ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಪರಿಣಾಮ, ಮಂಡ್ಯ ಜಿಲ್ಲೆಗೆ ನೀರೊದಗಿಸುವ ವಿಶ್ವೇಶ್ವರಯ್ಯ ಕಾಲುವೆಗೆ (ವಿಸಿ) ನೀರು ಹರಿಸುವುದನ್ನು ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್‌ಎನ್‌ಎಲ್) ನಿಲ್ಲಿಸಿದೆ. ನೀರು ಹರಿಸುವಂತೆ ಒತ್ತಾಯಿಸಿ ಮಂಡ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 43,495 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದ್ದು, ನೀರಿನ ಕೊರತೆಯಿಂದ ಒಣಗುತ್ತಿದೆ. ವಿಶ್ವೇಶ್ವರಯ್ಯ ಕಾಲುವೆಗೆ ನೀರು ಹರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ನಗರ ಪ್ರದೇಶಗಳಿಗೆ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ನೀರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಾಲುವೆಗೆ ನೀರು ನಿಲ್ಲಿಸಲಾಗಿದೆ. ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳಲು ಮತ್ತು ನಷ್ಟದಿಂದ ತಪ್ಪಿಸಿಕೊಳ್ಳಲು ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸುತ್ತಿದ್ದಾರೆ.
ಕುಡಿಯಲು ಮತ್ತು ಕೃಷಿಗೆ ನೀರು ಅತ್ಯಗತ್ಯ. ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತ ಸಮುದಾಯ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನೀರನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
“ನಮ್ಮ ಬೆಳೆ ಉಳಿಸಲು ಸರ್ಕಾರ ನೀರು ಹರಿಸಲು ಮುಂದಾಗಬೇಕು. ಅಧಿಕಾರಿಗಳಿಗೆ ಮನವಿ ಮಾಡಿದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ” ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 43,495 ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಮಂಡ್ಯ ತಾಲೂಕಿನಲ್ಲಿ 11,627 ಹೆಕ್ಟೇರ್, ಕೆಆರ್ ಪೇಟೆ (10,660 ಹೆಕ್ಟೇರ್), ಮದ್ದೂರು (9,525 ಹೆಕ್ಟೇರ್), ಪಾಂಡವಪುರ (5,325 ಹೆಕ್ಟೇರ್) ಮತ್ತು ಶ್ರೀರಂಗಪಟ್ಟಣದಲ್ಲಿ 4,225 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಿದೆ. ಆದರೆ, ನೀರಿನ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ.
124.8 ಅಡಿ ಗರಿಷ್ಠ ಮಟ್ಟವಿರುವ ಕೆಆರ್‌ಎಸ್‌ನಲ್ಲಿ 90.1 ಅಡಿ ನೀರು ತುಂಬಿದೆ. ಜಲಾಶಯವು 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 15.997 ಟಿಎಂಸಿ ಮಾತ್ರ ತುಂಬಿದೆ.