- ಘಟನಾ ಸ್ಥಳದಲ್ಲಿ ಧರಣಿ ನಡೆಸುತ್ತಿರುವ ಗ್ರಾಮಸ್ಥರು
- ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ನಡೆಸುವ ಭರವಸೆ
ಡಾ. ಬಿ ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ವಿರೂಪಗೊಳಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಾಮಫಲಕದ ಮೇಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ರಾತ್ರೋರಾತ್ರಿ ಸಗಣಿ ಬಳಿದಿರುವ ಕಿಡಿಗೇಡಿಗಳು ಬಾಬಾ ಸಾಹೇಬರಿಗೆ ಅವಮಾನಿಸಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಗ್ರಾಮಸ್ಥರುಮ, ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಿಡಿಗೇಡಿಗಳು ಯಾರೆಂಬುದು ಪತ್ತೆ ಹಚ್ಚಿ ಬಂಧಿಸುವಂತೆ ಸ್ಥಳದಲ್ಲಿ ಧರಣಿ ನಡೆಸುತ್ತಿದ್ದು, ನ್ಯಾಯ ಒದಗಿಸುವಂತೆ ಪಟ್ಟು ಹಿಡಿದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿದ್ದಾರೆ.
ಘಟನೆ ಕುರಿತು ಈದಿನ.ಕಾಮ್ ಜೊತೆಗೆಗ್ರಾಮಸ್ಥರೊಬ್ಬರು ಮಾತನಾಡಿ, “ಶನಿವಾರ ರಾತ್ರಿ ಯಾರೋ ಕಿಡಿಗೇಡಿಗಳು ದಲಿತ ಸಂಘರ್ಷ ಸಮಿತಿ ನಾಮಫಲಕದ ಮೇಲಿನ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ವಿಕೃತಿ ಮೆರೆದಿದ್ದಾರೆ” ಎಂದು ಕಿಡಿಕಾರಿದರು.

“ಈ ಹಿಂದೆ ಕೂಡ ಇಂತಹ ಘಟನೆ ಗ್ರಾಮದಲ್ಲಿ ಜರುಗಿತು. ಇದೀಗ ಅದೇ ಘಟನೆ ಮತ್ತೆ ನಡೆದಿದೆ. ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಿಡಿಗೇಡಿಗಳು ಯಾರೆಂಬುದು ತನಿಖೆ ನಡೆಸಿ ಕೂಡಲೇ ಬಂಧಿಸುವಂತೆ ದಸಂಸ ಪದಾಧಿಕಾರಿಗಳು, ದಲಿತ ಸಮುದಾಯದ ಮಹಿಳೆಯರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಆಗಮಿಸಿ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಅಂಬೇಡ್ಕರ್ ಭಾವಚಿತ್ರಕ್ಕೆ ಮಸಿ ಬಳಿದು ಅಪಮಾನ; ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ತನಿಖೆ ನಡೆಸುತ್ತೇವೆ
ಈ ಬಗ್ಗೆ ಧನ್ನೂರ ಪೋಲೀಸ್ ಠಾಣೆ ಪಿಎಸ್ಐ ಈದಿನ.ಕಾಮ್ ಜೊತೆಗೆಮಾತನಾಡಿ, “ಅಂಬೇಡ್ಕರ್ ಅವರ ಭಾವಚಿತ್ರವಿರುವ ನಾಮಫಲಕಕ್ಕೆ ರಾತ್ರಿ ಸಗಣಿ ಬಳಿದ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತೇವೆ” ಎಂದು ಹೇಳಿದರು.