ಲಾಕ್‌ಡೌನ್ ಸಮಯದಲ್ಲಿ ಎಲ್ಲ ಕಚೇರಿಗಳು ಮುಚ್ಚಿದ್ದಾಗಲೂ ಮೂರು ದಿನಗಳಲ್ಲಿ ಕೆರೆ ಕಾಮಗಾರಿ ಪೂರ್ಣಗೊಳಿಸಿದ್ದಾರೆಂದು ಗುತ್ತಿಗೆದಾರರಿಗೆ ಎಂಜಿನಿಯರ್‌ವೊಬ್ಬರು ಐದು ಕೋಟಿ ರೂ. ಬಿಡುಗಡೆ ಮಾಡಿದ್ದರು. ಕಚೇರಿಗಳು ಮುಚ್ಚಿದ್ದಾಗಲೂ ಸುಳ್ಳು ಹಾಜರಾತಿ ಸೃಷ್ಟಿಸಿ, ಬಿಲ್ ಮಂಜೂರು ಮಾಡಿದ ಎಂಜಿನಿಯರ್ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳದೇ ಇರುವುದನ್ನು ಕಂಡು ಕರ್ನಾಟಕ ಹೈಕೋರ್ಟ್ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಮಂಡ್ಯ ಜಿಲ್ಲೆಯಲ್ಲಿ 2019ರ ಅಕ್ಟೋಬರ್‌ನಲ್ಲಿ ಭಾರೀ ಮಳೆಯಾಗಿ ಪ್ರವಾಹ ಬಂದಿತ್ತು. ಆ ಸಮಯದಲ್ಲಿ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಹರಳಹಳ್ಳಿ ಮತ್ತು ಹೊಸಹೊಳಲು ಕೆರೆಗಳು ಕೋಡಿ ಬಿದ್ದಿದ್ದವು. ಆ ಕಾರಣಕ್ಕೆ ಕೆರೆಗಳು ಹಾಳಾಗಿವೆ, ಅವುಗಳನ್ನು ಅಭಿವೃದ್ಧಿ ಮಾಡಬೇಕೆಂದು 5 ಕೋಟಿ ರೂ. ಮೊತ್ತದಲ್ಲಿ ಕೆರೆ ಕಾಮಗಾರಿ ಗುತ್ತಿಗೆಯನ್ನು ಪಿ.ಕೆ ಶಿವರಾಮು ಎಂಬಾತನ ಆರ್‌ಕೆಬಿ ಬ್ರದರ್ಸ್, ಇನ್‌ಸ್ಟ್ರಪೋಪ್ ಪ್ರೊವೆಂಚರ್ ಪ್ರೈವೆಟ್ ಲಿಮಿಟೆಡ್‌ಗೆ ನೀಡಲಾಗಿತ್ತು.
ತುರ್ತು ಕಾಮಗಾರಿಯೆಂದು ಬಿಡ್ ಕರೆಯದೇ 2019ರ ಅಕ್ಟೋಬರ್‌ನಲ್ಲಿ ಗುತ್ತಿಗೆ ನೀಡಲಾಗಿತ್ತು. ಆದರೆ, 2020ರ ಜನವರಿಯಲ್ಲಿ ಕಾಮಗಾರಿಗೆ ಅನುಮತಿ ನೀಡಲಾಗಿತ್ತು. ಅದಾದ ಎರಡು ತಿಂಗಳ ನಂತರ, 2020ರ ಮಾರ್ಚ್ 27ರಂದು (ಮಾರ್ಚ್ 24ರಿಂದಲೇ ಲಾಕ್‌ಡೌನ್ ಜಾರಿಯಾಗಿತ್ತು) ವರ್ಕ್ ಆರ್ಡರ್ ಪಡೆದ ಗುತ್ತಿಗೆದಾರ, ಮಾರ್ಚ್ 31ರಂದು ಕಾಮಗಾರಿ ಮುಗಿದಿದೆ ಎಂದು ಬಿಲ್ ಕ್ಲೈಮ್ ಮಾಡಿದ್ದರು. ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ 5,02,78,000 ರೂ. ಹಣವನ್ನು ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಾನಿರ್ವಾಹಕ ಎಂಜಿನಿಯರ್ ಕೆ ಶ್ರೀನಿವಾಸ್ ಮಂಜೂರು ಮಾಡಿದ್ದರು.

ಲಾಕ್‌ಡೌನ್ ಸಮಯದಲ್ಲಿ ಎಲ್ಲ ಕಚೇರಿಗಳು ಮುಚ್ಚಿದ್ದಾಗಲೂ ಗುತ್ತಿಗೆದಾರನಿಗೆ ಬಿಲ್ ಮಂಜೂರು ಮಾಡಲು ಹೇಗೆ ಸಾಧ್ಯವೆಂದು ಗುತ್ತಿಗೆ ಪ್ರಕರಣದ ಬೆನ್ನುಬಿದ್ದ ರೈತಸಂಘದ ನಾಗೇಗೌಡ ಎಂಬವರು ಕಾಮಗಾರಿ ಸಂಬಂಧ ಹಲವು ಮಾಹಿತಿಗಳನ್ನು ಕಲೆ ಹಾಕಿ, ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಶ್ರೀನಿವಾಸ್, “ಕೆಲವು ಕಾಮಗಾರಿಗಳನ್ನು ತುರ್ತಾಗಿ ಕಾರ್ಯಗತಗೊಳಿಸಬೇಕಾದಾಗ ಕರ್ನಾಟಕ ಪಾರದರ್ಶಕತೆ ಕಾಯಿದೆಯ ಸೆಕ್ಷನ್ 4(ಜಿ) ಅಡಿಯಲ್ಲಿ ವಿನಾಯಿತಿ ಪಡೆಯುವಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ” ಎಂದು ವಾದಿಸಿದ್ದರು. ಅವರ ವಾದವನ್ನು ಆಲಿಸಿದ್ದ ಲೋಕಾಯುಕ್ತ ಎಂಜಿನಿಯರ್ ಪ್ರಕರಣದಲ್ಲಿ ಯಾವುದೇ ದೋಷಗಳಿಲ್ಲವೆಂದು ಹೇಳಿತ್ತು.
ಬಳಿಕ, ನಾಗೇಗೌಡರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಆಘಾತ ವ್ಯಕ್ತಪಡಿಸಿದ್ದಾರೆ. “ದಾಖಲೆಗಳು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವನ್ನುಂಟುಮಾಡುತ್ತವೆ… ಈ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರವು ಕ್ರಮ ಕೈಗೊಳ್ಳದೇ ಇರುವುದು ಮತ್ತಷ್ಟು ಆಘಾತವನ್ನುಂಟುಮಾಡಿದೆ. ಲೋಕಾಯುಕ್ತದಲ್ಲಿಯೂ ಪ್ರಕರಣದ ವಿಚಾರಣೆ ಈಗಾಗಲೇ ಮುಕ್ತಾಯಗೊಂಡಿದೆ ಎಂಬುದು ಆಶ್ಚರ್ಯಕರವಾಗಿದೆ. ಈಗ ನಿವೃತ್ತರಾಗಿರುವ ಎಂಜಿನಿಯರ್ ಕೆ ಶ್ರೀನಿವಾಸ್ ತಮ್ಮ ಹಣವನ್ನಾಗಲೀ, ಸಕ್ಷಮ ಪ್ರಾಧಿಕಾರವನ್ನಾಗಲಿ ಗುತ್ತಿಗೆದಾರನಿಗೆ ಕೊಟ್ಟಿಲ್ಲ. ಅವ್ಯವಹಾರದಲ್ಲಿ ನಷ್ಟವಾಗಿರುವುದು ಸಾರ್ವಜನಿಕರ ಹಣ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಸಂಬಂಧ ಸರ್ಕಾರದ ಪ್ರತಿಕ್ರಿಯೆ ಕೇಳಿರುವ ಹೈಕೋರ್ಟ್, ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ.