- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ-ಎಂಐ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ
- ನಮ್ಮವರೂ ಕಪ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ
ಮೂರು ವರ್ಷದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವೀಕ್ಷಿಸಿದರು.
ಐಪಿಎಲ್ 16ನೇ ಆವೃತ್ತಿಯಲ್ಲಿ ಭಾನುವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾದವು.
ಕ್ರಿಕೆಟ್ ವೀಕ್ಷಿಸುತ್ತ ಟ್ವೀಟ್ ಮಾಡಿದ ಸಿದ್ದರಾಮಯ್ಯ, “ಕ್ರಿಕೆಟ್ ನನ್ನ ಇಷ್ಟದ ಆಟ, ಆರ್‌ಸಿಬಿ ನನ್ನ ಹೆಮ್ಮೆಯ ತಂಡ. ನನ್ನಂತಹ ಕೋಟ್ಯಾಂತರ ಅಭಿಮಾನಿಗಳ ಹಾರೈಕೆ ಆರ್‌ಸಿಬಿ ಹುಡುಗರ ಜೊತೆಗಿದೆ. ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್‌ಸಿಬಿಗೆ” ಎಂದು ಶುಭಹಾರೈಸಿದರು.
ರಾಜ್ಯ ವಿಧಾನಸಭಾ ಚುನಾವಣೆ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರು ತಮ್ಮ ಪಕ್ಷಗಳ ಪರ ನಿರಂತರ ಪ್ರಚಾರ ನಡೆಸುತ್ತಿದ್ದಾರೆ. ಈ ಎಲ್ಲ ಒತ್ತಡಗಳ ನಡುವೆಯೂ ಸಿದ್ದರಾಮಯ್ಯ ಜೊತೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ಪ್ರಕಾಶ್ ರಾಥೋಡ್ ಪಂದ್ಯ ವೀಕ್ಷಿಸಿದರು.
ಕ್ರಿಕೆಟ್ ನನ್ನ ಇಷ್ಟದ ಆಟ,
— Siddaramaiah (@siddaramaiah) April 2, 2023
ಆರ್‌ಸಿಬಿ ನನ್ನ ಹೆಮ್ಮೆಯ ತಂಡ..
ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್.ಸಿ.ಬಿ ಹುಡುಗರ ಜೊತೆಗಿದೆ..
ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ.
ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್‌ಸಿಬಿಗೆ.@RCBTweets #RCBvMI pic.twitter.com/KgCOrbsNle
ಈ ಸುದ್ದಿ ಓದಿದ್ದೀರಾ? ಐಪಿಎಲ್ 2023 | ತುಷಾರ್ ದೇಶಪಾಂಡೆ ಐಪಿಎಲ್‌ನ ಮೊತ್ತಮೊದಲ ʻಇಂಪ್ಯಾಕ್ಟ್ ಪ್ಲೇಯರ್ʼ
ಆರ್‌ಸಿಬಿಗೆ ಜಯ
ಆತಿಥೇಯ ಆರ್‌ಸಿಬಿ ತಂಡ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಲ್ಲಿ ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ, ತಿಲಕ್ ವರ್ಮಾ ಅವರ ಏಕಾಂಗಿ ಹೋರಾಟದ [84*] ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತ್ತು.
ಆದರೆ ಚೇಸಿಂಗ್ ವೇಳೆ ಆರ್‌ಸಿಬಿಗೆ 171 ರನ್ ಸವಾಲಾಗಲೇ ಇಲ್ಲ. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿ ಮೊದಲ ವಿಕೆಟ್‌ಗೆ 15 ಓವರ್‌ಗಳಲ್ಲಿ 148 ರನ್‌ಗಳಿಸುವ ಮೂಲಕ ಮುಂಬೈ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು.