ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸಲು ‘ಎದ್ದೇಳು ಕರ್ನಾಟಕ’ದ ನೇತೃತ್ವದಲ್ಲಿ ಶ್ರಮಿಸಿದ ಸ್ವಯಂಸೇವಕನ್ನು ಗೌರವಿಸಲು ಮೇ 26ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ʼಎದ್ದೇಳು ಕರ್ನಾಟಕʼ ಅಭಿಯಾನದ ಸಹ ಸಂಚಾಲಕ ಮಾರೆಪ್ಪ ಹರವಿ ತಿಳಿಸಿದರು.
ರಾಯಚೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಮಾಡಿದ ಅವರು, “ಹಿಂದಿನ ಬಿಜೆಪಿ ಸರ್ಕಾರ ಹಿಂದೆಂದೂ ಕಂಡರಿಯದ ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ದ್ವೇಷ ರಾಜಕಾರಣ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತಿದೆ. ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಜನ ಬೆಂಬಲ ಪಡೆದಿದೆ. ಇದು ಕಾಂಗ್ರೆಸ್ ಗೆಲುವು ಅಲ್ಲ. ಜನತೆಯ ಗೆಲುವು” ಎಂದರು.
“ಬಿಜೆಪಿನ್ನು ಸೋಲಿಸಲು ಅಲ್ಪಸಂಖ್ಯಾತರು, ದಲಿತ, ಆದಿವಾಸಿ, ಹಿಂದುಳಿದ ಜನ ಸಮುದಾಯ, ಪ್ರಗತಿಪರ, ಮಹಿಳಾ ಸಂಘಟನೆಗಳ ಜೊತೆಗೆ ‘ಎದ್ದೇಳು ಕರ್ನಾಟಕ‘ ಎಂಬ ನಾಗರಿಕ ಸಮಾಜದ ಸಂಘಟಿತ ಪ್ರಯತ್ನ ವಿಶೇಷವಾಗಿ ನೆರವೇರಿದೆ. 112 ಪ್ರಗತಿಪರ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಐಕ್ಯ ವೇದಿಕೆಯಾದ ‘ಎದ್ದೇಳು ಕರ್ನಾಟಕ’ ತಳ ಸಮುದಾಯಗಳನ್ನು ಜಾಗೃತಗೊಳಿಸಲು ವಿಶೇಷ ಪಾತ್ರ ವಹಿಸಿದೆ” ಎಂದು ಹೇಳಿದರು.
“ರಾಜ್ಯದ 103 ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರ ಎಂದು ಗುರುತಿಸಿ ಅಲ್ಲಿ ಜಾತ್ಯಾತೀತ ಸಮುದಾಯಗಳ ಮತದಾನದ ಪ್ರಮಾಣ ಹೆಚ್ಚಿಸಿ, ಮತ ವಿಭಜನೆಯಾಗದಂತೆ ತಡೆಯಲು ವಿಶೇಷ ಪ್ರಯತ್ನ ಮಾಡಲಾಗಿತ್ತು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿ ಯಾರೆಂದು ಗುರುತಿಸಿ ಅವರಿಗೆ ಮತ ಹಾಕಿ ಎಂಬ ಕಾರ್ಯನೀತಿ ಬಿಜೆಪಿಯ ಸೋಲಿಗೆ ದೊಡ್ಡ ಕಾರಣವಾಗಿದೆ” ಎಂದು ಶ್ಲಾಘಿಸಿದ್ದಾರೆ.
ಅಭಿಯಾನದ ಭಾಗವಾಗಿ ರಾಜ್ಯದಾದ್ಯಂತ 250ಕ್ಕೂ ಹೆಚ್ಚು ಕಾರ್ಯಾಗಾರ ನಡೆಸಿ ಸ್ವಯಂ ಸೇವಕರನ್ನು ಸಿದ್ಧಗೊಳಿಸಿ ಅಭಿಯಾನದಲ್ಲಿ ತೊಡಗಿಸಲಾಯಿತು. ಅನೇಕ ಸಾಹಿತಿಗಳು, ಚಿಂತಕರು, ಕಲಾವಿದರು, ಹೋರಾಟಗಾರರು ಅಭಿಯಾನದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಾಸಕ ಈಶ್ವರ್ ಖಂಡ್ರೆಗೆ ಮಂತ್ರಿಗಿರಿ ನೀಡಲು ಆಗ್ರಹ
“ಸಂವಿಧಾನ ವಿರೋಧಿ ಶಕ್ತಿಗಳಿಂದ ನಾಡನ್ನು ರಕ್ಷಿಸಿದ ಸೇನಾನಿಗಳನ್ನು ಗೌರವಿಸಲು, ಎದ್ದೇಳು ಕರ್ನಾಟಕದಲ್ಲಿ ದುಡಿದ ಸ್ವಯಂ ಸೇವಕರಿಗೆ ಅಭಿನಂದಿಸಲು ಈ ಸಮಾವೇಶ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ದರ್ಶನ್ ಪುಟ್ಟಣ್ಣಯ್ಯ ಮತ್ತಿತರರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಆರ್ ಭೇರಿ, ಖಾಜಾ ಅಸ್ಲಾಂ ಅಹ್ಮದ್, ಅಸಿಮುದ್ದೀನ್ ಅಖ್ತರ್, ಲಕ್ಷ್ಮಣ ಜಾನೇಕಲ್, ತಿಮ್ಮಪ್ಪ ದಾಸ್, ಹನುಮಂತ ಜೋಗಿ ಇದ್ದರು.