ಮುಂಗಾರು ಮಳೆ ಬಾರದ ಕಾರಣ ಬಿತ್ತಿದ್ದ ಬೆಳೆಗಳು ಒಣಗಿದ್ದು, ಬಿತ್ತನೆ ಮಾಡಲು ಕಾದಿದ್ದ ರೈತರಿಗೆ ಹಿನ್ನಡೆಯಾಗಿದೆ. ಹಾಗಾಗಿ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬರಗಾಲ ಸಮೀಕ್ಷೆ ನಡೆಸಿ ಅಧಿಕಾರಿಗಳಿಂದ ವರದಿ ಪಡೆದು ಶೀಘ್ರದಲ್ಲಿ ಯಾದಗಿರಿ ಜಿಲ್ಲೆಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಜೊತೆಗೆ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಮುಂಗಾರು ಮಳೆ ಕೈಕೊಟ್ಟಿದ್ದು, ಈಗಾಗಲೇ ಜೂನ್ ಮೊದಲನೇ ವಾರಕ್ಕೆ ಬರಬೇಕಾಗಿದ್ದ ಮಳೆ ಜುಲೈ ತಿಂಗಳಾದರೂ ಬಾರದಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಮುಂಗಾರು ಮಳೆಯಲ್ಲಿ ಬಿತ್ತನೆ ಮಾಡಬೇಕಾದ ಶೇಂಗಾ, ಸಜ್ಜೆ, ತೊಗರಿ, ಹತ್ತಿ ಹಾಗೂ ಸೂರ್ಯಕಾಂತಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಬೇಕಾಗಿತ್ತು. ಆದರೆ, ಈವರೆಗೆ ಮಳೆ ಬಾರದ ಕಾರಣ ಬೀಜ ಬಿತ್ತನೆ ಮಾಡಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಅಲ್ಲಲ್ಲಿ ಚದುರಿದಂತೆ ಆಗಿದ್ದ ಮಳೆಗೇ ಕೆಲವು ರೈತರು ಬೀಜ, ಗೊಬ್ಬರ ಹಾಕಿದ್ದರು. ಹೆಚ್ಚಿನ ಮಳೆ ಇಲ್ಲದೆ ಬಿತ್ತದ್ದ ಬೆಳೆಗಳು ಒಣಗಿ ಹೋಗುವ ಪರಿಸ್ಥಿತಿಯಲ್ಲಿವೆ. ರೈತರು ಸಾಲ-ಸೂಲ ಮಾಡಿ ಬೀಜ ಗೊಬ್ಬರ ಹಾಕಿದ್ದರು. ಮಳೆ ಇಲ್ಲದಿರುವುದು ರೈತರನ್ನು ಅಂತಂತ್ರ ಸ್ಥಿತಿಗೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಅಲ್ಲಲ್ಲಿ ನಡೆದಿವೆ. ಆದರೆ, ನೂತನ ಕಾಂಗ್ರೆಸ್ ಸರ್ಕಾರ ಅಧಿವೇಶನದಲ್ಲಿ ರೈತರ ಬಗ್ಗೆ, ಮಳೆ ಬಗ್ಗೆ ಚರ್ಚೆಮಾಡದೆ, ಪ್ರಣಾಳಿಕೆಯಲ್ಲಿ ಹೇಳಿಕೆ ಕೊಟ್ಟಿರುವಂತೆ ಕೇವಲ ಪಂಚಯೋಜನೆಗಳ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರೈತ ದೇಶದ ಬೆನ್ನೆಲುಬು ಅಂತಾ ಬರಿ ಬಾಯಿ ಮಾತಲ್ಲಿ ಹೇಳುತ್ತಿದ್ದಾರೆ. ರೈತರು ಬೆಳೆದರೇ ಈ ದೇಶ ಉಳಿಯುವುದೆಂದು ಈ ರಾಜಕೀಯ ನಾಯಕರಿಗೆ ತಿಳಿದಂತೆ ಕಾಣುತ್ತಿಲ್ಲ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.
“ಪಡಿತರ ಪಲಾನುಭವಿಗಳ ಖಾತೆಗೆ ದುಡ್ಡು ಹಾಕುವುದರ ಬದಲಿಗೆ ರೈತರು ಬೆಳೆದಿರುವ ಭತ್ತವನ್ನೇ ಖರೀದಿಸಿ ಅಕ್ಕಿ ಮಾಡಿಸಿ ಪಡಿತರ ಕಾರ್ಡುದಾರರಿಗೆ ನೀಡುವಂತಾಗಬೇಕು. ಇದರ ಲಾಭ ಭತ್ತ ಬೆಳೆಗಾರರಿಗೆ ತಲುಪುವಂತಾಗಬೇಕು. ಇದರಿಂದ ಕಾರ್ಡುದಾರರಿಗೆ ಸೋನಾ ಅಕ್ಕಿ ಸಿಕ್ಕಿದಂತಾಗುತ್ತದೆ ಮತ್ತು ರೈತರಿಗೂ ಲಾಭ ದೊರೆತಂತಾಗುತ್ತದೆ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬರಪೀಡಿತ ಪ್ರದೇಶ ಘೋಷಣೆಗೆ ರೈತ ಸಂಘ ಆಗ್ರಹ
“ಹುಣಸಗಿ ಪಟ್ಟಣಕ್ಕೆ ಶಾಶ್ವತ ಕುಡಿವ ನೀರಿನ ಸೌಕರ್ಯ, ನಿರಂತರ ವಿದ್ಯುತ್ ಪೂರೈಕೆ ಹಾಗೂ ರೈತರ ಜಮೀನಲ್ಲಿರುವ ಪಂಪ್ ಸೆಟ್‌ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಕೂಡಲೇ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು. ಮಿನಿ ವಿಧಾನಸೌಧದ ಎಲ್ಲ ಇಲಾಖೆಗಳು ಕಾರ್ಯ ನಿಯೋಜಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಯ್ಯಣ್ಣ ಹಾಲಬಾವಿ, ತಿಪ್ಪಣ್ಣ ಜಂಪ, ಹನಮುಗೌಡ ನಾರಾಯಣಪುರ, ಹಣಮಂತ್ರಾಯ ಚಂದಲಾಪುರ, ಸಾಹೇಬಗೌಡ ಮದಲಿಂಗನಹಾಳ, ಅವಿನಾಶ ಕೋಡೆಕ್ಕಲ, ಗದ್ದಪ್ಪ ನಾಗಬೇವಿನಾಳ, ವೆಂಕಟೇಶ ಕುಪಗಲ್, ದೇವಪ್ಪ ಯರಿಕಾಳ, ಮಲ್ಲಣ್ಣ ಹಾಲಬಾವಿ, ಲತಾ ದೇವತ್ಕಲ್, ನಿಂಗಣ್ಣಗೌಡ ಗುಳಬಾಳ, ನಿಂಗಣ್ಣ ಕೋಳಿಹಾಳ, ಶೋಭಾ ಹಳ್ಳಿಗೌಡರು, ಈರಮ್ಮ ಮಾರಲಬಾವಿ, ಮಲ್ಲಮ್ಮ ಗುಳಬಾಳ ಇದ್ದರು.