ನಿವೇಶನ ಒತ್ತುವರಿಗೆ ಸಂಬಂಧಿಸಿದಂತೆ ಪೊಲೀಸ್ ಪೇದೆಯೋರ್ವ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಸಿದ್ದು, ಹಲ್ಲೆಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಎಂ ಬಿ ಪಾಟೀಲ ಕಾಲೋನಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ಶಿಕ್ಷಕ ಚಿದಾನಂದಗೆ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಅಶೋಕ ಮಿಂಚನಾಳ ಜೀವ ಬೆದರಿಕೆ ಹಾಕಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಗರದ ಎಂ.ಬಿ ಪಾಟೀಲ ಬಡಾವಣೆಯಲ್ಲಿ ಅಕ್ಕಪಕ್ಕದಲ್ಲಿ ನಿವೇಶನ ಹೊಂದಿರುವ ತಿಕೋಟಾ ತಾಲೂಕಿನ ಬರಟಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕ ಚಿದಾನಂದ ಜಿಗಜೇವಣಿ ಮತ್ತು ವಿಜಯಪುರ ಗ್ರಾಮೀಣ ಪೋಲಿಸ್ ಠಾಣೆಯ ಪೇದೆ ಅಶೋಕ ಮಿಂಚನಾಳ ನಡುವೆ ನಿವೇಶನ ಒತ್ತುವರಿಗೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿದೆ. ಈ ವೇಳೆ ಪೊಲೀಸ್ ಪೇದೆ ಶಿಕ್ಷಕನಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಜಯಪುರ ನಗರದಲ್ಲಿ ಗುರುವಾರ ಮಾಧ್ಯಮದ ಎದುರು ಮಾತನಾಡಿದ ಶಿಕ್ಷಕ ಚಿದಾನಂದ ಅವರು, “ಗ್ರಾಮೀಣ ಪೊಲೀಸ ಠಾಣೆಯ ಪಿ.ಸಿ ಅಶೋಕ ಮಿಂಚನಾಳ ನಿವೇಶನದ ವಿಚಾರಕ್ಕಾಗಿ ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಪೊಲೋಸ್ ಪೇದೆ ಅಶೋಕ ಮಿಂಚಿನಹಾಳ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನ ಮಾಡಿದ್ದು, ಜೀವ ಬೆದರಿಕೆ ಹಾಕಿರುವುದರಿಂದ ನಾನು ಪೊಲೀಸ್ ಇಲಾಖೆಗೆ ದೂರು ನೀಡಿದ್ದೇನೆ. ಅಶೋಕನ ಮೇಲೆ ಎಸ್‌ಪಿ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾನು ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಜಾಗದಲ್ಲಿ ಅಂಗಡಿ ಹಾಕಿದ್ದವರ ಮೇಲೆ ಕಾಂಗ್ರೆಸ್ ಮುಖಂಡ ಗೂಂಡಾಗಿರಿ: ಆರೋಪ
“ಸಮಾಜವನ್ನು ರಕ್ಷಿಸಬೇಕಾದ ಆರಕ್ಷಕರೇ ಭಕ್ಷಕರಾದಾಗ ನಾವು ಸಮಾಜದಲ್ಲಿ ಬದುಕುವುದು ಹೇಗೆ? ನಾನೊಬ್ಬ ಶಿಕ್ಷಕನಾಗಿ ಪೊಲೀಸ್ ಠಾಣೆ ಕುರಿತು ಮಕ್ಕಳಿಗೆ ಏನೆಂದು ಪಾಠ ಮಾಡಲಿ? ಪೊಲೀಸರು ಗೂಂಡಾಗಳೆಂದೋ ಅಥವಾ ಸಮಾಜದ ರಕ್ಷಕರೆಂದೋ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.