ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮತಗಟ್ಟೆ ಸಂಖ್ಯೆ 3ರಲ್ಲಿ ಇವಿಎಂ ಸಮಸ್ಯೆ ಎದುರಾಗಿದ್ದು, ಮತದಾರರಿಗೆ ಮತ ಚಲಾಯಿಸಲು ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವರು ಮತ ಚಲಾಯಿಸದೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.
ಮತಗಟ್ಟೆ ಕ್ರಮ ಸಂಖ್ಯೆ 3ರಲ್ಲಿ 2018ರ ಚುನಾವಣೆಯಲ್ಲಿ ಎರಡು ಬೂತ್‌ಗಳನ್ನು ರಚಿಸಲಾಗಿತ್ತು. ಈ ಬಾರಿ ಕೇವಲ ಒಂದೇ ಬೂತ್ ಇದ್ದು, ಅದೂ ಕೂಡ ಪದೇ ಪದೆ ಕೈ ಕೊಡುತ್ತಿದ್ದರಿಂದ ಬಹುತೇಕ ಮತದಾರರು ಮತ ಚಲಾಯಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಮತದಾರರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬೂತ್ ಸಂಖ್ಯೆ 3ರಲ್ಲಿ ಪ್ರತಿಬಾರಿ ಎರಡು ಮತಗಟ್ಟೆಗಳಿರುತ್ತಿದ್ದವು. ಪ್ರಸ್ತುತ ಚುನಾವಣೆಯಲ್ಲಿ ಒಂದೇ ಬೂತ್‌ನಲ್ಲಿ ಮತ ಚಲಾಯಿಸುವಂತೆ ಮಾಡಿದ್ದು ತುಂಬಾ ತೊಂದರೆಯಾಯಿತು. ಮತದಾರರ ಸಂಖ್ಯೆ ಹೆಚ್ಚಿದ್ದ ಕಾರಣ ಸುಮಾರು ಹೊತ್ತಿನಿಂದ ಕಾದು ನಿಂತ ಮತದಾರರು ಮತ ಚಲಾಯಿಸದೇ ಹೊರಟರು” ಎಂದು ತಿಳಿಸಿದರು.

ಇವಿಎಂ ಸಮಸ್ಯೆಯಿಂದ ಮತದಾನ ಪ್ರಕ್ರಿಯೆಗಳು ವೇಗವಾಗಿ ನಡೆಯದ ಕಾರಣ ದೂರದಿಂದ ಬಂದಿದ್ದವರು ಮತ ಚಲಾಯಿಸದೆ ಹೊರಟರು. ಚುನಾವಣೆಗೂ ಮುನ್ನವೇ ಚುನಾವಣಾಧಿಕಾರಿಗಳು ಅವೆಲ್ಲವನ್ನು ಗಮನಿಸಿಕೊಂಡು ಮತದಾನಕ್ಕೆ ಸರಾಗ ಮಾಡಿಕೊಟ್ಟು ಸಹಕರಿಸಬೇಕು. ಮುಂದಿನ ಚುನಾವಣೆಯಲ್ಲಾದರೂ ಮುಂಜಾಗೃತ ಕ್ರಮ ವಹಿಸಬೇಕು” ಎಂದು ಮತದಾರು ತಿಳಿಸಿದರು.

“ಮತದಾನ ಮಾಡಲು 200 ರಿಂದ 300 ಮಂದಿ ಸಾಲಿನಲ್ಲಿ ನಿಂತಿದ್ದರು. ತುಂಬಾ ಜನ ಇದ್ದಾರೆ, ವೇಗವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ ಅಂದುಕೊಂಡು ಕೆಲವೊಬ್ಬರು ನಿಂತು ಆಯಾಸಗೊಂಡು ಹೊರಗಡೆ ಹೋಗಿ ಕುಳಿತುಕೊಂಡಿದ್ದರು. 6 ಗಂಟೆ ಆಗುತ್ತಲೇ ಗೇಟ್ ಬಂದ್ ಮಾಡಿದ ಪೊಲೀಸ್ ಸಿಬ್ಬಂದಿಗಳು ಮತದಾರರಿಗೆ ಒಳಗೆ ಪ್ರವೇಶ ನೀಡಲಿಲ್ಲ ನಮ್ಮ ನೆಚ್ಚಿನ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ” ಎಂದು ಮತದಾರರು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಜಿಲ್ಲೆಯಲ್ಲಿ ಶೇ.78ರಷ್ಟು ಮತದಾನ: ಜಿಲ್ಲಾಧಿಕಾರಿ
“ಮತ ನೀಡುವಾಗ ಮತದಾರರಿಗೆ ಸಮಸ್ಯೆ ಎದುರಾಗಿದೆ. ಮತ ನೀಡಿ ಮೂರ್ನಾಲ್ಕು ನಿಮಿಷ ಆದರೂ ನಾವು ಯಾರಿಗೆ ಮತ ನೀಡಿದ್ದೇವೆ ಎನ್ನುವ ಸ್ಪಷ್ಟತೆ ನಮಗೆ ಸಿಗಲ್ಲಿಲ. ಚುನಾವಣಾಧಿಕಾರಿಗಳು ಸರ್ವರ್ ಸಮಸ್ಯೆ ನೆಪ ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.