ಎಲ್ಲಿ ಹೋದವೋ ಹೋರ್ಮಲ್ಲಯ್ಯೋ, ದೋಸ್ತರಾ ಹೋದ್ದೀನ್ ದಿನಗಳು…!

Date:

ಈಗಿನಂತೆ ಆಗ ಜನರ ಕೈಯಲ್ಲಿ ರೊಕ್ಕ ರುಪಾಯಿ ಆಡ್ತಿರಲಿಲ್ಲ. ಹತ್ರುಪಾಯಿ ಸಾಲ ಹುಟ್ಟಬೇಕಂದ್ರ ಸಾವ್ಕಾರ ಮನಿಗೆ ತಿರುಗ್ಯಾಡಿ, ತಿರುಗ್ಯಾಡಿ ಅಂಗಾಲಿನ ಗೆರಿ ಸವೆದು ಹೋಗ್ತಿದ್ದವು. ರೊಕ್ಕ ರುಪಾಯಿಗಳು ದಕ್ಕುವ ದೆಸೆಯಿಂದ ಈಗಿನ ಕಾಲವೇ ಛೊಲೋ ಅಂತ ಹೇಳಬೌದು. ಹಾಂ! ಅನ್ನೊದರೊಳಗ ಹತ್ತು ಸಾವಿರ ರುಪಾಯಿ ತಂದು ಬಿಡುವ ಕಾಲ ಇದು. ಆದರೆ ಆಗ ಅದೆಷ್ಟೇ ಬಡತನ ಇದ್ರೂ ನೆಮ್ಮದಿ ಮಾತ್ರ ಬೇಕಾದಷ್ಟಿತ್ತು.  

ಮೊದಲಿನಂತಿಲ್ಲ ನನ್ನೂರು. ಅದರ ಚೆಹರೆಗಳೆಲ್ಲ ಸ್ಥಿತ್ಯಂತರವೋ ಇಲ್ಲವೇ ರೂಪಾಂತರವೋ ಆಗಿವೆಯೆಂಬ ಬಲಾಢ್ಯ ಗುಮಾನಿ. ಒಳಗಣ್ಣು ನೋಟದಲ್ಲಿ ಕಂಡಂತೆ ಇರುವ ಮುನ್ನೂರು ಮನೆಗಳಲ್ಲಿ ಮುನ್ನೂರೊಂದು ಮನಸುಗಳು. ನಮ್ಮೂರು ಮಾತ್ರವಲ್ಲ ಸಗರನಾಡಿನ ಎಲ್ಲಾ ಹಳ್ಳಿಮನೆ, ಮನೆಗಳ ಮನಗಳೆಲ್ಲವೂ ಮರ್ಕಟೋನ್ಮಾದದ‌ ಜೋಕಾಲಿಯಲಿ ಒಂದೇ ಸಮನೆ ಜೀಕುತ್ತಲಿವೆ. ತಲುಪಬೇಕಾದ ಗಮ್ಯ ಗಂತವ್ಯಗಳ ಅರಿವಿಲ್ಲ. ಕಾಲಿಗೆ ಗಾಲಿ ಕಟ್ಟಿ ಕೊಂಡವನಂತೆ ಒಂದಿನ ಪೂರ್ತಿ ಊರೆಲ್ಲ ತಿರುಗಿ ಹುಡುಕಿದೆ. ಟೀವಿ, ಮೊಬೈಕ್ ಮತ್ತು ಮೊಬೈಲ್ ಫೋನುಗಳಿಲ್ಲದ ಮನೆಗಳೇ ಸಿಗಲಿಲ್ಲ.

ಅಷ್ಟಕ್ಕೂ ಅವು ಇರಬಾರದೆಂಬುದು ನನ್ನ ಉದ್ದೇಶವೂ ಆಗಿರಲಿಲ್ಲ. ಅದು ನನ್ನ ಹುಚ್ಚು ಮನಸಿನ ಪುಳಕಪ್ರಾಯದ ಕುತೂಹಲವಷ್ಟೇ. ಅದನ್ನು ಮೀರಿದ ಹುಟ್ಟೂರಿನ ನೆಲಧರ್ಮಪ್ರಜ್ಞೆ ಪ್ರಾಯಶಃ ಅಂತಹದ್ದೊಂದು ಹುಡುಕಾಟಕ್ಕೆ ಹಚ್ಚಿತ್ತು. ನನ್ನ ಪಾಲಿಗದು ವಿಸ್ಫೋಟಕ ಹುಡುಕಾಟ. ಸೋಜಿಗವೆಂದರೆ ನಾವು ಚುಕ್ಕೋಳಾಗಿದ್ದಾಗ ಇದ್ದೂರಲ್ಲಿ ಸಣ್ಣದೊಂದು ಸೈಕಲ್ಲು ಸಹಿತ ನೋಡಲು ಸಿಗುತ್ತಿರಲಿಲ್ಲ. ಅಂತಹ ಸಣ್ಣ ಊರಲ್ಲಿ ಈಗ ಬೈಕು, ಆಟೋ, ಕಾರು, ಜೀಪುಗಳಿಗೇನು ಕೊರತೆ ಇಲ್ಲ. ಮದುವೆ, ಮುಂಜಿ ಶುಭದ ಕ್ಷಣಗಳು ಸೇರಿದಂತೆ ಸೂತಕದ ಗಳಿಗೆಗಳಿಗೆ ಅವು ಚೌಕಾಸಿ ದರಗಳಲ್ಲಿ ಬಾಡಿಗೆಗೂ ದೊರಕಬಲ್ಲವು.

ಅಬ್ಬಾ! ವರ್ತಮಾನದ ನನ್ನೂರನ್ನು ನಾನರಿಯದೇ ಹೋದೆನೇ!? ಎಂಬ ಮೂಲಭೂತ ಮತ್ತು ಕೌತುಕದ ಪ್ರಶ್ನೆ ನನ್ನನ್ನು ಗಡಬಡಿಸಿ ಕಾಡತೊಡಗಿತು. ಹಂಗೇನಿಲ್ಲ ನನ್ನೂರು ನನಗರಿಯದೇ ಹೋದುದೇನಲ್ಲ. ಅದರ ಅಣುರೇಣು ತೃಣಕಾಷ್ಠಗಳಲ್ಲಿ ನನ್ನ ಭಾವಸಂವೇದನೆಗಳು ಜೀವಗೊಂಡಿವೆ. ಹಾಗೆಂದು ತುಂಬಾ ಹಿಂದೆ ತುಂಬಾನೇ ಚೆಂದವಿತ್ತು ಅದೀಗ ಇಲ್ಲ ಎಂಬ ನಾಸ್ಟಾಲ್ಜಿಯಾ ಕೂಡಾ ನನ್ನದಲ್ಲ. ಈಗ ಇರುವುದನ್ನು ದ್ವೇಷಿಸುವ ಉದ್ದೇಶವೂ ನನ್ನದಲ್ಲ. ಆದರೆ ಅದರ ‘ಜೀವಕಾಳು’ ಕಳೆದು ಹೋಗಿ ಸಂವೇದನೆ ಸತ್ತು ಹೋದ ದುಃಸ್ಥಿತಿ. ಅದಕೆ ಪ್ರಾಣವಾಯು ದೊರಕಬೇಕೆಂಬ ಜೀವದುಸಿರಿನ ತೀವ್ರ ಹಂಬಲ. ನಮ್ಮೂರೇನು ಸಾಧಾರಣದ ಕಾಂಜಿ ಪೀಂಜಿ ಊರಲ್ಲ. ಮಹಾಜ್ಞಾನಿ ಮಡಿವಾಳಪ್ಪ ಬಾಳಿ ಬದುಕಿದ ಕಾಯಕಭೂಮಿ. ಅನುಭವ ಮಂಟಪದ ಅನುಭಾವವನೇ ಜೀವಿಸಿದ ಸಾಧುರ ಮ್ಯಾಳದಂತಹ ಸುಸ್ಥಿರ ಬದುಕಿನ ಹಾದಿ ಹುಡುಕಿಕೊಟ್ಟ ನೆಲ ನನ್ನೂರು ಕಡಕೋಳ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಾಯ್ತನದ ತೂಗು ತೊಟ್ಟಿಲಾಗಿ, ಹಸುಗಂದನ ಹಾಲ್ಬೆಳ್ಳಿಯ ಬಟ್ಟಲಾಗಿ ಅದರ ತುಂಬೆಲ್ಲಾ ಪ್ರೀತಿ, ಕಕ್ಕುಲತೆಗಳ ಹದುಳ ಹರಕೆಗಳೇ ತುಂಬಿ ತುಳುಕಿಸಿ ನಿರ್ಮಲ ಪರಂಜ್ಯೋತಿ ಬೆಳಗಿದ್ದು ನನ್ನೂರು. ಆದರೀಗ ನಮ್ಮೆಲ್ಲರ ಹುಟ್ಟೂರಿನ ಹಳ್ಳಿಗಳು ಕೆಟ್ಟುಹೋಗಿವೆ. ಕಳ್ಳು ಬಳ್ಳಿಯಂತಹ ಅಂತಃಕರಣದ ಮನುಷ್ಯ ಸಂಬಂಧಗಳು ನಿಕಾಲೆಯಾಗಿವೆ. ಅದೇಕೋ ಥಟ್ಟಂತ್ ನೆನಪಾದವು ಮನೆಯಂಗಳದ ಹೊರಸುಗಳು, ನಡುಮನೆಯಲ್ಲಿ ಕೌದಿಗಳ ಮೇಲೆ ಕುಂತು, ಮಣ್ಣಿನ ಮಾಳಿಗೆ ಮೇಲೆ ಬೆಳದಿಂಗಳ ರಾತ್ರಿಯಲ್ಲಿ ಈಚಲು‌ ಚಾಪೆ ಹಾಸಿಕೊಂಡು ಊಟಮಾಡಿದ ಮೇಲೆ ಅಗದೀ ಸೋಜಾಗಿ ಮಾತಾಡುತ್ತಿದ್ದ ದಿನಗಳು ನೆನಪಾದವು.

ಈಗಿನಂತೆ ಆಗ ಜನರ ಕೈಯಲ್ಲಿ ರೊಕ್ಕ ರುಪಾಯಿ ಆಡ್ತಿರಲಿಲ್ಲ. ಹತ್ರುಪಾಯಿ ಸಾಲ ಹುಟ್ಟಬೇಕಂದ್ರ ಸಾವ್ಕಾರ ಮನಿಗೆ ತಿರುಗ್ಯಾಡಿ, ತಿರುಗ್ಯಾಡಿ ಅಂಗಾಲಿನ ಗೆರಿ ಸವೆದು ಹೋಗ್ತಿದ್ದವು. ರೊಕ್ಕ ರುಪಾಯಿಗಳು ದಕ್ಕುವ ದೆಸೆಯಿಂದ ಈಗಿನ ಕಾಲವೇ ಛೊಲೋ ಅಂತ ಹೇಳಬೌದು. ಹಾಂ! ಅನ್ನೊದರೊಳಗ ಹತ್ತು ಸಾವಿರ ರುಪಾಯಿ ತಂದು ಬಿಡುವ ಕಾಲ ಇದು. ಆದರೆ ಆಗ ಅದೆಷ್ಟೇ ಬಡತನ ಇದ್ರೂ ನೆಮ್ಮದಿ ಮಾತ್ರ ಬೇಕಾದಷ್ಟಿತ್ತು. ಆ ದೃಷ್ಟಿಯಿಂದ ಈಗಿನದು ಖರೇವಂದ್ರ ದುರಿತಕಾಲ.

ಅರ್ಧಕ್ಕಿಂತಲೂ ಹೆಚ್ಚು ಮನೆಗಳಲ್ಲಿ ಅಂಡ್ರಾಯಿಡ್ ಫೋನುಗಳು ನಾನು ಭೆಟ್ಟಿ ಕೊಟ್ಟಾಗ ಕೆತ್ತೇಬಾಜಿ ಕೆಲಸದಲ್ಲಿ ನಿರತಗೊಂಡಿದ್ದವು. ನಾನು ಅವರ ಮನೆಗೆ ಯಾಕೆ ಬಂದಿದ್ದೇನೆಂಬ ಖಬರಿಲ್ಲದ ಅವರೆಲ್ಲ ಮೊಬೈಲ್ ಲೋಕದ ಕಾರ್ಯನಿರತ ಕಾಯಕಜೀವಿಗಳಾಗಿದ್ದರು. ಅವನು ಸಾಹಿತಿ, ಅದಕ್ಕೆ ಅವನು ತಲೆಕೆಟ್ಟವರ ತರಹ ಅದೆಲ್ಲ ವಿಚಾರಸ್ತಿರಬಹುದೆಂದು ಅವರು ಭಾವಿಸಿದಂತಿತ್ತು. ನನ್ನನ್ನು ಕುರಿತು ಅಷ್ಟನ್ನು ಹೇಳಲೂ ಅವರಿಗೆ ಪುರುಸೊತ್ತಿರಲಿಲ್ಲವೆಂದರೆ… ನೀವೇ ಯೋಚನೆ ಮಾಡಿ, ಅವರ ಮೊಬೈಲ್ ಡಿಪೆಂಡೆನ್ಸಿ ಎಂತಹದ್ದೆಂದು. ಕಾಯಕ ನಿರತನಾದೊಡೆ ಗುರು ಲಿಂಗ ಜಂಗಮವ ಮರೆಯಬೇಕೆಂಬ ಬಸವತತ್ವವೇತ್ತರು.

ದುರಂತವೆಂದರೆ ಮೊಬೈಲ್ ಎಂಬ ಮಹಾಜಗತ್ತಿನ ಹೈಕಮಾಂಡ್ ಮಹಾಗುರುಗಳು ಮತ್ತು ಜನಪ್ರತಿನಿಧಿ ರಾಜಕಾರಣಿಗಳು ಊರಿನ ನೆಮ್ಮದಿ ಹಾಳುಗೆಡುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಅದನ್ನವರು ಲೋಕಜ್ಞಾನವೆಂದು ಭ್ರಮಿಸಿದ್ದಾರೆ. ಮೊನ್ನೆಯಷ್ಟೇ ಜರುಗಿದ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹತ್ತು ಲಕ್ಷಕ್ಕೂ ಮಿಗಿಲು ಹಣದ ವಹಿವಾಟು ಇಷ್ಟು ಸಣ್ಣ ಹಳ್ಳಿಯಲ್ಲಿ ನಡೆಸಿದವು. ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಸಿಕೊಳ್ಳುವ ಚುನಾವಣೆಗಳು ಜನರನ್ನು ಯಾವರೀತಿ ಭ್ರಷ್ಟಾಚಾರದ ಕೂಪಕ್ಕೆ ತಳ್ಳುತ್ತಿವೆ ಎಂದು ಗ್ರಹಿಸಬಹುದು. ಹಾಗಂತ ನಮ್ಮೂರ ಜನರೇನು ದಡ್ಡರಲ್ಲ. ನೂತನ ಸಂಸತ್ ಭವನ ಮತ್ತದರ ಸೆಂಗೋಲ್ ಎಂಬ ರಾಜದಂಡದ ಬಗ್ಗೆಯೂ ತಳಸ್ಪರ್ಶಿಯಾಗಿ ಮಾತಾಡಬಲ್ಲವರು. ಹೇಮಾಹೇಮಿ ರಾಜಕಾರಣಿಗಳ ಬಗ್ಗೆ ತಮ್ಮ ಹುಳಿಗರಸು ಭಾವಗಳ ಮೂಲಕ ಲೇವಡಿ ಮಾಡಬಲ್ಲವರು.

ʼಕೈಕೊಟ್ಟ ಹುಡುಗಿ ತಲೆಕೆಟ್ಟ ಹುಡುಗ ಅರ್ಥಾತ್ ಬಡವನ ಪ್ರೀತಿ ಬರಗಾಲ ರೀತಿ’ʼ ಎಂಬ ಚಾಲ್ತಿ ಹೆಸರಿನ ನಾಟಕಗಳ ಭರಾಟೆ. ಇದು ನಮ್ಮೂರು ಮಾತ್ರವಲ್ಲ. ನಮ್ಮ ಭಾಗದ ಎಲ್ಲ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ಜರುಗುವ ಕಂಪನಿ ಶೈಲಿ ನಾಟಕದ ಸ್ಯಾಂಪಲ್ಲುಗಳು. ನಮ್ಮ ಊರುಗಳಲ್ಲಿ ತಾವೇ ನಾಟಕ ಬರೆದು, ನಟಿಸಿ, ನಿರ್ದೇಶಿಸಿ, ಕೈಯಿಂದ ಖರ್ಚು ಮಾಡುವ ಯಥೇಚ್ಛ ನಿದರ್ಶನಗಳು. ಖಾಯಷ್ ಪಟ್ಟು ದೂರದ ಡಾವಣಗೇರಿ, ಗದಗ, ಇಲಕಲ್, ಹಂಸನೂರಗಳಿಂದ ಅಂದಚೆಂದದ ಕಲಾವಿದೆಯರನ್ನು ಜಿದ್ದಿಗೆ ಬಿದ್ದಂತೆ ಆಮಂತ್ರಿಸೋದೇ ಹೆಮ್ಮೆಯ ವಿಷಯ. ಅವರೋ ತಾವು ಹಾಲಿವುಡ್ ತಾರೆಯರ ತರಹ ಫೋಜು ಕೊಡುವುದೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಷ್ಟು ಪ್ರತಿಷ್ಠೆ.

ಅದಕ್ಕೆ ಮುನ್ನ ಅರ್ಧಶತಮಾನದಷ್ಟು ಹಿಂದೆ ಜರುಗುತ್ತಿದ್ದ ಪಾರಿಜಾತ ಆಟಗಳ ಸೊಬಗು ಬಣ್ಣಿಸಲಸದಳ. ತಾವು ಕಂಡ ಊರ ಮುಖಂಡರ ಪಟ್ಟಿಯನ್ನೇ ಪರಿಮಳದ ಸ್ವರದಲ್ಲಿ ಹೇಳುತ್ತಿದ್ದ ಕೃಷ್ಣ ಪಾರಿಜಾತದ ಇಂಗಳಗಿಯ ಮೋಹಕ ಚೆಲುವೆಯರು. ಅವರ ಕುರಿತು ನನ್ನ ನೆನಪಿನಲ್ಲಿರುವ ಹತ್ತು ಹಲವು ರೋಚಕವಾದ ಕತೆಗಳನ್ನು ಸವುಡು ಮಾಡಿಕೊಂಡು ಇನ್ನೊಮ್ಮೆ ಬರೆಯುವೆ. ನಮ್ಮ ಕಡೆಯ ಕೆಲವು ಹಳ್ಳಿಗಳಲ್ಲಿ ಇಂತಹ ರಾಧಾನಾಟಗಳು ವರ್ಷಕ್ಕೊಮ್ಮೆ ಊರ ಜಾತ್ರೆಗಳಲ್ಲಿ ಕಡ್ಡಾಯದಂತೆ ಜರುಗುತ್ತಿದ್ದವು. ಆಟ, ನಾಟಕ ಪ್ರದರ್ಶನಕ್ಕಿಂತಲೂ ತಿಂಗಳುಗಟ್ಟಲೇ ಅದಕ್ಕೆ ನಡೆಸುವ ತಾಲೀಮುಗಳದ್ದೇ ಸಂಭ್ರಮೋಲ್ಲಾಸದ ಕಥನಗಳು. ಇದನ್ನೆಲ್ಲ ಕಣ್ಣು ಬಾಯಿ ತೆರಕೊಂಡು ಸಡಗರದಿಂದ ನೋಡುತ್ತಿದ್ದ ನನ್ನಂಥ ಸಿಂಬಳಬುರಕ ಹುಡುಗರು, ಹೂಸುಬುರಕ ಡುಮ್ಮಣ್ಣಗಳು ಈಗ ಕಾಣುತ್ತಲೇ ಇಲ್ಲ.

ಅವತ್ತು ದೀಡು ಹರದಾರಿ ದೂರದ ಯಡ್ರಾಮಿಯ ಹೊಟೀಲುಗಳಲ್ಲಿ ಆಠಾಣೆಗೆ ಸಿಗುವ ಹಾಫ್ಕೇಟಿ ಚಹದ ಜಮಾನಾ ಬಹಳ ಹಿಂದಿನದೇನಲ್ಲ. ನಾನು ಸರ್ಕಾರಿ ನೌಕರಿಗೆ ಸೇರಿದ ಮೇಲೂ ದೊರಕುತ್ತಿತ್ತು. ಆಗ ತುಂಬಾ ತುಟ್ಟಿ ಎನಿಸುವ ಹತ್ತು ಪೈಸೆಗೊಂದು ಚಾರ್ಮಿನಾರ್ ಸಿಗರೇಟು ಸಿಗುತ್ತಿತ್ತು. ಅದನ್ನೇ ಸೇದುತ್ತಿದ್ದ ನಮ್ಮೂರಲ್ಲಿ ಛೇರ್ಮನ್ ಎಂಥಲೇ ಖ್ಯಾತಿ ಪಡೆದಿದ್ದ ಮಾಲಿ ಹಳ್ಳೆಪ್ಪಗೌಡರೆಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಯಾಕೆಂದರೆ ಅವರು ಯಾವ ದಾಕ್ಷಿಣ್ಯಕ್ಕೂ ಒಳಗಾಗದ ಮಹಾ ನಿಷ್ಠುರವಾದಿ. ಆದರೆ ಆತ ಚಹ ಕುಡಿಯುತ್ತಿರಲಿಲ್ಲ ನಮ್ಮೂರಲ್ಲಿ ಕಾಫಿ ಕುಡಿಯುತ್ತಿದ್ದ ಏಕೈಕರು ಅವರು. ಆತ ನಮ್ಮನೆಗೆ ಬಂದಾಗೆಲ್ಲ ನಮ್ಮವ್ವ ಐದು ಪೈಸೆಯ ಕಾಫಿ ಬಿಲ್ಲೆ ತಂದು ಗಟ್ಟಿ ಹಾಲಿನಲ್ಲಿ ಕಾಫಿ ಮಾಡಿಕೊಡುತ್ತಿದ್ದುದು ನನಗಿನ್ನೂ ಪಕ್ಕಾ ನೆನಪಿದೆ. ನೀವೇನೇ ತಿಳಕೋರಿ ಅವುಮಾತ್ರ ಸಸ್ತಾ ದಿನಗಳು.

ನನಗೆ ತುಂಬಾ ಸ್ಪಷ್ಟವಾದ ನೆನಪುಗಳಿವೆ : ಧರ್ಮಸಿಂಗ್ ತಮ್ಮ ಮೊಟ್ಟಮೊದಲ ಸಲದ ಚುನಾವಣೆಗ ವೋಟು ಕೇಳಲು ಬಂದಾಗ ತುಂಬಾ ತೆಳ್ಳಗಿದ್ದರು. ನಮ್ಮೂರೊಳಕ್ಕೆ ಕಾರು ಜೀಪುಗಳು ಬರುತ್ತಿರಲಿಲ್ಲ. ಕಾರಣ ಅವು ಬರಲು ಅಕ್ಷರಶಃ ದಾರಿಯೇ ಇರಲಿಲ್ಲ. ಆಗಿನ್ನೂ ಹಿರೇಹಳ್ಳಕ್ಕೆ ಸೇತುವೆ ಕಟ್ಟಿರಲಿಲ್ಲ. ಹಿಂಗಾಗಿ ನಡಕೊಂಡೇ ಹಳ್ಳ ದಾಟಿ ಬರಬೇಕಿತ್ತು. ಧರ್ಮಸಿಂಗ್ ೧೯೭೨ರ ಮೊದಲ ಮತಯಾಚನೆಗೆ ಹಿರೇಹಳ್ಳ ದಾಟಿ ಬರುವಾಗ ತಮ್ಮ ಎಡಗೈಯಲ್ಲಿ ಪಾದರಕ್ಷೆಗಳನ್ನು ರಕ್ಷಿಸಿಕೊಂಡಿದ್ದ ಬರೋಬ್ಬರಿ ನೆನಪುಗಳು ನನಗಿವೆ.

ಕಣದಲ್ಲಿಯ ಜೋಳದ ರಾಶಿಯ ಹಂತಿ ನಮಗೆಲ್ಲ ಸುಗ್ಗಿಯಹಬ್ಬ. ರಾತ್ರಿಯೆಲ್ಲ ಮುದಭರಿತ ಪದಗಳ ಪಲ್ಲವಿ ಅನುಪಲ್ಲವಿಯ ಆಹ್ಲಾದ. ಪದ ಮುಗಿದು ಹೋರ್ಮಲ್ಲಯ್ಯೋ ಎಂದು ಹುಲುಸುಗೊಳ್ಳುವುದರ ಖುಷಿಗೆ ಬೇರೊಂದು ಸಾಟಿಯಿರಲಿಲ್ಲ. ಹಂತಿಪದಗಳನ್ನು ಪಿಂಜಾರ ಗೂಡೇಸಾ ಮುತ್ಯಾ ಹಾಡುತ್ತಿದ್ದರೆ, ಮೊಹರಂ ಪದಗಳನ್ನು ನಮ್ಮ ಕಾಕಾ ಲಚಮಣ್ಣ ಹಾಡುತ್ತಿದ್ದ. ನಮಗ್ಯಾರಿಗೂ ಇದು ಕೋಮುಸೌಹಾರ್ದತೆಯ ಸಂಕೇತ ಪಿಂಕೇತ ಎಂಬ ನೆನಪೂ ಇರ್ತಿರಲಿಲ್ಲ. ಅಲೈ ದೇವರ ಪೂಜಾರಿ ಪಿಂಜಾರ ಗೂಡೇಸಾ ನಮ್ಮ ಕೊರಳಿಗೆ ಲಾಡಿಹಾಕಿ ನಮ್ಮನ್ನೆಲ್ಲಾ ಫಕೀರರನ್ನಾಗಿ ಮಾಡುತ್ತಿದ್ದ ಮಧುರ ನೆನಪುಗಳು ಹಚ್ಚ ಹಸಿರಾಗಿವೆ. ಹಸೇನ್ ಹುಸೇನ್ಕೀ ದೋಸ್ತರಾ ಹೋದ್ದೀನ್ ಎಂಬ ಅಲೈ ದೇವರ ಪೀರಲ್ಹಬ್ಬದ ಸಂಭ್ರಮ ಈಗೆಲ್ಲಿ ಹೋದವು.?

ಬಿಸಿರೊಟ್ಟಿ ಊಟಕ್ಕೆ ಅವ್ವನ ಕೈಗಾಣದ ಘಮ ಘಮಿಸುವ ಕುಸುಬೆ ಎಣ್ಣೆ. ರಾತ್ರಿಹೊತ್ತು ಕಣ್ಣಿಗೆ ತಂಪೆರೆವ ಔಡಲೆಣ್ಣೆ ಹಣತೆಯ ತಣ್ಣನೆಯ ದೀಪ. ಅದು ಮೆಲ್ಲ ಮೆಲ್ಲಗೆ ತಂಪರಳಿದಂತೆ ನೀಡುತ್ತಿದ್ದ ತಂಬೆಳಕು ನನಗಿನ್ನೂ ನಿನ್ನೆಯಷ್ಟೇ ಎಂಬಂತೆ ಕಣ್ಮನ ತುಂಬಿಸಿಕೊಂಡಿದೆ. ಅವ್ವ ಪ್ರೀತಿ, ಕಕ್ಕುಲತೆಗಳಿಂದ ಮಾಡಿಕೊಡುತ್ತಿದ್ದ ಬಿಳಿಜೋಳದ ಬಿಸಿಮುಟ್ಟಗಿ, ಎಳ್ಳುಹಚ್ಚಿದ ಸಜ್ಜಿರೊಟ್ಟಿ, ಕಡ್ಲಿಗುಗ್ಗರಿ, ಬ್ಯಾಳಿ ಹಾಕಿದ ಪುಂಡಿಪಲ್ಯ, ಸಪ್ಪಾನುಚ್ಚು, ಬದನಿಕಾಯಿ ಬರ್ತ… ಅಬ್ಬಬ್ಬಾ ಒಂದೆ ಎರಡೇ ಹತ್ತಾರು ಜವಾರಿ ರುಚಿಯ ವ್ಯಂಜನಗಳು. ಒಂದಕ್ಕಿನ್ನ ಒಂದು ನನ್ನ ಜೀವಪ್ರೀತಿಯನ್ನು ಇವತ್ತಿಗೂ ಬಿಗಿದಪ್ಪಿಕೊಂಡಿವೆ

ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಗೆಳೆಯ ಕಡಕೋಳನ ಬಾಲ್ಯಕಾಲ ಸಖನ ನೆನಪು ಓದಿದೆ. ಆಯಾ ಕಾಲದ ಬದಲಾವಣೆಗಳನ್ನು ಗಮನಿಸುತ್ತಲೇ ಬೆಳೆದ ಮನಸ್ಸುಗಳಿಗೆ “ಆ ಕಾಲವೇ ಚಂದ” ಅನ್ನಿಸದೇ ಇರೋಲ್ಲ. ಇದಕ್ಯೆ ಈ ಬರಹವೇ ಸಾಕ್ಷಿ.. ಈಗಾಗಲೇ ಯಡ್ರಾಮಿ ಸೀಮೆಯ ಕಥಾನಕವನ್ನು ಕಟ್ಟಿಕೊಟ್ಟ ಕಡಕೋಳ, ಇಲ್ಲೂ ಬಾಲ್ಯ, ಸಮಕಾಲೀನ ನೆನಪು ಮೆಲುಕು ಹಾಕಿದ್ದು ಸ್ವಾಗತಾರ್ಹ. ವಾಸ ದಾವಣಗೆರೆಯಲ್ಲಿ ಇದ್ದರೂ ತನ್ನೂರಿನ ಭಾಷಾ ಸೊಗಡು ಚೆಂದಗಾಣಿಸಿದ್ದಾನೆ. ನನಗೆ ಕೆಲವು ಪದಗಳೇ ಪರಿಚಯ ಇಲ್ಲ. ಅಭಿನಂದನೆ.

  2. ಬಾಲ್ಯದ ಸುಖದ ದಿನಗಳ ನೆನಪುಗಳೆಂದರೇ ಪ್ರೀತಿಯಿಂದ ಮಾಡಿ ಕೊಟ್ಟ ಖಡಕ್ ಕೇಟಿ ಕುಡಿದಂಗ. ಚಂದದ ಬರಹ.

    ಶ್ರೀನಿವಾಸ ಜಾಲವಾದಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related