ಉತ್ತರ ಕರ್ನಾಟಕದ ರೈತರ ಸಾಂಸ್ಕೃತಿಕ ವೈಶಿಷ್ಟ್ಯತೆ, ವೈಭವತೆ ಮೆರೆಯುವುದು ಆ ನೆಲಮೂಲ ಸಂಸ್ಕೃತಿಯಿಂದಲೇ.., ಅಂತಹ ಸಂಸ್ಕೃತಿಯನ್ನು ಒಳಗೊಂಡ ಜನಪದರ ಹಬ್ಬವೇ ಕಾರಹುಣ್ಣಿಮೆ ಹಬ್ಬ. ಈ ಹಬ್ಬ ಬಂದಿತೆಂದರೆ ಬೆಳದಿಂಗಳು ಚೆಲ್ಲಿದ ಹಾಲಿನಂತೆ ರೈತರಲ್ಲಿ ಸಂತಸ ಮನೆ ಮಾಡಿರುತ್ತದೆ.
ಬೇಂದ್ರೆ ಅಜ್ಜ ಮೇಘದೂತ ಕವನದಲ್ಲಿ ಕಾರ ಹುಣ್ಣುಮೆ ಕುರಿತು ಹೀಗೆ ಹೇಳಿದ್ದಾರೆ, “ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ”
ಬಿರು ಬಿಸಿಲು ಕಳೆದು ಮುಂಗಾರು ಆರಂಭವಾಗುವ ಸಮಯಕ್ಕೆ, ರೈತ ಮುಂಗಾರಿ ಬಿತ್ತನೆಗೆ ತನ್ನ ಹೊಲವನ್ನು ಹದಗೊಳಿಸಲು ತನ್ನ ಎತ್ತುಗಳಿಗೆ ಪುರುಸೊತ್ತಿಲ್ಲದೇ ರೆಂಟಿ ಹೊಡಿಯೋದು, ಹರಗೋದು ಆದ ನಂತರ ಎತ್ತುಗಳಿಗೆ ಆರಾಮ್ ಇರಲು ಬಿಡುತ್ತಾನೆ. ತಾ ಕಸ ಕಡ್ಡಿ ಆರಿಸಿ ಮಳೆಗಾಗಿ ಮುಗಿಲಿಗೆ ಆಸೆಯಿಂದ ಕಣ್ಣಾಯಿಸುತ್ತಾನೆ.
ಆಗ ಈ ಕಾರುಣ್ಣಿಮೆ ಹಬ್ಬ ಬರ್ತೈತಿ. ಆ ದಿನ ರೈತರು ಬೆಳ್ ಬೆಳಿಗ್ಗೆ ಎತ್ತುಗಳನ್ನ ಊರ ಹಳ್ಳಕ್ಕ ಕರ್ಕೊಂಡು ಹೋಗಿ ಸ್ವಚ್ಛಗ ಜಳಕ ಮಾಡಿಸಿ ಮನಿಗೆ ಬರುತ್ತಲೇ, ಹೆಣ್ಮಕ್ಕಳು ಹೋಳಗಿ ತಯಾರು ಮಾಡಿರ್ತಾರ. ಹೋಳಗಿ ತುಪ್ಪ ಗಡದ್ದಾಗಿ ಹೊಡದ ನಂತರ ಎತ್ತಿನ ಕೊಂಬುಗಳಿಗೆ ಹರಸಿನೆಣ್ಣಿ ಹಚ್ಚಿ, ಹಣೆಗೆ ಬಾಸಿಂಗ, ಹಣೆಪಟ್ಟಿ, ಕೊಂಬುಗಳಿಗೆ ಕೋಡಬಳಿ ಹಾಕಿ, ಜೂಲಾ ಕಟ್ಟಿ, ಎತ್ತಿನ ಮೈಮೇಲೆ ಚಿತ್ತಾರದ ಹೊದಿಕೆ ಹೊಚ್ಚಿ, ಕಾಲಿಗೆ ಗೆಜ್ಜಿ ಕಟ್ಟಿ, ಬಣ್ಣಗಳಿಂದ ಕಂಗೊಳಿಸುವಂತೆ ಅಲಂಕಾರ ಮಾಡುತ್ತಾರೆ.

ಸಾಯಂಕಾಲ ಊರ ಅಗಸಿ ಕಲ್ಲ, ಆಕ ಕಡೆ ಈ ಕಡೆ ಓಣಿ ಉದ್ದಕ್ಕೂ ಸಾವಿರಾರು ಜನರು ಎತ್ತುಗಳನ್ನ ನೋಡಾಕ ನಿಂತಿರುತ್ತಾರೆ. ಆ ಅಗಸಿ ಕಲ್ಲ ಎತ್ತರದ ಮೇಲೆ ಸೆಣಬಿಗೆ ಬೇವಿನ ಎಲೆಗಳನ್ನ ಸಾಲಿಡ್ದ ಕಟ್ಟಿ, ನಟ್ಟ ನಡುವೆ ಕೊಬ್ಬರಿ ಬೆಲ್ಲ ಕಟ್ಟಿ ಎಳೆ ಬಿಟ್ಟು, ಆ ಕಡೆ ಈ ಕಡೆ ಎಳೆದು ಕಟ್ಟುತ್ತಾರೆ. ಇದಕ್ಕ “ಎತ್ತಿನ ಕರಿ” ಅಂತಾರ. ರೈತರು ಸಿಂಗಾರಗೊಂಡ ತಮ್ಮ ತಮ್ಮ ಎತ್ತುಗಳು, ಹೋರಿಗಳನ್ನ ಸಾವಿರಾರು ಜನರ ನಡುವೆ ಎರಡು ಸುತ್ತು ಓಡಿಸಿಕೊಂಡು ಹೋಗುವುದನ್ನು ನೋಡುವುದೇ ಒಂದು ಸಂಭ್ರಮ.
ಹೀಗೆ ಎತ್ತುಗಳನ್ನು ಹೋರಿಗಳನ್ನ ಎರಡು ಸಾರಿ ಓಡಿಸಿದ ನಂತರ ಮೂರನೆ ಸಲಕ್ಕೆ ಕರಿ ಹರಿಯಬೇಕಿರುತ್ತದೆ. ಆಗ ರೈತರು ತಮ್ಮ ತಮ್ಮ ಹೋರಿಗಳನ್ನ ಓಡಿಸಿಕೊಂಡು ಬಂದು ಕೈಯಲ್ಲಿರುವ ಹಗ್ಗವನ್ನು ಕಟ್ಟಿದ ಕರಿಗೆ ಹರಿಯುತ್ತಾರೋ ಆ ಎತ್ತು, ಊರ ಜನರ ಬಾಯಲ್ಲಿ ಇಂತ ಎತ್ತು, ಕರಿ ಹರಿತು, ಅಂತ ಊರ ಖುಷಿಯಿಂದ ಹೇಳ್ತಾರ.
“ಎತ್ತಿನ ಕರಿ” ಹರಿದ ನಂತರ ನೋಡ್ತಿದ್ದ ಜನರು, ಒಮ್ಮಿಂದೊಮ್ಮೆ ಬೇವಿನ ತಪ್ಪಲ ತಗೊಳ್ಳೋಕೆ ಮುಗಿಬಿದ್ದು, ಕೈಗೆ ಸಿಕ್ಕಷ್ಟು ಮನಿಗೆ ತಂದು ಬೆಳೆಗಳನ್ನು ತುಂಬಿದ ಚೀಲದಲ್ಲಿ ಹಾಕಿದ್ರ ಉಣ್ಣಾಕ ತಿನ್ನಾಕ ಕೊರತೆ ಆಗಲ್ಲ ಅನ್ನೊ ನಂಬಿಕೆ.
ಕರಿ ಹರಿದ ಎತ್ತುಗಳನ್ನ ಊರ ತುಂಬ ಮೆರವಣಿಗೆ ಮಾಡಿ, ಮನಿಗೆ ಹೋಗಿ ಪೂಜೆ ಮಾಡಿ, ಎತ್ತಿಗೆ ಹೋಳಿಗೆ ತಿನ್ನಿಸಿ ಖಷಿಯಿಂದ ಮನೆಯಲ್ಲಿ ಕಟ್ತಾರೆ.
ಈ ಕಾರು ಹುಣ್ಣಿಮೆ ಮರುದಿನ ಮುಂಗಾರು ಮಳೆ ಚಾಲು ಆಗುತ್ತ. ಈ ಹಬ್ಬ ರೈತ ಹಾಗೂ ಪಶುಪ್ರಾಣಿಗಳ ಮೇಲೆ ಅಗಾದ ಪ್ರೀತಿ, ಕೃಷಿಯ ಮೇಲೆ ಇಟ್ಟಿರುವ ನಂಬಿಕೆ ಪ್ರತೀಕವಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.