ಕಾವೇರಿ ಕೊಳ್ಳದ ಜನರ ಹಿತ ಕಾಪಾಡುವ ದೃಷ್ಠಿಯಿಂದ ರಾಜ್ಯ ಸರ್ಕಾರ ಕೂಡಲೇ ತುರ್ತು ವಿಧಾನಸಭಾ ಅಧಿವೇಶನ ಕರೆಯಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಸಮಿತಿಯು ಮಂಡ್ಯದಲ್ಲಿ ಹೋರಾಟ ನಡೆಸುತ್ತಿದೆ. “ಕಾವೇರಿ ನದಿ ನೀರಿನ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಎದುರಿಸುತ್ತಿರುವ ರೈತರ ಪರವಾಗಿ ರಾಜ್ಯ ಸರ್ಕಾರ ನಿಲ್ಲಬೇಕು. ತುರ್ತು ಅಧಿವೇಶನ ನಡೆಸಿ ಸಮಗ್ರ ಚರ್ಚೆ ನಡೆಸಬೇಕು. ರೈತರ ಹಿತ ಕಾಪಾಡಬೇಕು” ಎಂದು ಒತ್ತಾಯಿಸಿದೆ.
ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಯವರನ್ನು ಭೇಟಿಯಾಗಿ ವಾಸವಾಂಶವನ್ನು ಮನವರಿಕೆ ಮಾಡಿಕೊಡಲು ಮುಂದಾಗಬೇಕು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ವಾಸ್ತವಾಂಶದ ಅಂಕಿ ಅಂಶಗಳ ಸಮೇತ ಸಮರ್ಥವಾದ ಮಂಡನೆಗೆ ಸರ್ಕಾರ ಮುಂದಾಗಬೇಕು, ಪ್ರಾಧಿಕಾರದ ಆದೇಶ ಪಾಲನೆ ಮಾಡಿ ಯಾವುದೇ ಕಾರಣಕ್ಕೂ ಒಂದು ಹನಿ ನೀರನ್ನು ಸರ್ಕಾರ ಬಿಡುಗಡೆ ಮಾಡಬಾರದು ಎಂದು ನಿರ್ಣಯ ಕೈಗೊಂಡಿದೆ.
ರಾಜ್ಯದ ಎಲ್ಲ ಸಂಸದರು ಪಕ್ಷಾತೀತವಾಗಿ ಒಗ್ಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾವೇರಿ ವಿಚಾರದಲ್ಲಿ ಸಂಕಷ್ಟದ ಸಮಯದಲ್ಲಿ ಸಂಕಷ್ಟ ಸೂತ್ರ ರಚಿಸಲು ಒತ್ತಾಯ ಮಾಡಬೇಕು, ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿ ಮಧ್ಯ ಪ್ರವೇಶಿಸಿ ಸಂಕಷ್ಟ ಸಮಯದಲ್ಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಸಮಿತಿಯು ಆಗ್ರಹಿಸಿದೆ.
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತರಿಗೆ ಗುಳೆ ಭಾಗ್ಯ ನೀಡಿದೆ ಎಂದು ರೈತರು ಅಣಕು ಗುಳೆ ಯಾತ್ರೆ ಮೂಲಕ ಶ್ರೀರಂಗಪಟ್ಟಣದಲ್ಲಿ ಪ್ರತಿಭಟಿಸಿದರು.
ಭೂಮಿ ತಾಯಿ ಹೋರಾಟ ಸಮಿತಿ ಆಶ್ರಯದಲ್ಲಿ ರೈತರು ಕಾವೇರಿ ನದಿಯ ಸ್ನಾನಘಟ್ಟದ ಬಳಿ ಅಣಕು ಗುಳೆ ಯಾತ್ರೆ ಆರಂಭಕ್ಕೆ ಮುನ್ನ ಪ್ರದಕ್ಷಿಣೆ ಹಾಕಿ ಯಾತ್ರೆ ಹೊರಟರು. ಕದ್ದು ಮುಚ್ಚಿ ನೀರು ಬಿಡುತ್ತಿರುವ ಸರ್ಕಾರದ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ತಮಿಳುನಾಡಿಗೆ ನೀರು ಬಿಡುವ ಮೂಲಕ ಸರ್ಕಾರ ರೈತರ ಗುಳೆ ಭಾಗ್ಯ ಕಲ್ಪಿಸಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೆ ಎಸ್ ನಂಜುಂಡೇಗೌಡ, ರಾಮಕೃಷ್ಣೇಗೌಡ ಮತ್ತಿತರರಿದ್ದರು.