- ನಂದಿನಿ ಬ್ರ್ಯಾಂಡ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ
- ಹೈನುಗಾರಿಕೆ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿ
ರಾಜ್ಯದ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ನಾಶ ಮಾಡಲು ಗುಜರಾತ್ ಮೂಲದ ಅಮುಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಗೆ ಬಿಟ್ಟಿರುವ ಬಿಜೆಪಿ ಸರ್ಕಾರದ ಹುನ್ನಾರವನ್ನು ಖಂಡಿಸುತ್ತೇವೆ ಎಂದು ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ʼನಂದಿನಿ ಉಳಿಸಿʼ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
“ಸಹಕಾರಿ ಕ್ಷೇತ್ರದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದು, ನಂದಿನಿ ಬ್ರ್ಯಾಂಡ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ರಾಜ್ಯದ ರೈತಾಪಿ ಅದರಲ್ಲೂ ಸಣ್ಣ, ಅತಿ ಸಣ್ಣ ಮತ್ತು ಕೃಷಿ ಕಾರ್ಮಿಕರು, ಹೈನುಗಾರಿಕೆಯನ್ನು ಅವಲಂಬಿಸಿ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳೂ ಕೂಡ ಸೃಷ್ಟಿಯಾಗಿದೆ” ಎಂದರು.
“ಕೇಂದ್ರ ಮತ್ತು ರಾಜ್ಯ ಸರ್ಕಾರ ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಹಾಲಿನ ಉತ್ಪನ್ನವನ್ನು ರಾಜ್ಯದ ಮಾರುಕಟ್ಟೆಗೆ ತಂದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಾಶ ಮಾಡಲು ಹೊರಟಿದೆ. ಹಾಗಾಗಿ ಈ ನಡೆಯನ್ನು ತೀರ್ವವಾಗಿ ಖಂಡಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮುಲ್ ಹಾಲು ಮತ್ತು ಅಮುಲ್ ಉತ್ಪನ್ನಗಳ ಮಾರಾಟವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆದೇಶಿಸಬೇಕು. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಒತ್ತುನೀಡಿ ರಾಜ್ಯದ ಹಿತಾಶಕ್ತಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರೇಯಸಿಯ ಹುಟ್ಟುಹಬ್ಬ ಆಚರಿಸಿ ಕೊಲೆ ಮಾಡಿದ ಪ್ರಿಯಕರ
“ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆದಿದ್ದು, ರಾಜ್ಯ ಸರ್ಕಾರ ಈವರೆಗೂ ಹಿಂಪಡೆದಿಲ್ಲ. ಆದ್ದರಿಂದ ಈ ಸಂಬಂಧ ಮುಂದೆ ಬರುವ ಸರ್ಕಾರಗಳ ಮಧ್ಯೆ ಪ್ರವೇಶಿಸಿ ರೈತರ ಹಿತ ಕಾಪಾಡಬೇಕು. ಜೊತೆಗೆ ರಾಜ್ಯದ ಹೈನುಗಾರಿಕೆ ಉಳಿಸಬೇಕು” ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ ಗೋಣಿಬಸಪ್ಪ, ಅಧ್ಯಕ್ಷ ಜಿ ಸೋಮಶೇಖರ, ಮಮತ, ಜಯಮ್ಮ, ಯಶೋಧ ಸೇರಿದಂತೆ ಇತರರು ಇದ್ದರು.