವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ519 (ಗರಿಷ್ಠ 564 ಮೀ.) ಮೀಟರ್‌ಗಳಷ್ಟಿತ್ತು. ಈ ಬಾರಿ ನೀರಿನ ಮಟ್ಟ 529 ಮೀಟರ್‌ಗಳಷ್ಟಿದೆ. 40 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 27 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.

ಬರಿದಾದ ತುಂಗಭದ್ರೆ : ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಕೇವಲ 5 ಟಿಎಂಸಿ (ಗರಿಷ್ಠ 105 ಟಿಎಂಸಿ) ನೀರಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿಯೇ ಅತಿ ಕನಿಷ್ಠ ಮಟ್ಟ ಇದಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕವಿದೆ. ಕಳೆದ ಬಾರಿ ಈ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿಯಷ್ಟು ನೀರಿತ್ತು. ಈ ಬಾರಿ 5 ಟಿಎಂಸಿಗೆ ಇಳಿದಿದೆ.

ಘಟಪ್ರಭಾ, ಮಲಪ್ರಭಾ ಜಲಾಶಯ : ಬೆಳಗಾವಿ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಮಲಪ್ರಭಾ ಮತ್ತು ಘಟಪ್ರಭಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕುಸಿದಿದೆ. ಮಲಪ್ರಭಾ ಜಲಾಶಯದ ನೀರಿನ ಮಟ್ಟ2046 (ಗರಿಷ್ಠ 2079) ಅಡಿಗಳಿಗೆ ಕುಸಿದಿದ್ದರೆ, ಘಟಪ್ರಭಾ ಜಲಾಶಯದ ನೀರಿನ ಮಟ್ಟ 2064 (ಗರಿಷ್ಠ 2175) ಅಡಿಗಳಿಗೆ ಇಳಿದಿದೆ.

ಬರಿದಾಗಿರುವ ಮಲಪ್ರಭಾ ನದಿಯ ಒಡಲು

ಬಸವಸಾಗರ ಜಲಾಶಯ : ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ 15 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ.

ಆಲಮಟ್ಟಿ ಜಲಾಶಯ : ವಿಜಯಪುರ ಜಿಲ್ಲೆಯ ಆಲಮಟ್ಟಿ ಜಳಾಶಯದ ನೀರಿನ ಮಟ್ಟ 507 (ಗರಿಷ್ಠ 519) ಮೀಟರ್‌ಗಳಿಗೆ ಇಳಿದಿದ್ದು, ಇದು ಕಳೆದ 7 ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟವಾಗಿದೆ. 123 ಟಿಎಂಸಿ ನೀರು ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 3 ಟಿಎಂಸಿಗಳಷ್ಟು ನೀರಿನ ಸಂಗ್ರಹವಿದೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಕೈಕೊಟ್ಟ ಮುಂಗಾರು; ಆಗಸದತ್ತ ಮುಖ ಮಾಡುತ್ತಿರುವ ರೈತರು

ಕ್ರ.ಸಂಜಿಲ್ಲೆಗಳುಜಲಾಶಯಗಳುಟಿಎಂಸಿ ಸಾಮರ್ಥ್ಯದ ನೀರಿನ ಮಟ್ಟ2022ರ ನೀರಿನ
ಮಟ್ಟ
2023ರಲ್ಲಿ ನೀರಿನ ಮಟ್ಟ
1ಕೊಡಗುಹಾರಂಗಿ6 ಟಿಎಂಸಿ5 ಟಿಎಂಸಿ
2ಮೈಸೂರುಕಬಿನಿ19 ಟಿಎಂಸಿ4 ಟಿಎಂಸಿ
3ಮಂಡ್ಯಕೆಆರ್‌ಎಸ್49‌ ಟಿಎಂಸಿ11 ಟಿಎಂಸಿ, ಇದರಲ್ಲಿ
3ರಷ್ಟು ಮಾತ್ರ ಬಳಕೆಗೆ ಯೋಗ್ಯ
4ಹಾಸನಹೇಮಾವತಿ37.103 ಟಿಎಂಸಿ18.757 ಟಿಎಂಸಿ 10.732 ಟಿಎಂಸಿ
5ಚಿತ್ರದುರ್ಗವಾಣಿವಿಲಾಸ30 ಟಿಎಂಸಿ19 ಟಿಎಂಸಿ
6ಶಿವಮೊಗ್ಗಲಿಂಗನಮಕ್ಕಿ151 ಟಿಎಂಸಿ24 ಟಿಎಂಸಿ16 ಟಿಎಂಸಿ
7ಉತ್ತರ ಕನ್ನಡಸುಪಾ40 ಟಿಎಂಸಿ / 564 ಮೀ519 ಮೀ.27 ಟಿಎಂಸಿ / 529 ಮೀ.
8ಕಲ್ಯಾಣ ಕರ್ನಾಟಕದ
ಜಿಲ್ಲೆಗಳು
ತುಂಗಭದ್ರಾ105 ಟಿಎಂಸಿ30 ಟಿಎಂಸಿ5 ಟಿಎಂಸಿ
9ಬೆಳಗಾವಿಮಲಪ್ರಭಾ2079 ಅಡಿ
ಸಾಮರ್ಥ್ಯ
2046 ಅಡಿಗೆ ಕುಸಿತ
ಘಟಪ್ರಭಾ2175 ಅಡಿ2064 ಅಡಿಗೆ ಕುಸಿತ
10ಯಾದಗಿರಿ ಬಸವಸಾಗರ15 ಟಿಎಂಸಿ
11ವಿಜಯಪುರಆಲಮಟ್ಟಿ123 ಟಿಎಂಸಿ3 ಟಿಎಂಸಿ
ರಾಜ್ಯದ ಕೆಲವು ಜಲಾಶಯಗಳ ನೀರಿನ‌ ಸಾಮರ್ಥ್ಯ ಮತ್ತು ಇಳಿಕೆ ಪಟ್ಟಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಂದಾಯ ಕರ್ಮಕಾಂಡ -3 | ಲಂಚವಿಲ್ಲದೆ ಈ ಇಲಾಖೆಯಲ್ಲಿ ಒಂದು ಕಡತವೂ ಚಲಿಸುವುದಿಲ್ಲ!

'ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಉನ್ನತ ಶ್ರೇಣಿಯಿಂದ ಕೆಳಹಂತದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ....

ಕಾವೇರಿ ವಿವಾದ | ಕರ್ನಾಟಕ ಬಂದ್‌ಗೆ ಮುಂದಾದ ವಾಟಾಳ್‌ ನಾಗರಾಜ್‌

ಸೆ.26ರಂದು ನಡೆಯುವ ಬಂದ್​ಗೆ ನನ್ನ ವಿರೋಧವಿಲ್ಲ ಸೋಮವಾರ ಕರ್ನಾಟಕ ಬಂದ್‌ ದಿನಾಂಕ ಘೋಷಣೆ ತಮಿಳುನಾಡಿಗೆ...

28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರಾಗಿ ಸಚಿವರ ನೇಮಕ; ಎಂ ಬಿ ಪಾಟೀಲ್‌, ಜಾರ್ಜ್‌ಗಿಲ್ಲ ಜವಾಬ್ದಾರಿ

ಸಚಿವರ ತವರು ಜಿಲ್ಲೆ ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳಿಗೆ ನೇಮಕ ಸಂಭಾವ್ಯ ಅಭ್ಯರ್ಥಿಗಳ...