- ‘ಬಿಜೆಪಿಯಲ್ಲಿ ಟಿಕೆಟ್ ಮಾರಾಟದ ಪದ್ಧತಿಯಿಲ್ಲ’
- ‘ಚೈತ್ರಾ ಕೇಸ್ಗೂ ಬಿಜೆಪಿಗೂ ಸಂಬಂಧ ಇಲ್ಲ’
ಬಿಜೆಪಿಯಲ್ಲಿ ಟಿಕೆಟ್ ಮಾರಾಟದ ಪದ್ಧತಿಯಿಲ್ಲ. ನಮ್ಮ ಪಕ್ಷದಲ್ಲಿದ್ದ ಜಗದೀಶ ಶೆಟ್ಟರ ಅವರು ಹೇಗೆ ಟಿಕೆಟ್ ತೆಗೆದುಕೊಂಡಿದ್ದರು, ಹೇಗೆ ಟಿಕೆಟ್ ಕೊಟ್ಟಿದ್ದರು ಎಂಬುದು ಗೊತ್ತಿಲ್ಲವೇ? ಎಂದು ಶೆಟ್ಟರ ವಿರುದ್ಧ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹರಿಹಾಯ್ದರು.
‘ಬಿಜೆಪಿಯವರು ಕೆಲವು ಕಡೆ ಹಣ ಪಡೆದು ಟಿಕೆಟ್ ಕೊಟ್ಟಿದ್ದಾರೆ ಎಂಬ ಊಹಾಪೋಹಗಳಿದ್ದು, ಇದಕ್ಕೆ ಬಿಜೆಪಿಯವರೇ ಉತ್ತರಿಸಬೇಕು’ ಎಂದು ಹೇಳಿದ್ದ ಶೆಟ್ಟರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದರು.
‘ಕಾಂಗ್ರೆಸ್ನಲ್ಲಿ ಜಗದೀಶ ಶೆಟ್ಟರ ಅವರನ್ನು ಗುರುತಿಸುತ್ತಿಲ್ಲ. ಅದಕ್ಕೆ ಅವರಿಗೆ ಕಷ್ಟ ಆಗಿದೆ. ಹೀಗಾಗಿ ಅವರು ಮಾಧ್ಯಮಗಳಿಗೆ ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ನಿದ್ದೆಯಿಂದ ಎದ್ದಿರುವ ನ್ಯೂಸ್ ಚಾನೆಲ್ ಒಕ್ಕೂಟ ಮರ್ಯಾದೆ ಉಳಿಸಿಕೊಳ್ಳಲಿ
ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಶೆಟ್ಟರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಬಿಜೆಪಿ ಅತಿ ಹೆಚ್ಚು ಬಾರಿ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ಶೆಟ್ಟರ ಅವರಿಗೆ 30 ವರ್ಷ ಬಿಜೆಪಿ ಎಲ್ಲ ಕೊಟ್ಟಿದೆ. ನಿಮಗೆ ಅನ್ಯಾಯವಾಗಿದ್ದರೆ, ತಾಕತ್ ಇದ್ದರೆ ನೀವು ಸರಿಮಾಡಿಕೊಳ್ಳಿ. ರಾಜಕೀಯಕ್ಕೆ ಸಮುದಾಯವನ್ನು ಎಳೆದು ತರಬೇಡಿ’ ಎಂದು ಎಚ್ಚರಿಸಿದರು.
ಚೈತ್ರಾ ಕುಂದಾಪುರ ವಿಚಾರಕ್ಕೆ ಹೇಳಿಕೆ ನೀಡಿದ ಟೆಂಗಿನಕಾಯಿ, ‘ಬಿಜೆಪಿಯಲ್ಲಿ ಟಿಕೆಟ್ ಮಾರಾಟ ಪದ್ಧತಿ ಇಲ್ಲ. ಚೈತ್ರಾ ಕುಂದಾಪುರ ಕೇಸ್ಗೂ ಬಿಜೆಪಿಗೂ ಯಾವ ಸಂಬಂಧ ಇಲ್ಲ. ಕೆಲವರು ತಮ್ಮ ಚಟಕ್ಕೆ ಈ ರೀತಿ ಮಾಡಿದರೆ ಅದಕ್ಕೆ ಬಿಜೆಪಿ ಉತ್ತರ ನೀಡುವುದಿಲ್ಲ. ಈ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.