ಹಲವು ಬಾರಿ ಸಚಿವರಾಗಿ ಉತ್ತಮ ಆಡಳಿತ ನೀಡಿರುವ ಮತ್ತು ಮಾದಿಗ ಸಮುದಾಯದ ಹಿರಿಯ ರಾಜಕಾರಣಿ ಆರ್.ಬಿ ತಿಮ್ಮಾಪೂರ ಮತ್ತು ಕೂಡ್ಲಿಗಿ ಶಾಸಕ ಡಾ. ಎನ್.ಟಿ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಎಸ್‌ಸಿ ಮಹಿಳಾ ಘಟಕದ ವಿಜಯನಗರ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಿ ರಾಜಣ್ಣ ಗುಡೆಕೋಟೆ ಒತ್ತಾಯಿಸಿದರು.
ಹೊಸಪೇಟೆಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, “ಆರ್.ಬಿ ತಿಮ್ಮಾಪೂರ ಅವರು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ನಾನಾ ಖಾತೆಗಳ ಜವಾಬ್ದಾರಿ ನಿರ್ವಹಿಸಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಎಡಗೈ ಸಮುದಾಯದ ಪ್ರಭಾವಿ ಮುಖಂಡರಾಗಿದ್ದಾರೆ. ಈ ಬಾರಿ ಸಚಿವ ಸ್ಥಾನ ನೀಡಬೇಕು. ಆ ಮೂಲಕ ಮಾದಿಗ ಸಮುದಾಯಕ್ಕೆ ಅವಕಾಶ ಒದಗಿಸಬೇಕು” ಎಂದು ಆಗ್ರಹಿಸಿದರು.
“ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಅಭೂತಪೂರ್ವ ಗೆಲುವಿನೊಂದಿಗೆ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತಂದುಕೊಟ್ಟಿರುವ ಎನ್.ಟಿ ಶ್ರೀನಿವಾಸ್ ಅವರಿಗೆ ವಿಜಯನಗರ ಜಿಲ್ಲೆಯ ಪ್ರಾತಿನಿಧ್ಯದಲ್ಲಿ ಸಚಿವಸ್ಥಾನ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಬಿರುಗಾಳಿ ಸಹಿತ ಭಾರೀ ಮಳೆ; ಮರ ಬಿದ್ದು ಸ್ಕೂಟಿ ಸವಾರ ಸಾವು
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್‌ಟಿ ಘಟಕದ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಹಾಗೂ ವಕೀಲ ಡಿ ಎಚ್ ದುರುಗೇಶ್, ಎನ್ಎಸ್‌ಯುಐ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಕೆ ತಿಪ್ಪೇಸ್ವಾಮಿ, ಕಾಂಗ್ರೆಸ್ ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ಬಿ ನಾಗರಾಜ, ಗ್ರಾಮ ಪಂಚಾಯಿತಿ ಸದಸ್ಯ ಬಿ ಸೋಮಶೇಖರ, ಮುಖಂಡರಾದ ಮನೋಹರ ಹೆಗಡೆ, ಪ್ರಶಾಂತ್ ಜಿಲ್ಲೆಯ ಹೆಗ್ಗಾಳ್, ವೆಂಕಟೇಶ್ ಸೂಲದಹಳ್ಳಿ, ಪ್ರಕಾಶ್ ಹೆಗ್ದಾಳ್, ಜೆ ರವಿಕುಮಾರ್, ಹನುಮಂತ ಗುಡೇಕೋಟೆ, ಓಬಳಶೇಟ್ಟಿಹಳ್ಳಿ ಕೊಟ್ರೇಶ್ ಇದ್ದರು.