- ಕ್ಷೇತ್ರದ ಜನರಲ್ಲಿ ವಿಶ್ವಾಸ ಮೂಡಿಸಲು ಪಥಸಂಚಲನ
- ಪ್ಯಾರಾ ಮಿಲಿಟರಿ ಜೊತೆ ಪೊಲೀಸ್, ಗೃಹರಕ್ಷಕ ಸಿಬ್ಬಂದಿ ಭಾಗಿ
ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಆಗಿದೆ. ಚುನಾವಣೆಗಳ ಸಮಯದಲ್ಲಿ ನಡೆಯುವ ಗಲಾಟೆಗಳ ಬಗ್ಗೆ ಜನರ ಆತಂಕ ದೂರ ಮಾಡಿ, ಶಾಂತಿಯುತ ಮತದಾನಕ್ಕಾಗಿ ಪ್ಯಾರಾ ಮಿಲಿಟರಿ ಪಡೆ, ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಸಕಲೇಶಪುರ ಪಟ್ಟಣದಲ್ಲಿ ಗುರುವಾರ ಪಥಸಂಚಲನ ನಡೆಸಿದರು.
ತಲಾ 48 ಮಂದಿಯನ್ನು ಹೊಂದಿರುವ ಮೂರು ಪ್ಯಾರಾ ಮಿಲಿಟರಿ ಪಡೆಗಳು ಈಗಾಗಲೇ ಪಟ್ಟಣಕ್ಕೆ ಬಂದಿವೆ. ಇದೇ ತಂಡದೊಂದಿಗೆ ಕೆಎಸ್‌ಆರ್‌ಪಿ, ಡಿಆರ್, ಸಿವಿಲ್ ಪೊಲೀಸರು ಸಹ ಗುರುವಾರ ನಗರದಲ್ಲಿ ಪಥ ಸಂಚಲನ ಮಾಡಿದ್ದಾರೆ.
ನೂರಾರು ಭದ್ರತಾ ಸಿಬ್ಬಂದಿ ಸಶಸ್ತ್ರಗಳೊಂದಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನವು ಚಂಪಕನಗರ ವೃತ್ತ, ಹೊಸ ಬಸ್ ನಿಲ್ದಾಣ, ಅಜಾದ್ ರಸ್ತೆ, ಅಶೋಕ್ ರಸ್ತೆ ಮೂಲಕ ಕುಶಾಲನಗರದವರೆಗೂ ನಡೆಯಿತು.

ಬಿ ಎಂ ರಸ್ತೆಯ ಹಳೆ ಬಸ್ ನಿಲ್ದಾಣ ಸಮೀಪ ರಸ್ತೆಯಲ್ಲಿ ಜನರು ಭದ್ರತ ಸಿಬ್ಬಂದಿ ಮೇಲೆ ಹೂವು ಹಾಕಿ ಸ್ವಾಗತಿಸಿದರು. ಕೆಲವರು ಅವರಿಗೆ ಗೌರವ ಪೂರ್ವಕವಾಗಿ ಕೈ ಮುಗಿದರೆ, ಮಕ್ಕಳು ಕೈಕುಲುಕಿ ಸ್ವಾಗತಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ತಪ್ಪಿದ ಟಿಕೆಟ್; ಬಿಕ್ಕಿಬಿಕ್ಕಿ ಅತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
ಪಥಸಂಚಲನದಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್, ಸಹಾಯಕ ಪೊಲೀಸ್ ಅಧೀಕ್ಷಕ ಎಚ್ ಎನ್ ಮಿಥುನ್ ರೈ, ವೃತ್ತ ನಿರೀಕ್ಷಕರಾದ ಚೈತನ್ಯ, ಪಿ ಕೆ ರಾಜು, ಪಿಎಸ್ಐ ಗಳಾದ ಬಸವರಾಜ್, ನವೀನ್ ಇದ್ದರು.