ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ (ಕೆಕೆಆರ್‌ಡಿಬಿ) ನೀಡಲಾಗುವ ಅನುದಾನವನ್ನು ಅದೇ ವರ್ಷದಲ್ಲಿ ಬಳಕೆ ಮಾಡಲು ಪೂರ್ವಯೋಚಿತವಾಗಿ ಕ್ರಿಯಾಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. “ಮಾರ್ಚ್‌ನಲ್ಲಿ ರಾಜ್ಯದ ಬಜೆಟ್ ನಡೆಯುತ್ತದೆ. ಆ ಬಳಿಕ, ಕೆಕೆಆರ್‌ಡಿಬಿ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಷ್ಟರಲ್ಲಿಯೇ ಡಿಸೆಂಬರ್ ಕಳೆದು ಹೋಗುತ್ತದೆ. ಮುಂಚಿತವಾಗಿಯೇ ಕ್ರಿಯಾಯೋಜನೆ ರೂಪಿಸಿಕೊಂಡಿದ್ದರೆ, ಕಾಮಗಾರಿ ಪೂರ್ಣಗೊಳಿಸಲು ಮತ್ತು ಅನುದಾನ ಬಳಕೆಗೂ ಅನುಕೂಲವಾಗಲಿದೆ. ಈ ಕುರಿತು ಈಗಾಗಲೇ ಬೋರ್ಡ್ ಸಭೆಯಲ್ಲಿ ಚರ್ಚಿಸಲಾಗಿದೆ” ಎಂದರು.
“ಸಿಡಿಆರ್ ಅಂಕಿ ಆಂಶಗಳ ಆಧಾರದ ಮೇಲೆ ಕೆಕೆಆರ್‌ಡಿಬಿ ಅನುದಾನವನ್ನು ಜಿಲ್ಲಾವಾರು ಹಂಚಿಕೆ ಮಾಡಲಾಗುತ್ತದೆ. ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಹಂಚಿಕೆ ಮಾಡಲು ಈ ಹಿಂದೆಯೇ ನಿರ್ಧರಿಸಲಾಗಿದೆ” ಎಂದರು.
“ರಾಯಚೂರು ನಗರದಲ್ಲಿ 2,000 ಆಸನಉಳ್ಳ ಹೊಸ ರಂಗಮಂದಿರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ, ಜಿಲ್ಲಾಡಳಿತ ನಿವೇಶನ ಗುರುತಿಸಲಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲಿ ಚಾಲನೆ ನೀಡಲಾಗುತ್ತದೆ. ಮಹಾತ್ಮಗಾಂಧಿ ಕ್ರಿಡಾಂಗಣದಲ್ಲಿ ಸೆಂಥಿಟಿಕ್ ಟ್ರಾಕ್ ನಿರ್ಮಾಣ ಮಾಡುವುದನ್ನು ಕೈ ಬಿಡಲಾಗಿದೆ. ಮತ್ತೊಂದು ಕ್ರೀಡಾಂಗಣ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ” ಎಂದರು.
ವರದಿ ಮಾಹಿತಿ: ಸಿಟಿಜನ್ ಜರ್ನಲಿಸ್ಡ್, ಹಫೀಜುಲ್ಲ