- ಹಿಂದಿನ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದುಗೊಳ್ಳುವುದು ಕ್ರಮ
- ಸಿಎಂ ಸಚಿವಾಲಯದ ಹಿರಿಯ ಸಹಾಯಕಿ(ಗ್ರೂಪ್ ಸಿ) ಹುದ್ದೆಗೆ ನೇಮಿಸಲಾಗಿತ್ತು
ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಬೊಮ್ಮಾಯಿ ಸರ್ಕಾರ ನೀಡಿದ್ದ ಗುತ್ತಿಗೆ ಆಧಾರಿತ ಉದ್ಯೋಗವನ್ನು ರದ್ದು ಮಾಡಲಾಗಿದೆ.
ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗಕ್ಕೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ನೂತನ ಅವರ ನೇಮಕಾತಿಯನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರದ್ದು ಮಾಡಿದೆ.
ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಪ್ರವೀಣ್ ಪತ್ನಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರ ಬಳಸಿ, ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವಾಲಯದಲ್ಲಿ ಹಿರಿಯ ಸಹಾಯಕಿ (ಗ್ರೂಪ್ ಸಿ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ 2022ರ ಸೆ. 22ರಂದು ನೇಮಿಸಲಾಗಿತ್ತು. ಅಲ್ಲದೆ, ಅಂದಿನ ಮುಖ್ಯಮಂತ್ರಿ ಅಧಿಕಾರ ಇರುವ ತನಕ ಅಥವಾ ಮುಂದಿನ ಆದೇಶದವರೆಗೆ ಎಂದು ನೇಮಕಾತಿ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು.
ಇದೀಗ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುಂಡು, ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ, ನೂತನ ಕುಮಾರಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿರುವ ಆದೇಶ ಅವರ ಕೈ ತಲುಪಿದೆ.
ಈ ಸುದ್ದಿ ಓದಿದ್ದೀರಾ? ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರ; ಪರಿಷತ್ ಸದಸ್ಯತ್ವಕ್ಕೆ ಬಿ ಕೆ ಹರಿಪ್ರಸಾದ್ ರಾಜೀನಾಮೆ?
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ವತಿಯಿಂದ ಕನಸಿನ ಮನೆ ನಿರ್ಮಾಣ ಹಾಗೂ ಪ್ರವೀಣ್ ಪತ್ನಿಗೆ ಮಾನವೀಯ ನೆಲೆಯಲ್ಲಿ ಸಿಎಂ ಅವರ ವಿಶೇಷಾಧಿಕಾರ ಬಳಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದರು.
ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರವು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ತಾತ್ಕಾಲಿಕ ನೇಮಕಾತಿಯನ್ನು ರದ್ದುಗೊಳಿಸಿದ್ದು, ಪ್ರವೀಣ್ ನೆಟ್ಟಾರು ಪತ್ನಿ ನೂತನ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಸರ್ಕಾರ ಬದಲಾದ್ದರಿಂದ ಹಿಂದಿನ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದುಗೊಳ್ಳುವುದು ಕ್ರಮ.